ಆಗಸ್ಟ್ ಮೊದಲ ವಾರದಲ್ಲಿ ಕರೋನಾ ಪಾಸಿಟಿವ್ ಕಂಡುಬಂದು ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೋನಾ ಸೋಂಕು ಮುಕ್ತರಾಗಿ ಮನೆಗೆ ಮರಳಿದ್ದಾರೆ. ಆಸ್ಪತ್ರೆಯಲ್ಲಿರುವಾಗಲೂ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯದ ಜನತೆಯೊಂದಿಗೆ ಸಂವಹನ ನಡೆಸುತ್ತಿದ್ದ ಸಿದ್ದರಾಮಯ್ಯ ಮುಂದಿನ ಒಂದು ವಾರಗಳ ಕಾಲ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ʼಕರೋನಾ ಸೋಂಕಿನಿಂದ ಗುಣಮುಖನಾಗಿ ಇಂದು ಆಸ್ಪತ್ರೆಯಿಂದ ಮನೆಗೆ ಮರಳಿದ್ದೇನೆ. ಕಳೆದ 10 ದಿನಗಳಲ್ಲಿ ಜತನದಿಂದ ನನ್ನ ಆರೈಕೆ ಮಾಡಿದ ಮಣಿಪಾಲ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ವೈದ್ಯರ ಸಲಹೆಯಂತೆ ಒಂದು ವಾರ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದೇನೆ.ʼ ಎಂದು ಹೇಳಿದ್ದಾರೆ.
ಕರೋನಾ ಸೋಂಕಿನ ಚಿಕಿತ್ಸೆಗಾಗಿ ಆಸ್ಪತ್ರೆ ಸೇರಿದ ದಿನದಿಂದ ಕಾಂಗ್ರೆಸ್ ಮತ್ತು ಬೇರೆ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು, ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಎಲ್ಲಕ್ಕಿಂತ ಮಿಗಿಲಾಗಿ ರಾಜ್ಯದ ಜನತೆ ಕಾಳಜಿಯಿಂದ ನನ್ನ ಆರೋಗ್ಯಕ್ಕಾಗಿ ಹಾರೈಸಿದ್ದಾರೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ ಎಂದು ಧನ್ಯವಾದ ತಿಳಿಸಿದ್ದಾರೆ.