ಬೀಸೋ ದೊಣ್ಣೆ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯಸ್ಸು ಎನ್ನುತ್ತಾರೆ. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ಇದೇ ತಂತ್ರವನ್ನು ಅವಲಂಬಿಸಿದ್ದಾರೆ. ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದ್ದರೂ ಅದು ಯಾವಾಗ ಎಂಬುದು ಪ್ರಶ್ನೆಯಾಗಿತ್ತು. ಇದೀಗ ಯಡಿಯೂರಪ್ಪ ಅವರೇ ಅದಕ್ಕೆ ಉತ್ತರ ನೀಡಿದ್ದು, ಬಜೆಟ್ ಅಧಿವೇಶನದ ಬಳಿಕ ಅಂದರೆ, ಮಾರ್ಚ್ 31ರ ನಂತರ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಸೇರಿದಂತೆ ಬಿಜೆಪಿಯ ಮೂವರಿಗೆ ಸಚಿವ ಸ್ಥಾನ ನೀಡಲಾಗುವುದು ಎಂದೂ ಸ್ಪಷ್ಟಪಡಿಸಿದ್ದಾರೆ. ಇದರಿಂದ ಬಜೆಟ್ ಅಧಿವೇಶನ ಆರಂಭವಾಗುವುದರೊಳಗೆ (ಮಾರ್ಚ್ 2) ಸಚಿವರಾಗಬೇಕು ಎಂದು ಭಾರೀ ನಿರೀಕ್ಷೆಯೊಂದಿಗೆ ಕುಳಿತಿದ್ದ ಆಕಾಂಕ್ಷಿಗಳಿಗೆ ನಿರಾಶೆಯಾಗಿದೆ. ಆದರೆ, ಬಜೆಟ್ ಅಧಿವೇಶನ ಮುಗಿಯುವವರೆಗೆ ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ಇಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಹಿಂದೆ ಬೇರೆಯದ್ದೇ ಆದ ಯೋಚನೆ ಇರುವುದಂತೂ ಸತ್ಯ.
ಹೌದು, ಬಜೆಟ್ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನಮಾನ ನೀಡಬೇಕು ಎಂಬ ಬಗ್ಗೆ ಇರುವ ಗೊಂದಲ, ಅಸಮಾಧಾನಗಳನ್ನು ಬಗೆಪರಿಸಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿದ್ದಾರೆ. ಇದರ ಜತೆಗೆ ಉಮೇಶ್ ಕತ್ತಿ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸುವ ಮೂಲಕ ಇನ್ನೆರಡು ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ಗೌಪ್ಯವಾಗಿಟ್ಟು ಆಕಾಂಕ್ಷಿಗಳ ಮಧ್ಯೆಯೇ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಅಂದರೆ, ಇದರ ಅರ್ಥ, ಇನ್ನೆರಡು ಸ್ಥಾನಗಳನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು ಇರುವ ಸಮಸ್ಯೆಯನ್ನು ನೀವು, ನೀವೇ (ಸಚಿವಾಕಾಂಕ್ಷಿಗಳು) ಬಗೆಹರಿಸಿಕೊಳ್ಳಿ ಎಂಬುದಾಗಿದೆ.
ಇನ್ನು ದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನು ಭೇಟಿಯಾಗುವ ಮುನ್ನವೇ ಯಡಿಯೂರಪ್ಪ ಅವರು ಬಜೆಟ್ ನಂತರ ಸಂಪುಟ ವಿಸ್ತರಣೆ ಕುರಿತು ಹೇಳಿಕೆ ನೀಡಿರುವುದರ ಹಿಂದೆ ಮತ್ತೂ ಒಂದು ಕಾರಣವಿದೆ. ಬೇರೆ ಪಕ್ಷದಿಂದ ಬಿಜೆಪಿಗೆ ಸೇರಿ ಶಾಸಕರಾದ 10 ಮಂದಿಗೆ ಸಚಿವ ಸ್ಥಾನ ನೀಡುವ ಸಂದರ್ಭದಲ್ಲಿ ಬಿಜೆಪಿಯ ಇತರೆ ಮೂವರು ಶಾಸಕರನ್ನೂ ಮಂತ್ರಗಳನ್ನಾಗಿ ಮಾಡುವ ಉದ್ದೇಶವಿತ್ತು. ಆದರೆ, ಮೂರು ಸ್ಥಾನಗಳ ಪೈಕಿ ಒಂದು ಸ್ಥಾನಕ್ಕೆ ಯಾವಾಗ ಸಿ.ಪಿ.ಯೋಗೇಶ್ವರ್ ಅವರ ಹೆಸರು ಕೇಳಿಬಂತೋ ಶಾಸಕರಲ್ಲಿ ಅಸಮಾಧಾನ ಭುಗಿಲೆದ್ದಿತ್ತು. ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡುವುದು ಯಡಿಯೂರಪ್ಪ ಅವರಿಗಿಂತಲೂ ವರಿಷ್ಠರಿಗೆ ಮುಖ್ಯವಾಗಿತ್ತು. ಯೋಗೇಶ್ವರ್ ಕಾರಣದಿಂದಲೇ ಸಂಪುಟ ವಿಸ್ತರಣೆ ನಿರೀಕ್ಷೆಯಂತೆ ಪೂರ್ಣ ಪ್ರಮಾಣದಲ್ಲಿ ನಡೆಯದ ಕಾರಣ ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತಂದು ವಿವಾದ ಬಗೆಹರಿಸಲು ನೀವು ಮಧ್ಯಸ್ಥಿಕೆ ವಹಿಸಬೇಕು ಎಂಬ ಸಂದೇಶವನ್ನು ಯಡಿಯೂರಪ್ಪ ಅವರು ವರಿಷ್ಠರಿಗೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಹೆಸರು ಮಾತ್ರ ಪ್ರಸ್ತಾಪಿಸಿದ್ದೇಕೆ?
ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆ ವೇಳೆ ಮೂವರು ಬಿಜೆಪಿ ಶಾಸಕರಿಗೆ ಮಂತ್ರಿ ಸ್ಥಾನ ನೀಡಲಾಗುವುದು ಎಂದಿದ್ದ ಯಡಿಯೂರಪ್ಪ ಅವರು ಮೂರು ಸ್ಥಾನಗಳ ಪೈಕಿ ಉಮೇಶ್ ಕತ್ತಿ ಅವರ ಹೆಸರನ್ನು ಮಾತ್ರ ಪ್ರಸ್ತಾಪಿಸಿದ್ದಾರೆ. ಇನ್ನುಳಿದ ಎರಡು ಸ್ಥಾನಗಳ ಬಗ್ಗೆ ಹೇಳಲಿಲ್ಲ. ಅಂದರೆ, ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆ ವೇಳೆ ಅಸಮಾಧಾನಿತರು ಪ್ರಮುಖವಾಗಿ ಪ್ರಸ್ತಾಪಿಸಿದ್ದೇ ಉತ್ತರ ಕರ್ನಾಟಕ ಬಾಗಕ್ಕೆ ಅನ್ಯಾಯವಾಗುತ್ತಿದೆ ಎಂದು. ಏಕೆಂದರೆ, ಆ ಸಂದರ್ಭದಲ್ಲಿ ಕೇಳಿಬಂದ ಮೂರು ಹೆಸರುಗಳ ಪೈಕಿ ಉಮೇಶ್ ಕತ್ತಿ ಉತ್ತರ ಕರ್ನಾಟಕ ಭಾಗದವರಾದರೆ ಇನ್ನಿಬ್ಬರು (ಚನ್ನಪಟ್ಟಣದ ಸಿ.ಪಿ.ಯೋಗೇಶ್ವರ್ ಮತ್ತು ಬೆಂಗಳೂರಿನ ಅರವಿಂದ ಲಿಂಬಾವಳಿ) ಹಳೇ ಮೈಸೂರು ಭಾಗಕ್ಕೆ ಸೇರಿದವರು. ಆಗಲೂ ಉಮೇಶ್ ಕತ್ತಿ ಮತ್ತು ಅರವಿಂದ ಲಿಂಬಾವಳಿ ಅವರಿಗೆ ಸಚಿವ ಸ್ಥಾನ ನೀಡಲು ಆಕ್ಷೇಪ ವ್ಯಕ್ತವಾಗಿರಲಿಲ್ಲ. ಯೋಗೇಶ್ವರ್ ಅವರನ್ನು ಮಂತ್ರಿ ಮಾಡಲು ಮಾತ್ರ ವಿರೋಧಿಸಲಾಗಿತ್ತು. ಹೀಗಾಗಿ ಮುಂದಿನ ಮಂತ್ರಿ ಮಂಡಲ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧೈರ್ಯವಾಗಿ ಉಮೇಶ್ ಕತ್ತಿ ಹೆಸರು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿರುವ ಉತ್ತರ ಕರ್ನಾಟಕ ಭಾಗದ ಶಾಸಕರನ್ನು ಸಮಾಧಾನಪಡಿಸುವ ಕೆಲಸವನ್ನು ಉಮೇಶ್ ಕತ್ತಿಯವರಿಗೂ ಹಂಚಿದ್ದಾರೆ.
ಪ್ರಸ್ತುತ ಬೆಳಗಾವಿ ಜಿಲ್ಲೆಯಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಮೇಶ್ ಜಾರಕಿಹೊಳಿ, ಶ್ರೀಮಂತ ಪಾಟೀಲ್ ಮತ್ತು ಶಶಿಕಲಾ ಜೊಲ್ಲೆ ಅವರು ಈಗಾಗಲೇ ಯಡಿಯೂರಪ್ಪ ಅವರ ಸಂಪುಟದಲ್ಲಿದ್ದು, ಉಮೇಶ್ ಕತ್ತಿ ಸೇರಿದರೆ ಒಟ್ಟು ಐದು ಸ್ಥಾನಗಳು ಸಿಕ್ಕಂತಾಗುತ್ತದೆ. ಹೀಗಾಗಿ ಜಿಲ್ಲಾವಾರು ಪ್ರಾತಿನಿಧ್ಯದಲ್ಲಿ ಬೆಂಗಳೂರು ನಂತರ ಬೆಳಗಾವಿಗೆ ಎರಡನೇ ಸ್ಥಾನ ಇದ್ದು, ಇದು ಕೂಡ ಉತ್ತರ ಕರ್ನಾಟಕ ಭಾಗದ ಶಾಸಕರ ಅಸಮಾಧಾನಕ್ಕೆ ಕಾರಣವಾಗಬಹುದು. ಹೀಗಾಗಿ ಅವರನ್ನು ಸಮಾಧಾನಪಡಿಸಬೇಕಾದರೆ ಆ ಭಾಗದವರೇ ಇದ್ದರೆ ಉತ್ತಮ. ಸಚಿವ ಸ್ಥಾನಕ್ಕೆ ಉಮೇಶ್ ಕತ್ತಿ ಹೆಸರನ್ನು ಯಡಿಯೂರಪ್ಪ ಅವರು ಈಗಲೇ ಘೋಷಿಸಲು ಅದೂ ಒಂದು ಕಾರಣವಾಗಿದೆ.
ಬಜೆಟ್ ನಂತರ ಸಂಪುಟ ವಿಸ್ತರಣೆಗೆ ಇನ್ನೂ ಒಂದು ಕಾರಣವಿದೆ
ಬಜೆಟ್ ಅಧಿವೇಶನ ಈ ಬಾರಿ ಸುದೀರ್ಘ 21 ದಿನ ನಡೆಯುತ್ತಿದೆ. ಅದರಲ್ಲೂ ಬಜೆಟ್ ಮಂಡನೆಯಾದ ಮೇಲೆ 17 ದಿನ ಕಲಾಪಗಳು ನಡೆಯುತ್ತವೆ. ಹೀಗಾಗಿ ಇಲಾಖಾವಾರು ಚರ್ಚೆಗೆ ಸಮಯ ಸಿಗಬಹುದು. ಹಾಗೇನಾದರೂ ಆದರೆ ಮಂತ್ರಿ ಮಂಡಲ ವಿಸ್ತರಿಸಿ ಹೊಸದಾಗಿ ಮೂವರಿಗೆ ಸಚಿವ ಸ್ಥಾನ ನೀಡಿ ಖಾತೆಗಳನ್ನು ಹಂಚಿದರೆ ಇಲಾಖಾವಾರು ಚರ್ಚೆ ವೇಳೆ ಉತ್ತರ ನೀಡಲು ಕಷ್ಟವಾಗಬಹುದು. ಹೊಸ ಸಚಿವರಿಗೆ ಖಾತೆಗಳ ಬಗ್ಗೆ ಅಧ್ಯಯನ ನಡೆಸಲು ಅವಕಾಶ ಇರುವುದಿಲ್ಲ. ಮುಖ್ಯಮಂತ್ರಿಗಳು ಅಥವಾ ಬೇರೆ ಸಚಿವರು (ಪ್ರಸ್ತುತ ಹೆಚ್ಚುವರಿ ಖಾತೆ ವಹಿಸಿಕೊಂಡಿರುವವರು) ಉತ್ತರ ನೀಡಿದರೆ, ಇಲಾಖೆಯ ಸಚಿವರಿರುವಾಗ ಬೇರೆಯವರು ಉತ್ತರಿಸಲು ಪ್ರತಿಪಕ್ಷಗಳು ಆಕ್ಷೇಪ ಎತ್ತಬಹುದು. ಇದರಿಂದ ಸದನದಲ್ಲಿ ಸರ್ಕಾರ ಪೇಚಿಗೆ ಸಿಲುಕಬಹುದು. ಹೀಗಾಗಿ ಬಜೆಟ್ ಅಧಿವೇಶನದ ಬಳಿಕವೇ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿಗಳು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಬಜೆಟ್ ಅಧಿವೇಶನದೊಳಗೆ ಸಚಿವರಾಗುವ ಕನಸು ಕಾಣುತ್ತಿದ್ದವರಿಗೆ ಮುಖ್ಯಮಂತ್ರಿಗಳ ಈ ನಿರ್ಧಾರ ನಿರಾಶೆ ತಂದಿರುವುದು ಸಹಜ. ಮುಖ್ಯಮಂತ್ರಿಗಳ ನಿರ್ಧಾರವನ್ನು ಒಪ್ಪಿಕೊಳ್ಳದೇ ವಿಧಿಯಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಅಸಮಾಧಾನವನ್ನು ನುಂಗಿಕೊಂಡು ಬಜೆಟ್ ಕಲಾಪದಲ್ಲಿ ಭಾಗವಹಿಸಬೇಕು.