ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರುಷ ಬಾಕಿಯಿದೆ. ಈಗಾಗಲೇ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಇತ್ತೀಚೆಗೆ ಬಾದಾಮಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತಾಡುತ್ತಾ ನಾನು ಇನ್ನೊಮ್ಮೆ ಮುಖ್ಯಮಂತ್ರಿಯಾದರೆ ಎಲ್ಲರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇನೆ ಎಂದಿದ್ದರು. ಹೀಗೆ ಹೇಳಿಕೆ ನೀಡುವ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇತ್ತೀಚೆಗೆ ನಡೆದ ಆರ್.ಆರ್. ನಗರದ ಚುನಾವಣೆಯಲ್ಲಿ ಡಿಕೆಶಿ ಮುಂದಿನ ಮುಖ್ಯಮಂತ್ರಿ ಎಂಬಂತೆ ಬಿಂಬಿಸಲಾಗಿತ್ತು. ಡಿ.ಕೆ ಶಿವಕುಮಾರ್ ಪ್ರಚಾರಕ್ಕೆ ಹೋದ ಕಡೆಯಲ್ಲಾ ಮುಂದಿನ ಸಿಎಂ ಡಿಕೆಶಿ ಎಂದೇ ಕಾರ್ಯಕರ್ತರು ಘೋಷಣೆಗಳು ಹಾಕುತ್ತಿದ್ದರು. ಈ ನಡುವೆಯೇ “ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್” ಎಂಬ ಕ್ಯಾಂಪೇನ್ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪರವಾಗಿ ತಮ್ಮ ಬೆಂಬಲಿಗರು ಹೀಗೆ ಅಭಿಯಾನ ಮಾಡುತ್ತಿದ್ದಾರೆ. ಕರ್ನಾಟಕದ ಮುಂದಿನ ಸಿಎಂ ಡಿಕೆಶಿ, ವಿ ಸ್ಟ್ಯಾಂಡ್ ವಿತ್ ಡಿಕೆಶಿ, ಡಿಕೆಶಿ ಫಾರ್ ಸಿಎಂ, ‘ವಾಯ್ಸ್ ಆಫ್ ಕರ್ನಾಟಕ ನಮ್ಮ ಡಿಕೆಶಿ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಕನಕಪುರ ಬಂಡೆ ಪರ ಫುಲ್ ಬ್ಯಾಂಟಿಗ್ ನಡೆಸುತ್ತಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಅಭಿಮಾನಿಗಳು ಪ್ರೀತಿಯಿಂದ ಹೇಳಿಕೊಳ್ಳುತ್ತಾರೆ. ನಾನು ಸಾಮೂಹಿಕ ನಾಯಕತ್ವದಡಿ ನಂಬಿಕೆ ಇಟ್ಟವನು. ಮೊದಲು ಪಾರ್ಟಿಯನ್ನು ಅಧಿಕಾರಕ್ಕೆ ತರಬೇಕು. ಇದಾದ ಮೇಲೆ ಹೈಕಮಾಂಡ್ ಮುಂದಿನ ಸಿಎಂ ಯಾರು ಎಂದು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ.
ಎಷ್ಟೋ ಸಲ ಮಾಜಿ ಸಿಎಂ ಸಿದ್ದರಾಮಯ್ಯನವರ ಮುಂದೆಯೇ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನನಗೂ ಸಿಎಂ ಆಗುವ ಆಸೆ ಇದೆ. ಅದಕ್ಕೆ ಇನ್ನೂ ಟೈಮ್ ಇದೆ, ಸಿಎಂ ರೇಸ್‍ನಲ್ಲಿ ಇರುವವರಿಗೆ ಆಲ್ ದಿ ಬೆಸ್ಟ್ ಎಂದು ಹೇಳುವ ಮೂಲಕ ತಮ್ಮ ಮನದ ಆಸೆ ಬಿಚ್ಚಿಟ್ಟಿದ್ದರು.
ಕಾಂಗ್ರೆಸ್‌ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್, ಹಲವು ಸಂದರ್ಭಗಳಲ್ಲಿ ಪಕ್ಷವನ್ನು ಸಂಕಷ್ಟದಿಂದ ಪಾರು ಮಾಡಿದವರು. ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿರ್ವಹಿಸಿದವರು. ಹಲವು ರಾಜ್ಯಗಳಲ್ಲಿ ರಾಜಕೀಯ ಬಿಕ್ಕಟ್ಟು ಎದುರಾದಾಗ ಕಾಂಗ್ರೆಸ್ ಶಾಸಕರನ್ನು ರಾಜ್ಯದಲ್ಲಿ ಸುರಕ್ಷಿತವಾಗಿ ನೋಡಿಕೊಂಡವರು. ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ರಾಜ್ಯಸಭೆಗೆ ಮರು ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಈಗಾಗಲೇ ಹೈಕಮಾಂಡ್ ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕರುಣಿಸಿದೆ. ಮುಂದೊಂದು ದಿನ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದು ಹೈಕಮಾಂಡ್ ಘೋಷಿಸಿದರು ಅಚ್ಚರಿಯಿಲ್ಲ.