ದಿನದಿಂದ ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಕರೋನಾ ಸೋಂಕು ಹೆಚ್ಚಳವಾಗುತ್ತಿದೆ. ನಿಯಂತ್ರಣ ಮಾಡುವುದು ಹೇಗೆ ಎನ್ನುವ ದಿಕ್ಕು ಕಾಣದಂತಾದ ಸರ್ಕಾರ ಲಾಕ್‌ಡೌನ್ ಎನ್ನುವ ಅಸ್ತ್ರದ ಮೊರೆ ಹೋಗಿದೆ. ಇನ್ನೇನು ಮಂಗಳವಾರ ರಾತ್ರಿ 8 ಗಂಟೆಯಿಂದ ಲಾಕ್‌ಡೌನ್ ಜಾರಿಯಾಗಿದ್ದು, ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಸಂಪೂರ್ಣ ಲಾಕ್‌ಡೌನ್ ಎನ್ನಲಾಗಿದೆ. ಈ ಲಾಕ್‌ಡೌನ್ ಸಮಯದಲ್ಲಿ ಕರೋನಾ ಸಂಕಷ್ಟ ಕಾಲವನ್ನು ಎದುರಿಸಲು ಸರ್ಕಾರ ಸಜ್ಜಾಗಲಿದೆ ಎನ್ನುವ ಮಾಹಿತಿ ಸರ್ಕಾರದ ಮೂಲಗಳಿಂದ ಸಿಕ್ಕಿದೆ.
ಸರ್ಕಾರ ಕಳೆದ ಮೂರ್ನಾಲ್ಕು ತಿಂಗಳಿಂದ ಕರೋನಾ ನಿಯಂತ್ರಣ ಮಾಡಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಕಾಲಹರಣ ಮಾಡಿಬಿಟ್ಟಿತು ಎನ್ನುವ ಮಾತುಗಳು ಕೇಳಿಬರುತ್ತಿದೆ. ಅದೇ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ಕೊಡಲು ಪರದಾಡುವಂತಾಯ್ತು. ಇನ್ನೂ ಕೆಲವು ಭಾಗಗಳಲ್ಲಿ ಚಿಕಿತ್ಸೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾರದ ಸ್ಥಿತಿಯೇ ಎದುರಾಯ್ತು. ಆಸ್ಪತ್ರೆಗಳಲ್ಲಿ ಬೆಡ್ ಇರಲಿಲ್ಲ, ಬೆಡ್ ಇದ್ದ ಕಡೆ ಆಕ್ಸಿಜನ್ ಇರಲಿಲ್ಲ. ಇನ್ನೂ ಕೆಲವು ಕಡೆ ಐಸಿಯು ಬೆಡ್ ಇಲ್ಲವೆಂದು ರೋಗಿಗಳನ್ನು ವಾಪಸ್ ಕಳುಹಿಸಿದ ಸಾಕಷ್ಟು ನಿದರ್ಶನಗಳಿವೆ. ಇನ್ನೂ ಹತ್ತಾರು ಕಡೆ ರೋಗಿಗಳನ್ನು ಬೀದಿಯಲ್ಲೇ ಬಿಟ್ಟಿದ್ದ ಘಟನೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಇಷ್ಟೆಲ್ಲಾ ಅವಾಂತರ ರಾಜ್ಯ ಸರ್ಕಾರಕ್ಕೆ ಕರೋನಾ ಬಗ್ಗೆ ಮುನ್ನೋಟ ಇರಲಿಲ್ಲ. ಮುಂದಿನ ದಿನಗಳಲ್ಲಿ ಕರೋನಾದಿಂದ ಆಗುವ ಅನಾಹುತಗಳ ಬಗ್ಗೆ ಬಗ್ಗೆ ಊಹೆ ಮಾಡುವಲ್ಲಿ ಸರ್ಕಾರ ಹಾಗೂ ತಜ್ಞರು ಎಡವಿದ್ದರೂ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದೀಗ ಏಳು ದಿನಗಳ ಕಾಲ ಲಾಕ್‌ಡೌನ್ ಮಾಡಿದರೆ ಕರೋನಾ ಹರಡುವ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಅಷ್ಟರೊಳಗಾಗಿ ಕೋವಿಡ್ ಸೆಂಟರ್‌ಗಳ ಸಿದ್ಧತೆಯನ್ನು ಪೂರ್ಣ ಮಾಡಿಕೊಳ್ಳುವ ಲೆಕ್ಕಾಚಾರ ಅಧಿಕಾರಿಗಳದ್ದು. ಆದರೆ ಆ ಲೆಕ್ಕಾಚಾರದಲ್ಲಿ ಭಾರೀ ಪ್ರಮಾಣದ ಗೋಲ್‌ಮಾಲ್ ನಡೆಯುತ್ತಿದೆ ಎನ್ನುವುದು ವಿರೋಧ ಪಕ್ಷಗಳ ಆರೋಪ. ಕೇವಲ ಆರೋಪವಾಗಿದ್ದರೆ ಸುಮ್ಮನಾಗಬಹುದಿತ್ತು. ಆದರೆ ಇದನ್ನು ಸ್ವತಃ ಬಿ ಎಸ್ ಯಡಿಯೂರಪ್ಪ ಕೂಡ ಒಪ್ಪಿಕೊಂಡಿದ್ದಾರೆ. ಸ್ವಂತ ಪಕ್ಷದ ಸಚಿವರ ವಿರುದ್ಧವೇ ಗುಡುಗಿದ್ದಾರೆ.
ಸಿದ್ದರಾಮಯ್ಯ ಮಾಡಿದ್ದ ಕೋಟಿ ಕೋಟಿ ಲೂಟಿ ಬಗ್ಗೆ ಮಾತನಾಡ್ತಿಲ್ಲ. ಆದರೆ ಇದು ಕೋವಿಡ್ ಸೆಂಟರ್ ಮಾಡುತ್ತಿರುವ ರಾಜ್ಯ ಸರ್ಕಾರ ಇದರಲ್ಲೂ ಲೂಟಿ ಶುರು ಮಾಡಿಕೊಂಡಿದ್ದಾರೆ. ತುಮಕೂರು ಹೆದ್ದಾರಿಯ ಮಾದವಾರ ಬಳಿಯ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಸರ್ಕಾರ 10 ಸಾವಿರದ 100 ಬೆಡ್‌ಗಳ ಕೋವಿಡ್ ಸೆಂಟರ್ ನಿರ್ಮಾಣ ಮಾಡುತ್ತಿದೆ. ಆದರೆ ಇಲ್ಲಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಸಿಗುವುದಿಲ್ಲ. ಬದಲಿಗೆ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದವರನ್ನು ಈ ಕೇಂದ್ರದಲ್ಲಿ ಕ್ವಾರಂಟೈನ್ ಮಾಡಿ ಆರೈಕೆ ಮಾಡಲಾಗುತ್ತದೆ. ಇಂತಹ ಕೇಂದ್ರದಲ್ಲಿ ಹಾಕಿರುವ ಎಲ್ಲಾ ವಸ್ತುಗಳನ್ನು ಬಾಡಿಗೆಗೆ ತರಲಾಗಿದೆ ಎನ್ನಲಾಗಿದೆ.
ಸರ್ಕಾರಿ ಅಧಿಕಾರಿಯೊಬ್ಬರು ಬರೆದಿದ್ದ ಪತ್ರದಿಂದ ಬಹಿರಂಗವಾಗಿದ್ದ ಈ ಬಾಡಿಗೆ ವಿಚಾರ, ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಈ ವಿಚಾರವನ್ನು ಖಂಡಿಸಿದ್ದರು. ಒಂದು ಹಾಸಿಗೆಗೆ 800 ರೂಪಾಯಿ ಪ್ರತಿದಿನ ಬಾಡಿಗೆ ಕೊಡುವುದಾದರೆ, 10,100 ಬೆಡ್‌ಗಳ ವ್ಯವಸ್ಥೆ ಇರುವ ಬೆಂಗಳೂರು ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನ ಒಂದು ದಿನದ ಬೆಡ್‌ನ ಬಾಡಿಗೆ 80 ಲಕ್ಷ ಮೀರುತ್ತದೆ ಎಂದು ಸರ್ಕಾರಕ್ಕೆ ಕುಟುಕಿದ್ದರು. ಡಿಸಿಎಂ ಅಶ್ವತ್ಥ ನಾರಾಯಣ್ ಅವರೇ ಕೋವಿಡ್ ಸೆಂಟರ್ ಉಸ್ತುವಾರಿ ವಹಿಸಿಕೊಂಡಿದ್ದು, ಈ ಪ್ರಮಾಣದಲ್ಲಿ ಸರ್ಕಾರದ ಹಣ ಹೊಳೆಯಲ್ಲಿ ನೀರು ಹರಿದಂತೆ ಹರಿದು ಹೋಗ್ತಿದೆ ಎನ್ನುವುದು ಬಹಿರಂಗವಾಗಿತ್ತು.

ರಾಜ್ಯ ಸರ್ಕಾರ ಲೂಟಿ ಮಾಡುತ್ತಿದೆ. ಸರಿಯಾದ ಚಿಕಿತ್ಸಾ ಸೌಲಭ್ಯ ಕೊಡುತ್ತಿಲ್ಲ ಎನ್ನುವುದು ಇಡೀ ರಾಜ್ಯಾದ್ಯಂತ ಕೇಳಿ ಬರುತ್ತಿರುವ ಆರೋಪ. ಅದರಲ್ಲೂ ಬಿಜೆಪಿ ಕಾರ್ಯಕರ್ತರಲ್ಲೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಪರಿಸ್ಥಿತಿ ಹೀಗಿರುವಾಗ ಸ್ವತಃ ಸಿಎಂ ಯಡಿಯೂರಪ್ಪ, ಸಚಿವರ ವಿರುದ್ಧ ಕೆಂಡಕಾರಿದ್ದಾರೆ. ಕರೋನಾ ನಿಯಂತ್ರಣಕ್ಕೆ ಹಣ ಖರ್ಚು ಮಾಡಬೇಕು ಸರಿ. ಆದರೆ ಇಷ್ಟೊಂದು ದುಂದುವೆಚ್ಚ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಮುಂದೆ ನನಗೆ ಗೊತ್ತಿಲ್ಲದೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಗುಟುರು ಹಾಕಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪಗೆ ಗೊತ್ತಿಲ್ಲದೆ ಹಣ ಖರ್ಚಾಗುತ್ತಿದೆ ಎನ್ನುವುದು ಈ ಮೂಲಕ ಬಹಿರಂಗವಾದಂತೆ ಕಾಣುತ್ತಿದೆ. ಅಂದರೆ ಮುಖ್ಯಮಂತ್ರಿ ಆಗಿರುವುದು ಬಿ.ಎಸ್ ಯಡಿಯೂರಪ್ಪ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಸಿಎಂಗೂ ಮೀರಿ ಕೋವಿಡ್ ವಿಚಾರದಲ್ಲಿ ಹಣ ಮಾಡಲು ಸೂಪರ್ ಸಿಎಂ ಒಬ್ಬರು ಕೆಲಸ ಮಾಡುತ್ತಿದ್ದಾರೆ. ಅದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಗಮನಕ್ಕೂ ಬಂದಿಲ್ಲ. ಇನ್ನಾದರೂ ಈ ರೀತಿಯ ದುಂದು ವೆಚ್ಚಗಳ ಮೇಲೆ ಬಿ.ಎಸ್ ಯಡಿಯೂರಪ್ಪ ನಿಗಾ ಇಟ್ಟರೆ ರಾಜ್ಯದ ಬೊಕ್ಕಸ ಬರಿದಾಗುವುದು ತಪ್ಪಲಿದೆ. ಇಲ್ಲದಿದ್ದರೆ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತೆ ಕೋವಿಡ್ ಹೆಸರಲ್ಲಿ ಲೂಟಿ ಮಾಡುವುದು ಶತಸಿದ್ಧ.
 
			
 
                                 
                                 
                                
