ಇದೇ ಎಪ್ರಿಲ್ ತಿಂಗಳ ಆರಂಭಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳಲ್ಲಿ ಭಾರೀ ಸದ್ದು ಮಾಡಿದ್ದ ತಬ್ಲೀಗ್ ಜಮಾಅತ್ ನ ಕರೋನಾ ಹರಡುವಿಕೆ ಕುರಿತ ವರದಿಯಿಂದಾಗಿ ಇಡೀ ಮುಸ್ಲಿಂ ಸಮುದಾಯವೇ ತಲೆತಗ್ಗಿಸುವಂತೆ ಆಗಿತ್ತು. ಮಾತ್ರವಲ್ಲದೇ ಪರೋಕ್ಷವಾಗಿ ಇದು ಮುಸ್ಲಿಮರ ಮೇಲೆ ಅಪ್ರಚೋದಿತ ದಾಳಿಗೂ ಪ್ರೇರಣೆ ನೀಡಿದಂತಿತ್ತು. ಸಾಮಾಜಿಕ ಜಾಲತಾಣದಲ್ಲಂತೂ ಸತ್ಯ ಯಾವುದೋ, ಸುಳ್ಳು ಯಾವುದೋ ಅಂತಾ ಜನ ಗೊಂದಲಕ್ಕೊಳಗಾಗಿ ನಂಬಿ ಬಿಡುವ ಪರಿಸ್ಥಿತಿಗೆ ತಲುಪಿತ್ತು. ರಾಷ್ಟ್ರೀಯ ಹಾಗೂ ರಾಜ್ಯ ಮಾಧ್ಯಮಗಳು ತಬ್ಲೀಗ್ ಜಮಾಅತ್‌ನಿಂದ ಎಡವಟ್ಟಿಗೆ ಇಡೀ ಮುಸ್ಲಿಂ ಸಮುದಾಯವನ್ನೇ ಕಟಕಟೆಯ ಮೇಲೆ ನಿಲ್ಲಿಸಿ ವಿಚಾರಣೆ ನಡೆಸಿದಂತಿತ್ತು ಅದರ ನಿರೂಪಣೆ.
ಕರೋನಾ ವೈರಸ್ ಹಬ್ಬಿದ್ದೇ ದೆಹಲಿ ನಿಜಾಮುದ್ದೀನ್ ಕೇಂದ್ರದಲ್ಲಿದ್ದ ತಬ್ಲೀಗ್ ಜಮಾಅತ್ ಸದಸ್ಯರಿಂದಲೇ ಅನ್ನೋ ರೀತಿಯಾಗಿ ಇಡೀ ರಾಷ್ಟ್ರಾದ್ಯಂತ ಪುಕಾರು ಎದ್ದಿತ್ತು. ʼಕರೋನಾ ಜಿಹಾದ್ʼ, ʼನಿಜಾಮುದ್ದೀನ್ ನಂಜುʼ ಅನ್ನೋ ಹೆಸರಿನಡಿ ಗಂಟೆಗಟ್ಟಲೆ ಚರ್ಚೆ ನಡೆಸಿದ್ದ ಮಾಧ್ಯಮಗಳು ಇದೀಗ ಮತ್ತೆ ತಬ್ಲೀಗ್ ಸದಸ್ಯರತ್ತ ತಿರುಗಿ ನೋಡುವಂತ ಕೆಲಸವಾಗಿದೆ. ಆದರೆ ಈ ಬಾರಿ ಮಾತ್ರ ಮಾಧ್ಯಮಗಳು ಜಾಣ ಮೌನತನವನ್ನ ಪ್ರದರ್ಶಿಸಿದೆ.
ದಿನಗಳ ಹಿಂದಷ್ಟೇ ಕರೋನಾ ರೋಗಿಗಳ ಚಿಕಿತ್ಸೆಗಾಗಿ ಪ್ಲಾಸ್ಮಾ ಥೆರಪಿ ನಡೆಸುವಂತೆ ICMR ಒಪ್ಪಿಗೆ ಸೂಚಿಸಿತ್ತು. ಇದಾಗುತ್ತಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡಾ ಪ್ಲಾಸ್ಮಾ ದಾನ ಮಾಡಲು ಧರ್ಮ ಭೇದ ಮರೆತು ಮುಂದೆ ಬರುವಂತೆ ಕರೆ ನೀಡಿದ್ದರು. ಅದರಲ್ಲೂ ವಿಶೇಷವಾಗಿ ಕರೋನಾ ಸೋಂಕಿನಿಂದ ಗುಣಮುಖರಾದವರು ಮುಂದೆ ಬರುವಂತೆ ತಿಳಿಸಿದ್ದರು. ಮರುಕ್ಷಣದಲ್ಲೇ ಅಚ್ಚರಿಯೆಂಬಂತೆ ತಬ್ಲೀಗ್ ಜಮಾಅತ್ ಸದಸ್ಯರು ಮುಂದೆ ಬಂದಿದ್ದಾರೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಎಪ್ರಿಲ್ ಆರಂಭದಲ್ಲಿ ʼವಿಲನ್ʼಗಳಾಗಿದ್ದ ಅದೇ ತಬ್ಲೀಗ್ ಜಮಾಅತ್ ಸದಸ್ಯರೇ ಎಪ್ರಿಲ್ ತಿಂಗಳಾಂತ್ಯಕ್ಕೆ ʼಹೀರೋʼಗಳಾಗಿದ್ದಾರೆ. ರಂಝಾನ್ ಉಪವಾಸದ ನಡುವೆಯೂ ನೂರಾರು ಮಂದಿ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದಾರೆ.
ತಬ್ಲೀಗ್ ಜಮಾಅತ್ ಮುಖ್ಯಸ್ಥ ಮೌಲಾನ ಸಾದ್ ಕಂದ್ಲವಿ ಅವರೇ ಮುಸ್ಲಿಂ ಸಮುದಾಯಕ್ಕೆ ಪ್ಲಾಸ್ಮಾ ದಾನದಲ್ಲಿ ಸ್ವಯಂ ಇಚ್ಛೆಯಿಂದ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಆ ಮೂಲಕ ಕರೋನಾ ಸೋಂಕಿನಿಂದ ಬಳಲುತ್ತಿರುವವರ ಆರೋಗ್ಯ ಕ್ಷೇಮಕ್ಕಾಗಿ ಮುಂದಾಗಿ ಎಂದಿದ್ದಾರೆ. ಇದೇ ಮೌಲಾನ ಸಾದ್ ಮೇಲೆ ನಿಜಾಮುದ್ದೀನ್ ಮರ್ಕಝ್‌ನಲ್ಲಿ ಧಾರ್ಮಿಕ ಸಭೆ ನಡೆಸಿದ ಆರೋಪದ ಮೇಲೆ ಪ್ರಕರಣ ಕೂಡಾ ದಾಖಲಾಗಿದೆ.
ಇದುವರೆಗೂ ಪ್ಲಾಸ್ಮಾ ದಾನ ಮಾಡಲು ಮುಂದಾದ ತಬ್ಲೀಗ್ ಜಮಾಅತ್ ಸದಸ್ಯರೆಲ್ಲರೂ ಕ್ವಾರೆಂಟೈನ್ ಮುಗಿಸಿಕೊಂಡವರು, ಅದಕ್ಕೂ ಜಾಸ್ತಿ ಕರೋನಾ ಸೋಂಕು ಗುಣಮುಖರಾದವರಾಗಿದ್ದಾರೆ ಅನ್ನೋದು ಅಚ್ಚರಿಯ ಸಂಗತಿ. ದೆಹಲಿಯ 300 ರಲ್ಲಿ 190 ಮಂದಿ ನರೇಲ, 51 ಮಂದಿ ಸುಲ್ತಾನ್ ಪುರ, 42 ಮಂದಿ ಮಂಗೋಲಿಯ ಹಾಗೂ ಇನ್ನಿತರ ಪ್ರದೇಶದ ಸದಸ್ಯರು ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ.
ಮಾರ್ಚ್ ತಿಂಗಳಾಂತ್ಯಕ್ಕೆ ನಿಜಾಮುದ್ದೀನ್ ಸೆಂಟರ್‌ನಲ್ಲಿದ್ದ 2300 ಮಂದಿಯನ್ನು ಕೇಂದ್ರದಿಂದ ಸ್ಥಳಾಂತರಗೊಳಿಸಿ ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು. ಅದರಲ್ಲಿ 1300 ಮಂದಿಗೆ ಕೋವಿಡ್-19 ದೃಢವಾಗಿತ್ತು. ಅದರಲ್ಲಿ 869 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಇದೇ ಸಭೆಯಲ್ಲಿ ಕರ್ನಾಟಕದಿಂದಲೂ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಸದ್ಯ ತಬ್ಲೀಗ್ ಜಮಾಅತ್ ಸದಸ್ಯರ ಈ ನಿಲುವಿನಿಂದ ಮುಸ್ಲಿಂ ಸಮುದಾಯದ ಮೇಲೆ ನಡೆದ ಮಾನಸಿಕ ದಾಳಿಯನ್ನ ದೂರವಾಗುವಂತೆ ಮಾಡಿದೆ.

ರಕ್ತದಾನ ಮಾದರಿಯಲ್ಲೇ ಇದನ್ನು ಸಂಗ್ರಹಿಸಲಾಗುತ್ತದೆ ಆದರೆ ರಕ್ತದ ಬದಲು ಇಲ್ಲಿ ಪ್ಲಾಸ್ಮಾ ಅಥವಾ ರಕ್ತದ ಕಣಗಳನ್ನಷ್ಟೇ ಸಂಗ್ರಹಿಸಡಲಾಗುತ್ತದೆ. ಇತ್ತೀಚೆಗೆ ದೇಶದಲ್ಲಿ ಪ್ಲಾಸ್ಮಾ ಥೆರಪಿಯಿಂದ ಕರೋನಾ ಸೋಂಕು ಗುಣಪಡಿಸಬಹದು ಅನ್ನೋ ನಿರ್ಧಾರಕ್ಕೆ ವೈದ್ಯಲೋಕ ಬಂದಿತ್ತು. ಮಾತ್ರವಲ್ಲದೇ ಕೇಂದ್ರ ಸರಕಾರವೂ ಇದಕ್ಕೆ ಒಪ್ಪಿದ್ದು, ರಾಜ್ಯಗಳಲ್ಲೂ ಪ್ಲಾಸ್ಮಾ ಸಂಗ್ರಹಕ್ಕೆ ಒತ್ತು ನೀಡಲಾಗಿದೆ ಅಂತಾ ಸ್ವತಃ ಆರೋಗ್ಯ ಸಚಿವ ಶ್ರೀರಾಮುಲು ಅವರೇ ತಿಳಿಸಿದ್ದಾರೆ.
ಆದರೆ ಸದ್ಯ ಇದು ಪ್ರಾಯೋಗಿಕ ಹಂತದಲ್ಲಷ್ಟೇ ಇದ್ದು, ಆರೋಗ್ಯವಂತ ವ್ಯಕ್ತಿಯ ಪ್ಲಾಸ್ಮಾ ಅನ್ನೋದು ರೋಗಿಯ ರೋಗ ನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತದೆ ಅನ್ನೋದು ನಿಜ. ಆದರೆ ಕರೋನಾ ರೋಗಕ್ಕೆ ಇದು ಎಷ್ಟು ಉಪಕಾರಿ ಅನ್ನೋದು ತಿಳಿದು ಬಂದಿಲ್ಲ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಮಾ ತಯಾರಿಕೆಗೆ ಆಸ್ಪತ್ರೆಗಳು ಮುಂದಾಗಿಲ್ಲ. ಆದರೂ ನೂರಾರು ಸಂಖ್ಯೆಯ ತಬ್ಲೀಗ್ ಸದಸ್ಯರು ತಮ್ಮ ಹೆಸರನ್ನ ಪ್ಲಾಸ್ಮಾ ದಾನಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
ಆರಂಭಿಕ ಹಂತದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆರಂಭವಾದ ತಬ್ಲೀಗ್ ಜಮಾಅತ್ ಸದಸ್ಯರ ಅಭಿಯಾನ ಈಗ ಕರ್ನಾಟಕ, ಹರಿಯಾಣ, ತಮಿಳುನಾಡು, ಗುಜರಾತ್ ಹಾಗೂ ಇನ್ನಿತರ ರಾಜ್ಯಗಳಲ್ಲೂ ಮುಂದುವರೆದಿದೆ. ದೆಹಲಿಯೊಂದರಲ್ಲೇ 300 ಕ್ಕೂ ಅಧಿಕ ಮಂದಿ ಪ್ಲಾಸ್ಮಾ ದಾನಕ್ಕೆ ಮುಂದಾಗಿದ್ದಾರೆ. ಭಾನುವಾರ ಮೊದಲ ದಿನವೇ ಹತ್ತು ಮಂದಿ ಪ್ಲಾಸ್ಮಾ ದಾನ ಮಾಡಿದರೆ, ಮುಂದಿನ ದಿನಗಳಲ್ಲಿ ಮುಸ್ಸಂಜೆ ವೇಳೆಗೆ ಉಪವಾಸ ವೃತ ತೊರೆಯುತ್ತಿದ್ದಂತೆ ಇನ್ನಷ್ಟು ಮಂದಿ ಪ್ಲಾಸ್ಮಾ ನೀಡಲು ಬರಲಿದ್ದಾರೆ ಅನ್ನೋದಾಗಿ ತಬ್ಲೀಗ್ ವಕ್ತಾರರು ತಿಳಿಸಿದ್ದಾರೆ.
Today 4 members of the #TablighiJamat donated their #Plasma after recovery. Earlier today 300 recovered agreed to donate their plasma to safe lives from #Covid_19. Like @ArvindKejriwal said, Plasma sees no religion, sometimes humans also don't.#RamzanMubarak #TabligiHeroes pic.twitter.com/AJrHKDGxEv
— Muhammad Wajihulla (@wajihulla) April 26, 2020
ಇನ್ನು ತಮಿಳುನಾಡು ರಾಜ್ಯವೊಂದರಲ್ಲೇ ಗುಣಮುಖರಾದ 450 ಮಂದಿ ತಬ್ಲೀಗ್ ಜಮಾಅತಿಗರು ತಮ್ಮ ಹೆಸರು ನೋಂದಾಯಿಸಿದ್ದಾರೆ. ಮಾತ್ರವಲ್ಲದೇ ಇಫ್ತಾರ್ ನಂತರ ಪ್ಲಾಸ್ಮಾ ನೀಡಲಿದ್ದಾರೆ ಎನ್ನಲಾಗಿದೆ. ಇನ್ನು ಪ್ಲಾಸ್ಮಾ ನೀಡಲು 50 ವರುಷದೊಳಗಿನ ವ್ಯಕ್ತಿಗಳಿಗೆ ಮಾತ್ರ ತಬ್ಲೀಗ್ ಜಮಾಅತ್ ಮನವಿ ಮಾಡಿದ್ದು, ಮಧುಮೇಹ ಹಾಗೂ ರಕ್ತದೊತ್ತಡ ಇರುವ ಮಂದಿ ಪ್ಲಾಸ್ಮಾ ನೀಡದಂತೆಯೂ ಮನವಿ ಮಾಡಿಕೊಂಡಿದೆ.
ಆರೋಗ್ಯವಂತ ಇಲ್ಲವೇ ಸದ್ಯ ಕರೋನಾ ಸೋಂಕು ಗುಣಮುಖರಾದ ರೋಗಿಗಳನ್ನು ಎರಡು ವಾರಗಳ ನಂತರ ಪ್ಲಾಸ್ಮಾ ಪಡೆಯಲಾಗುತ್ತದೆ. 100ಮಿಲಿ ಪ್ಲಾಸ್ಮಾಕ್ಕೆ ಸುಮಾರು 40 ನಿಮಿಷ ತಗುಲುತ್ತದೆ. ಆದರೆ ಇದರಿಂದ ಇನ್ನೊಬ್ಬರಿಗೆ ಜೀವದಾನವಾಗುತ್ತದೆ ಅನ್ನೋದನ್ನು ವೈದ್ಯಲೋಕ ಕಂಡುಕೊಂಡಿದೆ. ಪ್ರಮುಖವಾಗಿ ದೆಹಲಿಯಲ್ಲಿಯೇ ಈ ಪ್ರಯೋಗ ಯಶಸ್ವಿಯಾಗಿದ್ದು, ಅಚ್ಚರಿಯೆಂಬಂತೆ ರೋಗಿಗಳು ವೆಂಟಿಲೇಟರ್ ಸಹಾಯದಿಂದ ಶೀಘ್ರ ಹೊರಬಂದು ಗುಣಮುಖರಾಗಿದ್ದಾಗಿ ಕಳೆದ ವಾರವಷ್ಟೇ ದೆಹಲಿ ವೈದ್ಯರೊಬ್ಬರು ತಿಳಿಸಿದ್ದರು. ಆದರೆ ಪ್ಲಾಸ್ಮಾ ನೀಡುವಿಕೆ ಅದೆಷ್ಟರ ಮಟ್ಟಿಗೆ ಪ್ರಯೋಜನಕಾರಿ ಅನ್ನೋದು ಇನ್ನೊಂದಿಷ್ಟು ಅಧ್ಯಯನ ಐಸಿಎಂಆರ್ ನಡೆಸಬೇಕಿದೆ.
ಆದರೆ ತಿಂಗಳ ಆರಂಭದಲ್ಲಿ ಮಾಧ್ಯಮಗಳಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ತಬ್ಲೀಗ್ ಜಮಾಅತ್ ನಿಂದಾಗಿ ಮುಸ್ಲಿಮರಿಗೆ ಸಾಮಾಜಿಕ ಬಹಿಷ್ಕಾರ ಹಾಕುವಷ್ಟರ ಮಟ್ಟಿಗೆ ದೇಶಾದ್ಯಂತ ಕೃತ್ಯಗಳೂ ನಡೆದವು. ರಾಜ್ಯದ ಕರಾವಳಿ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಬುದ್ಧಿಗೇಡಿಗಳು ʼಮುಸ್ಲಿಮರಿಗೆ ಪ್ರವೇಶವಿಲ್ಲʼ ಎಂದು ನಾಮಫಲಕ ಹಾಕಿ ಕೇಸುಗಳನ್ನೂ ಜಡಿಸಿಕೊಂಡರು. ಮಾಧ್ಯಮಗಳ ಪ್ರಚೋದನೆಗೆ ಒಳಗಾದ ಮಂದಿಗೆ ಇದೀಗ ಸತ್ಯ ತಿಳಿಯದಂತೆ ಮಾಧ್ಯಮಗಳು ಜಾಣ ಮೌನ ಅನುಸರಿಸುತ್ತಿದೆ.
“ಓರ್ವ ವ್ಯಕ್ತಿ ಇನ್ನೊಬ್ಬನಿಗೆ ಜೀವದಾನ ಮಾಡಿದರೆ, ಸಕಲ ಮನುಷ್ಯ ಕುಲಕ್ಕೆ ಜೀವದಾನ ಮಾಡಿದಂತೆ” ಅನ್ನೋ ಕುರ್‌ಆನ್ ತತ್ವದಂತೆ ತಬ್ಲೀಗ್ ಜಮಾಅತ್ ಈ ನಿರ್ಧಾರಕ್ಕೆ ಮುಂದಾಗಿದೆ ಅನ್ನೋದಾಗಿ ಹೇಳಿಕೊಂಡಿದೆ. ಒಂದೊಮ್ಮೆ ದ್ವೀಪ ಪ್ರದೇಶದಂತಿದ್ದ ತಬ್ಲೀಗ್ ಜಮಾಅತ್ ಕಾರ್ಯಚಟುವಟಿಕೆ ಬಗ್ಗೆ ʼಪ್ರತಿಧ್ವನಿʼ ಕೂಡಾ ಸಮಗ್ರ ವರದಿ ಬಿತ್ತರಿಸಿತ್ತು. ಆದರೆ ಇದೀಗ ಸಾಮಾಜಿಕವಾಗಿ ಗುರುತಿಸಿಕೊಳ್ಳುವ ಮೂಲಕ ದೇಶದ ಮಾಧ್ಯಮಗಳು ತಿರುಗಿ ನೋಡುವಂತೆ ಮಾಡಿದ್ದಾರೆ. ಆದರೆ ರಾಷ್ಟ್ರೀಯ ಮಾಧ್ಯಮಗಳು ಮಾತ್ರ ಜಾಣ ಮೌನ ತಾಳಿದ್ದು, ತಮ್ಮದೇನಿದ್ದರೂ ಸಮಾಜದಲ್ಲಿ ʼನೆಗೆಟಿವ್ʼ ರೋಲ್ ಅನ್ನೋದನ್ನ ಮತ್ತೊಮ್ಮೆ ಪ್ರದರ್ಶಿಸಿದಂತಿದೆ.