ಸುಮಾರು 215 ಕ್ಕೂ ಹೆಚ್ಚು ದೇಶಗಳಿಗೆ ಹರಡಿರುವ ಸಾಂಕ್ರಾಮಿಕ ರೋಗ ಕರೋನಾಗೆ ತುತ್ತಾಗುವ ಜನರ ಸಂಖ್ಯೆ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಭಾರತದಲ್ಲಿ ಇದುವರೆಗೆ 37,776 ಮಂದಿ ಸಾಂಕ್ರಾಮಿಕ ರೋಗ ತಗುಲಿದ್ದು 10,018 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಭಾರತದ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಆರೋಗ್ಯ ಸೇತು ಮೇ 2 ಸಂಜೆ 6:50 ಕ್ಕೆ ನೀಡಿದ ಮಾಹಿತಿ ಪ್ರಕಾರ ಒಂದು ದಿನದಲ್ಲಿ 2,411 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಭಾರತದಲ್ಲಿ ಕರೋನಾ ಸೋಂಕಿನಿಂದ ಇದುವರೆಗೂ 1,223 ಮಂದಿ ಅಸುನೀಗಿದ್ದಾರೆ.
ಕರ್ನಾಟಕದ ಆರೋಗ್ಯ ಮತ್ತು ಕಲ್ಯಾಣ ಇಲಾಖೆ ಮೇ 2ರ ಸಂಜೆ ಐದು ಗಂಟೆಗೆ ಪ್ರಕಟಿಸಿದ ಪತ್ರಿಕಾ ಪ್ರಕಟನೆಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 601 ಕರೋನಾ ಪ್ರಕರಣಗಳು ಪತ್ತೆಯಾಗಿದ್ದು 271 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. 25 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಆಕ್ಟಿವ್ ಆಗಿರುವ 304 ವ್ಯಕ್ತಿಗಳಲ್ಲಿ 297 ಮಂದಿ ವಿವಿಧ ಆಸ್ಪತ್ರೆಗಳ ಪ್ರತ್ಯೇಕಿಸಿದ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿರವಾಗಿದೆ. 07 ಮಂದಿಯ ಪರಿಸ್ಥಿತಿ ಗಂಭೀರವಾಗಿದ್ದು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ಮೇ 01 ಸಂಜೆ 5 ರಿಂದ ಮೇ 02 ಸಂಜೆ 5ರ ವರೆಗೆ 12 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದೆಯೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಆರೋಗ್ಯ ಇಲಾಖೆ ನೀಡಿರುವ ಅಂಕಿಅಂಶ ಪ್ರಕಾರ ಬೆಂಗಳೂರು ನಗರದಲ್ಲಿ 4 ಪ್ರಕರಣಗಳು ಕಂಡುಬಂದಿದ್ದು, ತುಮಕೂರು ಮತ್ತು ವಿಜಯಪುರದಲ್ಲಿ ತಲಾ ಎರಡು ಪ್ರಕರಣಗಳು ಹಾಗೂ ಬೀದರ್, ಚಿಕ್ಕಬಳ್ಳಾಪುರ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ತಲಾ ಒಂದೊಂದು ಪ್ರಕರಣಗಳು ಕಂಡುಬಂದಿದೆ.









