ಕರ್ನಾಟಕ ರಾಜ್ಯದಲ್ಲಿ ಕರೋನಾ ನಿಯಂತ್ರಣ ಮಾಡುವುದು ಹೇಗೆ ಎನ್ನುವ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. ಜನರು ಲಾಕ್‌ಡೌನ್ ಮಾಡುವಂತೆ ಒತ್ತಾಯ ಮಾಡಿದರೂ ಲಾಕ್‌ಡೌನ್ ಮಾಡಿದರೆ ಸರ್ಕಾರ ನಡೆಸುವುದು ಕಷ್ಟ ಎನ್ನುವ ಕಾರಣದಿಂದ ವೀಕೆಂಡ್ ಲಾಕ್‌ಡೌನ್ ಮಾಡುತ್ತಿದೆ. ಶನಿವಾರ ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆ ತನಕ ಕರ್ಫ್ಯೂ ವಿಧಿಸಲಾಗಿದೆ. ಆದರೂ ಲಾಕ್‌ಡೌನ್ ಮಾಡಬೇಕು ಎನ್ನುವ ಕೂಗು ಬೆಂಗಳೂರು ಜನಪ್ರತಿನಿಧಿಗಳಿಂದ ಕೇಳಿ ಬಂದಿದ್ದು, ಕಡೇ ಪಕ್ಷ ಶನಿವಾರವಾದರೂ ಲಾಕ್‌ಡೌನ್ ಮಾಡಲೇಬೇಕು ಎನ್ನುವ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಇಂದಿನ ಕ್ಯಾಬಿನೆಟ್‌ನಲ್ಲೂ ಭಾರೀ ಚರ್ಚೆಯಾಗಿದೆ.
ಕರೋನಾ ಕಂಟ್ರೋಲ್ ಮಾಡೋ ವಿಚಾರವಾಗಿ ವೀಕೆಂಡ್ ಲಾಕ್‌ಡೌನ್ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆಯಾಗಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಮಾಡಲಾಗುತ್ತೆ ಎನ್ನಲಾಗಿತ್ತು. ಆದ್ರೆ ಸಭೆಯಲ್ಲಿ ಬೆಂಗಳೂರಿನ ಅಷ್ಟ ದಿಕ್ಕುಗಳಿಗೆ ದಿಕ್ಪಾಲಕರನ್ನು ನೇಮಕ ಮಾಡಲು ಸಿಎಂ ಬಿ.ಎಸ್ ಯಡಿಯೂರಪ್ಪ ನಿರ್ಧಾರ ಮಾಡಿದ್ದಾರೆ. ಕೇಂದ್ರ ಸರ್ಕಾರದ ಟೀಂ ಆಗಮಿಸಿ ಎಚ್ಚರಿಸುತ್ತಿದ್ದಂತೆ ಸರ್ಕಾರ ಅಲರ್ಟ್ ಆಗಿದೆ. ಬೆಂಗಳೂರು ಜನರನ್ನು ಸೋಂಕಿನಿಂದ ರಕ್ಷಿಸಲು ಬೆಂಗಳೂರನ್ನು ವಲಯಗಳಾಗಿ ವಿಂಗಡಿಸಲಾಗಿದೆ.
ಬೆಂಗಳೂರಿನ ಎಂಟು ದಿಕ್ಕುಗಳಿಗೆ ಅಷ್ಟ ದಿಕ್ಪಾಲಕರನ್ನ ನೇಮಿಸಿದ್ದು ಬಿಬಿಎಂಪಿ ಪೂರ್ವ ವಲಯಕ್ಕೆ ಡಿಸಿಎಂ ಅಶ್ವತ್ಥನಾರಾಯಣ, ಬಿಬಿಎಂಪಿ ಪಶ್ಚಿಮ ವಲಯಕ್ಕೆ ಸಚಿವ ವಿ. ಸೋಮಣ್ಣ, ಬಿಬಿಎಂಪಿ ದಕ್ಷಿಣಕ್ಕೆ ಕಂದಾಯ ಸಚಿವ ಆರ್. ಅಶೋಕ್, ಮಹಾದೇವಪುರ ವಲಯಕ್ಕೆ ಸಚಿವ ಭೈರತಿ ಬಸವರಾಜು, ಯಲಹಂಕ ವಲಯಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಆರ್.ಆರ್.ನಗರ ವಲಯಕ್ಕೆ ಸಚಿವ ಎಸ್. ಟಿ ಸೋಮಶೇಖರ್, ದಾಸರಹಳ್ಳಿ ವಲಯಕ್ಕೆ ಸಚಿವ ಕೆ. ಗೋಪಾಲಯ್ಯ, ಬೊಮ್ಮನಹಳ್ಳಿ ವಲಯಕ್ಕೆ ಸಚಿವ ಸುರೇಶ್‌ಕುಮಾರ್ ಅವರನ್ನು ನೇಮಿಸಿದ್ದಾರೆ. ಎಂಟು ಸಚಿವರ ಜೊತೆಗೆ 8 ಮಂದಿ ಅಧಿಕಾರಿಗಳನ್ನೂ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಕರೋನಾ ನಿಯಂತ್ರಣ ಮಾಡಲು ಏನೆಲ್ಲಾ ಕೆಲಸ ಮಾಡಬೇಕು ಎನ್ನುವ ಬಗ್ಗೆ ಇವರೇ ನಿರ್ಧಾರ ಮಾಡಲಿದ್ದಾರೆ.
![](https://pratidhvani.in/wp-content/uploads/2021/02/Stay_Home_2-175.jpg)
ಕರೋನಾ ಭೀತಿಯಿಂದ ಸ್ವತಃ ಜನರೇ ಲಾಕ್‌ಡೌನ್ ಮಾಡಿಕೊಳ್ತಿದ್ದಾರೆ. ವ್ಯಾಪಾರಸ್ಥರು ತಮ್ಮ ವ್ಯವಹಾರಕ್ಕೆ ಬ್ರೇಕ್ ಹಾಕಿಕೊಂಡು ಲಾಕ್‌ಡೌನ್ ಮಾಡುತ್ತಿರುವಾಗ ಸರ್ಕಾರ ಲಾಕ್‌ಡೌನ್ ಮಾಡುವುದು ಸೂಕ್ತ ಎನ್ನುವ ಚರ್ಚೆ ನಡೆದಿತ್ತು. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಸದ್ಯಕ್ಕೆ ಲಾಕ್‌ಡೌನ್ ಸಾಧ್ಯವಿಲ್ಲ ಎಂದಿದ್ದಾರೆ. ಕೊನೇ ಪಕ್ಷ ಶನಿವಾರವಾದರೂ ಲಾಕ್‌ಡೌನ್ ಮಾಡುವ ಬಗ್ಗೆ ಬೆಂಗಳೂರಿನ ಕಾರ್ಪೊರೇಟರ್‌ಗಳು ಒತ್ತಾಯ ಮಾಡಿದ್ದಾರೆ ಎಂದು ಸಚಿವ ಆರ್. ಅಶೋಕ್ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಯಾವುದರ ಬಗ್ಗೆಯೂ ಆತುರದ ನಿರ್ಧಾರ ತೆಗೆದುಕೊಳ್ಳುವುದು ಬೇಡ ಎಂದಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ,. ವೈದ್ಯಕೀಯ ಉಪಕರಣಗಳ ಖರೀದಿಗೆ ಆರೋಗ್ಯ ಇಲಾಖೆಗೆ ಅವಕಾಶ ನೀಡಲಾಗಿದೆ. 89 ಕೋಟಿ ರೂಪಾಯಿ ಅನುದಾನ ನೀಡಲು ತೀರ್ಮಾನ ಮಾಡಲಾಗಿದೆ. ಕೋವಿಡ್ಗಾಗಿ ಮೆಡಿಕಲ್ ಗ್ಯಾಸ್ ಪೈಪ್ ಲೈನ್, ಹಾಸಿಗೆಗಳನ್ನು ಜಾಸ್ತಿ ಮಾಡಿಕೊಳ್ಳಲು 207 ಕೋಟಿ ರುಪಾಯಿ ಮಂಜೂರು ಮಾಡಲು ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
ಇನ್ನೂ ರಾಜ್ಯದ ಎಲ್ಲಾ ಕಡೆಗಳಲ್ಲೂ ಆದಷ್ಟು ಬೇಗ ಪರೀಕ್ಷೆ ಮಾಡಿ, ಆದಷ್ಟೂ ಶೀಘ್ರವಾಗಿ ಫಲಿತಾಂಶ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು. ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಹೈಫ್ಲೊ ಆಕ್ಸಿಜನ್ ಅಳವಡಿಸುವುದು ಮತ್ತು ಹೆಚ್ಚಿನ ಹಾಸಿಗೆ ಸೌಲಭ್ಯ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಲು ರಾಜ್ಯ ಸಚಿವ ಸಂಪುಟ ನಿರ್ಧಾರ ಮಾಡಿದೆ. ಜೊತೆಗೆ ಪ್ರತಿಭಟನೆಗೆ ಮುಂದಾಗಿದ್ದ ಗುತ್ತಿಗೆ ವೈದ್ಯರನ್ನು ಕಾಯಂ ಮಾಡುವುದಕ್ಕೂ ಕ್ಯಾಬಿನೆಟ್ ಒಪ್ಪಿಗೆ ಕೊಟ್ಟಿದೆ.
ಒಟ್ಟಾರೆ, ಇದೀಗ ರಾಜ್ಯ ಸರ್ಕಾರ ಕೋವಿಡ್ ಕಂಟ್ರೋಲ್‌ಗೆ ಅಷ್ಟದಿಕ್ಫಾಲಕರ ನೇಮಕ ಮಾಡಿರುವ ಎಷ್ಟೊಂದು ಸಹಕಾರಿ ಎನ್ನುವುದನ್ನು ಕಾದು ನೋಡಬೇಕಿದೆ.