ರಾಜ್ಯದಲ್ಲಿ ಕರೋನಾ ಸೋಂಕಿನಿಂದ ನೂರಾರು ಜನರು ಸಾಯುತ್ತಿದ್ದಾರೆ. ಕರೋನಾ ಸೋಂಕು ಮಾರಾಣಾಂತಿಕ ಅಲ್ಲ ಎಂದು ಸರ್ಕಾರ ಎಷ್ಟು ಹೇಳಿದರೂ ಪ್ರತಿನಿತ್ಯ ಸಾಯುತ್ತಿರುವ ಜನರ ಸಂಖ್ಯೆ ಮಾತ್ರ ಕಡಿಮೆಯಾಗ್ತಿಲ್ಲ. ದಿನಕ್ಕೆ ನೂರರ ಆಸುಪಾಸಿನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸರ್ಕಾರದ ಅಂಕಿಸಂಖ್ಯೆಯಲ್ಲಿ ಹೊರಬರುತ್ತಿದೆ. ಇದು ಜನರ ಆತಂಕಕ್ಕೆ ಕಾರಣವಾದರೂ ಮತ್ತೊಂದು ಆತಂಕಕಾರಿ ವಿಚಾರ ಎಂದರೆ ಕರೋನಾ ಸೋಂಕಿಗೆ ತುತ್ತಾಗದೆ ಇರುವ ಜನರು ಸಾಯುತ್ತಿದ್ದಾರೆ. ಆ ಜನರನ್ನು ಸರ್ಕಾರ ಲೆಕ್ಕ ಹಾಕುತ್ತಿಲ್ಲ ಅಷ್ಟೆ. ಕರೋನಾ ಸೋಂಕಿತರಲ್ಲದ ನೂರಾರು ಜನರು ಸಾಯುತ್ತಿರುವುದರ ಬಗ್ಗೆ ಸರ್ಕಾರ ನಿಗಾ ವಹಿಸಬೇಕಿದೆ. ಆದರೆ, ಈ ಸಾವುಗಳಿಗೆ ಸರ್ಕಾರವೇ ಪರೋಕ್ಷವಾಗಿ ಕಾರಣಗಿದೆಯಾ ಎನ್ನುವ ಅನುಮಾನಗಳು ಶುರುವಾಗಿದೆ.
ಕರೋನಾ ಸೋಂಕಿತರನ್ನು ನಿರ್ವಹಣೆ ಮಾಡುವಲ್ಲಿ ವಿಫಲವಾದ ರಾಜ್ಯ ಸರ್ಕಾರ, ತನ್ನ ಹೊಣೆಗಾರಿಕೆಯಿಂದ ಹೊರ ಬರುವ ಉದ್ದೇಶದಿಂದ ಕರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬೇಕು ಎನ್ನುವ ಆದೇಶ ಮಾಡಿದರು. ಆ ಬಳಿಕ ಖಾಸಗಿ ಆಸ್ಪತ್ರೆಗಳು ಶ್ರೀಮಂತ ಸೋಂಕಿತರ ಪಾಲಾದವು. ಸರ್ಕಾರದ ಲೆಕ್ಕಕ್ಕೆ ಸಿಗದಂತೆ ನೂರಾರು ಜನ ಉಳ್ಳವರು ಕರೋನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಸರ್ಕಾರ ತನ್ನ ಪಾಲಿನ ಶೇಕಡ 50ರಷ್ಟು ಹಾಸಿಗೆಯನ್ನು ಬಿಟ್ಟುಕೊಡುವಂತೆ ಒತ್ತಡ ಹೇರುತ್ತಿದೆ. ಹಾಗಾಗಿ ಇಡೀ ಆಸ್ಪತ್ರೆಯೇ ಕರೋನಾ ಆಸ್ಪತ್ರೆಗಳಾಗಿ ಬದಲಾಗುತ್ತಿವೆ. ಬೇರೆ ರೋಗ ಬಂದವರನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಕರೆದುಕೊಳ್ಳಲು ಹಿಂದೇಟು ಹಾಕುವಂತಾಗಿದೆ. ಒಂದು ವೇಳೆ ಅನಿವಾರ್ಯವಾಗಿ ರೋಗಿಗೆ ಚಿಕಿತ್ಸೆ ಕೊಡಲು ಮುಂದಾದರೂ ಸೋಂಕು ಕಾಯಂ ಎನ್ನುವಂತಾಗಿದೆ.
ಸಮಾಜಕ್ಕೆ ಹೆದರುತ್ತಿದ್ದಾರೆ ಶ್ರೀಮಂತ ಸೋಂಕಿತರು..!
ಶ್ರೀಮಂತರಿಗೆ ಕರೋನಾ ಸೋಂಕು ಬಂದರೂ ಗೌಪ್ಯವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕರೋನಾ ಸೋಂಕು ಎನ್ನುವುದನ್ನು ಮುಚ್ಚಿಡುತ್ತಿರುವ ಆಸ್ಪತ್ರೆಗಳ ಆಡಳಿತ ಮಂಡಳಿಗಳು ಶ್ರೂಶೂಷೆ ಮಾಡಿದ ಬಳಿಕ ಲಕ್ಷ ಲಕ್ಷ ಬಿಲ್ಪಡೆದುಕೊಂಡು ಡಿಸ್ಚಾರ್ಚ್ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಮುಜುಗರಕ್ಕೆ ಒಳಗಾಗುವುದು ತಪ್ಪುತ್ತಿದೆ. ಮನೆ ಮುಂದೆ ತಗಡಿನ ಶೀಟ್ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಸರ್ಕಾರದ ಲೆಕ್ಕದಿಂದಲೂ ಮಿಸ್ ಆಗುತ್ತಿದ್ದಾರೆ. ಬಡವರ ಪಾಲಿಗೆ ಹಾಸ್ಪಿಟಲ್ನಲ್ಲಿ ಚಿಕಿತ್ಸೆ ಸಿಗದಂತೆ ಸಾಮಾನ್ಯ ವಾರ್ಡ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಶ್ರೀಮಂತರನ್ನು ಸಾಮಾನ್ಯ ರೋಗಿಯಂತೆ ದಾಖಲು ಮಾಡಿಕೊಳ್ಳುತ್ತಿರುವ ಕಾರಣ ಅನ್ಯ ಕಾಯಿಲೆಯ ರೋಗಿಗಳನ್ನು ದಾಖಲು ಮಾಡಿಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಾಮಾಜಿಕ ಅಂತರವೇ ಮುಳುವಾಯಿತೇ..?
ಪ್ರಧಾನಿ ನರೇಂದ್ರ ಮೋದಿ ಮಾತು ಮೊದಲಿಗೆ ಸಾಮಾಜಿಕ ಅಂತರ ಕರೋನಾ ಸೋಂಕಿಗೆ ಮದ್ದು ಎಂದಿದ್ದರು. ಆ ಮಾತು ಜನರ ಮನಸ್ಸಿನಲ್ಲಿ ಗಾಢವಾಗಿ ಬೇರೂರಿದ್ದು ಕರೋನಾ ಸೋಂಕಿತರನ್ನು ಅಸ್ಪೃಶ್ಯತೆಯಿಂದ ನೋಡಲಾಗ್ತಿದೆ. ಸೋಂಕಿತರನ್ನು ಅಧಿಕೃತವಾಗಿ ಸರ್ಕಾರವೇ ಅಸ್ಪೃಶ್ಯರಂತೆ ನೋಡಿದ ಮೇಲೆ ಸಮಾಜ ಅವರನ್ನು ಇನ್ನು ಹೇಗೆ ತಾನೆ ನೋಡಿಯಾರು..? ಒಂದು ಮನೆಗೆ ಸೋಂಕು ಬಂದಿದೆ ಎಂದರೆ ಇಡೀ ಬೀದಿಯ ಜನರೇ ಆ ಕುಟುಂಬವನ್ನು ಸಮಾಜದಿಂದ ಬಹಿಷ್ಕಾರ ಮಾಡುತ್ತದೆ. ಅದು ಕರೋನಾ ಸೋಂಕಿತರನ್ನು ಅವಮಾನಕ್ಕೆ ಈಡು ಮಾಡುತ್ತದೆ. ಇದೇ ಕಾರಣಕ್ಕೆ ಶ್ರಿಮಂತರು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು ಹಣ ಕೊಟ್ಟು ಚಿಕಿತ್ಸೆ ಪಡೆಯುತ್ತಿದ್ದಾರೆ.
ಖಾಸಗಿ ಆಸ್ಪತ್ರೆಗಳನ್ನು ವಶಕ್ಕೆ ಪಡೆಯಬಹುದಲ್ಲವೇ..?
ಸರ್ಕಾರ ಖಾಸಗಿ ಆಸ್ಪತ್ರೆಗಳು ಸಹಕಾರ ಕೊಡುತ್ತಿಲ್ಲ ಎಂದು ಹೇಳುತ್ತಲೇ ಕಳೆಯುವ ಬದಲು ಖಾಸಗಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಚಿಕಿತ್ಸೆ ನೀಡಬಹುದು. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಗಮನ ಸೆಳೆದಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಕೂಡಲೇ ಈ ಬಗ್ಗೆ ಚಿಂತನೆ ನಡೆಸಬೇಕಿದೆ. ಜೊತೆಗೆ ಹಣದ ದುಂದುವೆಚ್ಚ ಮಾಡುತ್ತಾ ಹೊಸ ನೇಮಕಾತಿ ಮಾಡುವ ಬದಲು ಈಗಾಗಲೇ ವ್ಯರ್ಥವಾಗಿ ವೇತನ ಕೊಡುತ್ತಿರುವ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಂಡು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಕೆಲಸ ಮಾಡಬೇಕಿದೆ.
ಇನ್ನೂ ಕರೋನಾ ಸೋಂಕಿತರ ವಿರುದ್ಧ ನಮ್ಮ ಹೋರಾಟವಲ್ಲ ಕೇವಲ ಸೋಂಕಿನ ವಿರುದ್ಧ ನಮ್ಮ ಹೋರಾಟ ಎಂದು ಮೊಬೈಲ್ ಸಂಭಾಷಣೆಯಲ್ಲಿ ಕೇಳಿಸಿದರೆ ಸಾಧ್ಯವಿಲ್ಲ. ಅದನ್ನು ಸಮಾಜದಲ್ಲಿ ಮೂಡುವಂತೆ ಮಾಡಬೇಕು. ಜನರು ಸೋಂಕಿತರನ್ನು ಅಪಮಾನ ಮಾಡುವುದನ್ನು ನಿಲ್ಲಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಸರ್ಕಾರ ಮಾಡಬೇಕಿದೆ. ಇಲ್ಲದಿದ್ದರೆ ಸಮಾಜದ ಎದುರಲ್ಲಿ ಮನೆಯನ್ನು ಸೀಲ್ಡೌನ್ ಮಾಡುತ್ತಾ ಸಾಗುತ್ತಿದ್ದರೆ, ಸಾರ್ವಜನಿಕರೂ ಕೂಡ ಅದನ್ನೇ ಪಾಲಿಸುತ್ತಾರೆ. ಸರ್ಕಾರ ಈ ಕೂಡಲೇ ಸೀಲ್ಡೌನ್ ಗೆ ಪರ್ಯಾಯವಾಗಿ ವ್ಯವಸ್ಥೆ ರೂಪಿಸಬೇಕಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಎಡವಟ್ಟುಗಳ ಸರಮಾಲೆ ಸೃಷ್ಟಿಯಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಸೋಂಕಿತರಲ್ಲದ ಜನರು ಸಾಯುವ ಸಂಖ್ಯೆ ಗಣನೀಯವಾಗಿ ಏರಿಕೆಯಾಗುವ ಮುನ್ನ ಚ್ಚೆತ್ತುಕೊಳ್ಳಬೇಕಿದೆ. ಸೋಂಕು ರಹಿತರಿಗೆ ನಗರ ಪ್ರದೇಶಗಳಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಇನ್ನೂ ಮುಂದಿನ ದಿನಗಳಲ್ಲಿ ಹಳ್ಳಿಗಳಲ್ಲೂ ಚಿಕಿತ್ಸೆ ದೊರೆಯದಿದ್ದರೆ ಸಾವಿನ ಸಂಖ್ಯೆ ಸಾವಿರ ಮುಟ್ಟಿದರೂ ಅಚ್ಚರಿಯಿಲ್ಲ.