ಭಾರತದಲ್ಲಿ ಕರೋನಾ ರಣ ಕೇಕೆ ಹಾಕುತ್ತಿದೆ. ಅದರಲ್ಲೂ 2ನೇ ಹಂತಕ್ಕೂ ಮುನ್ನ ತೆವಳುತ್ತಾ ಸಾಗುತ್ತಿದ್ದ ಕರೋನಾ ವೈರಸ್ ಲಾಕ್ಡೌನ್ ಮುಕ್ತಾಯವಾದ ಬಳಿಕ ನಾಗಾಲೋಟದಲ್ಲಿ ಹಾರುತ್ತಾ ಸಾಗುತ್ತಿದೆ. ಇವತ್ತಿಗೆ ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 53045 ಆಗಿದೆ. ಪ್ರತಿದಿನ ಸೋಂಕಿತರ ಸಂಖ್ಯೆ ಉತ್ತುಂಗಕ್ಕೆ ಏರಿಕೆಯಾಗುತ್ತಿದ್ದು, ಮೇ 01ಕ್ಕೆ 37,257, ಮೇ 02 ರಂದು 39,699, ಮೇ 03ರಂದು 42,505, ಮೇ 04ರಂದು 46437, ಮೇ 05ರಂದು 49,400, ಮೇ 06ರಂದು 52,987 ಮತ್ತು ಮೇ 07ರಂದು 54,512 ಜನರಿಗೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ಅಂದರೆ ಮೇ 01ರಂದು 2394, ಮೇ 02ರಂದು 2442, ಮೇ 03ರಂದು 2806, ಮೇ 04ರಂದು 3932, ಮೇ 05ರಂದು 2963, ಮೇ 06ರಂದು 3587 ಹಾಗೂ ಮೇ 7 ರಂದು 2680 ಸೋಂಕಿತರು ಹೆಚ್ಚಾಗಿದ್ದಾರೆ. 2ನೇ ಹಂತದ ಲಾಕ್ಡೌನ್ ಮುಕ್ತಾಯವಾದ ಬಳಿಕ ಮೇ 17ರ ತನಕ 3ನೇ ಹಂತದ ಲಾಕ್ಡೌನ್ ವಿಸ್ತರಣೆ ಆಗಿದೆ. ಆದರೆ ಕೇಂದ್ರ ಗೃಹ ಇಲಾಖೆ ಆದೇಶದಂತೆ ಶೇಕಡ 80ರಷ್ಟು ಕಾರ್ಯಚಟುವಟಿಕೆ ಆರಂಭವಾಗಿದೆ. ಮೇ 03 ರಿಂದ ಈಚೆಗೆ ಪ್ರತಿದಿನ ಸರಾಸರಿ 3 ಸಾವಿರಕ್ಕಿಂತಲೂ ಹೆಚ್ಚಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿರುವ ಆಧಾರದಲ್ಲೇ ಕರೋನಾ ಸೋಂಕಿತರು ಹಾಗೂ ಕರೋನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 2ನೇ ಹಂತದ ಲಾಕ್ಡೌನ್ ಬಳಿಕ ಹೆಚ್ಚಾಗಿದೆ. ಮೇ 03ರಂದು 68 ಜನ, ಮೇ 04ರಂದು 175 ಜನ, ಮೇ 05ರಂದು 127 ಜನ, ಮೇ 06ರಂದು 92, ಮೇ 7 ರಂದು 111 ಜನ ಹೀಗೆ ಸಾವಿನಲ್ಲೂ ವೇಗ ಪಡೆದುಕೊಂಡಿದೆ ಕರೋನಾ ಸೋಂಕು. ಆದರೂ ದೇಶದ ಆರ್ಥಿಕ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಲಾಕ್ಡೌನ್ ಮುಂದುವರಿಗೆ ಜೊತೆಗೆ ಬಹುತೇಕ ಎಲ್ಲಾ ವಿಭಾಗಗಳಿಗೂ ವಿನಾಯ್ತಿ ನೀಡಲಾಗಿದೆ. ಸಾಮಾಜಿಕ ಅಂತರ ಎನ್ನುವ ಮಾತು ಮೂಲೆಗೆ ಸೇರಿದೆ. ಜನರು ಆರಾಮವಾಗಿ ರಸ್ತೆಯಲ್ಲಿ ಸುತ್ತಾಡುತ್ತಿದ್ದಾರೆ. ವಲಸೆ ಕಾರ್ಮಿಕರು ಸಾವಿರ ಸಾವಿರ ಸಂಖ್ಯೆಯಲ್ಲಿ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುತ್ತಿದ್ದಾರೆ. ಬೇರೆ ದೇಶ ಹಾಗೂ ಬೇರೆ ರಾಜ್ಯಗಳಿಂದಲೂ ಕರ್ನಾಟಕಕ್ಕೆ ಜನರು ಆಗಮಿಸಲಿದ್ದಾರೆ. 2ನೇ ಹಂತದ ಲಾಕ್ಡೌನ್ ಮುಕ್ತಾಯವಾದ ಬಳಿಕ ದೇಶದಲ್ಲಿ ಸೋಂಕು ಏರುತ್ತಿರುವ ಪ್ರಮಾಣದಲ್ಲೇ ಸೋಂಕು ವಿಸ್ತರಣೆ ಆಗುತ್ತಾ ಸಾಗಿದರೆ ಈ ಮಾಸಾಂತ್ಯಕ್ಕೆ 3 ಲಕ್ಷ ಜನರನ್ನು ತಲುಪಬಹುದು ಎಂದು ಅಂದಾಜಿಸಲಾಗ್ತಿದೆ.
ಕರ್ನಾಟಕದಲ್ಲಿ ಸಮುದಾಯಕ್ಕೆ ಹರಡಿದ್ಯಾ ಸೋಂಕು..!?
ಭಾರತದಲ್ಲಿ ಕರೋನಾ ಸೋಂಕು ಮಿತಿಮೀರಿ ಹೋಗುತ್ತಿದ್ದರೂ ನಾವಿನ್ನೂ ಬೆನ್ನು ತಟ್ಟಿಕೊಳ್ಳುತ್ತಲೇ ಇದ್ದೇವೆ. ಕರೋನಾ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ನಮಗೆ ನಾವೇ ಶಹಬ್ಬಾಸ್ ಗಿರಿ ಕೊಟ್ಟುಕೊಳ್ಳುತ್ತಿದ್ದೇವೆ ಎಂದೆನಿಸುತ್ತದೆ. ಲಾಕ್ಡೌನ್ ಕಟ್ಟು ನಿಟ್ಟಾಗಿ ಜಾರಿ ಆಗಿದ್ದರಿಂದ ಸ್ವಲ್ಪ ಮಟ್ಟಿದೆ ಕರೋನಾ ಸೋಂಕು ಭಾರತದಲ್ಲಿ ನಿಯಂತ್ರಣಕ್ಕೆ ಬಂದಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಭಾರತದಲ್ಲಿ ಇದೀಗ ಲಾಕ್ಡೌನ್ ಕೇವಲ ದಾಖಲೆಯಲ್ಲಿ ಉಳಿದುಕೊಂಡಿದೆ. ಇದೀಗ ಸೋಂಕು ತನ್ನ ವೇಗವನ್ನು ಹೆಚ್ಚಿಸಿದ್ದು, ಎಲ್ಲಾ ಕಡೆಗಳಲ್ಲೂ ಧೂಳಿಪಟ ಮಾಡಿಕೊಂಡು ಬರುತ್ತಿದೆ. ದಾವಣಗೆರೆಯಲ್ಲಿ ಒಂದೇ ದಿನ 21, ಬಾಗಲಕೋಟೆಯಲ್ಲಿ ಒಂದೇ ದಿನ 13 ಜನರನ್ನು ಸೋಂಕು ಪತ್ತೆಯಾಗುತ್ತಿದೆ. ಕಳೆದ ತಿಂಗಳು ಏಪ್ರಿಲ್ ನಲ್ಲಿ ವಿಶ್ವಾದ್ಯಂತ ಲೆಕ್ಕಾಚಾರ ನೋಡಿದ್ರೆ ಪ್ರತಿದಿನ 80 ಸಾವಿರ ಜನರಿಗೆ ಕರೋನಾ ಸೋಂಕು ತಗುಲಿದೆ ಎನ್ನುವ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಹೊರ ಹಾಕಿದೆ. ಇದೀಗ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಸೋಂಕು ಮೂರನೇ ಹಂತ ತಲುಪಿದೆಯಾ ಎನ್ನುವ ಅನುಮಾನವನ್ನು ಹುಟ್ಟುಹಾಕಿದೆ. ಈ ಅನುಮಾನಕ್ಕೆ ಕಾರಣವೂ ಇದೆ. ಅದೇನೆಂದರೆ..!
ವಿಶ್ವದ ಚಿತ್ರಣವನ್ನು ನೋಡಿದ ಬಳಿಕ ಭಾರತದ ಚಿತ್ರಣವನ್ನು ನೋಡಿದಾಗ ಸ್ವಲ್ಪ ಮಟ್ಟಿಗಿನ ಸಮಾಧಾನ ಆಗುತ್ತದೆ. ವಿಶ್ವದ ಹಲವು ರಾಷ್ಟ್ರಗಳು ಪಟ್ಟಿಯಲ್ಲಿ ಅಗ್ರಗಣ್ಯ ಸ್ಥಾನವನ್ನು ಪಡೆದಿದ್ದು, ಭಾರತ ಆ ಮಟ್ಟಕ್ಕೆ ಇನ್ನೂ ಮುಟ್ಟಿಲ್ಲ ಎಂದುಕೊಳ್ಳುತ್ತಿದ್ದೇವೆ. ಅದೇ ರೀತಿ ಭಾರತದ ಅಂಕಿ ಅಂಶಗಳನ್ನು ನೋಡಿಕೊಂಡ ಬಳಿಕ ಕರ್ನಾಟಕದ ಅಂಕಿ ಅಂಶಗಳನ್ನು ನೋಡಿದಾಗಲೂ ಸಮಾಧಾನ ಆಗುತ್ತಿದೆ. ಆದರೆ. SARI ಹಾಗೂ ILI ಸೋಂಕುಗಳು ಹೆಚ್ಚಾಗುತ್ತಿರುವುದು ಆರೋಗ್ಯ ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದಿದ್ದ ವ್ಯಕ್ತಿ ಸಂಪರ್ಕಕ್ಕೆ ಹೋಗಿದ್ದವರಿಗೆ ಸೋಂಕು ಬಂದರೆ ಯಾವುದೇ ಸಮಸ್ಯೆ ಇಲ್ಲ. ಅಥವಾ ವಿದೇಶದಿಂದ ಬಂದಿದ್ದ ವ್ಯಕ್ತಿಯನ್ನು ಸಂಪರ್ಕಕ್ಕೆ ಹೋಗಿದ್ದ ವ್ಯಕ್ತಿಯ ಸಂಪರ್ಕ ಅಂದರೆ ದ್ವಿತೀಯ ಸಂಪರ್ಕಿತನಿಗೆ ಸೋಂಕು ಬಂದರೂ ಸಮಸ್ಯೆ ಏನಿಲ್ಲ. ಯಾಕಂದರೆ ಸೋಂಕು ಬಂದಿರುವುದಕ್ಕೆ ಕಾರಣ ವಿದೇಶ ಪ್ರವಾಸ ಮಾಡಿದ ವ್ಯಕ್ತಿ ಆಗಿರುತ್ತಾನೆ. ಇದೀಗ ಆರೋಗ್ಯ ಇಲಾಖೆ ಮಾಹಿತಿಯಂತೆ SARI (ಸೀವಿಯರ್ ಅಕ್ಯುಟ್ ರೆಸ್ಪರೇಟರಿ ಇನ್ಫೆಕ್ಷನ್) ಹಾಗೂ ILI (ಇನ್ಫ್ಯುಯೆಂಜಾ ಲೈಕ್ ಇಲ್ನೆಸ್) ರೋಗಿಗಳು ಹೆಚ್ಚಾಗಿದ್ದಾರೆ.
ಕರ್ನಾಟಕದಲ್ಲಿ 29 ಕರೋನಾ ಸೋಂಕಿತರಿಗೆ ಸೋಂಕು ಎಲ್ಲಿಂದ ಬಂತು ಎನ್ನುವ ಮಾಹಿತಿ ಇಲ್ಲ. ತೀವ್ರ ಉಸಿರಾಟದ ಸಮಸ್ಯೆ ಹಾಗೂ ಶೀತಜ್ವರದಿಂದ ಸೋಂಕು ಬಂದಿದೆ ಎಂದು ಮೇಲ್ನೋಟಕ್ಕೆ ಸರ್ಕಾರ ಪತ್ತೆ ಹಚ್ಚಿದೆ. ಈ 29 ಸೋಂಕಿತರಿಂದ ಬರೋಬ್ಬರಿ 281 ಜನರಿಗೆ ಕರೋನಾ ಸೋಂಕು ಬಂದಿದೆ. ಮೈಸೂರಿನಲ್ಲಿ 2 SARI ಕೇಸ್ ಗಳಿಂದ ಶೇಕಡ 38.5 ರಷ್ಟು ಜನರಿಗೆ ಸೋಂಕು ಬಂದಿದೆ. ವಿಜಯಪುರ ಒಂದು SARI ಕೇಸ್ನಿಂದ ಶೇ.36ರಷ್ಟು ಜನರಿಗೆ ಸೋಂಕು ಹರಡಿದೆ. ದಾವಣಗೆರೆ ಒಂದು SARI ಕೇಸ್ ಶೇಕಡ 13.5ರಷ್ಟು ಜನರಿಗೆ ಸೋಂಕು ಹರಡಿದೆ. ಟ್ರಾವೆಲ್ ಹಿಸ್ಟರಿ ಇಲ್ಲದವರಿಗೆ ಸೋಂಕು ಬಂದರೆ, ಸಮುದಾಯಕ್ಕೆ ಕರೋನಾ ಹರಡುತ್ತಿದೆ ಎಂದೇ ಅರ್ಥ ಎಂದು ಈ ಮೊದಲು ಹೇಳಲಾಗಿತ್ತು. ಇದೀಗ ಸಮುದಾಯಕ್ಕೆ ಸೋಂಕು ಹರಡಿದ್ಯಾ ಎಂದರೆ ಅಧಿಕೃತವಾಗಿ ಇಲ್ಲ. ನಾವಿನ್ನೂ 2ನೇ ಹಂತದಲ್ಲೇ ಕಟ್ಟಿಹಾಕಿದ್ದೇವೆ. ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಡುವೆ SARI & ILI ಕೇಸ್ಗಳಿಂದ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಏಪ್ರಿಲ್ 28ರಂದು ಭಾರತದಲ್ಲಿ ಸೋಂಕಿತರ ಸಂಖ್ಯೆ 30 ಸಾವಿರ ಮಾತ್ರ. ಆ ಸಂಖ್ಯೆ 40 ಸಾವಿರ ಆಗಲು ತೆಗೆದುಕೊಂಡ ಸಮಯ ಕೇವಲ 5 ದಿನಗಳ ಮಾತ್ರ ಅಂದರೆ ಮೇ 03 ರಂದು ಭಾರತದಲ್ಲಿ ಕರೋನಾ ಸೋಂಕಿತರ ಸಂಖ್ಯೆ 40 ಸಾವಿರ. ಆ ಬಳಿಕ ಕೇವಲ 3 ದಿನಗಳಲ್ಲಿ 50 ಸಾವಿರವನ್ನು ದಾಟಿಕೊಂಡು ಮುಂದೆ ಸಾಗಿದೆ. ಆದರೂ ನಾವಿನ್ನೂ 2ನೇ ಹಂತದಲ್ಲಿ ಇದ್ದೇವೆ ಎಂದರೆ ಸರ್ಕಾರದ ಮಾತನ್ನು ನಾವು ನಂಬಲೇ ಬೇಕಾಗಿದೆ.