ಭಾರತದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ 10 ಲಕ್ಷದ ಗಡಿ ದಾಟುವುದರೊಂದಿಗೆ ಭಾರತದಲ್ಲಿ ಕರೋನಾ ಸಾಂಕ್ರಾಮಿಕ ರೋಗ ಸಮುದಾಯ ಹರಡುವಿಕೆ ಆರಂಭಗೊಂಡಿದೆ, ಪರಿಸ್ಥಿತಿ ಗಂಭೀರವಾಗಿದೆಯೆಂದು ಭಾರತೀಯ ವೈದ್ಯಕೀಯ ಸಂಘ (IMA) ಹೇಳಿದೆ.
ಕರೋನಾ ಪ್ರಕರಣಗಳ ಸಂಖ್ಯೆ ವಿಪರೀತ ಏರುತ್ತಿದೆ. ದಿನವೊಂದಕ್ಕೆ 30 ಸಾವಿರದಂತೆ ಹೊಸ ಪ್ರಕರಣಗಳು ಕಂಡುಬರುತ್ತಿವೆ. ಗ್ರಾಮೀಣ ಭಾರತಕ್ಕೂ ಸೋಂಕು ಹರಡುತ್ತಿದೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಇದು ಕರೋನಾ ಸೋಂಕು ಸಾಮುದಾಯಿಕ ಪ್ರಸರಣ ಶುರುವಾಗಿದೆಯೆಂಬುದನ್ನು ಸೂಚಿಸುತ್ತದೆ ಎಂದು IMA ಯ ಅಧ್ಯಕ್ಷ ಡಾ. ವಿ ಕೆ ಮೊಂಗ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಕರಣಗಳು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಿಗೆ ನುಸುಳುತ್ತಿವೆ, ಅಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ತುಂಬಾ ಕಷ್ಟವಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸುವುದು ಬಹಳ ಮುಖ್ಯ. ರಾಜ್ಯ ಸರ್ಕಾರಗಳು ಸಂಪೂರ್ಣ ಕಾಳಜಿ ವಹಿಸಬೇಕು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ಸಹಾಯವನ್ನು ಪಡೆಯಬೇಕು ಎಂದು ಮೊಂಗ ಹೇಳಿದ್ದಾರೆ.
ಕೇಂದ್ರ ಸರ್ಕಾರ ಇಂದು ಬಿಡುಗಡೆಗೊಳಿಸಿರುವ ಕರೋನಾ ಅಂಕಿ ಅಂಶದ ಪ್ರಕಾರ ದೇಶದಲ್ಲಿ 38,902 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 10 ಲಕ್ಷದ 77 ಸಾವಿರದ 618 ತಲುಪಿದೆ. ಇದುವರೆಗೂ ದೇಶದಲ್ಲಿ 26,816 ಮಂದಿ ಕರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.










