ಇಂದು ನಕಲಿ ಸುದ್ದಿಗಳ ಪಾರಮ್ಯ ದಿನೇ ದಿನೇ ಹೆಚ್ಚಾಗುತ್ತಿರುವಂತೆ ಕ್ಷಣಾರ್ಧದಲ್ಲೇ ದೇಶಾದ್ಯಂತ ವೈರಲ್ ಆಗುತ್ತಿವೆ . ಅಂತಹುದೇ ಸುದ್ದಿಯೊಂದು ವಿಶ್ವಾದ್ಯಂತ ಭೀತಿ ಸೃಷ್ಟಿಸಿರುವ ಕರೋನ ವೈರಸ್ ಸಾಂಕ್ರಾಮಿಕ ರೋಗವನ್ನು ಎದುರಿಸುವ ಕಾರ್ಯಪಡೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ನೇತೃತ್ವ ವಹಿಸಬೇಕೆಂದು ಅಮೆರಿಕ ಮತ್ತು ಇಂಗ್ಲೆಂಡ್ ಸೇರಿದಂತೆ 18 ರಾಷ್ಟ್ರಗಳು ಕೋರಿವೆ ಎಂಬ ವೀಡಿಯೋ ಸುದ್ದಿಯೊಂದು ಒಂದೆರಡು ದಿನಗಳಿಂದ ವಾಟ್ಸ್ ಅಪ್ ನಲ್ಲಿ ಹರಿದಾಡುತ್ತಿದೆ
ಈ ಸುದ್ದಿಯನ್ನು WION ಮಾಧ್ಯಮವು ಪ್ರಸಾರ ಮಾಡಿದ್ದು . ಮಹಾರಾಷ್ಟ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅತುಲ್ ಭಟ್ಖಾಲ್ಕರ್ ಅವರು ಈ ವೀಡಿಯೋ ಕ್ಲಿಪ್ ನ್ನು ಟ್ವೀಟ್ ಮಾಡಿದ್ದಾರೆ. ಮಣಿಪುರದ ಮುಖ್ಯಮಂತ್ರಿಯ ಸಲಹೆಗಾರ ರಜತ್ ಸೇಥಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ವಿಶ್ವ ನಾಯಕರಾದ ಟ್ರಂಪ್, ಬೋರಿಸ್ ಜಾನ್ಸನ್, ಸ್ಕಾಟ್ ಮಾರಿಸನ್ ಮುಂತಾದವರು ನಮ್ಮ ಪ್ರಧಾನಿ ಮೋದಿ ಅವರು ಕೋವಿಡ್ 19 ಕಾರ್ಯಪಡೆಯ ನೇತೃತ್ವ ವಹಿಸಬೇಕೆಂದು ಬಯಸುತ್ತಾರೆ
ಎಂದು ಬರೆದಿದ್ದಾರೆ.
ಈ ಸುದ್ದಿಯು ಪ್ರಸಾರವು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಸಮಾನವಾಗಿ ವೈರಲ್ ಆಗಿದೆ. ಈ ಕುರಿತು ಆಲ್ಟ್ ನ್ಯೂಸ್ ತನ್ನ ಅಧಿಕೃತ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅನೇಕ ಫ್ಯಾಕ್ಟ್-ಚೆಕ್ ವಿನಂತಿಗಳನ್ನು ಸಹ ಸ್ವೀಕರಿಸಿದೆ. ಪ್ರಶ್ನಾರ್ಹವಾದ ಈ ವೀಡಿಯೋ ಕ್ಲಿಪ್ ನ್ನು WIon ಕಳೆದ ಮಾರ್ಚ್ 15, 2020, ಪ್ರಸಾರಿಸಿದ್ದು ಅದರಲ್ಲಿ ವಿಶ್ವ ನಾಯಕರು ಪ್ರಧಾನಿ ಮೋದಿಯವರು ಕೈಗೊಂಡಿರುವ ಕ್ರಮಗಳನ್ನು ಶ್ಲಾಘಿಸಿದ್ದಾರೆ. ಪ್ರಧಾನಿ ಮೋದಿ ಅವರು ಜಿ 20 ಶೃಂಗ ರಾಷ್ಟ್ರಗಳೂ ಕೋವಿಡ್ ವಿರುದ್ದದ ಹೋರಾಟದಲ್ಲಿ ಸಕ್ರಿಯ ಪಾತ್ರ ವಹಿಸಬೇಕೆಂದು ಹೇಳಿರುವುದನ್ನು ಆಸ್ಟ್ರೇಲಿಯಾ ಸ್ವಾಗತಿಸಿದೆ ಎಂದು ವರದಿ ಮಾಡಿದೆ.
ಆದರೆ ಈ ವೀಡಿಯೋ ಕ್ಲಿಪ್ ನಲ್ಲಿ ಎಲ್ಲಿಯೂ ಕೂಡ ಕರೋನವೈರಸ್ ಟಾಸ್ಕ್ ಫೋರ್ಸ್ ಅನ್ನು ಮುನ್ನಡೆಸಲು ಪ್ರಧಾನಿ ಮೋದಿ ಅವರನ್ನು ಅಮೇರಿಕಾ , ಇಂಗ್ಲೆಂಡ್ ಮತ್ತು ಇತರ 18 ರಾಷ್ಟ್ರಗಳು ಆಯ್ಕೆ ಮಾಡಿವೆ ಎಂದು ಆಂಕರ್ ಹೇಳುತ್ತಿಲ್ಲ ಆದರೆ ಈ ಕಾರ್ಯಪಡೆಯ ಉಸ್ತುವಾರಿ ವಹಿಸಿಕೊಳ್ಳುವ ನಾಯಕನಾಗಿ ಭಾರತವು ಹೊರಹೊಮ್ಮಿದೆ ಏಕೆಂದರೆ ಪ್ರಧಾನಿ ಮೋದಿ ಅವರು ಈ ಸಾಂಕ್ರಾಮಿಕ ರೋಗವು ಹರಡಿರುವ ಎಲ್ಲ ದೇಶಗಳೂ ಒಂದಾಗಿ ಜಂಟಿ ಕ್ರಿಯಾ ಯೋಜನೆ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದ್ದರು. ಎಲ್ಲಾ ಸಾರ್ಕ್ ರಾಷ್ಟ್ರಗಳು ಭಾರತದ ಈ ನಡೆಯನ್ನು ಸ್ವಾಗತಿಸಿವೆ, ಎಲ್ಲ ದೇಶಗಳೂ ನವದೆಹಲಿಯೊಂದಿಗೆ ನಿಕಟವಾಗಿ ಕೆಲಸ ಮಾಡಲು ಬಯಸುತ್ತಾರೆ, ಅವರು ಮಾರಣಾಂತಿಕ ರೋಗವನ್ನು ಎದುರಿಸುವ ತಂತ್ರವನ್ನು ರೂಪಿಸಲಿದ್ದಾರೆ ಎಂದು ಆಂಕರ್ ಹೇಳುತ್ತಾರೆ. ಇಲ್ಲಿ, ಅವರು ನಿರ್ದಿಷ್ಟವಾಗಿ ಸಾರ್ಕ್ (ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಕೂಟ) – ಭಾರತ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು
ಶ್ರೀಲಂಕಾದ ಸದಸ್ಯ ರಾಷ್ಟ್ರಗಳ ಬಗ್ಗೆ ಮಾತನಾಡುತ್ತಿದ್ದಾರೆ.
ವಿಶ್ವದ ಇತರ ಭಾಗಗಳಿಗೆ ಸಂಬಂಧಿಸಿದಂತೆ, ಆಂಕರ್ ಈ ರೀತಿಯಾಗಿ ಹೇಳಿದ್ದಾರೆ . ಮೋದಿ ಅವರನ್ನು ಪ್ರಶಂಸೆ ಮಾಡಿರುವುದು ಬರೀ ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲ ಬದಲಿಗೆ ವಿಶ್ವದ ಇತರ ಭಾಗಗಳ ನಾಯಕರು ಕೂಡ ಪ್ರಧಾನಿ ಮೋದಿಯವರನ್ನು ಪ್ರಶಂಸಿಸಿದ್ದಾರೆ. ಇವರಲ್ಲಿ ಮೊದಲನೆ ಸ್ಥಾನದಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರಿದ್ದು ಕೋವಿಡ್ ವಿರುದ್ದ ಹೋರಾಟದಲ್ಲಿ ಮೋದಿಯವರ ಪ್ರಯತ್ನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇತರ ದೇಶಗಳನ್ನೂ ಸಂಘಟಿಸಿದರು. ಅಲ್ಲದೆ ಜಿ 20 ರಾಷ್ಟ್ರಗಳನ್ನು ಸಂಘಟಿಸಲು ಪ್ರಧಾನಿ ಮೋದಿಯವರ ಪ್ರಯತ್ನವನ್ನು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶ್ಲಾಘಿಸಿದರು, ಎಂದು ಹೇಳಿದ್ದಾರೆ. ಅದರೆ ಎಲ್ಲಿಯೂ ಕೂಡ ಅಮೇರಿಕಾದ ಉಲ್ಲೇಖವೇ ಇಲ್ಲ.
ಆದಾಗ್ಯೂ, ಕೋವಿಡ್ 19 ಬಿಕ್ಕಟ್ಟಿನ ಬಗ್ಗೆ ಜಾಗತಿಕ ಕಾರ್ಯಪಡೆಯ ನೇತೃತ್ವ ವಹಿಸಲು ಪ್ರಧಾನಿ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಆಂಕರ್ ಎಲ್ಲಿಯೂ ಹೇಳಿಲ್ಲ. ವಿಶ್ವ ನಾಯಕರೊಂದಿಗೆ ಪ್ರಧಾನಿ ನಡೆಸಿದ ಸಂವಾದಗಳ ಕುರಿತು ಅವರು ಮಾತನಾಡಿದರು. ಕಳೆದ ಮಾರ್ಚ್ 13 ರಂದು ಪ್ರಧಾನಿ ಮೋದಿ ಅವರು ಕೊರೋನವೈರಸ್ ವಿರುದ್ಧ ಹೋರಾಡಲು ಸಾರ್ಕ್ ರಾಷ್ಟ್ರಗಳ ನಾಯಕತ್ವವು ಬಲವಾದ ಕಾರ್ಯತಂತ್ರವನ್ನು ರೂಪಿಸಬೇಕೆಂದು ನಾನು ಪ್ರಸ್ತಾಪಿಸಲು ಬಯಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮಾರ್ಚ್ 15 ರಂದು ಸಾರ್ಕ್ ನಾಯಕರ ನಡುವೆ ಮೊಟ್ಟಮೊದಲ ವಿಡಿಯೋ ಕಾನ್ಫರೆನ್ಸ್ ನಡೆಯಿತು, ಅಲ್ಲಿ ಪ್ರದಾನಿ ಮೋದಿ ಅವರು ಕೋವಿಡ್ 19 ತುರ್ತು ನಿಧಿಗೆ ಭಾರತದ ಕೊಡುಗೆಯಾಗಿ 10 ಮಿಲಿಯನ್ ಡಾಲರ್ ಹಣ ನೀಡಿದರು . ಇತರ ರಾಷ್ಟ್ರಗಳಾದ ಶ್ರೀಲಂಕಾ ಮತ್ತು ಬಾಂಗ್ಲಾದೇಶ ಕ್ರಮವಾಗಿ 5 ಮಿಲಿಯನ್ ಮತ್ತು 1.5 ಮಿಲಿಯನ್ ನೀಡುವ ವಾಗ್ದಾನ ಮಾಡಿವೆ. ನಿಧಿಗೆ ಯಾವುದೇ ಕೊಡುಗೆಯನ್ನು ಘೋಷಿಸದ ಏಕೈಕ ರಾಷ್ಟ್ರ ಪಾಕಿಸ್ತಾನ ಆಗಿದ್ದು ಈ ನಿಧಿಯನ್ನು ಸಾರ್ಕ್ ರಾಷ್ಟ್ರಗಳ ಪ್ರಧಾನ ಕಾರ್ಯದರ್ಶಿಯ ಅಧೀನದಲ್ಲಿ ಇರಿಸಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ.
ಜಿ 20 ರಾಷ್ಟ್ರಗಳ ನ್ನು ಕೋವಿಡ್ ಟಾಸ್ಕ್ ಫೋರ್ಸ್ ನೊಳಗೆ ಸೇರಿಸಲು ಪ್ರಧಾನಿ ಮೋದಿ ಅವರ ಪ್ರಯತ್ನವನ್ನು ಆಸ್ಟ್ರೇಲಿಯಾದ ಪ್ರಧಾನಿ ಮಾರಿಸನ್ ಶ್ಲಾಘಿಸಿದ್ದಾರೆ ಎಂದು ವರದಿ ಮಾಡುವಾಗ WION ಜಿ 20 ಅನ್ನು ಉಲ್ಲೇಖಿಸಿದೆ. ಆದರೆ ಈ ವರ್ಷ ಜಿ 20 ರಾಷ್ಟ್ರಗಳ ಅಧ್ಯಕ್ಷರಾದ ಸೌದಿ ಸರ್ಕಾರವು ಈ ವಿಷಯವನ್ನು ನಿರ್ಧರಿಸಬಹುದು ಎಂದು ಮಾರಿಸನ್ ಹೇಳಿದ್ದಾರೆ. ಕಳೆದ ಮಾರ್ಚ್ 26 ರಂದು ಜಿ 20 ರಾಷ್ಟ್ರಗಳ ಶೃಂಗಸಭೆ ನಡೆಯಿತು. ಇದರ ಅಧ್ಯಕ್ಷತೆಯನ್ನು ಸೌದಿ ಅರೇಬಿಯಾದ ರಾಜವಹಿಸಿದ್ದರು ಮತ್ತು ಪ್ರಧಾನಿ ಮೋದಿ ಸೇರಿದಂತೆ ಸದಸ್ಯ ರಾಷ್ಟ್ರಗಳ ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಕೋವಿಡ್ 19 ರ ಬಿಕ್ಕಟ್ಟಿನ ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು ಜಿ 20 ರಾಷ್ಟ್ರಗಳು ಒಟ್ಟು 5 ಟ್ರಿಲಿಯನ್ ಡಾಲರ್ ಮೊತ್ತವನ್ನು ನೀಡುವ ವಾಗ್ದಾನ ಮಾಡಿವೆ. ಮೋದಿ ಅವರು ಜಿ 20 ಸಮ್ಮೇಳನದ ನೇತೃತ್ವ ವಹಿಸಿಲ್ಲ ಅಥವಾ ಇದಕ್ಕೆ ಭಾರತ ಪ್ರತ್ಯೇಕ ಕೊಡುಗೆ ನೀಡಿಲ್ಲ.
ಭಾರತವು ಕೋವಿಡ್ 19 ಕಾರ್ಯಪಡೆಯ ಮುಖ್ಯಸ್ಥ ಎಂದು ಇಂಗ್ಲೆಂಡ್ ಪ್ರಸ್ತಾಪಿಸಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಅವರ ಬ್ರಿಟಿನ್ ಅದ್ಯಕ್ಷ ಬೋರಿಸ್ ಜಾನ್ಸನ್ ಕಳೆದ ಮಾರ್ಚ್ 12 ರಂದು ದೂರವಾಣಿ ಸಂಭಾಷಣೆ ನಡೆಸಿದರು. ಪ್ರಧಾನ ಮಂತ್ರಿಗಳ ಕಚೇರಿಯ ಪತ್ರಿಕಾ ಪ್ರಕಟಣೆಯ ಪ್ರಕಾರ, ಉಭಯ ನಾಯಕರು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಭಾರತ- ಇಂಗ್ಲೆಂಡ ಸಹಕಾರದ ಬಗ್ಗೆ ಮಾತನಾಡಿದರು ಮತ್ತು ಕೋವಿಡ್ 19 ಸಾಂಕ್ರಾಮಿಕದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಕೋವಿಡ್ ಬಿಕ್ಕಟ್ಟನ್ನು ನಿಭಾಯಿಸಲು ಕಾರ್ಯತಂತ್ರಗಳನ್ನು ಕಂಡುಹಿಡಿಯಲು ಭಾರತವು ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿದೆ, ಆದರೆ ಈ ಕುರಿತು ಜಂಟಿ ಅಥವಾ ಜಾಗತಿಕ ಕಾರ್ಯಪಡೆಯ ಬಗ್ಗೆ ಯಾವುದೇ ವರದಿಗಳಿಲ್ಲ.
ಆದ್ದರಿಂದ, WION ಸುದ್ದಿ ಪ್ರಸಾರವು ಅಮೇರಿಕಾ ಇಂಗ್ಲೆಂಡ್ ಮತ್ತು ಇತರ 18 ರಾಷ್ಟ್ರಗಳು ಪ್ರಧಾನಿ ಮೋದಿಯವರು ಕರೋನವೈರಸ್ ಕಾರ್ಯಪಡೆಗಳನ್ನು ಮುನ್ನಡೆಸಬೇಕೆಂದು ಬಯಸುತ್ತಾರೆ ಎಂಬ ಸುಳ್ಳು ಹೇಳಿಕೆಯೊಂದಿಗೆ ಪ್ರಸಾರವಾಗುತ್ತಿದೆ. ಅಂತಹ ಯಾವುದೇ ಪ್ರಸ್ತಾವನೆ ನಡೆದಿಲ್ಲ. ಚಾನೆಲ್ ತನ್ನ ಉತ್ಪ್ರೇಕ್ಷಿತ ವರದಿಯಿಂದಾಗಿ ಬಿಕ್ಕಟ್ಟನ್ನು ನಿಭಾಯಿಸುವ ಜಾಗತಿಕ ಪ್ರಯತ್ನದಲ್ಲಿ ಭಾರತದ ಸ್ಥಾನದ ಬಗ್ಗೆ ತಪ್ಪುದಾರಿಗೆಳೆಯುವ ಚಿತ್ರಣವನ್ನು ನೀಡಿದೆ ಅಷ್ಟೇ ಹೊರತು ಬೇರೇನಿಲ್ಲ ಎಂಬುದು ಸ್ಪಷ್ಟವಾಗಿದೆ