ದೇಶಾದ್ಯಂತ ಹೆಚ್ಚುತ್ತಲೇ ಇರುವ ಕರೋನಾ ಸೋಂಕಿನ ನಡುವೆ ಆಡಳಿತಾರೂಢ ಬಿಜೆಪಿ ಜನರ ಜೀವ ಉಳಿಸುವ ಕಾಳಜಿಗಿಂತ ಪ್ರತಿಪಕ್ಷ ಸರ್ಕಾರ ಉರುಳಿಸುವ, ಬರಲಿರುವ ಚುನಾವಣೆಗಳಿಗೆ ತಯಾರಿ ಮಾಡಿಕೊಳ್ಳುವ ಮತ್ತು ಕಾರ್ಪೊರೇಟ್ ಕಂಪನಿಗಳಿಗೆ ಇಡೀ ದೇಶದ ಹಿತಾಸಕ್ತಿಯನ್ನೇ ಒತ್ತೆ ಇಡುವ ನಿಟ್ಟಿನಲ್ಲಿ ಸಾಕಷ್ಟು ವ್ಯಸ್ತವಾಗಿದೆ ಎಂಬ ಮಾತುಗಳು ಈಗೀಗ ಜೋರಾಗಿ ಕೇಳಲಾರಂಭಿಸಿವೆ.
ಅದರಲ್ಲೂ ಮುಖ್ಯವಾಗಿ ಬಿಹಾರ ಚುನಾವಣೆಗಾಗಿ ಬಿಜೆಪಿ ಚುನಾವಣಾ ಚಾಣಾಕ್ಷ ಎಂದೇ ಹೆಸರಾಗಿರುವ ಗೃಹ ಸಚಿವ ಅಮಿತ್ ಶಾ ಅವರು ನಡೆಸಿರುವ ತಯಾರಿಗಳು ಸಾಕಷ್ಟು ಸದ್ದು ಮಾಡುತ್ತಿವೆ. ದೇಶಾದ್ಯಂತ ಕರೋನಾ ಲಾಕ್ ಡೌನ್ ಜಾರಿಯಲ್ಲಿರುವಾಗಲೇ ಕಳೆದ ಮೇನಿಂದಲೇ ಆನ್ ಲೈನ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಕರೋನಾ ಸೋಂಕಿನ ವಿಷಯದಲ್ಲಿ ಆವರೆಗೆ ಯಾವುದೇ ರೀತಿಯಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ಗೃಹ ಸಚಿವರು, ಮೇನಲ್ಲಿ ದಿಢೀರನೇ ಬಿಹಾರ ಮತ್ತು ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಬೃಹತ್ ವರ್ಚುವಲ್ ರ್ಯಾಲಿ ನಡೆಸುವ ಮೂಲಕ ಗಮನ ಸೆಳೆದಿದ್ದರು.
ಆಗಲೇ ಬಿಜೆಪಿ ಚುನಾವಣೆಗಳ ಬಗ್ಗೆ ಎಷ್ಟು ಆಸಕ್ತಿ ಹೊಂದಿದೆ ಮತ್ತು ಕರೋನಾ ಸೋಂಕಿನಿಂದ ದೇಶದ ಜನತೆಯನ್ನು ರಕ್ಷಿಸುವ ವಿಷಯದಲ್ಲಿ ಎಷ್ಟು ನಿಷ್ಕಾಳಜಿ ಹೊಂದಿದೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳು ಗರಿಗೆದರಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ದೇಶದ ಕರೋನಾ ಸೋಂಕಿನ ಪ್ರಮಾಣ ರಾಕೆಟ್ ವೇಗದಲ್ಲಿ ಏರುತ್ತಿರುವಾಗಲೂ ಬಿಜೆಪಿ ಬಿಹಾರ ಚುನಾವಣೆಯ ತಯಾರಿಗಳ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗಿಂತ ಅದು ಗಾವುದ ಮುಂದಿದೆ ಎಂಬುದು ಅದರೇ ಅಧಿಕೃತ ಹೇಳಿಕೆಗಳು ಮತ್ತು ವರದಿಗಳಲ್ಲಿ ಬಹಿರಂಗವಾಗಿದೆ. ಕಳೆದ ವಾರ ತಾನೇ ಚುನಾವಣಾ ತಯಾರಿಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥರ ಅಮಿತ್ ಮಾಳವೀಯಾ, ಪಕ್ಷ ಬಿಹಾರ ಚುನಾವಣೆಗಾಗಿ ಈ ಬಾರಿ ಮಾಹಿತಿ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಲು ಸಜ್ಜಾಗಿದೆ ಎಂಬ ವಿವರ ನೀಡಿದ್ದಾರೆ.
ಅವರ ಪ್ರಕಾರ, ಬಿಹಾರದಲ್ಲಿ ಈಗಾಗಲೇ ಪಕ್ಷದ ಪ್ರತಿ ಶಕ್ತಿ ಕೇಂದ್ರ ಮಟ್ಟದಲ್ಲಿ ತಲಾ ಒಬ್ಬರಂತೆ 9500 ಮಂದಿ ಐಟಿ ಸೆಲ್ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ. ಆ ಎಲ್ಲರೂ ನೇರವಾಗಿ ರಾಷ್ಟ್ರೀಯ ಐಟಿ ಸೆಲ್ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದು ಕೆಲಸ ಮಾಡುತ್ತಿದ್ದಾರೆ. ಪಕ್ಷದ ಚುನಾವಣಾ ಸಂದೇಶಗಳನ್ನು ಜನರಿಗೆ ನೇರವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಬಾರಿ ಚುಣಾವಣೆಯಲ್ಲ ಈ ಐಟಿ ಸೆಲ್ ಮುಖ್ಯಸ್ಥರೇ ನಿರ್ಣಾಯಕರಾಗಿದ್ದು, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಭೌತಿಕವಾಗಿ ಮನೆಮನೆಗೆ , ಬೀದಿಬೀದಿಗೆ ಹೋಗಿ ಪ್ರಚಾರ ನಡೆಸುವುದು ದುಸ್ತರವಾಗಿರುವ ಹಿನ್ನೆಲೆಯಲ್ಲಿ ಈ ಪರಿಣಾಮಕಾರಿ ಮಾರ್ಗ ಕಂಡುಕೊಳ್ಳಲಾಗಿದೆ. ಜೊತೆಗೆ ಈಗಾಗಲೇ ಬೂತ್ ಮಟ್ಟದಲ್ಲಿ ವಾಟ್ಸಪ್ ಗುಂಪುಗಳನ್ನು ರಚಿಸಲಾಗಿದ್ದು, ರಾಜ್ಯದಲ್ಲಿರುವ ಒಟ್ಟು 72 ಸಾವಿರ ಮತಗಟ್ಟೆಗಳ ಪೈಕಿ ಬಹುತೇಕ 50 ಸಾವಿರಕ್ಕೂ ಅಧಿಕ ಕಡೆ ವಾಟ್ಸಪ್ ಗುಂಪುಗಳು ಈಗಾಗಲೇ ಸಕ್ರಿಯವಾಗಿವೆ!
ಕರೋನಾ ಭೀತಿಯ ನಡುವೆಯೂ ಬಿಜೆಪಿ ಬಿಹಾರ ಚುನಾವಣೆಯ ವಿಷಯದಲ್ಲಿ ಇಷ್ಟು ವ್ಯಸ್ತವಾಗಿರುವುದಕ್ಕೆ ಕಾರಣವಿದೆ. ಸದ್ಯ ಜೆಡಿಯು ಮತ್ತು ತನ್ನ ಎನ್ ಡಿಎ ಮಿತ್ರಪಕ್ಷ ಎಲ್ ಜೆಪಿ ಜೊತೆ ಅಧಿಕಾರ ಹಂಚಿಕೊಂಡಿರುವ ಬಿಜೆಪಿಗೆ, ಈ ಬಾರಿ ಚುನಾವಣೆಯಲ್ಲಿ ಜೆಡಿಯುಗಿಂತ ಅಧಿಕ ಸ್ಥಾನ ಗೆಲ್ಲುವ ಮೂಲಕ ಬಿಹಾರದಲ್ಲಿ ಅಧಿಕಾರದ ಸೂತ್ರ ಹಿಡಿಯುವ ಇರಾದೆ ಇದೆ. ಹಾಗಂತ, ಜೆಡಿಯು ಮೈತ್ರಿ ತೊರೆದು ಕೇವಲ ಎನ್ ಡಿಎಯ ಚಿಕ್ಕಪುಟ್ಟ ಪಕ್ಷಗಳ ಬಲದೊಂದಿಗೆ ಚುನಾವಣೆ ಕಣಕ್ಕಿಳಿಯುವ ವಿಶ್ವಾಸವೂ ಇಲ್ಲ. ಹಾಗಾಗಿ ಜೆಡಿಯು ನಾಯಕ, ಸಿಎಂ ನಿತೀಶ್ ಕುಮಾರ್ ನೇತೃತ್ವದಲ್ಲಿಯೇ ಈ ಬಾರಿಯ ಚುನಾವಣೆಯನ್ನು ಎದುರಿಸುವುದಾಗಿ ಸ್ವತಃ ಅಮಿತ್ ಶಾ ತಮ್ಮ ವರ್ಚುವಲ್ ಅಭಿಯಾನಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ.
ಆದರೆ, ಬಿಜೆಪಿ ಚಾಣಾಕ್ಷನ ಜಾಣಹೆಜ್ಜೆಗಳನ್ನು ಊಹಿಸಿರುವ ನಿತೀಶ್ ಕುಮಾರ್, ಕಳೆದ ಬಾರಿ ಮಹಾಘಟಬಂಧನದ ಮೈತ್ರಿಯಾಗಿ ತಾವು ಕಣಕ್ಕಿಳಿದಿದ್ದ 101 ಸ್ಥಾನಗಳಿಗಿಂತ ಈ ಬಾರಿ ಎನ್ ಡಿಎ ಮೈತ್ರಿಯಲ್ಲಿ ಹೆಚ್ಚು ಸ್ಥಾನಗಳನ್ನು ಕಿತ್ತುಕೊಳ್ಳಬೇಕು. ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಯಜಮಾನಿಕೆಗೆ ಅವಕಾಶವಾಗದಂತೆ ಅಧಿಕಾರಕ್ಕೆ ಬರಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಜೊತೆಗೆ ಪ್ರಾದೇಶಿಕವಾಗಿ ಸಲಾವೊಡ್ಡುವ ಎನ್ ಡಿಎ ಮೈತ್ರಿಯ ಮತ್ತೊಂದು ಪಕ್ಷ ಎಲ್ ಜೆಪಿ ಈ ಬಾರಿ ಸಾಕಷ್ಟು ಪ್ರಬಲವಾಗಿರುವುದು ಕೂಡ ನಿತೀಶ್ ಕುಮಾರ್ ನೆತ್ತಿ ಬಿಸಿ ಮಾಡಿದೆ. ಹಾಗಾಗಿ, ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ ಏಕ ಕಾಲಕ್ಕೆ ಬಿಜೆಪಿಗೂ, ಎಲ್ ಜೆಪಿಗೂ ಒಳಪೆಟ್ಟು ಕೊಡುವ ಲೆಕ್ಕಾಚಾರ ನಿತೀಶ್ ಅವರದು.
ಆದರೆ, ಕಳೆದ ಚುನಾವಣೆಯಲ್ಲಿ ಎನ್ ಡಿಎ ಭಾಗವಾಗಿ ಕಣಕ್ಕಿಳಿದಿದ್ದ 42 ಕ್ಷೇತ್ರಗಳ ಪೈಕಿ ಕೇವಲ ಎರಡು ಕಡೆ ಮಾತ್ರ ಜಯಗಳಿಸಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿದ್ದ ಎಲ್ಲಾ ಒಂಭತ್ತು ಕ್ಷೇತ್ರಗಳನ್ನೂ ಗೆದ್ದುಕೊಂಡಿರುವ ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಈಗ ಸಾಕಷ್ಟು ಪ್ರಬಲವಾಗಿ ಬೆಳೆದಿದ್ದು, ಅವರ ಪುತ್ರ, ಸಂಸದ ಚಿರಾಗ್ ಪಾಸ್ವಾನ್ ಮಹತ್ವಾಕಾಂಕ್ಷಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ ಜೆಡಿಯು ಪಕ್ಷವನ್ನು ಪ್ರತಿಸ್ಪರ್ಧಿಯಾಗಿ ಪರಿಗಣಿಸಿರುವ ಅವರು ನಿತೀಶ್ ಕುಮಾರ್ ಅವರನ್ನು ಕಟ್ಟಿಹಾಕಲು, ಮೈತ್ರಿಯಲ್ಲಿ ಹೆಚ್ಚು ಸ್ಥಾನಗಳಿಗೆ ಈಗಾಗಲೇ ಪರೋಕ್ಷ ಬೇಡಿಕೆ ಇಟ್ಟಿದ್ದಾರೆ. ಅಷ್ಟೇ ಅಲ್ಲ; ಪಕ್ಷ ಈ ಬಾರಿ ಎಲ್ಲಾ 243 ಕ್ಷೇತ್ರಗಳಲ್ಲೂ ಸ್ಪರ್ಧಿಸಲು ಸಿದ್ಧವಿದೆ ಎಂದಿರುವ ಅವರು, ಕಣಕ್ಕಿಳಿಯಲು ಸಜ್ಜಾಗಿ ಎಂದು ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ. ಆ ಮೂಲಕ ಬಿಜೆಪಿಯ ಮೇಲೆ ಪರೋಕ್ಷ ಒತ್ತಡ ಹೇರುವ ತಂತ್ರ ಚಿರಾಗ್ ಪಾಸ್ವಾನ್ ಅವರದ್ದು.
ವಾಸ್ತವವಾಗಿ 94 ಸ್ಥಾನಗಳಿಗೆ ಮೈತ್ರಿ ಪಕ್ಷಗಳ ಮುಂದೆ ಬೇಡಿಕೆ ಇಟ್ಟಿರುವ ಚಿರಾಗ್ ಪಾಸ್ವಾನ್, ಸ್ಥಾನ ಹೊಂದಾಣಿಕೆ ವಿಷಯದಲ್ಲಿ ಬಿಗಿ ಪಟ್ಟು ಹಿಡಿದಿದ್ದಾರೆ. ಜೊತೆಗೆ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮಗೆ ನಿರೀಕ್ಷಿತ ಸ್ಥಾನಗಳನ್ನು ನೀಡದೇ ಹೋದಲ್ಲಿ ಮೈತ್ರಿ ಬದಲಿಸುವ ಸೂಚನೆಯನ್ನೂ ನೀಡಿದ್ದಾರೆ! ಇದು ನಿಜಕ್ಕೂ ಬಿಜೆಪಿಗೆ ಸ್ಥಾನ ಹೊಂದಾಣಿಕೆ ಅಂತಿಮಗೊಳಿಸುವ ನಿಟ್ಟಿನಲ್ಲಿ ದೊಡ್ಡ ಅಡ್ಡಿಯಾಗಿದ್ದು ಹೈಕಮಾಂಡಿಗೆ ತಲೆನೋವು ತಂದಿದೆ.

ಅಧಿಕಾರರೂಢ ಎನ್ ಡಿಎ ಮೈತ್ರಿಕೂಟದಲ್ಲಿ ನಿಗದಿತ ಅಕ್ಟೋಬರ್-ನವೆಂಬರ್ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಪರಸ್ಪರ ಸ್ಥಾನ ಹಂಚಿಕೆಯ ತೆರೆಮರೆಯ ಹಗ್ಗಜಗ್ಗಾಟ ಮುಂದುವರಿದಿದ್ದರೆ, ಪ್ರತಿಪಕ್ಷ ಮೈತ್ರಿಕೂಟವಾದ ಮಹಾಘಟಬಂಧನದಲ್ಲಿ ಮಾತ್ರ ಬಿರುಸಿನ ಚುನಾವಣಾ ತಯಾರಿಯ ಬದಲಾಗಿ, ಚುನಾವಣೆಯನ್ನು ಮುಂದೂಡಿ ಎಂಬ ಒಕ್ಕೊರಲ ದನಿ ಗಟ್ಟಿಯಾಗಿ ಕೇಳಿಬರುತ್ತಿದೆ.
ಮಹಾಘಟಬಂಧನದ ಪ್ರಮುಖ ಪಕ್ಷ ಆರ್ ಜೆಡಿಯಂತ, ಯಾವುದೇ ಕಾರಣಕ್ಕೂ ಕರೋನಾ ಸೋಂಕಿನ ನಡುವೆ ಚುನಾವಣೆ ನಡೆಸುವುದು ಬೇಡ ಎಂದು ಪಟ್ಟು ಹಿಡಿದಿದೆ. ಅದರಲ್ಲೂ ಮುಖ್ಯವಾಗಿ ಸೋಂಕಿತ ರೋಗಿಗಳು ಮತ್ತು ಇತರ ಸೋಂಕು ಅಪಾಯದವರಿಗೆ, ವಯಸ್ಕರರಿಗೆ ಅಂಚೆಮತ್ರಪತ್ರದ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂಬ ಚುನಾವಣಾ ಆಯೋಗದ ಹೇಳಿಕೆಯ ಬಳಿಕ, ಆರ್ ಜೆಡಿ ಸೇರಿದಂತೆ ಮಹಾಘಟಬಂಧನದ ಮಿತ್ರಪಕ್ಷಗಳು ಕರೋನಾ ಮುಗಿಯುವರೆಗೆ ಚುನಾವಣೆ ಮುಂದೂಡಿ ಎಂದು ಬಲವಾಗಿ ಪ್ರತಿಪಾದಿಸುತ್ತಿವೆ. ಮುಖ್ಯವಾಗಿ ಅಂಚೆ ಮತಪತ್ರಗಳನ್ನು ಆಡಳಿತ ಮೈತ್ರಿಪಕ್ಷಗಳು ದುರುಪಯೋಗಪಡಿಸಿಕೊಳ್ಳಬಹುದು ಎಂಬುದು ಪ್ರತಿಪಕ್ಷಗಳ ಆತಂಕ.
ಈ ನಡುವೆ ಮಹಾಘಟಬಂಧನದಲ್ಲಿಯೂ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರುತ್ತಿದ್ದು, ಈ ಬಾರಿ ತೇಜಸ್ವಿ ಯಾದವ್ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಬೇಡ. ಬದಲಾಗಿ ಮಹಾಮೈತ್ರಿಯು ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಮತ್ತು ಹಿಂದೂಸ್ಥಾನಿ ಅವಾಮ್ ಮೋರ್ಚಾದ ನಾಯಕ ಜಿತಿನ್ ರಾಮ್ ಮಾಂಝಿ, ಮಹಾಮೈತ್ರಿಯಲ್ಲಿ ಆರ್ ಜೆಡಿ ಬಲಕುಗ್ಗಿಸುವ ದಾಳ ಉರುಳಿಸಿದ್ದಾರೆ. ಪ್ರಮುಖವಾಗಿ ತೇಜಸ್ವಿ ಯಾದವ್ ಅವರನ್ನು ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ಆರ್ ಜೆಡಿ ವರಸೆಗೆ ಮಾಂಝಿ ತೀವ್ರ ಅಸಮಾಧಾನ ಹೊಂದಿದ್ದಾರೆ. ಜೊತೆಗೆ ಹೆಚ್ಚು ಸ್ಥಾನಗಳನ್ನು ಕಿತ್ತುಕೊಳ್ಳುವ ಯತ್ನವಾಗಿ ಅವರು ಈಗಾಗಲೇ ಮಹಾಘಟಬಂಧನದ ಸಮನ್ವಯ ಸಮಿತಿ ರಚನೆಗೆ ಗಡುವು ನೀಡಿದ್ದಾರೆ.
ಈ ಸಂಬಂಧ ಕೆಲ ದಿನಗಳ ಹಿಂದೆ ದೆಹಲಿಗೆ ತೆರಳಿ ಕಾಂಗ್ರೆಸ್ ಹೈಕಮಾಂಡ್ ನೊಂದಿಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿರುವ ಅವರು, ಮಹಾಘಟಬಂಧನದಲ್ಲಿ ತಮ್ಮ ನಿರೀಕ್ಷೆಯಂತೆ ಎಲ್ಲವೂ ನಡೆಯದೇ ಇದ್ದಲ್ಲಿ, ತಮ್ಮ ಹಳೆಯ ಮಿತ್ರ ನಿತೀಶ್ ಕುಮಾರ್ ಅವರೊಂದಿಗೆ ಮತ್ತೊಮ್ಮೆ ಕೈಕುಲುಕುವ ಸೂಚನೆಯನ್ನೂ ನೀಡಿದ್ದಾರೆ. ಇದೇ ವ್ಯತಿರಿಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿಯೇ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಸದ್ಯ ಕೋವಿಡ್ ಸಂಕಷ್ಟ ಬಗೆಹರಿಯುವವರೆಗೆ ಚುನಾವಣೆಯೇ ಬೇಡ ಎಂದು ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಭೌತಿಕ ರ್ಯಾಲಿ, ಸಭೆ- ಸಮಾರಂಭಗಳಿಗೆ ಅವಕಾಶ ನೀಡದೆ ಚುನಾವಣೆ ನಡೆಸುವುದೇ ಆದರೆ, ತಮ್ಮ ಪಕ್ಷ ಚುನಾವಣೆಯಿಂದ ಹೊರಗುಳಿಯುತ್ತದೆ ಎಂದೂ ತೇಜಸ್ವಿ ಹೇಳಿದ್ದಾರೆ.
ಹೀಗೆ ಬಿಹಾರದ ಎರಡು ಮೈತ್ರಿಗಳಿಗೆ ರಾಜ್ಯದ ನಿರ್ಣಾಯಕ ದಲಿತ ಮತಬ್ಯಾಂಕಿನ ಪ್ರಾತಿನಿಧಿಕ ನಾಯಕರಿಬ್ಬರು ನುಂಗಲಾರದ ತುಪ್ಪವಾಗಿದ್ದು, ಚುನಾವಣೆ ಘೋಷಣೆಯಾಗುವ ಮುನ್ನ ಚಿರಾಗ್ ಪಾಸ್ವಾನ್ ಮತ್ತು ಜಿತಿನ್ ರಾಮ್ ಮಾಂಝಿ ಪೈಕಿ ಯಾರು, ಯಾವ ಕ್ಷಣದಲ್ಲಿ ಯಾವ ಮೈತ್ರಿಯ ಪಾಲಾಗುತ್ತಾರೆ ಎಂಬುದರ ಮೇಲೆ ಮೈತ್ರಿಪಡೆಗಳ ಬಲಾಬಲದ ಚಿತ್ರಣ ನಿರ್ಧಾರವಾಗಲಿದೆ!
ಈ ನಡುವೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ಭರವಸೆ ಹುಟ್ಟಿಸಿದ್ದ ಮತ್ತು ಕಳೆದ ಆರೇಳು ವರ್ಷಗಳಿಂದ ರಾಷ್ಟ್ರವ್ಯಾಪಿ ಸಾಕಷ್ಟು ಸಕ್ರಿಯವಾಗಿ ಮೋದಿ ಮತ್ತು ಬಿಜೆಪಿಯ ಪ್ರಬಲ ವಿರೋಧಿ ದನಿಯಾಗಿ ಹೊರಹೊಮ್ಮಿರುವ ಕನ್ಹಯ್ಯ ಕುಮಾರ್ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಕೂಡ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗಣನೀಯ ಪಾತ್ರ ವಹಿಸುವ ನಿರೀಕ್ಷೆ ಇದೆ. ಆದರೆ, ಕನ್ಹಯ್ಯ ಅವರ ಸಿಪಿಐ ಆಗಲೀ, ಪ್ರಶಾಂತ್ ಕಿಶೋರ್ ಅವರು ಒಂದು ರಾಜಕೀಯೇತರ ಅಭಿಯಾನವಾಗಿ ಆರಂಭಿಸಿರುವ ಬಿಹಾರ್ ಕಿ ಬಾತ್ ಆಗಲೀ ಬಿಹಾರದ ನೆಲದಲ್ಲಿ ಸದ್ಯ ಯಾವುದೇ ಪ್ರಭಾವಿ ನೆಲೆ ಹೊಂದಿಲ್ಲ ಎಂಬುದು ವಾಸ್ತವ.
ಸದ್ಯಕ್ಕಂತೂ ಚುನಾವಣಾ ಆಯೋಗ ನಿಗದಿತ ಅವಧಿಯಲ್ಲೇ ಚುನಾವಣೆ ನಡೆಸುವುದಾಗಿ ಹೇಳಿದ್ದು, ಆ ಕುರಿತಂತೆ ಎಲ್ಲಾ ತಯಾರಿ ಮಾಡಿಕೊಂಡಿದೆ. ಈಗಾಗಲೇ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳು ಜಿಲ್ಲಾ ಕೇಂದ್ರಗಳಿಗೆ ತಲುಪಿದ್ದು, ಚುನಾವಣಾಧಿಕಾರಿಗಳ ತರಬೇತಿ ಕೂಡ ಭರದಿಂದ ಸಾಗಿದೆ ಎಂದು ರಾಜ್ಯ ಚುನಾವಣಾಧಿಕಾರಿಗಳು ಹೇಳಿದ್ದಾರೆ.










