ನಿರೀಕ್ಷೆ ಇಟ್ಟುಕೊಳ್ಳುವುದು ತಪ್ಪಲ್ಲ, ಆ ನಿರೀಕ್ಷೆ ಹುಸಿಯಾದಾಗ ಆಕ್ರೋಶ ಹೊರಹಾಕುವುದೂ ತಪ್ಪಲ್ಲ. ನಿರೀಕ್ಷೆ ಈಡೇರಿಸುವ ಸ್ಥಾನದಲ್ಲಿದ್ದವರು ಸ್ವಲ್ಪ ಮಟ್ಟಿಗಾದರೂ ಸಮಾಧಾನ ಹೇಳಿಹೋಗಬೇಕು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಕರ್ನಾಟಕ ಭೇಟಿ ಹಾಗಾಗಲೇ ಇಲ್ಲ. ನಿರೀಕ್ಷೆಯ ಯಾವೊಂದು ಅಂಶವೂ ಅವರಿಂದ ಪ್ರಸ್ತಾಪವಾಗಲಿಲ್ಲ. ಖುದ್ದು ಮುಖ್ಯಮಂತ್ರಿಗಳೇ ಬೇಡಿಕೆ ಮುಂದಿಟ್ಟರೂ ಅದನ್ನು ಪರಿಶೀಲಿಸುವ ಭರವಸೆಯೂ ಸಿಗಲಿಲ್ಲ. ಅಷ್ಟ ಮಟ್ಟಿಗೆ ಪ್ರಧಾನಿಯವರ ರಾಜ್ಯ ಭೇಟಿ ಇಲ್ಲಿನವರ ಪಾಲಿಗೆ ನಿರಾಶಾದಾಯಕವಾಗಿತ್ತು.
ತುಮಕೂರಿನ ಸಿದ್ದಗಂಗಾ ಮಠದ ಕಾರ್ಯಕ್ರಮ, ಕೃಷಿ ಕರ್ಮಣ ಪ್ರಶಸ್ತಿ ಪ್ರದಾನ, ಬೆಂಗಳೂರಿನ ಡಿಆರ್ ಡಿಓನಲ್ಲಿ ಯುವ ವಿಜ್ಞಾನಿಗಳ ಪ್ರಯೋಗಾಲಯಕ್ಕೆ ಚಾಲನೆ, ಭಾರತೀಯ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮಗಳಲ್ಲಿ ಭಾಗಿಯಾದ ಪ್ರಧಾನಿಯವರು ಕೇಂದ್ರ ಸರ್ಕಾರದ ಕಾರ್ಯಕ್ರಮಗಳು, ಅದರಿಂದ ಜನರಿಗೆ ಆಗುವ ಪ್ರಯೋಜನಗಳು, ಕೇಂದ್ರ ಸರ್ಕಾರದ ಮುಂದಿನ ಯೋಜನೆಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಾತನ ಭಾರತೀಯ ಸಂಸ್ಕೃತಿಯ ರಕ್ಷಣೆ, ಏಕ ಬಳಕೆಯ ಪ್ಲಾಸ್ಟಿಕ್ ಬಳಸದಿರುವುದು ಹಾಗೂ ಜಲ ಸಂರಕ್ಷಣೆ ಈ ಮೂರು ಸಂಕಲ್ಪಗಳನ್ನು ಮಾಡಲು ಸಂತರ ಸಹಕಾರ ಕೋರಿದರು. ಶಕ್ತ ಭಾರತ ನಿರ್ಮಾಣಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನದ ನೆರವು ಕೋರಿದರು.
ಅಷ್ಟೇ ಅಲ್ಲ, ಸಿದ್ದಗಂಗಾ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಸಂಸತ್ತಿನಲ್ಲಿ ಬಹುಮತದಿಂದ ಅಗೀಕಾರವಾದ ಕಾಯ್ದೆಯ ವಿಚಾರದಲ್ಲಿ ಸುಳ್ಳು ಹೇಳಿ ಪ್ರತಿಭಟನೆ ನಡೆಸುತ್ತಿರುವ ಈ ಪಕ್ಷಗಳು ಸಂಸತ್ ಮತ್ತು ದೇಶದ ವಿರುದ್ಧವೇ ಹೋರಾಡುತ್ತಿವೆ. ಅದರ ಬದಲು ದಮ್ ಇದ್ದರೆ ಅಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿ ಅವರನ್ನು ಓಡಿಸುತ್ತಿರುವ ಪಾಕಿಸ್ತಾನ ವಿರುದ್ಧ ಹೋರಾಟ ಮಾಡಿ ಎಂದು ಸವಾಲು ಹಾಕಿದರು. ಆದರೆ, ರಾಜ್ಯದಲ್ಲಿ ನೆರೆ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜನರ ಕುರಿತು ಒಂದು ಮಾತು ಹೇಳಲಿಲ್ಲ. ಅವರಿಗೆ ಪರಿಹಾರ ಕಲ್ಪಿಸುವ ಕುರಿತು ಸೊಲ್ಲೆತ್ತಲಿಲ್ಲ.
ಅಷ್ಟೇ ಆಗಿದ್ದರೆ ಪರವಾಗಿಲ್ಲ. ರಾಜ್ಯದಲ್ಲಿ ನೆರೆಹಾನಿ ಪರಿಹಾರಕ್ಕೆ ಹೆಚ್ಚು ಹಣ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೈಜೋಡಿಸಿ ಮನವಿ ಮಾಡಿಕೊಂಡರೂ ಸ್ಪಂದಿಸಲಿಲ್ಲ. ಈ ಬಗ್ಗೆ ರಾಜಭವನದಲ್ಲಿ ಇನ್ನಷ್ಟು ವಿಸ್ತೃತವಾಗಿ ಪ್ರಧಾನಿಯವರೊಂದಿಗೆ ಚರ್ಚಿಸುವುದಾಗಿ ಮುಖ್ಯಮಂತ್ರಿಗಳು ಬಹಿರಂಗವಾಗಿ ಹೇಳಿದರೂ ಅದಕ್ಕೆ ಅವಕಾಶವನ್ನು ನೀಡಲಿಲ್ಲ. ಪ್ರಧಾನಿಯವರ ಈ ಧೋರಣೆ ಸಹಜವಾಗಿಯೇ ಪ್ರತಿಪಕ್ಷಗಳ ಆಕ್ರೋಶ, ಟೀಕೆಗೆ ತುತ್ತಾಯಿತು.
ದೇಶದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿರುವಾಗ, ಆರ್ಥಿಕ ಹಿಂಜರಿತ ಇರುವ ಕಾರಣದಿಂದಾಗಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರು ಮುಂದಿಟ್ಟ ಬೇಡಿಕೆಗಳನ್ನು ತಕ್ಷಣಕ್ಕೆ ಈಡೇರಿಸಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಏಕೆಂದರೆ, ಮುಖ್ಯಮಂತ್ರಿಗಳು 50 ಸಾವಿರ ಕೋಟಿ ರೂ. ವಿಶೇಷ ನೆರವು ಕೋರಿದ್ದರು. ಇಂತಹ ಬೇಡಿಕೆ ಬಂದಾಗ ಅದನ್ನು ಈಡೇರಿಸುವ ಭರವಸೆ ನೀಡುವ ಮೊದಲು ಹಣಕಾಸು ಸಚಿವರೊಂದಿಗೆ ಚರ್ಚಿಸಬೇಕು. ಹಣ ಕೊಡುತ್ತೇವೆ ಎಂದು ಘೋಷಣೆ ಮಾಡಿ ಬಳಿಕ ಅದು ಈಡೇರದೇ ಇದ್ದಲ್ಲಿ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ. ಪ್ರಧಾನಿ ಟೀಕಾಕಾರರಿಗೂ ಇದು ಗೊತ್ತಿರದ ಸಂಗತಿ ಏನೂ ಅಲ್ಲ. ಆದರೆ, ರಾಜ್ಯದ ಬೇಡಿಕೆಗಳನ್ನು ಪರಿಶೀಲಿಸಲಾಗುವುದು ಎಂಬ ಒಂದು ಸಣ್ಣ ಭರವಸೆಯೂ ಪ್ರಧಾನಿಯವರಿಂದ ಬರಲಿಲ್ಲ ಎಂದಾಗ ಎಂಥವರಿಗೂ ಸಿಟ್ಟು, ಬೇಸರ ಉಂಟಾಗುತ್ತದೆ. ಈ ಬಾರಿ ಪ್ರಧಾನಿ ಭೇಟಿ ವೇಳೆ ಆಗಿದ್ದು ಕೂಡ ಇದುವೆ.
ಮುಖ್ಯಮಂತ್ರಿಯವರ ನಡೆ ಮೆಚ್ಚಲೇ ಬೇಕು
ಇಷ್ಟರ ನಡುವೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಧೈರ್ಯ ಮೆಚ್ಚಲೇ ಬೇಕು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರ ಬೇಡಿಕೆ ಬಗ್ಗೆ ಸ್ಪಂದಿಸಲಿ, ಅಥವಾ ಪರಿಗಣಿಸದೇ ಇರಲಿ, ಪ್ರಧಾನಿಯವರ ಮುಂದೆಯೇ ವಿಷಯ ಪ್ರಸ್ತಾಪಿಸಿ ತಮ್ಮ ಬೇಡಿಕೆಗೆ ಕೇಂದ್ರ ಸ್ಪಂದಿಸಿಲ್ಲ ಎಂದು ಹೇಳುವ ಧೈರ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತೋರಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಪಕ್ಷಗಳ ಸರ್ಕಾರಗಳು ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಿಂದ ಈ ರೀತಿಯ ಹೇಳಿಕೆಗಳು ಬರಬಹುದೇನೋ? ಆದರೆ, ಒಂದೇ ಪಕ್ಷದ ಸರ್ಕಾರ ಇದ್ದಾಗ ಚಕ್ರಾಧಿಪತಿಯಂತೆ ಮೆರೆಯುತ್ತಿರುವ ಪ್ರಧಾನಿಯವರ ಮುಂದೆ ಈ ರೀತಿ ನೇರವಾಗಿ ಕೇಂದ್ರದ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸುವ ಯಡಿಯೂರಪ್ಪ ಅವರ ಧೈರ್ಯವನ್ನು ಮೆಚ್ಚಲೇ ಬೇಕು.
ತುಮಕೂರಿನಲ್ಲಿ ಪ್ರಧಾನಿ ಅವರಿದ್ದ ವೇದಿಕೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, 1960ರ ದಶಕದಲ್ಲಿ ಆರಂಭವಾದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು 50 ಸಾವಿರ ಕೋಟಿ ರೂ. ವಿಶೇಷ ನೆರವು ನೀಡಿ ಎಂದು ಕೋರಿದರು. ಅಷ್ಟೇ ಅಲ್ಲ, ನೆರೆ ಹಾವಳಿಯಿಂದಾಗಿ 30 ಸಾವಿರ ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಮೂರ್ನಾಲ್ಕು ಬಾರಿ ದೆಹಲಿಗೆ ಬಂದು ಈ ಬಗ್ಗೆ ಕೇಳಿಕೊಂಡರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎನ್ನುವ ಮೂಲಕ ಪ್ರಧಾನಿ ಸಮ್ಮುಖದಲ್ಲೇ ಕೇಂದ್ರದ ಕ್ರಮದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದರು. ಬಳಿಕ ಹೆಚ್ಚು ನೆರವು ನೀಡಿ ಎಂದು ಪ್ರಧಾನಿಯವರಲ್ಲಿ ಕೈಜೋಡಿಸಿ ಕೇಳುತ್ತೇನೆ ಎನ್ನುವ ಮೂಲಕ ಇನ್ನಾದರೂ ರಾಜ್ಯದ ಬಗ್ಗೆ ಕಣ್ಣು ತೆರೆಯಿರಿ ಎಂದು ಪರೋಕ್ಷವಾಗಿ ಚಾಟಿ ಬೀಸಿದರು. ಇಷ್ಟಾದರೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಒಂದು ಸಣ್ಣ ಭರವಸೆ ಕೂಡ ರಾಜ್ಯಕ್ಕೆ ಸಿಗಲಿಲ್ಲ.
ಈ ಕಾರಣಕ್ಕಾಗಿಯೇ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಮುಗಿಬಿದ್ದಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಮನಬಂದಂತೆ ಪ್ರಧಾನಿಯವರನ್ನು ಟೀಕಿಸುತ್ತಿದ್ದಾರೆ. ಮಕ್ಕಳ ಮುಂದೆ ಪೌರತ್ವ ತಿದ್ದುಪಡಿ ಕಾಯ್ದೆ ಪ್ರಸ್ತಾಪಿಸುವ ನಿಮಗೆ ರಾಜ್ಯದ ನೆರೆ ಸಂತ್ರಸ್ತರ ಗೋಳು ಕೇಳಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲ ತಾಣ ಟ್ವಿಟರ್ ನಲ್ಲಂತೂ ಗೋಬ್ಯಾಕ್ ಮೋದಿ ಆಂದೋಲನವೇ ನಡೆಯಿತು.
ದೇಶದ ಪ್ರಧಾನಿಯಾಗಿ ರಾಜ್ಯಕ್ಕೆ ಬಂದಾಗಲೆಲ್ಲಾ ನೆರವಿನ ಭರವಸೆ ನೀಡಲು ಸಾಧ್ಯವಿಲ್ಲ. ಇಡೀ ದೇಶಕ್ಕೇ ಅವರು ಕಾರ್ಯಕ್ರಮಗಳನ್ನು ರೂಪಿಸಬೇಕಾದಾಗ ಒಂದು ರಾಜ್ಯವನ್ನು ಪ್ರತ್ಯೇಕವಾಗಿ ಕಾಣಲು ಸಾಧ್ಯವಿಲ್ಲ. ರಾಜ್ಯದ ಸಮಸ್ಯೆಗಳ ಬಗ್ಗೆ ಅವರಿಗೆ ಗೊತ್ತಿದ್ದು, ಭರವಸೆ ನೀಡಿ ಕೈತೊಳೆದುಕೊಳ್ಳುವ ಬದಲು ಸೂಕ್ತ ಸಂದರ್ಭ ಮತ್ತು ಸೂಕ್ತ ವೇದಿಕೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಂಡು ರಾಜ್ಯಕ್ಕೆ ಒಳಿತು ಮಾಡುತ್ತಾರೆ ಎಂದು ಪ್ರಧಾನಿಯವರನ್ನು ಸಮರ್ಥಿಸಿಕೊಳ್ಳುವವರು ಹೇಳಿ ಸಮಾಧಾನಪಡಿಸುವ ಪ್ರಯತ್ನ ಮಾಡಬಹುದಾದರೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಿಂದ ಕರ್ನಾಟಕಕ್ಕೆ ಗುಲುಗುಂಜಿಯಷ್ಟು ನೆರವು ಸಿಗದೇ ಇರುವುದು ಮಾತ್ರ ಸತ್ಯ.