ಕರೋನಾ ಸೋಂಕು ವಿಶ್ವವ್ಯಾಪಿ ಹರಡುತ್ತಿದ್ದಂತೆ ಜಗತ್ತಿನ ಬಹುತೇಕ ದೇಶಗಳು ಲಾಕ್‌ಡೌನ್ ಘೋಷಣೆ ಮಾಡಿವೆ. ಭಾರತದಲ್ಲಿ ಲಾಕ್‌ಡೌನ್ ಘೋಷಿಸಿ ಮೂವತ್ತೈದು ದಿನಗಳು ಮುಗಿದಿದೆ. ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಸಾಕಷ್ಟು ಕಾಲಾವಕಾಶ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ವಲಸೆ ಕಾರ್ಮಿಕರು ತಮ್ಮ ಗೂಡು ಸೇರಿಕೊಳ್ಳಲು ಅವಕಾಶವನ್ನೂ ನೀಡದೇ ಕೆಲವೇ ಗಂಟೆಗಳಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಅದರಿಂದಾಗಿ ಹಲವು ಲಕ್ಷ ವಲಸೆ ಕಾರ್ಮಿಕರು ಬೀದಿಗೆ ಬಿದ್ದು ಹಸಿವಿನಿಂದ ನಲುಗಿದರು. ಮೂವತ್ತೈದು ದಿನಗಳು ಕಳೆದರೂ ವಲಸೆ ಕಾರ್ಮಿಕರ ಹಸಿವು ಇನ್ನೂ ಇಂಗಿಲ್ಲ, ಗೂಡು ಸೇರಿಕೊಳ್ಳಲೂ ಆಗಿಲ್ಲ. ಗೋದಾಮುಗಳಲ್ಲಿ ಕೊಳೆಯುತ್ತಿರುವ 80 ದಶಲಕ್ಷ ಟನ್ ಆಹಾರಧಾನ್ಯಗಳನ್ನು ವ್ಯವಸ್ಥಿತವಾಗಿ ಹಂಚುವಷ್ಟು ಸಾಮರ್ಥ್ಯ ಇಲ್ಲದ ಮೋದಿ ಸರ್ಕಾರ, ಇದೇ ಆಹಾರ ಧಾನ್ಯ ಬಳಸಿ (ಅಕ್ಕಿ) ಸ್ಯಾನಿಟೈಸರ್ ತಯಾರಿಸುವ ಮೂರ್ಖತನದ ಚಿಂತನೆಯನ್ನೂ ಮಾಡಿದೆ.
ಈ ಅವಧಿಯಲ್ಲಿ ದೇಶದಲ್ಲಿ ಏನೇನೆಲ್ಲ ಬದಲಾವಣೆ ಆಗಿದೆ. ಪ್ರಧಾನಿ ನರೇಂದ್ರ ಮೋದಿಯ ರಾಜಕೀಯ ಅಧಿಕಾರ ದಾಹಕ್ಕೆ ಮಧ್ಯಪ್ರದೇಶದಲ್ಲಿನ ರಾಜ್ಯ ಸರ್ಕಾರವೂ ಬದಲಾಗಿದೆ. ಒಂದು ಕಾಲದಲ್ಲಿ ಸುಳ್ಳುಸುಳ್ಳೇ ಅಭಿವೃದ್ಧಿಯನ್ನು ಸೃಷ್ಟಿ ಸುಳ್ಳುಸುಳ್ಳು ಪ್ರಚಾರ ಮಾಡಿದ್ದ ‘ಗುಜರಾತ್ ಮಾಡೆಲ್’ ಆಡಳಿತವು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕಾಗಿ ಸ್ಲಮ್ ಕಾಣದಂತೆ ಗೋಡೆ ಕಟ್ಟುವಷ್ಟು ಹೃದಯಹೀನತೆಯನ್ನು ಪ್ರದರ್ಶಿಸಿದೆ. ಈ ನರೇಂದ್ರ ಮೋದಿ ಮೂರು ಅವಧಿಗೆ ಗುಜರಾತಿನಲ್ಲಿ ಮಾಡಿದ ಸಾಧನೆಯ ಪ್ರತಿಬಿಂಬದಂತೆ ಆ ಸ್ಮಮ್ಮು ಮತ್ತು ಅದನ್ನು ಮರೆಮಾಚಲು ನಿರ್ಮಿಸಿದ ಗೋಡೆಗಳಿವೆ. ಇಂತಿಪ್ಪ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶ ಉದ್ದಾರ ಆಗುತ್ತದೆಂದು ಸುಳ್ಳುಸುಳ್ಳು ಪ್ರಚಾರ ಮಾಡಿದ್ದಷ್ಟೇ ಬಂತು. ಕರೋನಾ ಸೋಂಕು ಚೀನಾದಲ್ಲೇ ಕಾಣಿಸಿಕೊಳ್ಳುವ ಮೊದಲೇ ದೇಶದ ಆರ್ಥಿಕತೆಗೆ ಸೋಂಕು ತಗುಲಿತ್ತು. ನರೇಂದ್ರ ಮೋದಿ ಸರ್ಕಾರದ ತರ್ಕರಹಿತ ಆರ್ಥಿಕ ನೀತಿಗಳಿಂದಾಗಿ ದೇಶದ ಅಭಿವೃದ್ಧಿ ಸತತ ಇಳಿಜಾರಿನಲ್ಲಿ ಸಾಗಿ, ಶೇ.5ಕ್ಕಿಂತ ಕೆಳಮಟ್ಟಕ್ಕೆ ಇಳಿದಿತ್ತು. ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಕರೋನಾ ವರವಾಗಿ ಪರಿಣಮಿಸಿದೆ. ಇದುವರೆಗೆ ತಮ್ಮ ಮೂರ್ಖತನದ ನಿರ್ಧಾರಗಳಿಂದ ದೇಶದ ಆರ್ಥಿಕತೆ ಎಕ್ಕುಟ್ಟಿ ಹೋಗಿದ್ದರೂ ಅದನ್ನು ಯುಪಿಎ ಸರ್ಕಾರದ ತಲೆಗೆ ಇಲ್ಲವೇ ನೆಹರೂ ತಲೆಗೆ ಕಟ್ಟುತ್ತಿದ್ದ ಮೋದಿ ಮತ್ತವರ ಪಟಾಲಂಗಳಿಗೆ ಈಗ ಕರೋನಾ ತಲೆಗೆ ಕಟ್ಟುವ ಸದವಕಾಶ ಸಿಕ್ಕಿದೆ!
ಅದೇನೆ ಇರಲಿ, ಲಾಕ್‌ಡೌನ್ ಪರಿಣಾಮವಾಗಿ ಜನರ ಅಭಿರುಚಿಗಳು ಬದಲಾಗಿವೆ. ನೋಡುವ, ಕೇಳುವ ರೀತಿಗಳು ಬದಲಾಗಿವೆ. ಇಂತಹ ಹೊತ್ತಿನಲ್ಲಿ ಕನ್ನಡ ವೀಕ್ಷಕರು ಹೇಗೆ ಬದಲಾಗಿದ್ದಾರೆ? ಅವರ ಆಯ್ಕೆಗಳು ಏನು ಮತ್ತು ಹೇಗಿವೆ? ಅವರಿಗೆ ಅಚ್ಚುಮೆಚ್ಚು ಯಾರು? ಎಂಬುದನ್ನು ಇಲ್ಲಿ ಅಂಕಿಅಂಶಗಳನ್ನಾಧರಿಸಿ ಅವಲೋಕಿಸುವ ಪ್ರಯತ್ನ ಇದು. ಕರೋನಾ ಸೋಂಕಿನ ಅವಧಿಯು ಕನ್ನಡ ನ್ಯೂಸ್ ಚಾನಲ್ ಗಳಿಗೆ ಸುವರ್ಣಯುಗ ಎಂದೇ ಹೇಳಬೇಕು. ಕರೊನಾ ಕೃಪಾಕಟಾಕ್ಷದಿಂದಾಗಿ ಕನ್ನಡ ನ್ಯೂಸ್ ಚಾನಲ್ ಗಳು ಕಂಡು ಕೇಳರಿಯದಷ್ಟು TRP (ಟಾರ್ಗೆಟ್ ರೇಟಿಂಗ್ ಪಾಯಿಂಟ್/ಟೆಲಿವಿಷನ್ ರೇಟಿಂಗ್ ಪಾಯಿಂಟ್) ದಾಖಲಿಸಿವೆ. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ನ್ಯೂಸ್ ಚಾನಲ್ ಗಳ ವೀಕ್ಷಕರ ಸಂಖ್ಯೆ ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ.
ಬಾರ್ಕ್ (BARC- ಬ್ರಾಡ್ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ ಇಂಡಿಯಾ) ದೇಶದಲ್ಲಿನ ಎಲ್ಲಾ ಟೀವಿ ಚಾನಲ್ಲುಗಳ ವೀಕ್ಷಕರ ಸಂಖ್ಯೆಯನ್ನು ವೈಜ್ಞಾನಿಕವಾಗಿ ಲೆಕ್ಕಹಾಕುವ ಸಂಸ್ಥೆಯಾಗಿದೆ. ಪ್ರತಿ ಗುರುವಾರ ಬಾರ್ಕ್ ಹಿಂದಿನ ವಾರಗಳ TRP ರೇಟಿಂಗ್ ಬಿಡುಗಡೆ ಮಾಡುತ್ತದೆ. ಈ ರೇಟಿಂಗ್ ಆಧರಿಸಿಯೇ ಜಾಹಿರಾತುದಾರರು ಚಾನಲ್ಲುಗಳನ್ನು ಆಯ್ಕೆ ಮಾಡಿ ಜಾಹಿರಾತು ನೀಡುತ್ತಾರೆ.
ಬಾರ್ಕ್ ಪ್ರಕಟಿಸಿದ 2020ನೇ ಸಾಲಿನ 9ನೇ ವಾರದ ಅಂದರೆ ಮಾರ್ಚ್ ಮೊದಲ ವಾರದ TRP ಅಂಕಿಅಂಶಗಳ ಪ್ರಕಾರ (ಹೀಗೆ ಓದಿ- ಒಟ್ಟು ಕರ್ನಾಟಕ- ಬೆಂಗಳೂರು- ಜನಸಂಖ್ಯೆ 10 ಲಕ್ಷ ಕೆಳಪಟ್ಟ ನಗರ- ಗ್ರಾಮೀಣ ಪ್ರದೇಶ) ಟಿವಿ9- 98-134-90-91, ಪಬ್ಲಿಕ್ ಟಿವಿ- 58-85-58-50, ಸುವರ್ಣ ನ್ಯೂಸ್- 39-40-41-38, ನ್ಯೂಸ್ 18 ಕನ್ನಡ- 27-25-26-29 ಮತ್ತು ದಿಗ್ವಿಜಯ- 15-19-17-14 ಪಾಯಿಂಟ್ ಗಳನ್ನು ಗಳಿಸಿದ್ದವು. ಬಾರ್ಕ್ ಮೂರು ಪ್ರಕಾರದಲ್ಲಿ ವೀಕ್ಷಕರನ್ನು ಪಟ್ಟಿ ಮಾಡುತ್ತದೆ. ಬೆಂಗಳೂರು, 10 ಲಕ್ಷ ಮೇಲ್ಪಟ್ಟ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶ. ಈ ಮೂರು ಪ್ರದೇಶಗಳ ಕೂಡಿಸಿ ಭಾಗಿಸಿ ಒಟ್ಟು ಕರ್ನಾಟಕದ ಸರಾಸರಿ ವೀಕ್ಷಕರ ಲೆಕ್ಕಹಾಕಲಾಗುತ್ತದೆ.

ಮಾರ್ಚ್ ಮೊದಲ ವಾರದಲ್ಲಿ ಕರೋನಾ ದೇಶದಲ್ಲಿ ಅಷ್ಟಾಗಿ ವ್ಯಾಪಿಸಿರಲಿಲ್ಲ. ಚೀನಾದಲ್ಲಿ ಅದರ ತೀವ್ರತೆ ಇತ್ತು. ಅದಾದ ನಂತರದಲ್ಲಿ ಕರೋನಾ ನಿಧಾನವಾಗಿ ಅಲ್ಲಲ್ಲಿ ಕಂಡು ಬರಲಾರಂಭಿಸಿತು. ಮುಂದಿನ ಎರಡು ವಾರಗಳಲ್ಲಿ ಕರೋನಾ ದೇಶದ ಬಹುತೇಕ ಪ್ರದೇಶಗಳಲ್ಲಿ ಕಡಮೆ ಸಂಖ್ಯೆಯಲ್ಲಿ ಕಾಣಿಸಲಾರಂಭಿಸಿತು. ಈ ಅವಧಿಯಲ್ಲಿ ನ್ಯೂಸ್ ಚಾನಲ್ ಗಳ TRPಯು ನಿಧಾನವಾಗಿ ಏರಿಕೆ ಕಂಡಿತು. 2020, 11 ನೇ ವಾರದಲ್ಲಿ TRP ಗಣನೀಯವಾಗಿ ಏರಿತು. ಈ ಅಂಕಿ ಅಂಶಗಳನ್ನು ಗಮನಿಸಿ- (ಟಿವಿ9- 149-219-139-133, ಪಬ್ಲಿಕ್ ಟಿವಿ- 88-150-101-65, ಸುವರ್ಣ ನ್ಯೂಸ್- 58-64-66-52, ನ್ಯೂಸ್ 18 ಕನ್ನಡ- 40-40-40-39 ಮತ್ತು ದಿಗ್ವಿಜಯ- 25-34-27-21)
ಪ್ರಧಾನಿ ಲಾಕ್‌ಡೌನ್ ಘೋಷಣೆ ಮಾಡಿದ್ದೇ ಮಾಡಿದ್ದು ಕನ್ನಡ ನ್ಯೂಸ್ ಚಾನಲ್ಲುಗಳ ಭಾಗ್ಯದ ಬಾಗಿಲು ತೆರೆದೇ ಬಿಟ್ಟಿತು. TRP ನಾಗಲೋಟದಲ್ಲಿ ಓಡಿತು. ಬಾರ್ಕ್ ಅಂಕಿ ಅಂಶಗಳನ್ನು ಬಿಡುಗಡೆ ಮಾಡುವವರೆಗೂ ಯಾವ ಚಾನಲ್ಲಿನ ಮುಖ್ಯಸ್ಥರಿಗೂ ತಮ್ಮ ಚಾನಲ್ ಗೆ ಈ ಪಾಟಿ TRP ಬರುತ್ತದೆಂದು ನಂಬಿಕೆಯೇ ಇರಲಿಲ್ಲವಂತೆ!
ಈ ಚಾನಲ್ಲುಗಳ ಅದೃಷ್ಟ ಹೇಗಿದೆ ನೋಡಿ! 2020ರ 12ನೇ ವಾರದಲ್ಲಿ ತ್ರಿಶತಕದ ಕನಸನ್ನು ಎಂದೂ ಕಾಣದಿದ್ದ ಟಿವಿ9 TRP 374.4ಕ್ಕೆ ಜಿಗಿಯಿತು. ದ್ವಿಶತದ ಗುರಿ ಬಗ್ಗೆ ಚಿಂತಿಸಿದೇ ನಂಬರ್ ಒನ್ ಮೇಲೆ ಕಣ್ಣಿಟ್ಟಿರುವ ಪಬ್ಲಿಕ್ ಟಿವಿ 262.4 ಗಳಿಸಿತು. ಎಂದೂ ಶತಕ ಮುಟ್ಟದ ಸುವರ್ಣ ನ್ಯೂಸ್ ಒಂದೂವರೆ ಶತಕ ದಾಟಿ 164.3ಕ್ಕೆ, ಶತಕದ ಕನಸನ್ನೇ ಕಾಣದ ನ್ಯೂಸ್ 18 ಕನ್ನಡ 132.7ಕ್ಕೆ ಅರ್ಧಶತಕದ ಕನಸನ್ನೆಂದೂ ಕಾಣದ ದಿಗ್ವಿಜಯ 65.8ಕ್ಕೆ ಜಿಗಿಯಿತು. ಹಿಂದಿನ ವಾರದ ಅಂದರೆ 11ನೇ ವಾರದ TRPಗೆ ಹೋಲಿಸಿದರೆ ಈ ಐದೂ ಚಾನಲ್ಲುಗಳು ಶೇ.250ಕ್ಕಿಂತಲೂ ಹೆಚ್ಚು TRP ಗಳಿಸಿದವು.
2020ರ ವಾರ 14 ಮತ್ತು ವಾರ 15ರಲ್ಲೂ ಹೆಚ್ಚು ಕಮ್ಮಿ ಈ ಮಟ್ಟದ TRPಯನ್ನು ನ್ಯೂಸ್ ಚಾನಲ್ ಗಳು ಉಳಿಸಿಕೊಂಡಿವೆ. ಏಪ್ರಿಲ್ 30ರಂದು ಪ್ರಕಟಿಸಿರುವ 2020 16ನೇ ವಾರದ TRP ಅಂಕಿ ಅಂಶಗಳ ಪ್ರಕಾರ ಟಿವಿ9 (286-450-274-243) ತ್ರಿಶಕದಿಂದ ಕೆಳಕ್ಕಿಳಿದಿದೆ. ಪಬ್ಲಿಕ್ ಟಿವಿ (200-416-215-129) ದ್ವಿಶತಕ ಕಾಯ್ದುಕೊಂಡಿದೆ. ಸುವರ್ಣ ನ್ಯೂಸ್ (136-200-162-105) ಒಂದೂವರೆ ಶತಕದಿಂದ ಕೆಳಕ್ಕೆ ಇಳಿದಿದ್ದರೆ, ನ್ಯೂಸ್ 18 ಕನ್ನಡ (95-109-98-90) ಶತಕ ವಂಚಿತವಾಗಿದೆ. ದಿಗ್ವಿಜಯ (44-69-50-35) ಅರ್ಧಶತಕ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.

ಬಾರ್ಕ್ ಪ್ರಕಟಿಸಿರುವ ಸಮೀಕ್ಷೆ ಪ್ರಕಾರ, ದಕ್ಷಿಣದ ನಾಲ್ಕು ರಾಜ್ಯಗಳ ಪೈಕಿ ಕರೋನಾ ಸೋಂಕು ಹರಡಿದ ನಂತರ ಸುದ್ದಿ ವೀಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಕನ್ನಡ ಸುದ್ದಿ ವೀಕ್ಷಕರ ಸಂಖ್ಯೆ ಶೇ.6ರಿಂದ ಶೇ.16ಕ್ಕೆ ಜಿಗಿದಿದೆ. ಮಲಯಾಳಂನಲ್ಲಿ ಶೇ.9ರಿಂದ ಶೇ.19ಕ್ಕೆ ಏರಿದೆ. ತಮಿಳಿನಲ್ಲಿ ಶೇ.4ರಿಂದ ಶೇ.11ಕ್ಕೆ ಮತ್ತು ತೆಲುಗಿನಲ್ಲಿ ಶೇ.7 ರಿಂದ ಶೇ.13ಕ್ಕೆ ಏರಿದೆ. ಈ ನಾಲ್ಕೂ ರಾಜ್ಯಗಳಲ್ಲಿ ಕರೋನಾ ಲಾಕ್‌ಡೌನ್ ಅವಧಿಯಲ್ಲೂ ಮನರಂಜನಾ ಚಾಲನಲ್ಲುಗಳದ್ದೇ ಪ್ರಾಬಲ್ಯ. ಆದರೆ, ಅವುಗಳ ವೀಕ್ಷಕರ ಸಂಖ್ಯೆ ತಗ್ಗಿದೆ. ಕನ್ನಡದಲ್ಲಿ ಶೇ.53ರಿಂದ 37ಕ್ಕೆ, ಮಲಯಾಳಂ ಶೇ.61ರಿಂದ 48ಕ್ಕೆ, ತೆಲುಗು ಶೇ.55ರಿಂದ 47ಕ್ಕೆ, ತಮಿಳು 64ರಿಂದ 51ಕ್ಕೆ ಇಳಿದಿದೆ. ಈ ಅವಧಿಯಲ್ಲಿ ಸಿನಿಮಾ ಚಾನಲ್ಲುಗಳ ವೀಕ್ಷಕರ ಸಂಖ್ಯೆಯು ಕನ್ನಡದಲ್ಲಿ ಶೇ.10ರಿಂದ 15ಕ್ಕೆ, ಮಲಯಾಳಂನಲ್ಲಿ 13ರಿಂದ 15ಕ್ಕೆ, ತಮಿಳಿನಲ್ಲಿ ಶೇ.15ರಿಂದ 21ಕ್ಕೆ ತೆಲುಗಿನಲ್ಲಿ ಶೇ.20ರಿಂದ 23ಕ್ಕೆ ಏರಿದೆ.

ಪ್ರೈಮ್ ಟೈಮ್ ನಲ್ಲಿ ಪಬ್ಲಿಕ್ ಟಿವಿ ಕ್ಯಾಪ್ಟನ್ ರಂಗನಾಥ್ ಅಗ್ರಸ್ಥಾನ
ಕರೋನಾ ಲಾಕ್‌ಡೌನ್ ಅವಧಿಯಲ್ಲಿ ವೀಕ್ಷಕರ ಅಭಿರುಚಿ ಬದಲಾಗಿರುವಂತೆಯೇ ವೀಕ್ಷಕರ ಚಾನಲ್ಲುಗಳ ಮೇಲಿನ ನಿಷ್ಠೆಯೂ ಬದಲಾದಂತಿದೆ. ಈ ಅವಧಿಯಲ್ಲಾಗಿರುವ ಅತಿ ದೊಡ್ಡ ಬದಲಾವಣೆ ಎಂದರೆ, ಪಬ್ಲಿಕ್ ಟಿವಿ ಕ್ಯಾಪ್ಟನ್ ಎಚ್ ಆರ್ ರಂಗನಾಥ್ ಪ್ರೈಮ್ ಟೈಮ್ ನಲ್ಲಿ ನಂಬರ್ ಒನ್ ಪಟ್ಟಕ್ಕೆ ಏರಿದ್ದಾರೆ. ಪಬ್ಲಿಕ್ ಟಿವಿ ಒಟ್ಟಾರೆ TRPಯಲ್ಲಿ ಎರಡನೇ ಸ್ಥಾನದಲ್ಲೇ ಇದೆ. ಆದರೆ, ಒಂದು ನ್ಯೂಸ್ ಚಾನಲ್ ನ ಸತ್ವ, ಪ್ರಭಾವ ಮತ್ತು ಅಭಿರುಚಿಯನ್ನು ಪ್ರತಿಬಿಂಬಿಸುವುದು ಪ್ರೈಮ್ ಟೈಮ್ (ರಾತ್ರಿ 9 ಗಂಟೆಯಿಂದ 10 ಗಂಟೆವರೆಗೆ). ಈಗ ಪ್ರೈಮ್ ಟೈಮ್ ನಲ್ಲಿ ಪಬ್ಲಿಕ್ ಟಿವಿ ರಂಗನಾಥ್ ಅಗ್ರಸ್ಥಾನಕ್ಕೆ ಏರಿದ್ದಾರೆ. ಟಿವಿ9 ನ್ಯೂಸ್ ಚಾನಲ್ ಆರಂಭದಿಂದ ಇಂದಿನವರೆಗೂ ಅಗ್ರಸ್ಥಾನದಲ್ಲಿತ್ತು.
ಚಾನಲ್ ಪ್ರಾರಂಭವಾದ ಒಂದೂವರೆ ವರ್ಷದಲ್ಲೇ ಎರಡನೇ ಸ್ಥಾನಕ್ಕೇರಿದ ಪಬ್ಲಿಕ್ ಟಿವಿ ಸದಾ ಟಿವಿ9 ಗೆ ಪ್ರಬಲ ಸ್ಪರ್ಧೆ ಒಡ್ಡುತ್ತಿದೆ. ಒಂದು ಹಂತದಲ್ಲಿ ಟಿವಿ9 ಉಳಿದೆಲ್ಲ ಕನ್ನಡ ನ್ಯೂಸ್ ಚಾನಲ್ಲುಗಳ ವೀಕ್ಷಕರಿಗಿಂತಲೂ ಹೆಚ್ಚು ವೀಕ್ಷಕರನ್ನು ಹೊಂದಿತ್ತು. ಎರಡನೇ ಸ್ಥಾನದಲ್ಲಿದ್ದರೂ ಪಬ್ಲಿಕ್ ಟಿವಿ ಮತ್ತು ಟಿವಿ9 ನಡುವೆ ಅಂತರ ದೊಡ್ಡದಿತ್ತು. ನಿಧಾನವಾಗಿ ಟಿವಿ9 ಮತ್ತು ಪಬ್ಲಿಕ್ ಟಿವಿ ನಡುವಿನ TRP ಅಂತರ ತಗ್ಗುತ್ತಿದೆ.
ಬಾರ್ಕ್ ಅಂಕಿಅಂಶಗಳ ಪ್ರಕಾರ, 2020ರ 9ನೇ ವಾರದಲ್ಲಿ ರಾತ್ರಿ 9.00-9.30ರ ಅವಧಿಯಲ್ಲಿ ಟಿವಿ9- 0.80 ಮತ್ತು ಪಬ್ಲಿಕ್ ಟಿವಿ- 0.81 ರಷ್ಟು ರೇಟಿಂಗ್ ಪಡೆದಿತ್ತು. ಪಬ್ಲಿಕ್ ಟಿವಿಯು ಟಿವಿ9 ಅನ್ನು ಕೇವಲ 0.1 ಅಂಶದಿಂದ ಹಿಂದಿಕ್ಕಿತ್ತು. 10 ಮತ್ತು 11ನೇ ವಾರದಲ್ಲಿ ಟಿವಿ9 ಮುಂದಿತ್ತು. 12ನೇ ವಾರದಲ್ಲಿ ಟಿವಿ9 2.86 ರಷ್ಟಿದ್ದರೆ, ಪಬ್ಲಿಕ್ ಟಿವಿ 2.72ರಷ್ಟಕ್ಕೇರಿತ್ತು. 14ನೇ ವಾರದಲ್ಲಿ ಟಿವಿ9 2.29 ರೇಟಿಂಗ್ಸ್ ಪಡೆದಿದ್ದರೆ, ಪಬ್ಲಿಕ್ ಟಿವಿ 2.69ಕ್ಕೇರಿತ್ತು. 15ನೇ ವಾರದಲ್ಲಿ ಟಿವಿ9 ಒಟ್ಟಾರೆ 2.07 ರೇಟಿಂಗ್ಸ್ ಪಡೆದರೆ ಪಬ್ಲಿಕ್ ಟಿವಿ 2.54ಕ್ಕೆ ಏರಿತ್ತು. ಅದೇ ವಾರ ಬೆಂಗಳೂರು ವೀಕ್ಷಕ ವರ್ಗದಲ್ಲಿ ಟಿವಿ9 2.55 ರೇಟಿಂಗ್ಸ್ ಇದ್ದರೆ ಪಬ್ಲಿಕ್ ಟಿವಿ 4.36ಕ್ಕೆ ಜಿಗಿದಿತ್ತು.
ಮಾರ್ಚ್30 ರಂದು ಬಾರ್ಕ್ ಪ್ರಕಟಿಸಿರುವ 2020 16ನೇ ವಾರದಲ್ಲೂ ಪ್ರೈಮ್ ಟೈಮ್ ನಲ್ಲಿ ಪಬ್ಲಿಕ್ ಟಿವಿ ತನ್ನ ಅಗ್ರಸ್ಥಾನ ಕಾಯ್ದುಕೊಂಡಿದೆ. ಟಿವಿ9 2.13 ರೇಟಿಂಗ್ಸ್ ಪಡೆದಿದ್ದರೆ ಪಬ್ಲಿಕ್ ಟಿವಿ 2.63ಕ್ಕೆ ಏರಿದೆ. ಇದೇ ಅವಧಿಯಲ್ಲಿ ಬೆಂಗಳೂರು ವಲಯದಲ್ಲೂ ಪಬ್ಲಿಕ್ ಟಿವಿ ಅಗ್ರಸ್ಥಾನದಲ್ಲಿದೆ. ಟಿವಿ9 2.70 ಪಡೆದಿದ್ದರೆ, ಪಬ್ಲಿಕ್ ಟಿವಿ 4.91ರಷ್ಟಕ್ಕೇರಿದೆ. ಪ್ರೈಮ್ ಟೈಮ್ ನಲ್ಲಿ ಇತರ ಚಾನಲ್ ಗಳ ಸಾಧನೆ- ಸುವರ್ಣನ್ಯೂಸ್ 0.81, ನ್ಯೂಸ್ 18 ಕನ್ನಡ 0.64 ಮತ್ತು ದಿಗ್ವಿಜಯ 0.25 ರಷ್ಟು.
ಬೆಂಗಳೂರಿನಲ್ಲೂ ಪಬ್ಲಿಕ್ ಟಿವಿ ಅಗ್ರಸ್ಥಾನ
ಬಾರ್ಕ್ ಅಂಕಿ ಅಂಶಗಳ ಪ್ರಕಾರ ಬೆಂಗಳೂರು ವೀಕ್ಷಕರ ಪೈಕಿ ಅತಿ ಹೆಚ್ಚು ಮಂದಿ ಪಬ್ಲಿಕ್ ಟಿವಿ ನೋಡುತ್ತಾರೆ. 2020 16ನೇ ವಾರದ ಬಾರ್ಕ್ ಅಂಕಿ ಅಂಶ ಗಮನಿಸಿ. ರಾತ್ರಿ 9 ಗಂಟೆಗೆ ಪಬ್ಲಿಕ್ ಟಿವಿ ರೇಟಿಂಗ್ಸ್ 4.91. ಟಿವಿ9- 2.70, ಸುವರ್ಣನ್ಯೂಸ್- 0.88, ನ್ಯೂಸ್ 18 ಕನ್ನಡ- 0.66, ದಿಗ್ವಿಜಯ- 0.29. ಸರಳವಾಗಿ ಹೇಳಬೇಕೆಂದರೆ, ಟಿವಿ9 ಸೇರಿದಂತೆ ಉಳಿದ ನಾಲ್ಕು ನ್ಯೂಸ್ ಚಾನಲ್ಲುಗಳ ಒಟ್ಟಾರೆ ರೇಟಿಂಗ್ಸ್ 4.53ರಷ್ಟು. ಪಬ್ಲಿಕ್ ಟಿವಿ ರೇಟಿಂಗ್ಸ್ 4.91ರಷ್ಟು. ಅಂದರೆ ಬೆಂಗಳೂರು ಮಟ್ಟಿಗೆ ಟಿವಿ9 ಸೇರಿದಂತೆ ಎಲ್ಲಾ ನಾಲ್ಕು ಚಾನಲ್ಲುಗಳಿಗಿಂತಲೂ ಪಬ್ಲಿಕ್ ಟಿವಿಗೆ ವೀಕ್ಷಕರ ಸಂಖ್ಯೆ ಹೆಚ್ಚು. ಆ ಲೆಕ್ಕದಲ್ಲಿ ಪಬ್ಲಿಕ್ ಟಿವಿ ರಂಗನಾಥ್ ಅಗ್ರಸ್ಥಾನಕ್ಕೇರಿದ್ದಾರೆ.