ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಿಲುಕಿದ್ದ ಸಾವಿರಾರು ಕಾರ್ಮಿಕರಿಗೆ ಡಬಲ್ ಚಾರ್ಜ್ ಮಾಡಿದ್ದ ಸಾರಿಗೆ ಇಲಾಖೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಆ ಬಳಿಕ ಸಿಂಗಲ್ ಚಾರ್ಜ್ ಎಂದು ಮಾರ್ಪಾಡು ಮಾಡಲಾಗಿತ್ತು. ಆದರೆ ಆಗ ಕಾಂಗ್ರೆಸ್ ಅಧ್ಯಕ್ಷ ಅಖಾಡಕ್ಕೆ ಇಳಿದು ಸಾವಿರಾರು ಕಾರ್ಮಿಕರು ಸಂಕಷ್ಟದಲ್ಲಿರುವಾಗ ಹಣ ವಸೂಲಿ ಮಾಡುತ್ತಿರುವುದೇ ತಪ್ಪು. ತಿನ್ನುವ ಅನ್ನಕ್ಕೆ ಗತಿಯಿಲ್ಲದೆ ಪರದಾಡುತ್ತಿರುವ ಜನರ ಬಳಿ ಹಣ ಪಡೆಯಬಾರದು. ಒಂದು ವೇಳೆ ಹಣ ಕೊಡಲೇ ಬೇಕು ಎನ್ನುವುದಾದರೆ, ಭಿಕ್ಷೆ ಬೇಡಿಯಾದರು ಕಾಂಗ್ರೆಸ್ ಪಕ್ಷ ನಿಮಗೆ ಹಣ ಸಂದಾಯ ಮಾಡಲಿದೆ ಎಂದು ಗುಟುರು ಹಾಕಿದ್ದರು. ಬಳಿಕ 1 ಕೋಟಿ ರೂಪಾಯಿ ಮೌಲ್ಯದ ಚೆಕ್ ಹಸ್ತಾಂತರಕ್ಕೂ ಮುಂದಾಗಿದ್ದರು. ಈ ವೇಳೆ ರಾಜಕಾರಣದಲ್ಲಿ ಕಾಂಗ್ರೆಸ್ ಪರ ಅಲೆ ಏಳಲಿದೆ ಎನ್ನುವ ಮುನ್ಸೂಚನೆ ಅರಿತ ರಾಜ್ಯ ಸರ್ಕಾರ ಕೂಡಲೇ ಉಚಿತ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟಿತ್ತು. ಆದರೆ ಮಹಾರಾಷ್ಟ್ರದಲ್ಲಿ DK ಶಿವಕುಮಾರ್ ಸಮುದಾಯಕ್ಕೇ ಸೇರಿದ ಒಕ್ಕಲಿಗರ ಸಂಘ ಬಡ ಕೂಲಿ ಕಾರ್ಮಿಕರ ಸುಲಿಗೆ ಮಾಡಲು ನಿಂತಿದೆ.
ರಾಜ್ಯದ ಸಾವಿರಾರು ಜನರು ಮಹಾರಾಷ್ಟ್ರದ ಗಲ್ಲಿಗಲ್ಲಿಗಳಲ್ಲಿ ಕೆಲಸ ಮಾಡುತ್ತಾರೆ. ಯಾವುದೇ ನಗರಗಳಲ್ಲಿ ಹೋಗಿ ಕೇಳಿದರೂ ಕನ್ನಡ ಮಾತನಾಡುವ ಜನರು ಸಿಗುತ್ತಾರೆ. ಅಷ್ಟೊಂದು ಜನರನ್ನು ಸೂಜಿಗಲ್ಲಿನಂತೆ ಸೆಳೆದಿದೆ ಮಾಯಾನಗರಿ ಮುಂಬೈ. ಇದೀಗ ಕರೋನಾ ಸೋಂಕಿನಿಂದ ಬಳಲಿ ಬೆಂಡಾಗಿರುವ ಮುಂಬೈ ಮಹಾನಗರಿಯಲ್ಲಿ ಸಿಲುಕಿ ಕನ್ನಡಿಗರು ಪರದಾಡುತ್ತಿದ್ದಾರೆ. ಅತ್ತ ದಿನಗೂಲಿ ನೌಕರಿಯೂ ಇಲ್ಲ, ಕಳೆದ ಎರಡು ತಿಂಗಳಿನಿಂದ ಯಾವುದೇ ವೇತನವೂ ಇಲ್ಲದೆ ಸಾವಿರಾರು ಜನರು ಅನ್ನಹಾರಕ್ಕಾಗಿ ಅಲೆದಾಡುತ್ತಿದ್ದಾರೆ. ಮನೆಯಿಂದ ಹೊರಗಡೆ ಬಂದರೆ ಕರೋನಾ ದಾಳಿಗೆ ತುತ್ತಾಗುವ ಭಯ ಜೊತೆಗೆ ಊರಿಗೂ ಹೋಗಲಾರದೆ ಪರಿತಪಿಸುತ್ತಿದ್ದಾರೆ. ಮುಂಬೈ ನಗರದಲ್ಲಿ ದೋಸೆ ಗಾಡಿ, ಬೀಡ ಸ್ಟಾಲ್, ಹೋಟೆಲ್, ಕ್ಯಾಂಟೀನ್ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕರ್ನಾಟದಲ್ಲಿ ವಲಸೆ ಕಾರ್ಮಿಕರಿಗೆ ಸಿಗುತ್ತಿರುವ ಅನ್ನಾಹಾರ ವ್ಯವಸ್ಥೆಯೂ ಮಹಾರಾಷ್ಟ್ರದಲ್ಲಿ ಸಿಗುತ್ತಿಲ್ಲ. ಕೂಡಿಟ್ಟಿದ್ದ ಚಿಲ್ಲರೆ ಕಾಸು 2 ತಿಂಗಳ ಜೀವನಕ್ಕೆ ಸಾಕಾಗಿಲ್ಲ, ಪರಿಸ್ಥಿತಿ ಈಗಿರುವಾಗ ಬಡವರ ಸುಲಿಗೆ ನಿಂತಿದೆ ಒಕ್ಕಲಿಗರ ಸಂಘ.
‘ತಿನ್ನಲು ಅನ್ನವಿಲ್ಲದೆ ಪರದಾಡುತ್ತಿರುವ ನಾವು ಕರೋನಾ ಸೋಂಕಿನಿಂದ ಸಾಯುವ ಬದಲು ಹಸಿವಿನಿಂದಲೇ ಸಾಯುತ್ತೀವಿ’ ಎಂದು ಈಗಾಗಲೇ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ಕಣ್ಣೀರು ಹಾಕಿದ್ದಾರೆ. ಚುನಾವಣಾ ಸಮಯದಲ್ಲಿ ನಮ್ಮನ್ನು ಕರೆದುಕೊಂಡು ವೋಟು ಹಾಕಿಸಿಕೊಳ್ಳುವ ಜನಪ್ರತಿನಿಧಿಗಳೇ ನಮ್ಮ ಗೋಳು ನಿಮ್ಮನ್ನು ಸುಮ್ಮನೆ ಬಿಡುತ್ತದೆಯೇ ಎಂದು ಆಕ್ರೋಶದ ಮಾತುಗಳನ್ನಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಮುಂಬೈ ಕನ್ನಡಿಗರನ್ನು ಕರೆಸಿಕೊಳ್ಳುವ ಬಗ್ಗೆ ಒಂದೇ ಒಂದು ಮಾತನ್ನೂ ಆಡುತ್ತಿಲ್ಲ. ಇದಕ್ಕೆ ಕಾರಣ ಮಹಾರಾಷ್ಟ್ರದ ಮುಂಬೈ ನಗರದ ವಾಸಿಗಳಾಗಿರುವ ಬಹುತೇಕ ಹಳೇ ಮೈಸೂರು ಭಾಗದ ಜನ. ಹಳೇ ಮೈಸೂರು ಭಾಗದಲ್ಲಿ ಕಮಲ ಪಾಳಯಕ್ಕೆ ಹೇಳಿಕೊಳ್ಳುವಂತಹ ಶಕ್ತಿ ಸಾಮರ್ಥ್ಯವಿಲ್ಲ. ಇಲ್ಲೀವರೆಗೂ ಒಕ್ಕಲಿಗರು ಬಿಜೆಪಿ ಕೈಹಿಡಿದಿರುವ ಉದಾಹರಣೆಗಳಿಲ್ಲ. ಕರೆದುಕೊಂದು ಬಂದು ಅವರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕಾಗುತ್ತದೆ ಎನ್ನುವ ಕಾರಣ ಸರ್ಕಾರ ನಮ್ಮನ್ನು ಕರೆದುಕೊಂಡು ಹೋಗ್ತಿಲ್ಲ ಎಂದು ಮುಂಬೈ ಕನ್ನಡಿಗರೇ ಕಿಡಿಕಾರಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಮಹಾರಾಷ್ಟ್ರ ಒಕ್ಕಲಿಗರ ಸಂಘ ದುಬಾರಿ ದರ ನಿಗದಿ ಮಾಡಿಕೊಂಡು ಕರೆದುಕೊಂಡು ಬರುವ ಕೆಲಸಕ್ಕೆ ಕೈ ಹಾಕಿದೆ.
ಕರ್ನಾಟಕದ ಮಂಡ್ಯ ಹಾಸನ ಭಾಗದಿಂದ ಒಂದು ಕಡೆಯ ಬಸ್ ದರ ಸಾಮಾನ್ಯ ಬಸ್ಗಳಲ್ಲಿ 1,600 ರೂಪಾಯಿಗಳು ಮಾತ್ರ. ಎರಡೂ ಕಡೆಯ ಚಾರ್ಜ್ ಮಾಡಿದರೂ 2600 ರೂಪಾಯಿಗಳು ಆಗುತ್ತದೆ. ಅದರ ಜೊತೆ 400 ರೂಪಾಯಿ ಕಮಿಷನ್ ಸೇರಿಸಿದರೂ 3000 ಸಾವಿರ ರೂಪಾಯಿಗಳಾಗುತ್ತದೆ. ಮುಂಬೈನಲ್ಲಿ ಹಸಿವಿನಿಂದ ಸಾಯುವ ಬದಲು ಸಾಲ ಮಾಡಿಯಾದರೂ 3000 ಸಾವಿರ ಹಣ ಕೊಡುತ್ತೇವೆ ಎನ್ನುತ್ತಿದ್ದಾರೆ ಜನ. ನಾವು ಮಹಾರಾಷ್ಟ್ರ ಸಾರಿಗೆ ಸಂಸ್ಥೆ ಜೊತೆಗೆ ಮಾತನಾಡಿದ್ದೇವೆ, 5,600 ರೂಪಾಯಿ ನಿಗದಿ ಮಾಡಿದ್ದೇವೆ. ಬರುವುದಾದರೆ ಬನ್ನಿ, ಇಲ್ಲದಿದ್ದರೆ ತೆಪ್ಪಗೆ ಇಲ್ಲೆ ಇರಿ, ಒತ್ತಾಯ ಮಾಡಿಕೊಂಡು ಕರೆದುಕೊಂಡು ಹೋಗುವುದಿಲ್ಲ ಎಂದು ಗದರಿಸುತ್ತಿದ್ದಾರಂತೆ ಸಂಘದ ಸದಸ್ಯರು. ನಮ್ಮ ಕಷ್ಟವನ್ನು ಸರ್ಕಾರವೂ ಕೇಳುತ್ತಿಲ್ಲ, ನಮ್ಮದೇ ಸಮುದಾಯದ ಸಂಘ, ನಮ್ಮ ರಕ್ಷಣೆಗೆ ಬರುತ್ತಿದೆ ಎಂದು ಸತಸಪಡುವ ಸಮಯದಲ್ಲಿ ದುಬಾರಿ ದರ ನಿಗದಿ ಮಾಡಿ ಕೈಗೆಟುಕದ ದ್ರಾಕ್ಷಿ ಹುಳಿ ಎನ್ನುವಂತೆ ಮಾಡಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ ಮುಂಬೈ ಕನ್ನಡಿಗರು.
ಕರ್ನಾಟಕ ರಾಜ್ಯ ಸರ್ಕಾರ ಬೇರೆ ಬೇರೆ ರಾಜ್ಯಗಳ ಜನರನ್ನು ರೈಲು ಮೂಲಕ ಕಳುಹಿಸಿಕೊಡಲು ವ್ಯವಸ್ಥೆ ಮಾಡಿದೆ. ಅದೇ ರೀತಿ ಕೇಂದ್ರದ ಮೇಲೆ ಒತ್ತಡ ಹಾಕಿ ರೈಲನ್ನು ಬಿಡಿಸಲು ಸಾಧ್ಯವಾಗುವುದಿಲ್ಲವೇ..? ನಮ್ಮದೇ ರಾಜ್ಯದ ಸುರೇಶ್ ಅಂಗಡಿ ರಾಜ್ಯ ಖಾತೆ ರೈಲ್ವೆ ಸಚಿವರಾಗಿದ್ದಾರೆ, ಆದರೂ ನಮ್ಮ ಜನರನ್ನು ಕರೆದುಕೊಂಡು ಬರಲು ರೈಲು ಬಿಡಿಸಲಾಗದಂತೆ ಅಶಕ್ತರಾಗಿದ್ದಾರೆಯೇ..? ಎನ್ನುವ ಅನುಮಾನ ಮೂಡಿಸುತ್ತಿದೆ. ಒಂದು ವೇಳೆ ರಾಜಕೀಯ ಕಾರಣಕ್ಕೆ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ಹಳೇ ಮೈಸೂರು ಭಾಗದ ಜನರನ್ನು ಕರೆದುಕೊಂಡು ಬರಲು ಮನಸ್ಸು ಮಾಡದಿದ್ದಾರೆ, ಒಕ್ಕಲಿಗ ನಾಯಕ ಎಂದು ಬಿರುದು ತೆಗೆದುಕೊಳ್ಳಲು ಪೈಪೋಟಿ ನಡೆಸುವ ಈಗಿನ ಸಚಿವರು, ಮಾಜಿ ಸಚಿವರು, ಮಾಜಿ ಮುಖ್ಯಮಂತ್ರಿ, ಮಾಜಿ ಪ್ರಧಾನಿಗಳು ಈ ಬಗ್ಗೆ ಯಾಕೆ ತಮ್ಮದೇ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಬರಬಾರದು..? ಒಂದು ವೇಳೆ ಮಹಾರಾಷ್ಟ್ರ ಒಕ್ಕಲಿಗ ಸಂಘದಲ್ಲಿ ಹಣಕಾಸಿನ ಕೊರತೆ ಇದ್ದರೆ, ಇಲ್ಲಿನ ಕೋಟ್ಯಾಧೀಶ ನಾಯಕರು ಯಾಕೆ ಹಣಕಾಸು ತುಂಬಿಕೊಟ್ಟು ಉಚಿತವಾಗಿ ಕರೆದುಕೊಂಡು ಬರುವ ಕೆಲಸ ಮಾಡಬಾರದು. ಇನ್ನದಾರೂ ಕರ್ನಾಟಕ ರಾಜ್ಯ ಸರ್ಕಾರ ಅಥವಾ ಸಮುದಾಯದ ನಾಯಕರು ಎಚ್ಚೆತ್ತುಕೊಂಡು ನಮ್ಮದೇ ಕನ್ನಡಿಗರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗುತ್ತಾ ಎನ್ನುವ ಆಶಾಭಾವನೆ ಮುಂಬೈ ಕನ್ನಡಿಗರದ್ದಾಗಿದೆ.