ಕರ್ನಾಟಕದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿದೆ, ಕರೋನಾ ಪಾಸಿಟಿವ್ ಬಂದವರ ಚಿಕಿತ್ಸೆಗೆ ಹಾಸಿಗೆಗಳು ಲಭ್ಯವಾಗುತ್ತಿಲ್ಲವೆಂಬ ದೂರು ಕೇಳಿಬರುತ್ತಿದೆ. ಇದು ಸರ್ಕಾರವನ್ನು ಆತಂಕಕ್ಕೀಡು ಮಾಡಿದೆ. ಈ ನಡುವೆಯೇ ವಿಜಯಪುರದಲ್ಲಿ ಟಗರು ಕಾಳಗ ನಡೆಸಿದ್ದಾರೆ.
ಗ್ರಾಮೀಣ ಸೊಗಡಿನ ಟಗರು ಕಾಳಗ ಈಗ ಇಡೀ ಗ್ರಾಮಕ್ಕೆ ಅಪಾಯಕಾರಿಯಾಗುವ ಲಕ್ಷಣ ಕಂಡುಬರುತ್ತಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ವೀರೇಶ ನಗರದಲ್ಲಿ ಟಗರು ಕಾಳಗ ಆಯೋಜಿಸಿದ್ದು ನೂರಾರು ಗ್ರಾಮಸ್ಥರು ಭಾಗವಹಿಸಿದ್ದಾರೆ.
ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಕರೋನಾ ಸಂಬಂಧಿತ ಯಾವುದೇ ಮುನ್ನೆಚ್ಚರಿಕಾ ಕ್ರಮವಿಲ್ಲದೆ ನೂರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗಿಯಾಗಿರುವುದು ಸ್ಥಳೀಯ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ವೀರೇಶ ನಗರ ಗೆಳೆಯರ ಬಳಗದ ವತಿಯಿಂದ ಆಯೋಜಿಸಿರುವ ಟಗರು ಕಾಳಗಕ್ಕೆ ಆಯೋಜಕರು ಅನುಮತಿ ಪಡೆದಿರಲಿಲ್ಲವೆಂದು ಆರೋಪಿಸಿ ಸ್ಥಳೀಯ ಗ್ರಾಮಸ್ಥರು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 399 ದಾಟಿದೆ. ಅದರಲ್ಲಿ 305 ಮಂದಿ ಸೋಂಕಿನಿಂದ ಚೇತರಿಸಕೊಂಡು ಆಸ್ಪತ್ರೆಯಿದ ಬಿಡುಗಡೆಹೊಂದಿದ್ದರೂ ನಿನ್ನೆಯ ದಿನ 39 ಕರೋನಾ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ, ಜಿಲ್ಲೆಯಲ್ಲಿ ನಡೆದಿರುವ ಟಗರು ಕಾಳಗ ಸಾಕಷ್ಟು ಆತಂಕ ಸೃಷ್ಟಿಸಿದೆ.