ಪ್ಯಾಕೇಜ್ ಹೊರತಾಗಿ ಹೆಚ್ಚಿನ ಸುಧಾರಣಾ ಕ್ರಮಗಳನ್ನು ವ್ಯಾಪಕವಾಗಿ ಮತ್ತು ತುರ್ತಾಗಿ ಜಾರಿಗೆ ತರದೇ ಹೋದರೆ, ಭಾರತದ ಆರ್ಥಿಕ ಸ್ಥಿತಿಗತಿ ಭಯಾನಕವಾಗಲಿದೆ ಎಂದು ಭಾರತಿಯ ರಿಸರ್ವ್ ಬ್ಯಾಂಕ್ ಮಾಜಿ ಗವರ್ನರ್ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಡಾ ರಘುರಾಂ ರಾಜನ್ ಹೇಳಿದ್ದಾರೆ.
ಬರಲಿರುವ ದಿನಗಳಲ್ಲಿ ನಾವು ಎದುರಿಸಬೇಕಾದ ಭಯಾನಕ ಸ್ಥಿತಿಯ ಬಗ್ಗೆ ಆತಂಕವಾಗುತ್ತದೆ. ಸರ್ಕಾರ ದೇಶವನ್ನು ಅಂತಹ ಅನಾಹುತದಿಂದ ಪಾರು ಮಾಡಲು ಕೂಡಲೇ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಆದರೆ, ಈ ವಿಪತ್ತಿನಿಂದ ದೇಶವನ್ನು ಪಾರು ಮಾಡಲು ಕೇವಲ ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ಸಾಧ್ಯವಿಲ್ಲ. ಹಾಗಾಗಿ ಪ್ರತಿಪಕ್ಷ ಮತ್ತು ಸ್ವಪಕ್ಷೀಯ ಪರಿಣಿತರು, ಅನುಭವಿಗಳೊಂದಿಗಳೊಂದಿಗೆ ಸಮಾಲೋಚಿಸಿ, ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ದೇಶದ ಹಿತ ಕಾಯಲು ಪಕ್ಷ ಮತ್ತು ಸಿದ್ಧಾಂತಗಳನ್ನು ಮೀರಿ ಈ ಸಂದರ್ಭದಲ್ಲಿ ಎಲ್ಲರ ಜ್ಞಾನ ಮತ್ತು ಅನುಭವ ಬಳಸಿಕೊಳ್ಳಬೇಕು ಎಂದು ರಾಜನ್ ಸಲಹೆ ನೀಡಿದ್ದಾರೆ.
ಸದ್ಯಕ್ಕೆ ದೇಶದ ಮುಂದಿರುವ ಅತಿ ದೊಡ್ಡ ಸವಾಲು ಕೇವಲ ಕರೋನಾ ಸೋಂಕು ಮತ್ತು ಅದರ ನಿಯಂತ್ರಣಕ್ಕೆ ಹೇರಲಾಗಿರುವ ಲಾಕ್ ಡೌನ್ ತಂದೊಡ್ಡಿರುವ ಆರ್ಥಿಕ ಬಿಕ್ಕಟ್ಟು ಮಾತ್ರವಲ್ಲ; ಅದನ್ನು ಮೀರಿ ಮುಂದಿನ ಮೂರ್ನಾಲ್ಕು ವರ್ಷಗಳ ವರೆಗೆ ನಿರಂತರ ಕುಸಿಯಲಿರುವ ದೇಶದ ಆರ್ಥಿಕತೆಯನ್ನು ಮೇಲೆತ್ತುವುದು. ಆದರೆ, ಸರ್ಕಾರ ಈ ಅಪಾಯವನ್ನು ಗ್ರಹಿಸುವಲ್ಲಿ, ಅಂದಾಜಿಸುವಲ್ಲಿಯೇ ಎಡುವುತ್ತಿದೆ ಮತ್ತು ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿಲ್ಲ. ಹಾಗಾಗಿ ಕುಸಿತ ತಡೆಯುವ ನಿಟ್ಟಿನಲ್ಲಿ ಅದರ ಪ್ರಯತ್ನಗಳು ಕೂಡ ಪ್ರಾಮಾಣಿಕವಾಗಿಲ್ಲ. ಆದರೆ ಆರ್ಥಿಕತೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಿಜವಾಗಿಯೂ ಕಾಳಜಿ ಇದ್ದರೆ, ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ನೀಡುವವರ ಕೊರತೆ ದೇಶದಲ್ಲಿಲ್ಲ ಎಂದಿದ್ದಾರೆ. ಜೊತೆಗೆ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ, ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಮತ್ತಿತರರ ಹೆಸರುಗಳನ್ನು ಕೂಡ ರಾಜನ್ ಸೂಚಿಸಿದ್ದಾರೆ.
Also Read: ಆರ್ಥಿಕ ಸಂಕಷ್ಟದಿಂದ ಹೊರಬರಲು ಸರಕಾರಕ್ಕೆ ರಘುರಾಂ ರಾಜನ್ ನೀಡಿದ್ದಾರೆ ಸಲಹೆಗಳು
ಕರೋನಾ ಮಹಾಮಾರಿಯ ವಿರುದ್ಧದ ಹೋರಾಟ ಮತ್ತು ಲಾಕ್ ಡೌನ್ ಪರಿಣಾಮಗಳಿಂದ ಹೊರಬರುವಷ್ಟೇ ಸವಾಲಿನದ್ದು, ಆರ್ಥಿಕ ಕುಸಿತವನ್ನು ತಡೆದು ಸುಧಾರಣೆಯ ಹಳಿಗೆ ತರುವುದು. ಆದರೆ, ಆ ದಿಸೆಯಲ್ಲಿ ನಿಧಾನಗತಿಯ, ಉದಾಸೀನದ ಕ್ರಮಗಳು ಪ್ರಯೋಜನಕ್ಕೆ ಬರಲಾರವು. ತತಕ್ಷಣದಿಂದಲೇ ಕ್ಷಿಪ್ರಗತಿಯ ಕ್ರಮಗಳು ಜಾರಿಯಾಗಬೇಕಿದೆ. ಮುಖ್ಯವಾಗಿ ಮೂಲಸೌಕರ್ಯ ಅಭಿವೃದ್ಧಿ ವಲಯದ ಬಿರುಸಿನ ಸುಧಾರಣೆಗಳೊಂದಿಗೆ ನಿರ್ಮಾಣ ವಲಯದ ಸುಧಾರಣೆಗಳನ್ನೂ ಜೊತೆಜೊತೆಯಾಗಿ ತೆಗೆದುಕೊಂಡಹೋಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ದಿ ವೈರ್’ ಸುದ್ದಿತಾಣಕ್ಕಾಗಿ ಹಿರಿಯ ಪತ್ರಕರ್ತ ಕರಣ್ ಥಾಪರ್ ಅವರಿಗೆ ನೀಡಿದ ಸಂದರ್ಶನದಲ್ಲಿ, ಭಾರತ ಸರ್ಕಾರದ ಮಾಜಿ ಆರ್ಥಿಕ ಸಲಹೆಗಾರರೂ ಆಗಿದ್ದ ಡಾ ರಘುರಾಂ ರಾಜನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಕರೋನಾ ಲಾಕ್ ಡೌನ್ ಬಳಿಕದ ಆರ್ಥಿಕತೆ ಸುಧಾರಣೆಯ ಕ್ರಮವಾಗಿ ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ರೂ. ಮೊತ್ತದ ಸ್ವಾಭಿಮಾನಿ ಭಾರತ ಪ್ಯಾಕೇಜ್ ಕುರಿತ ಕೇಳಲಾದ ಪ್ರಶ್ನೆಗೆ, ಭಾರತದ ಸದ್ಯದ ಸ್ಥಿತಿಯಲ್ಲಿ ಇಂಥ ಲಕ್ಷಾಂತರ ಕೋಟಿ ಪ್ಯಾಕೇಜುಗಳು ಕೂಡ ಸಾಲದು ಎಂದಿದ್ದಾರೆ.
ಹಾಗೆಯೇ, ಒಂದು ವೇಳೆ ಸರ್ಕಾರ ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನು ಕೈಗೊಳ್ಳದೇ ಹೋದರೆ, ಮುಂದಿನ ಒಂದು ವರ್ಷದ ಹೊತ್ತಿಗೆ ದೇಶದ ಅರ್ಥವ್ಯವಸ್ಥೆ ಯಾವ ಮಟ್ಟಕ್ಕೆ ಹೋಗಬಹುದು ಎಂಬ ಪ್ರಶ್ನೆಗೆ, ತೀರಾ ಕುಸಿತ ಕಾಣಲಿದೆ. ಈಗಿನ ಸ್ಥಿತಿಗಿಂತ ಇನ್ನೂ ಭೀಕರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಅದೇ ವೇಳೆಗೆ, ಅಂತಾರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳ ಎಚ್ಚರಿಕೆಗಳಿಗೆ ಕಿವಿಗೊಡಬೇಕಾಗಿಲ್ಲ. ಹೆಚ್ಚುವರಿ ವೆಚ್ಚ ದೇಶದ ಅದಾಯ ಮತ್ತು ವೆಚ್ಚದ ನಡುವಿನ ಕಂದಕವನ್ನು ಹಿಗ್ಗಿಸಲಿದೆ. ಇದು ಆದಾಯ ಕೊರತೆಯನ್ನು ಇನ್ನಷ್ಟು ಬಿಕ್ಕಟ್ಟಿಗೆ ತಳ್ಳಲಿದೆ ಎಂದು ಅವು ಹೇಳುತ್ತವೆ. ಆದರೆ, ವೆಚ್ಚ ಹೆಚ್ಚಳ ಮಾಡದೇ ಆರ್ಥಿಕತೆಯನ್ನು ಉಳಿಸಿಕೊಳ್ಳಲಾಗದು ಎಂಬುದನ್ನು ಆ ಏಜೆನ್ಸಿಗಳಿಗೆ ಮನವರಿಕೆ ಮಾಡಬೇಕಾಗಿದೆ. ಈಗ ಅನಿವಾರ್ಯವಾಗಿರುವ ಹೆಚ್ಚುವರಿ ಹಣಕಾಸು ವೆಚ್ಚವನ್ನು ನಿರ್ವಹಿಸಿದರೆ, ದೇಶ ಬಹಳ ಬೇಗ ಸುಧಾರಣೆಯ ಹಾದಿಗೆ ಬರಲಿದೆ ಎಂಬುದು ನಿರ್ವಿವಾದ.
ಆದರೆ ಸರ್ಕಾರದ ವೆಚ್ಚ ಹೆಚ್ಚಳ ಮಾಡಬೇಕು, ಆರ್ಥಿಕತೆ ಸುಧಾರಣೆ ಮಾಡಬೇಕು ಎಂದರೆ; ಬಡವರು, ದುರ್ಬಲರು ಮತ್ತು ನಿರುದ್ಯೋಗಿ ವಲಸೆ ಕಾರ್ಮಿಕರಿಗೆ ಕೇವಲ ಐದು ಕೆಜಿ ಆಹಾರ ಧಾನ್ಯ ನೀಡುವುದಷ್ಟೇ ಅಲ್ಲ; ಬದಲಾಗಿ ಅವರಿಗೆ ತರಕಾರಿ, ಎಣ್ಣೆಯೂ ಬೇಕು, ಊಟ ಮಾಡಲು. ಜೊತೆಗೆ ತಲೆಯ ಮೇಲೆ ಸೂರು ಬೇಕು. ಅದಕ್ಕೆ ಅವರಿಗೆ ಆಹಾರ ಧಾನ್ಯದ ಜೊತೆಗೆ ಹಣವೂ ಬೇಕು ಎಂಬುದನ್ನು ಸರ್ಕಾರ ಅರ್ಥಮಾಡಿಕೊಳ್ಳಬೇಕು. ಈಗಲೂ ಕಾಲ ಮಿಂಚಿಲ್ಲ; ತಮ್ಮ ಮೂಲ ನೆಲೆಗಳಿಗೆ ಹೋಗಿರುವ ವಲಸೆ ಕಾರ್ಮಿಕರನ್ನು ವಾಪಸು ನಗರಗಳಿಗೆ ಉತ್ಪಾದನಾ ಚಟುವಟಿಕೆಗಳಿಗೆ ಕರೆತರಬೇಕು ಎಂದರೆ; ಸರ್ಕಾರ ಅವರಿಗೆ ಉತ್ತಮ ವಸತಿ ವ್ಯವಸ್ಥೆಯನ್ನು ಮಾಡಬೇಕು ಎಂದೂ ಅವರು ಹೇಳಿದ್ದಾರೆ.
Also Read: ಬಡವರನ್ನು ಸಾಯಲು ಬಿಡಬೇಡಿ, ಬಿಡಿಗಾಸು ನೀಡಿ; ಬಡವರಿಂದಲೇ ಭಾರತದ ಬೆಳವಣಿಗೆ: ರಘುರಾಮ್ ರಾಜನ್
ಸದ್ಯದ ಪರಿಸ್ಥಿತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕಾರ್ಮಿಕರು, ಕೃಷಿಕರಿಗೆ ನೇರ ನಗದು ಪರಿಹಾರ ನೀಡುವುದಕ್ಕಿಂತ ಸಾಲ ಮತ್ತು ಹಣಕಾಸು ಬೆಂಬಲದ ಕ್ರಮಗಳು ಹೆಚ್ಚು ಪ್ರಯೋಜನಕಾರಿ ಎಂಬ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯಿಸಿದ ಡಾ ರಾಜನ್, ಸಾಲಗಳು ಅಥವಾ ಸರ್ಕಾರದ ಹಣಕಾಸು ಬೆಂಬಲ ಪ್ಯಾಕೇಜುಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಲು ಸಮಯ ಹಿಡಿಯಲಿದೆ. ಆದರೆ, ಆತನ ಹಸಿವು ತತಕ್ಷಣದ ತುರ್ತು ಮತ್ತು ಅನಿವಾರ್ಯತೆ ಎಂದು ತಿರುಗೇಟು ನೀಡಿದ್ದಾರೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಪುನಃಶ್ಚೇತನಕ್ಕೆ ಸರ್ಕಾರ ಸ್ವಾಭಿಮಾನಿ ಭಾರತ್ ಪ್ಯಾಕೇಜ್ ಭಾಗವಾಗಿ ಘೋಷಿಸಿರುವ ಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಆ ವಲಯ ದೇಶದ ಅತ್ಯಂತ ಹೆಚ್ಚು ಸಾಲದಲ್ಲಿ ಸಿಲುಕಿರುವ ವಲಯ. ಹಾಗಾಗಿ ಸರ್ಕಾರ ಹೊಸದಾಗಿ ಘೋಷಿಸಿರುವ ಸಾಲ, ಅವುಗಳ ಬಾಕಿ ಸಾಲದ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಸಂಕಷ್ಟವನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ. ಜೊತೆಗೆ ಸರ್ಕಾರದ ಹೆಚ್ಚುವರಿ ಹಣಕಾಸು ಬೆಂಬಲವನ್ನು ಆ ವಲಯದ ಉದ್ಯಮಗಳಿಗೆ ವರ್ಗಾವಣೆ ಮಾಡದೆ, ಬ್ಯಾಂಕುಗಳು ತಮಗೆ ಬರಬೇಕಾದ ಬಾಕಿ ಮೊತ್ತಕ್ಕೆ ಸರಿದೂಗಿಸಿಕೊಳ್ಳುವ ಅಪಾಯ ಕೂಡ ಇದೆ. ಹಾಗಾಗಿ ಈ ವಲಯದ ಉದ್ಯಮಗಳಿಗೆ ವಿವಿಧ ಯೋಜನೆಗಳ ಮೂಲಕ ರಿಯಾಯ್ತಿ, ಸಹಾಯಧನ ನೀಡುವ ಬದಲು ನೇರವಾಗಿ ಬಾಕಿ ಮನ್ನಾದಂತಹ ಕ್ರಮ ಕೈಗೊಳ್ಳುವುದು ಹೆಚ್ಚು ಪರಿಣಾಮಕಾರಿಯಾದುದ್ಧಾಗಿತ್ತು ಎಂದೂ ಹೇಳಿದ್ದಾರೆ.
Also Read: ಬಡವರಿಗೆ ಹಣ ನೀಡಿ, ಹಣದ ಹರಿಯುವಿಕೆ ಹೆಚ್ಚಿಸಿ, ಆಗ ಮಾತ್ರ ಆರ್ಥಿಕ ಪುನಶ್ಚೇತನ: ಅಭಿಜಿತ್ ಬ್ಯಾನರ್ಜಿ
ಹಾಗೆಯೇ, ಕೃಷಿ ವಲಯದ ಸುಧಾರಣಾ ಕ್ರಮಗಳ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಕೃಷಿ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಗಳು ಮಹತ್ವದ ಬದಲಾವಣೆಗಳಿಗೆ ಕಾರಣವಾಗಬಹುದು. ಆದರೆ, ಜೊತೆಯಲ್ಲಿ ಉದ್ಯಮ ಮತ್ತು ತಯಾರಿಕಾ ವಲಯದ ದೊಡ್ಡ ತೊಡಕಾಗಿರುವ ಲೈಸನ್ಸ್ ರಾಜ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರುವುದು ಕೂಡ ಮುಖ್ಯ. ಜೊತೆಗೆ ಸಾರ್ವಜನಿಕ ವಲಯದಲ್ಲಿ ಖಾಸಗಿ ಹೂಡಿಕೆ ಉತ್ತೇಜಿಸುವ ಕ್ರಮ ಕೂಡ ಸ್ವಾಗತಾರ್ಹವೇ. ಹಾಗೆಯೇ ಕಾರ್ಮಿಕ ಕಾನೂನುಗಳ ಬದಲಾವಣೆಯ ಮೂಲಕ ಉದ್ಯಮಸ್ನೇಹಿ ವಾತಾವರಣ ನಿರ್ಮಾಣದ ನಿಟ್ಟಿನಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್ ಸರ್ಕಾರಗಳು ಕೈಗೊಂಡಿರುವ ಕ್ರಮಗಳನ್ನು ತಾವು ಸ್ವಾಗತಿಸುವುದಾಗಿ ಹೇಳಿದ್ದಾರೆ. ಆದರೆ, ಇಂತಹ ಕಾರ್ಮಿಕ ಕಾನೂನು ಸುಧಾರಣಾ ಕ್ರಮಗಳು ಕಾರ್ಮಿಕ ಸಂಘಟನೆಗಳೊಂದಿಗೆ ಸಮಾಲೋಚನೆಯ ಮೂಲಕವೇ ಜಾರಿಗೆ ಬರಬೇಕು ವಿನಃ ಸರ್ಕಾರ ಏಕಾಏಕಿ ಇಂತಹ ನಿರ್ಧಾರಗಳನ್ನು ಹೇರುವುದು ಬೀದಿ ಹೋರಾಟಗಳಿಗೆ ಕುಮ್ಮಕ್ಕು ನೀಡಿದಂತೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಾಗೆಯೇ, ದೇಶದ ಉದ್ಯಮ ವಲಯಕ್ಕೆ ಪೂರಕ ವಾತಾವರಣ ಕಲ್ಪಿಸುವ ದೃಷ್ಟಿಯಲ್ಲಿ ಭೂಮಿ, ಕಾರ್ಮಿಕರು ಮತ್ತು ಹಣಕಾಸಿನ ವಿಷಯದಲ್ಲಿ ಇರುವ ನಿರ್ಬಂಧಗಳನ್ನು ಸಡಿಲಿಸುವ ಅಗತ್ಯವಿದೆ. ಆ ಮೂಲಕ ಉದ್ಯಮ ಸ್ನೇಹಿ ವ್ಯವಸ್ಥೆ ರೂಪಿಸಬೇಕಿದೆ ಎಂದೂ ಅವರು ಹೇಳಿದ್ದಾರೆ.