ಜಗತ್ತಿನಲ್ಲಿ ಮೊದಲು ಕರೋನಾ ಕಾಣಿಸಿಕೊಂಡದ್ದೇ ನೆರೆಯ ಚೀನಾದಲ್ಲಿ. ವಿಶ್ವದ ಎರಡನೇ ಅತೀ ದೊಡ್ಡ $13.6 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿರುವ ಚೀನಾ, ಬಿಕ್ಕಟ್ಟನ್ನು ಎದುರಿಸಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿತ್ತು. ಡಿಸೆಂಬರ್ ಮತ್ತು ಜನವರಿ ಆರಂಭದಲ್ಲಿ ಕರೋನಾ ಸೋಂಕು ನಿರ್ಮೂಲಗೊಳಿಸುವ ಪ್ರಯತ್ನಕ್ಕೆ ಚೀನಾ ಮುಂದಾದಾಗ ಕೂಡಲೇ ಚೀನಾದ ಸೆಂಟ್ರಲ್ ಬ್ಯಾಂಕ್ 1.2 ಟ್ರಿಲಿಯನ್ ಯುವಾನ್ (3173 ಬಿಲಿಯನ್ ಡಾಲರ್ )ಮೊತ್ತವನ್ನು ಬಿಡುಗಡೆ ಮಾಡಿತು.
ಆ ಸಮಯದಲ್ಲಿ ಶಾಲೆಗಳು, ಚಿಲ್ಲರೆ ಅಂಗಡಿಗಳು, ವಹಿವಾಟು ಕೇಂದ್ರಗಳು ಎಲ್ಲವೂ ಸಂಪೂರ್ಣ ಬೀಗ ಹಾಕಲ್ಪಟ್ಟವು. ಇದು ಉತ್ತರ ಅಮೆರಿಕದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಜನರ ಮೇಲೆ ಪರಿಣಾಮ ಬೀರಿತು. ಸ್ಟಾರ್‌ಬಕ್ಸ್ ಮತ್ತು ಐಕಿಯಾ ಸೇರಿದಂತೆ ಅಂತರರಾಷ್ಟ್ರೀಯ ಮಳಿಗೆಗಳನ್ನು ದೇಶಾದ್ಯಂತ ಅನಿರ್ದಿಷ್ಟವಾಗಿ ಮುಚ್ಚಲಾಯಿತು. ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದವು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆ ಇತ್ತು. ಇದರಿಂದ ಆರ್ಥಿಕ ಪ್ರಗತಿಗೆ ಗಣನೀಯ ಹೊಡೆತ ಆಯಿತು. ಫೆಬ್ರವರಿ ಮಧ್ಯಭಾಗದಲ್ಲಿ ಚೀನಾದ ವಿವಿಧ ಭಾಗಗಳಲ್ಲಿ ವಿಧಿಸಲಾಗಿದ್ದ ಪ್ರಯಾಣದ ನಿರ್ಬಂಧಗಳನ್ನು ತೆಗೆದುಹಾಕಿದ ಬೆನ್ನಲ್ಲೇ ಪೀಪಲ್ಸ್ ಬ್ಯಾಂಕ್ ಆಫ್ ಚೀನಾ (ಪಿಬಿಒಸಿ)ಬ್ಯಾಂಕುಗಳಿಗೆ ನಗದು ಮೀಸಲು ಅನುಪಾತವನ್ನು 50-100 ಬೇಸಿಸ್ ಪಾಯಿಂಟ್‌ಗಳವರೆಗೆ ಕಡಿಮೆ ಮಾಡಿತು, ಇದು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಮತ್ತಷ್ಟು ಹೆಚ್ಚಿಸಿತು.
ಜಾಗತಿಕ ಉತ್ಪಾದನಾ ಶೇಕಡಾ 25 ರಷ್ಟನ್ನು ನೀಡುವ ಚೀನಾದ ಆರ್ಥಿಕ ಹಿನ್ನಡೆ ವಿಶ್ವದ ಉಳಿದ ಭಾಗಗಳ ಮೇಲೆ ಬಹುದೊಡ್ಡ ಪರಿಣಾಮಗಳನ್ನು ಬೀರಿತು. ದಕ್ಷಿಣ ಕೊರಿಯಾ, ಜಪಾನ್ ಮತ್ತು ಇಟಲಿ ಏಕಾಏಕಿ ಮುಂದಿನ ಕರೋನಾ ಸೋಂಕು ಪೀಡಿತ ದೇಶಗಳಾಗಿ ಹೊರಹೊಮ್ಮಿದವು. ದಕ್ಷಿಣ ಕೊರಿಯಾ ಅತ್ಯಾಧುನಿಕ ಆರೋಗ್ಯ ವ್ಯವಸ್ಥೆಯು ಪರೀಕ್ಷೆ, ಸಂಪರ್ಕ ತಡೆಯನ್ನು ಮತ್ತು ಕ್ಲಿನಿಕಲ್ ನಿರ್ವಹಣೆಗೆ ಸಮರ್ಪಕವಾಗಿ ಸಜ್ಜುಗೊಂಡಿದೆ. ಇತರ ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಅನಾರೋಗ್ಯವನ್ನು ಪತ್ತೆಹಚ್ಚಲು ಮತ್ತು
ನಿರ್ವಹಿಸಲು ಆತುರದಿಂದ ಕ್ರಮ ಕೈಗೊಂಡಿವೆ.
ಪ್ರಪಂಚದಾದ್ಯಂತದ ಅನೇಕ ದೇಶಗಳ ಆರ್ಥಿಕ ಮುಖಂಡರು ಬ್ಯಾಂಕ್ ದರಗಳನ್ನು ಕಡಿತಗೊಳಿಸಿದರು, ತೆರಿಗೆವಿನಾಯಿತಿ ನೀಡಿದರು. ಈ ಸಂಘಟಿತ ಪ್ರಯತ್ನಗಳ ಉದ್ದೇಶವು ಮಾರುಕಟ್ಟೆಯಲ್ಲಿ ಹಣದ ಹರಿವನ್ನು ಹೆಚ್ಚಿಸುವುದು. ಇದರಿಂದ ಪೂರೈಕೆ ಮತ್ತು ಉತ್ಪಾದನೆ ಮುಂದುವರಿಯುತ್ತದೆ. ಮತ್ತು ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಸಹಾಯಕವಾಗುತ್ತದೆ.
ವಿಶ್ವದ ಅತ್ಯಂತ ದೊಡ್ಡ ಆರ್ಥಿಕತೆ ಹೊಂದಿರುವ ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಬಜೆಟ್‌ನಲ್ಲಿ ಜಾಗತಿಕ ಆರೋಗ್ಯ ಕಾರ್ಯಕ್ರಮಗಳಿಗೆ ಅನುದಾನ ಕಡಿತ ಮಾಡಲು ಕೋರಿದ್ದರು. ಇದರಲ್ಲಿ WHO ನಿಧಿಯಲ್ಲಿ ಶೇಕಡಾ 53ರಷ್ಟು ಕಡಿತ, ಪ್ಯಾನ್ ಅಮೆರಿಕನ್ ಆರೋಗ್ಯ ಸಂಸ್ಥೆಯಲ್ಲಿ ಶೇಕಡಾ 75 ರಷ್ಟು ಕಡಿತ ಮತ್ತು ಯುಎಸ್ ಸಿಡಿಸಿಯ ಬಜೆಟ್‌ನಲ್ಲಿ 16 ಶೇಕಡಾ ಕಡಿತವನ್ನು ಮಾಡಲಾಗಿತ್ತು. ಕರೋನಾ ವೈರಸ್ ಸೋಂಕು ಹತ್ತಿಕ್ಕುವ ಪ್ರಮುಖ ಸಂಸ್ಥೆಗಳು ಇವು!
ಆದರೆ ಕೋವಿಡ್‌ನ ಏಕಾಏಕಿ ಸೋಂಕು ಹರಡಿದ ಕೂಡಲೇ ಟ್ರಂಪ್ ಅವರ ಸರ್ಕಾರವು ಪರಿಸ್ಥಿತಿಯನ್ನು ನಿರ್ವಹಿಸಲು 2.5 ಬಿಲಿಯನ್ ಡಾಲರ್ ನೀಡುವಂತೆ ಸೆನೆಟ್‌ನ್ನು ವಿನಂತಿಸಿತು. ಸೆನೆಟ್ ಮುಖಂಡ ಚಕ್ ಶುಮರ್ ಅವರು $ 8.3 ಬಿಲಿಯನ್ ಡಾಲರ್ ಹಣವನ್ನುನೀಡಿದರು. ಫೆಬ್ರವರಿಯಲ್ಲಿ ಅಮೇರಿಕದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತ್ವರಿತವಾಗಿ ಹೆಚ್ಚಾಗಿದ್ದರಿಂದ ಮತ್ತು ಪರೀಕ್ಷಾ ಸೌಲಭ್ಯಗಳನ್ನು ತ್ವರಿತವಾಗಿ ಹೆಚ್ಚಿಸಲು ಸಾಧ್ಯವಾಗಲಿಲ್ಲವಾದ್ದರಿಂದ, ಸೋಂಕು ತಡೆ ಹೋರಾಟಕ್ಕೆ ಹಿನ್ನಡೆ ಆಯಿತು. ಮಾರ್ಚ್ ಮಧ್ಯದಲ್ಲಿ, ಶ್ವೇತಭವನವು ವೇತನದಾರರ ತೆರಿಗೆಯನ್ನು ಗಣನೀಯವಾಗಿ ಕಡಿತಗೊಳಿಸುವ ಆಯ್ಕೆಗಳನ್ನು ಚರ್ಚಿಸಿತು, ಗಂಟೆಗಳ ಲೆಕ್ಕದಲ್ಲಿ ವೇತನ ಪಡೆಯುವವರನ್ನು ರಕ್ಷಿಸಲು ಮತ್ತು ಸಣ್ಣ ಉದ್ಯಮಗಳಿಗೆ ಹೆಚ್ಚುವರಿ ಸಾಲಗಳನ್ನು ನೀಡಲೂ ಅನುದಾನವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ನೈಜೀರಿಯಾ, ಇಥಿಯೋಪಿಯಾ, ಸುಡಾನ್, ಅಂಗೋಲಾ, ಟಾಂಜಾನಿಯಾ, ಘಾನಾ ಮತ್ತು ಕೀನ್ಯಾಗಳು ಹೆಚ್ಚು ದುರ್ಬಲವಾಗಿದ್ದರೂ ಕೋವಿಟ್-19 ಪರಿಸ್ಥಿತಿಯನ್ನು ನಿಭಾಯಿಸಲು ಸಾಮಾನ್ಯ ಸೌಲಭ್ಯಗಳನ್ನು ಹೊಂದಿದ್ದವು. ಮಾರ್ಚ್ ಆರಂಭದ ವೇಳೆಗೆ, ವಿಶ್ವಬ್ಯಾಂಕ್, ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ನಿಭಾಯಿಸಲು ದುರ್ಬಲ ದೇಶಗಳಿಗೆ ತಕ್ಷಣದ ಆಧಾರದ ಮೇಲೆ 12 ಬಿಲಿಯನ್ ಡಾಲರ್ ಹಣವನ್ನು ನೀಡಿತು.
2015 ರಲ್ಲಿ ಸೌದಿ ಅರೇಬಿಯಾದಲ್ಲಿ, 2013–15ರ ಎಬೋಲಾ ಬಿಕ್ಕಟ್ಟಿನ ಸಂದರ್ಭದಲ್ಲಿ, ನೇರ ಆರೋಗ್ಯ ಸಂಬಂಧಿತ ವೆಚ್ಚಗಳಲ್ಲದೆ, ಆರೋಗ್ಯ ಕಾರ್ಯಕರ್ತರಲ್ಲಿ 881 ಸೋಂಕುಗಳು ಮತ್ತು 513 ಸಾವುಗಳು ಸಂಭವಿಸಿವೆ. ಗಿನಿಯಾ, ಲೈಬೀರಿಯಾ ಮತ್ತು ಸಿಯೆರಾ ಲಿಯೋನ್‌ನಲ್ಲಿನ ಆರೋಗ್ಯ ಕಾರ್ಯಕರ್ತರ ಸಾವಿಗೆ ಕಾರಣವಾದ ಚಿಕಿತ್ಸೆಯಿಲ್ಲದ ಪರಿಸ್ಥಿತಿಗಳಿಂದಾಗಿ ಆರೋಗ್ಯ ಕ್ಷೇತ್ರದ ಉದ್ಯೋಗಿಗಳ ಸಂಖ್ಯೆ ಲೈಬೀರಿಯಾದಲ್ಲಿ ಶೇಕಡಾ 8, ಸಿಯೆರಾ ಲಿಯೋನ್‌ನಲ್ಲಿ ಶೇಕಡಾ 23ರಷ್ಟು ಕಡಿಮೆಯಾಗಿದೆ.ದಕ್ಷಿಣ ಕೊರಿಯಾ ಎಲ್ಲಾ ಕೋವಿಡ್-19 ಪ್ರಕರಣಗಳಿಗೆ ಉಚಿತ ಡ್ರೈವ್-ಥ್ರೂ ಪರೀಕ್ಷೆಯನ್ನು ಒದಗಿಸಿತು. ಇದನ್ನು ಸರ್ಕಾರಿ ಅಧಿಕಾರಿಗಳು ವಿವಿಧ ರೀತಿಯ ಕಣ್ಗಾವಲುಗಳನ್ನು ಇಟ್ಟಿದ್ದಾರೆ. ನಮ್ಮ ದೇಶದಲ್ಲಿ ಶಂಕಿತ ಕೋವಿಡ್-19 ಪ್ರಕರಣಗಳಿಗೆ ಸಂಬಂಧಿಸಿದ ಮೊದಲ ಎರಡು ಪರೀಕ್ಷೆಗಳನ್ನು ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತಿದೆ.
ಚೀನಾ ಸರ್ಕಾರವು ಕೋವಿಡ್-19 ವಿರುದ್ದ ಹೋರಾಡಲು 16 ಬಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದೆ. ಸಿಂಗಾಪುರ ಸರ್ಕಾರವು 1.5 ಬಿಲಿಯನ್ ಮತ್ತು ಕೋವಿಡ್ ವಿರುದ್ದ ಹೋರಾಡುವ ಮುಂಚೂಣಿಯ ಏಜೆನ್ಸಿಗಳಿಗೆ 757 ಮಿಲಿಯನ್ ಡಾಲರ್ ಹಣವನ್ನು ಮೀಸಲಿಟ್ಟಿದೆ. ದಕ್ಷಿಣ ಕೊರಿಯಾದ ಸರ್ಕಾರವು ಫೆಬ್ರವರಿ ಅಂತ್ಯದ ವೇಳೆಗೆ ಸುಮಾರು 13 ಬಿಲಿಯನ್ ಡಾಲರ್ ಹಣವನ್ನು ರೋಗ ಹರಡುವಿಕೆಗೆ ತಡೆಗೆ ಮೀಸಲಿಟ್ಟಿದೆ.
ಇಟಲಿ ಸರ್ಕಾರವು ಮಾರ್ಚ್ 8ರಂದು ಕೋವಿಡ್ ವಿರುದ್ದ ಹೋರಾಟಕ್ಕಾಗಿ 8.5 ಬಿಲಿಯನ್ ಡಾಲರ್ ಬೆಂಬಲ ಪ್ಯಾಕೇಜ್ ಅನ್ನು ಘೋಷಿಸಿತು. ಜೊತೆಗೆ ಕರೋನಾ ವೈರಸ್ ನಿಂದ ಬಾಧಿತವಾದ ಕುಟುಂಬಗಳಿಗೆ 900 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನೂ ನೀಡುತ್ತಿದೆ.
ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತನ್ನ ಆರೋಗ್ಯ ಕ್ಷೇತ್ರವನ್ನು
ಬಲಪಡಿಸಲು ಭಾರತ 15,000 ಕೋಟಿ ರೂ. ನೀಡಿದೆ. ಇರಾನ್ ಐಎಂಎಫ್‌ನಿಂದ 5 ಬಿಲಿಯನ್ ಡಾಲರ್ ಸಾಲಕ್ಕಾಗಿ ಮನವಿ ಮಾಡಿದೆ. ಕಡಿಮೆ ಆದಾಯದ ದೇಶಗಳಿಗೆ ಐಎಂಎಫ್ 50 ಬಿಲಿಯನ್ ಡಾಲರ್ ನೆರವು ನೀಡುವ ವಾಗ್ದಾನ ಮಾಡಿದ್ದು ಹಣದ ಕೊರತೆಯಿಂದ ಜನರು ಸಾಯುವುದಕ್ಕೆ ಬಿಡುವುದಿಲ್ಲ ಎಂದು ತನ್ನ ಸದಸ್ಯ ರಾಷ್ಟ್ರಗಳಿಗೆ ಭರವಸೆ ನೀಡಿದೆ. ಕೆನಡಾ ದೇಶವು 107 ಬಿಲಿಯನ್ ಕೆನಡಿಯನ್ ಡಾಲರ್ ಪರಿಹಾರ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಿದೆ.
ಇಥಿಯೋಪಿಯಾ, ನೈಜೀರಿಯಾ ಮತ್ತು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಸೇರಿದಂತೆ ಹದಿನಾಲ್ಕು ದೇಶಗಳಲ್ಲಿ ಕೋವಿಡ್-19 ಸೋಂಕು ತಡೆಗಟ್ಟಲು ಮತ್ತು ಪರೀಕ್ಷಾ ಸೌಲಭ್ಯಗಳನ್ನು ಒದಗಿಸಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ದುರ್ಬಲ ದೇಶಗಳಿಗೆ ಸಹಾಯ ಮಾಡಲು ವಿಶ್ವ ಆರೋಗ್ಯ ಸಂಸ್ಥೆ 75,675 ಮಿಲಿಯನ್ ಡಾಲರ್ ನೆರವಿಗೆ ವಿನಂತಿಸಿದೆ. ಕೋವಿಡ್-19 ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಸನ್ನದ್ಧತೆಯನ್ನು ಹೆಚ್ಚಿಸಲು, ಯುರೋಪಿಯನ್ ಒಕ್ಕೂಟವು 232 ಮಿಲಿಯನ್ ಯುರೋಗಳನ್ನು ಮಂಜೂರು ಮಾಡಿದೆ. ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಗೆ ಧನಸಹಾಯ, ಆಫ್ರಿಕಾದಲ್ಲಿ ಸೋಂಕು ತಡೆಗಟ್ಟುವಿಕೆ, ಸಂಶೋಧನೆ, ಪರೀಕ್ಷೆ ಮತ್ತು ರಕ್ಷಣಾತ್ಮಕ ಉಪಕರಣಗಳ ಖರೀದಿ ಸೇರಿದೆ.
ಈಗ ವಿಶ್ವಾದ್ಯಂತ ಕೋವಿಡ್-19 ಸೋಂಕು,ಅದನ್ನು ನಿವಾರಿಸಲು ಮಾಡಲಾದ ಆರೋಗ್ಯ
ವೆಚ್ಚಗಳು ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ಈ ಮಹಾಮಾರಿ ಖಾಯಿಲೆ ಬೀರಿರುವ ಪರಿಣಾಮದಿಂದ ಆಗಿರುವ ನಷ್ಟವನ್ನು ಅಂದಾಜಿಸಲು ಇದು ಸೂಕ್ತ ಸಮಯವಲ್ಲ. ಮುಂದಿನ ಜೂನ್ ಅಂತ್ಯದ ವೇಳೆಗೆ ಒಟ್ಟು ನಷ್ಟದ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ.