ರಾಮ ಮಂದಿರ ಭೂಮಿ ಪೂಜೆ ನಡೆದಿದೆ. ದೇಶದ ಧರ್ಮನಿರಪೇಕ್ಷ ಸಂವಿಧಾನದ ಮೇಲೆ ಪ್ರಮಾಣ ಮಾಡಿ, ‘ಧರ್ಮವೂ ಸೇರಿದಂತೆ ಯಾವುದೇ ವಿಷಯದಲ್ಲಿ ಯಾವುದೇ ರೀತಿಯ ತಾರತಮ್ಯ, ಅಸಮಾನತೆಗೆ ಅವಕಾಶ ನೀಡುವುದಿಲ್ಲ. ಯಾವುದೇ ರಾಗದ್ವೇಷವಿಲ್ಲದೆ ಆಡಳಿತ ನಡೆಸುವೆ’ ಎಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಮೋದಿಯುವರು ಉಗ್ರ ಹಿಂದುತ್ವದ ಲಾಂಛನವಾಗಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.
ಕಳೆದ ಮೂವತ್ತು ವರ್ಷಗಳ ಬಿಜೆಪಿ ರಾಜಕೀಯ ಅಜೆಂಡವಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸಿಗೆ ಬುಧವಾರ ಅಡಿಗಲ್ಲು ಹಾಕಲಾಗಿದೆ. ಸುದೀರ್ಘ ಕಾನೂನು ಹೋರಾಟ, ರಾಜಕೀಯ ಆಂದೋಲನಗಳು ಒಂದು ರೀತಿಯಲ್ಲಿ ಈ ಮೂಲಕ ಒಂದು ಹಂತಕ್ಕೆ ತಲುಪಿವೆ. ಹಿಂದೂಗಳ ಭಾವನಾತ್ಮಕ ನಂಟಿನ ಹಿನ್ನೆಲೆಯಲ್ಲಿ ಈ ಘಟನೆ ದೇಶದ ಉದ್ದಗಲಕ್ಕೆ ನಂಬಿಕೆಯುಳ್ಳವರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಅದರಲ್ಲೂ ದಶಕಗಳ ಕಾಲ ಬಹಳ ಪ್ರಜ್ಞಾಪೂರ್ವಕವಾಗಿ ರಾಜಕೀಯ ಅಧಿಕಾರದ ಗುರಿಯೊಂದಿಗೆ ಬಿಜೆಪಿ ಮತ್ತು ಅದರ ಸಂಘಪರಿವಾರ ಕಟ್ಟಿದ ರಾಮ ಮತ್ತು ಅಯೋಧ್ಯೆಯ ಕುರಿತ ಭಾವನಾತ್ಮಕ ಅಭಿಯಾನದ ಭಾಗವಾಗಿದ್ದ ಹಿಂದುತ್ವವಾದಿ ಸಮೂಹದ ಪಾಲಿಗೆ ಕನಸು ನನಸಾದ ಘಳಿಗೆ. ಹಾಗಾಗಿ ಅವರುಗಳ ನಡುವೆ ಒಂದು ರೀತಿಯ ಯುದ್ಧ ಗೆದ್ದ ವಿಜಯೋತ್ಸಾಹ, ರಣಕೇಕೆ, ಉನ್ಮಾದಗಳೆಲ್ಲವೂ ಸಹಜವೇ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ದೇಶದ ಪ್ರಜಾಸತ್ತೆಯ ಆಶಯಕ್ಕೆ, ಸಂವಿಧಾನದ ಸ್ಫೂರ್ತಿಗೆ ಮತ್ತು ಸಮಾಜದ ಎಲ್ಲರ ಭಾವನೆಗೆ ಪೂರಕವಾಗಿ ಕೆಲಸ ಮಾಡಬೇಕಾದ ಮಾಧ್ಯಮಗಳು ಯಾಕೆ ಈ ಘಟನೆಯನ್ನು ಇಷ್ಟು ವೈಭವೀಕರಿಸಿ, ಸ್ವತಃ ತಾವೇ ಕರಸೇವಕರಂತೆ ವರ್ತಿಸುತ್ತಿವೆ? ಯಾಕೆ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ಎನ್ನುವುದು ಭಾರತವನ್ನು ಅದರ ಎಲ್ಲಾ ಬಡತನ, ಹಸಿವು, ನಿರುದ್ಯೋಗ, ಭ್ರಷ್ಟಾಚಾರ, ಅನ್ಯಾಯ- ಅಕ್ರಮ, ಮತ್ತು ಸದ್ಯದ ಮಾರಣಾಂತಿಕ ಕರೋನಾ ಪಿಡುಗು ಸೇರಿದಂತೆ ಎಲ್ಲಾ ನೋವು, ಸಂಕಟದಿಂದ ಪಾರುಮಾಡಿಬಿಟ್ಟಿದೆ. ದೇಶದಲ್ಲಿ ಇನ್ನೆಂದೂ ಯಾವ ಬಡವನ ಹೊಟ್ಟೆಯೂ ಹಸಿದಿರುವುದಿಲ್ಲ, ಯಾವ ಅಬಲೆಯ ಕಣ್ಣೀರೂ ಜಾರುವುದಿಲ್ಲ, ಯಾವ ಮಗುವಿನ ಅಕ್ಷರದ ಕನಸೂ ಕರಗುವುದಿಲ್ಲ, ಯಾವ ಜೀವವೂ ಅನ್ಯಾಯವಾಗಿ ಸಕಾಲಿಕ ಚಿಕಿತ್ಸೆ ಸಿಗದೆ, ವೆಂಟಿಲೇಟರು ಸಿಗದೆ ಕಳೆದುಹೋಗುವುದಿಲ್ಲ ಎಂಬಂತೆ, ಈಗಿದೀಂಗಲೇ ‘ರಾಮರಾಜ್ಯ’ ನಿರ್ಮಾಣವಾಗಿಬಿಟ್ಟಿತು ಎಂದು ಬೊಬ್ಬೆ ಹೊಡೆಯುತ್ತಿವೆ?
ಇದು ನಿಜಕ್ಕೂ ದಿಗಿಲು ಹುಟ್ಟಿಸುವ ಪ್ರಶ್ನೆಗಳು. ಅಯೋಧ್ಯೆಯ ನೆಲದಲ್ಲಿ ಶತಮಾನಗಳ ಹಿಂದೆ ಏನು ನಡೆದಿತ್ತು. ಆ ಬಳಿಕ ಯಾರು ಯಾರೆಲ್ಲಾ ಅಲ್ಲಿ ಅಧಿಕಾರ ಸ್ಥಾಪಿಸಿದರು. ಬೌದ್ಧ ಧರ್ಮದ ಕುರುಹುಗಳ ಮೇಲೆ ಯಾವೆಲ್ಲಾ ಧರ್ಮಗಳ ಪಾರುಪತ್ಯ ನಡೆಯಿತು. ಈಗ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅದರ ಹೆಸರಲ್ಲಿ ನಡೆದ ಕೋಮು ದಳ್ಳುರಿ, ಹಿಂಸೆ, ರಕ್ತಪಾತ, ಮಂದಿರ-ಮಸೀದಿಗಳ ಧ್ವಂಸ,.. ಇಂತಹ ಹಾವು ಏಣಿ ಆಟಗಳ ಹೊರತಾಗಿಯೂ, ನೋಡುವುದಾದರೆ; ಭೂಮಿ ಪೂಜೆ ಒಂದು ಧಾರ್ಮಿಕ ಘಟನೆಯಾಗಿ ಮಹತ್ವದ್ದೇ. ಅದರಲ್ಲಿ ಆಯಾ ಧಾರ್ಮಿಕ ಮುಖಂಡರು, ಧಾರ್ಮಿಕ ಹಕ್ಕಿಗಾಗಿ ಹೋರಾಡಿದವರು ಮುಂದೆ ನಿಂತು ನೆರವೇರಿಸುವುದು ಕೂಡ ಸಹಜವೇ. ಎಲ್ಲರ ಮನದಲ್ಲಿರಬೇಕಾದ ರಾಮನನ್ನು ರಥಯಾತ್ರೆಗೆ ತಂದು ರಾಜಕೀಯ ಕನಸಿಗೆ ಚಕ್ರವಾಗಿಸಿದವರೂ ಅದರಲ್ಲಿ ಭಾಗಿಯಾದರೆ ಅದೂ ನಿರೀಕ್ಷಿತವೇ.
ಆದರೆ, ಮಾಧ್ಯಮಗಳು ರಾಮಜನ್ಮಭೂಮಿ ಮತ್ತು ಅಯೋಧ್ಯಾ ವಿಷಯವನ್ನು ವಸ್ತುನಿಷ್ಠವಾಗಿ ನೋಡುವ ಬದಲು, ಒಂದು ಧಾರ್ಮಿಕ ಘಟನೆಯಾಗಿ ವರದಿ ಮಾಡುವ ಬದಲು, ಸ್ವತಃ ಉಗ್ರ ರಾಮಭಕ್ತರನ್ನೂ ಮೀರಿಸುವ ಮಟ್ಟಿಗೆ ಉದ್ಘೋಷಕ್ಕೆ, ಹರ್ಷೋದ್ಗಾರಕ್ಕೆ, ರಣಕೇಕೆಗೆ ಇಳಿದುಬಿಟ್ಟವು? ಐದು ಶತಮಾನದ ಕನಸು ಇಂದು ನನಸಾಗುತ್ತಿದೆ. ರಾಮರಾಜ್ಯಕ್ಕೆ ಇಂದು ಚಾಲನೆ, ಸುವರ್ಣಯುಗ ಆರಂಭ, ರಾಮರಾಜ್ಯದ ಕನಸು ನನಸು, .. ಮುಂತಾದ ತರಹೇವಾರಿ ಪದಪುಂಜಗಳನ್ನು ಬಳಸಿ, ರಾಮಮಂದಿರ ನಿರ್ಮಾಣವೆಂದರೆ; ದೇಶದ ಸುಭಿಕ್ಷೆಯ, ಶ್ರೀಮಂತಿಕೆಯ, ಸುಖ-ಸಂಪತ್ತಿನ ಪರ್ವದ ಆರಂಭವೆಂಬಂತೆ ಭಜಿಸುವುದರ ಹಿಂದೇ ಏನಾದರೂ ಕನಿಷ್ಟ ವಾಸ್ತವಿಕ ಅಂಶಗಳಿವೆಯೇ? ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿದ ಕ್ಷಣದಿಂದಲೇ ದೇಶವನ್ನು ಬಾಧಿಸುತ್ತಿರುವ ಕರೋನಾ ವೈರಸ್ ಓಡಿಹೋಗುತ್ತದೆ. ದೇಶ ಕರೋನಾ ಮುಕ್ತವಾಗಿಬಿಡುತ್ತದೆ ಎಂಬ ಉಗ್ರ ಹಿಂದುತ್ವವಾದಿ ಸಂಸದೆ ಪ್ರಗ್ಯಾ ಸಿಂಗ್ ಹೇಳಿಕೆಗೂ, ಕನ್ನಡವೂ ಸೇರಿದಂತೆ ದೇಶದ ಬಹುತೇಕ ಮಾಧ್ಯಮಗಳ ಇಂತಹ ಉನ್ಮಾದದ ವರಸೆಗಳಿಗೂ ಏನಾದರೂ ವ್ಯತ್ಯಾಸ ಕಾಣುತ್ತದೆಯೇ?

ಅದರಲ್ಲೂ ದೇಶಾದ್ಯಂತ ಕರೋನಾದಂತಹ ಭೀಕರ ಸಾಂಕ್ರಾಮಿಕ ಜನಸಾಮಾನ್ಯರಿಂದ ಉನ್ನತ ನಾಯಕರವರೆಗೆ ಲಕ್ಷಾಂತರ ಮಂದಿಯನ್ನು ಬಾಧಿಸುತ್ತಿರುವಾಗ, ಬರೋಬ್ಬರಿ ನಲವತ್ತು ಸಾವಿರ ಜನರನ್ನು ಬಲಿತೆಗೆದುಕೊಂಡಿರುವಾಗ, ಮತ್ತೊಂದು ಕಡೆ ಕರೋನಾ ಪೀಡಿತರಿಗೆ ಸಕಾಲಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗದ, ಕನಿಷ್ಟ ಆಮ್ಲಜನಕ, ವೆಂಟಿಲೇಟರು ಸೌಲಭ್ಯ ಕಲ್ಪಿಸಲಾಗದ ವ್ಯವಸ್ಥೆಯ ಹೀನಾಯ ಪರಿಸ್ಥಿತಿಯಿಂದ ಸಾವಿರಾರು ಮಂದಿ ಜೀವ ಬಿಡುತ್ತಿರುವಾಗ, ಜಾಗತಿಕ ಮಟ್ಟದಲ್ಲಿ ದಿನವೊಂದಕ್ಕೆ ಅತಿ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಆತಂಕ ಸೃಷ್ಟಿಯಾಗಿರುವಾಗ ಜನರ ಜೀವ ರಕ್ಷಣೆ ಮಾಡಬೇಕಾದ ಹೊಣೆಗಾರಿಕೆ ಮರೆತು ಒಂದು ಸರ್ಕಾರ, ಒಬ್ಬ ಪ್ರಧಾನಿ ಆ ಎಲ್ಲಾ ಲೋಪಗಳನ್ನು ಮುಚ್ಚಿಕೊಳ್ಳಲು, ಜನರ ಗಮನವನ್ನು ಕಟುವಾಸ್ತವ ಪರಿಸ್ಥಿತಿಯಿಂದ ಧಾರ್ಮಿಕ ಉಮೇದಿನ ಕಡೆ ಸೆಳೆಯುವ ಪ್ರಯತ್ನ ಮಾಡುತ್ತಿರುವಾಗ, ಅಂತಹದ್ದೊಂದು ಘಟನೆಯನ್ನು ಎಷ್ಟು ಆದ್ಯತೆಯಾಗಿ, ಸಮಯೋಚಿತವಾಗಿ ವರದಿ ಮಾಡಬೇಕೋ ಅಷ್ಟು ಮಾಡುವುದು ಹೊಣೆಗಾರಿಕೆ. ಆದರೆ, ಅದು ಬಿಟ್ಟು ದಿನವಿಡೀ ದೇಶದ ಉಳಿದೆಲ್ಲಾ ಸಮಸ್ಯೆ, ಸಂಕಷ್ಟಗಳನ್ನು ಮರೆತು ಸ್ವತಃ ವರದಿಗಾರರೇ ಕರಸೇವಕರಾಗಿ, ಸಂಪಾದಕರೇ ಧರ್ಮಗುರುಗಳಾಗಿ ಬದಲಾಗುವುದು ನಾಚಿಕೆಗೇಡಿನ ಸಂಗತಿ.
ಅದೂ ಒಂದು ದೇಶದ ಸೌಹಾರ್ದ ಬದುಕನ್ನು, ಸಹಬಾಳ್ವೆಯ ಜೀವನವನ್ನು ಒಂದೇ ಏಟಿಗೆ ನುಚ್ಚುನೂರು ಮಾಡಿದ ಒಂದು ಘಟನೆಯನ್ನು ಸುಪ್ರೀಂಕೋರ್ಟ್ ಸ್ವತಃ ಪಕ್ಕಾ ಅಪರಾಧ ಕೃತ್ಯ ಎಂದು ಘಂಟಾಘೋಷವಾಗಿ ಹೇಳಿದ ಮೇಲೆ, ಅದೇ ಸ್ಥಳದಲ್ಲಿ ನಿರ್ಮಾಣವಾಗುವ ಮಂದಿರಕ್ಕೆ ಅದೇ ಸುಪ್ರೀಂಕೋರ್ಟಿನ ನ್ಯಾಯ ಪಾಲನೆ ಮಾಡಬೇಕಾದ ಪ್ರಧಾನಿಯೊಬ್ಬರು ಸ್ವತಃ ಮುಂದಾಳತ್ವ ವಹಿಸಿ ಪೂಜೆ ನೆರವೇರಿಸುವುದು ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಹಲವು ಸಂದೇಶಗಳನ್ನು ನೀಡುವ ಘಟನೆ. ಆದರೆ, ನಮ್ಮ ಮಾಧ್ಯಮಗಳು ಈ ಸೂಕ್ಷ್ಮತೆಯ ಬಗ್ಗೆ ಕುರುಡಾಗಿ ಭಜನೆ ತಂಡಗಳಾಗಿ ಬದಲಾಗಿಬಿಟ್ಟಿವೆ.

ಒಂದು ಸರ್ಕಾರದ, ಒಬ್ಬ ನಾಯಕನ ಪ್ರತಿ ಹೆಜ್ಜೆಯ ಮೇಲೆ ಕಣ್ಣಿಡಬೇಕಾದ, ಎಚ್ಚರಿಕೆ ನೀಡಬೇಕಾದ, ಟೀಕೆ-ವಿಮರ್ಶೆಯ ಮೂಲಕ ಪ್ರಜಾಸತ್ತೆಯನ್ನು ಕಾಯಬೇಕಾದ ಮಾಧ್ಯಮಗಳು, ಜನ ಸಾಮಾನ್ಯರ ಕಷ್ಟ ಕೋಟಲೆಗಳಿಗೆ, ಅಹವಾಲು, ಆಗ್ರಹಗಳಿಗೆ ದನಿಯಾಗಬೇಕಾದ ಮಾಧ್ಯಮಗಳು, ಒಂದು ಪಕ್ಷದ, ಸಿದ್ಧಾಂತದ, ಒಬ್ಬ ನಾಯಕನ ಹಿಂಬಾಲಕರಾಗಿ ಬದಲಾದರೆ, ಅಂಧ ಭಕ್ತರಾಗಿ ಬದಲಾದರೆ ಏನು ಆಗಬಹುದು ಎಂಬುದಕ್ಕೆ ಆಗಸ್ಟ್ 5ರ ಈ ಬುಧವಾರ ಒಂದು ಐತಿಹಾಸಿಕ ಸಾಕ್ಷಿಯಾಗಿ ದಾಖಲಾಯಿತು. ವಾಸ್ತವವಾಗಿ ನೋಡಿದರೆ, ಈ ಮಾಧ್ಯಮಗಳ ಉಘೇಉಘೇ ಭಜನೆಯಲ್ಲಿ, ಭಾವಪರವಶ ಭಕ್ತಿಯ ಜಯಘೋಷದಲ್ಲಿ ಅಸಲೀ ಶ್ರೀರಾಮನಿಗಿಂತ ಪ್ರಧಾನಿ ಮೋದಿಯ ಮೇಲಿನ ಭಕ್ತಿಯೇ ಎದ್ದು ಕಾಣುತ್ತಿತ್ತು. ಮರ್ಯಾದಾ ಪುರುಷೋತ್ತಮ ರಾಮನಿಗಿಂತ ‘ವಿಶ್ವಗುರು’ ಎಂದು ತಾವೇ ಬಿರುದು ಕೊಟ್ಟ ಮೋದಿಯವರನ್ನು ಹಾಡಿಹೊಗಳುವುದು, ಮೆರೆಸುವುದೇ ಮಾಧ್ಯಮಗಳ ಈ ಅತಿರಂಜಿತ ವರದಿಗಾರಿಕೆಯ ಹಿಂದಿನ ಮಸಲತ್ತಾಗಿತ್ತು ಎಂಬುದನ್ನು ಅರಿಯಲು ವಿಶೇಷ ಪರಿಣತಿಯೇನೂ ಬೇಕಿಲ್ಲ. ಮಾಧ್ಯಮಗಳ ಭಾಷೆ, ನುಡಿಗಟ್ಟು, ಚಿತ್ರ, ಪ್ರೋಮೋ, ಗ್ರಾಫಿಕ್ಸ್ ,.. ಎಲ್ಲದರಲ್ಲೂ ಇದು ಎದ್ದು ಕಾಣುತ್ತಿತ್ತು.
ಅತ್ತ ಅಯೋಧ್ಯೆಯಲ್ಲಿ ಪ್ರಧಾನಿ ಮೋದಿ ಮಂದಿರ ನಿರ್ಮಾಣದ ಭೂಮಿ ಪೂಜೆ ನೆರವೇರಿಸುವ ಹೊತ್ತಿಗೆ ದೇಶದ ಉದ್ದಗಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮಗಳಲ್ಲಿ ಹರಿದಾಡಿದ ಒಂದು ಕಾಲ್ಪನಿಕ ಚಿತ್ರ ಮಾಧ್ಯಮಗಳ ಈ ಧೋರಣೆಗೆ ಕನ್ನಡಿಯಾಗಿತ್ತು. ಭವ್ಯ ರಾಮಮಂದಿರದ ಎದುರು, ಮಂದಿರದತ್ತ ಮುಖಮಾಡಿ ರಾಮನ ಕೈಹಿಡಿದು ಕರೆದುಕೊಂಡು ಹೋಗುತ್ತಿರುವ ಮೋದಿಯವರ ಚಿತ್ರ ಅದು. ಜಾಲತಾಣದಲ್ಲಿ ಹರಿದಾಡಿದ ಆ ಚಿತ್ರದಲ್ಲಿ ಮೋದಿ ಮೇರು ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರೆ, ಶ್ರೀರಾಮ ಮೋದಿಯವರ ಕೈಹಿಡಿದು ನಡೆದುಕೊಂಡು ಹೋಗುವ ಚಿಕ್ಕ ಬಾಲಕರ ರೂಪದಲ್ಲಿ ಕಾಣಿಸಿಕೊಂಡಿರುವುದೇ ರಾಮ ಜನ್ಮಭೂಮಿ ವಿಷಯ, ರಾಮಮಂದಿರ ನಿರ್ಮಾಣ, ರಾಮಮಂದಿರ ಹಿಂದಿನ ರಾಜಕೀಯ ಅಭಿಯಾನ ಮತ್ತು ಸದ್ಯಕ್ಕೆ ಭಾರತದ ಮಾಧ್ಯಮಗಳು ಕಟ್ಟುತ್ತಿರುವ ಪ್ರಧಾನಿ ಮೋದಿಯವರ ಲಾರ್ಜರ್ ದ್ಯಾನ್ ಲೈಫ್ ಇಮೇಜಿನ ಕುರಿತ ಅತ್ಯುತ್ತಮ ರೂಪಕ. ಆ ಚಿತ್ರದ ಹಿನ್ನೆಲೆಯಲ್ಲಿ ಇಂದಿನ ಮಾಧ್ಯಮಗಳ ರಾಮಮಂದಿರ ಭೂಮಿ ಪೂಜೆ ಕವರೇಜ್ ಗಮನಿಸಿದರೆ ಎಲ್ಲವೂ ಸ್ಪಷ್ಟವಾಗಲಿವೆ.
ಅಂದರೆ, ಮುದ್ರಣ ಮಾಧ್ಯಮಗಳೂ ಸೇರಿದಂತೆ ಬಹುತೇಕ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ನಡುವೆ ಸದ್ಯಕ್ಕೆ ಪೈಪೋಟಿ ಇರುವುದು ಹಿಂದುತ್ವದ ಐಕಾನ್ ಶ್ರೀರಾಮನ ಘನತೆಯ ಬಗ್ಗೆಯಾಗಲೀ, ಮರ್ಯಾದಾಪುರುಷೋತ್ತಮನ ದೈವತ್ವದ ಕುರಿತ ಬಗ್ಗೆಯಾಗಲೀ, ಅಥವಾ ಆತನ ಜನ್ಮಭೂಮಿಯ ಮಹತ್ವದ ಕುರಿತಾಗಲೀ ಅಲ್ಲ. ಬದಲಾಗಿ ಆ ಎಲ್ಲವನ್ನೂ ನೆಪವಾಗಿಟ್ಟುಕೊಂಡು ಮೋದಿಯವರ ‘ಅವತಾರ ಪುರುಷ’ ವರ್ಚಸ್ಸನ್ನು ಗಟ್ಟಿಗೊಳಿಸುವುದು ಮತ್ತು ಆ ಮೂಲಕ ಭಾರತೀಯ ಜನತಾ ಪಕ್ಷದ ಆಡಳಿತಕ್ಕೆ ಬಲ ನೀಡುವುದು! ಹೌದು, ಇದು ಪಕ್ಕಾ ರಾಜಕೀಯ ತಂತ್ರಗಾರಿಕೆಯ ಭಾಗ. ಹಾಗಾಗಿಯೇ ಪ್ರೀಪೇಯ್ಡ್ ಭಜನಾ ತಂಡಗಳಂತೆ ಮಾಧ್ಯಮಗಳು ಉಳಿದೆಲ್ಲಾ ಹೊಣೆಗಾರಿಕೆ, ಸಾಮಾಜಿಕ ಬದ್ಧತೆ, ಸಂವಿಧಾನಿಕ ಜವಾಬ್ದಾರಿಗಳನ್ನೆಲ್ಲಾ ಕಳಚಿಟ್ಟು ಕರಸೇವಕರ ಪಾತ್ರಧಾರಿಗಳಾಗಿವೆ.
ಹೀಗೆ ಕರಸೇವಕ ಮಾಧ್ಯಮಗಳಿಂದ ಬುಧವಾರದ ಭಜನೆಯನ್ನಲ್ಲದೇ ಬೇರೇನನ್ನು ನಿರೀಕ್ಷಿಸಲು ಸಾಧ್ಯ?
ಈ ನಡುವೆ, ಬುಧವಾರ ಒಂದೇ ದಿನ ಬರೋಬ್ಬರಿ 51 ಸಾವಿರಕ್ಕೂ ಅಧಿಕ ಹೊಸ ಪ್ರಕರಣಗಳೊಂದಿಗೆ ದೇಶ ಹೊಸ ಕರೋನಾ ಪ್ರಕರಣಗಳ ಪಟ್ಟಿಯಲ್ಲಿ ವಿಶ್ವನಾಯಕನಾಗಿದೆ. ಒಟ್ಟಾರೆ ಪ್ರಕರಣಗಳು 20 ಲಕ್ಷಕ್ಕೆ ಸಮೀಪಿಸಿವೆ. ಸಾವಿನ ಪ್ರಮಾಣ 40 ಸಾವಿರದ ಗಡಿ ದಾಟಿದೆ. ದಿನ ಸಾವಿನ ಪ್ರಕರಣಗಳ ವಿಷಯದಲ್ಲಿಯೂ ದಾಖಲೆ ನಿರ್ಮಾಣವಾಗಿದ್ದು, ಬರೋಬ್ಬರಿ 900ಕ್ಕೂ ಅಧಿಕ ಸಾವು ಒಂದೇ ದಿನ ಸಂಭವಿಸಿವೆ. ‘ರಾಮ ಮಂದಿರ ಭೂಮಿ ಪೂಜೆಯಾಗುತ್ತಲೇ ಕರೋನಾ ಓಡಿ ಹೋಗುತ್ತದೆ’ ಎಂದಿದ್ದ ಸಂಸದೆ ಮತ್ತು ‘ರಾಮರಾಜ್ಯ ನಿರ್ಮಾಣವಾಯ್ತು’ ಎನುತ್ತಿರುವ ಮಾಧ್ಯಮಗಳು ಮಾತ್ರ, ಈ ಬಗ್ಗೆ ಕಣ್ಣುಮುಚ್ಚಿವೆ. ಮುಚ್ಚಿದ ಕಣ್ಣಿನಲ್ಲೇ ‘ವಿಶ್ವಗುರು’ವಿನ ಭಜನೆ ಸಾಗಿದೆ!