ಇಡೀ ವಿಶ್ವ ಇಂದು ಕರೋನಾ ಎಂಬ ಮಹಾಮಾರಿಯಿಂದ ನಲುಗಿ ಹೋಗಿದೆ. ಕಳೆದ ಎರಡು ಮೂರು ತಿಂಗಳಿನಿಂದ ಕರೋನಾ ಹೊರತು ಬೇರೆ ಯಾವ ಸುದ್ದಿಯೂ ಮುನ್ನೆಲೆಗೆ ಬಂದೆ ಇಲ್ಲ ಎಂಬಷ್ಟು ಕರೋನಾ ಸುದ್ದಿ ಕೇಂದ್ರದಲ್ಲಿದೆ. ಈ ನಡುವೆ ಸಾಮಾಜಿಕ ಅಂತರದ ನೆಪದಲ್ಲಿ ಚಿತ್ರಮಂದಿರದಿಂದ ದೇವಾಲಯದ ವರೆಗೆ ಎಲ್ಲಾವನ್ನೂ ಬಂದ್ ಮಾಡಲಾಗಿರುವುದು ಭಾರತದ ಇತಿಹಾಸದಲ್ಲೇ ಮೊದಲು ಎನ್ನಬಹುದು.
ಅಸಲಿಗೆ ಭಾರತ ದೇವಾಲಯಗಳಲ್ಲಿ ದೇವರಿಗೆ ಅರ್ಚನೆ ಪೂಜೆ ಅಭಿಷೇಕಗಳು ನಡೆದು ಎರಡು ತಿಂಗಳೇ ಆಗಿವೆ. ಅಲ್ಲಿಗೆ ಕೊರೋನಾ ಎಂಬ ಮಹಾಮಾರಿ ದೇವರನ್ನೂ ಬಿಟ್ಟಿಲ್ಲ, ಅಬಿಷೇಕಕ್ಕೊಳಗಾದ ಯಾವ ದೇವರೂ ಕರೋನಾದಿಂದ ಸಂಕಷ್ಟಕ್ಕೆ ಒಳಗಾಗಿರುವ ಮನುಷ್ಯನ ನೆರವಿಗೆ ಧಾವಿಸಿಲ್ಲ ಎಂಬುದು ಈ ಮೂಲಕ ಸ್ಪಷ್ಟವಾಗಿದೆ.
ಕರೋನಾ ಎಂಬ ಕಣ್ಣಿಗೆ ಕಾಣದ ಯಕಶ್ಚಿತ್ ವೈರಸ್ ಒಂದು ದೇಶದ ಎಲ್ಲಾ ದೇವಾಲಯಗಳು ಬೀಗ ಹಾಕಿಕೊಳ್ಳುವಂತೆ ಮಾಡಿದೆ. ಆ ಮೂಲಕ ಎಲ್ಲಾ ಅತೀವ ಶಕ್ತಿಗಳ ಇರುವಿಕೆಯನ್ನು ನಗೆಪಾಟಲಿಗೀಡು ಮಾಡುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ತಿರುಪತಿ ಆಸ್ತಿ ಮಾರಾಟ ವಿಚಾರವಾಗಿ ಆಂದ್ರಪ್ರದೇಶದಿಂದ ಕೂಗೊಂದು ಕೇಳಿ ಬರುತ್ತಿದ್ದು, ಇದಕ್ಕೆ ನಗುವುದೋ.. ಅಳುವುದೋ..? ಎಂದು ತಿಳಿಯದೆ ನಾಗರೀಕ ಸಮಾಜ ಮುಸಿ ಮುಸಿ ನಗುವಂತಾಗಿರುವುದು ಮಾತ್ರ ಸುಳ್ಳಲ್ಲ.
ವಿಚಾರ ಇಷ್ಟೆ..! ಭಾರತೀಯರ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ಆಸ್ತಿಗಳನ್ನು ಮಾರಾಟ ಮಾಡಲು ತಿರುಪತಿ ದೇವಾಲಯದ ಆಡಳಿತ ವರ್ಗ ಮತ್ತು ಆಂಧ್ರಪ್ರದೇಶದ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮುಂದಾಗಿತ್ತು. ಹರಾಜು ಪ್ರಕ್ರಿಯೆಗೆ ಸರ್ಕಾರ ಪ್ರಸ್ತಾವನೆಯನ್ನೂ ಸಲ್ಲಿಸಿತ್ತು. ಈ ಸುದ್ದಿ ಇದೀಗ ಆಂಧ್ರದ ಗಡಿಗಳನ್ನೂ ಧಾಟಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹಿಂದೂ ಭಾವನೆಗಳಿಗೆ ಧಕ್ಕೆ ಎಂಬ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿ ಇದೀಗ ಕೊನೆಗೂ ಜಗನ್ ಸರ್ಕಾರ ಪ್ರಸ್ತಾವನೆಯನ್ನು ಹಿಂಪಡೆಯುವಂತಾಗಿದೆ.
ಅಲ್ಲಿಗೆ ತಿರುಪತಿ ದೇವಾಲಯದ ಆಸ್ತಿ ಮಾರಾಟ ಎಂಬ ವಿಚಾರಕ್ಕೆ ಕೊನೆಗೂ ತೆರೆ ಎಳೆಯಲಾಗಿದೆ. ಆದರೆ, ಕರೋನಾ ಸಂಕಷ್ಟದ ಕಾಲದಲ್ಲೂ ತಿರುಪತಿ ದೇವಾಲಯದ ಆಸ್ತಿ ಮಾರಾಟ ವಿಚಾರ ಇಷ್ಟು ದೊಡ್ಡ ಸುದ್ದಿಯಾಗುತ್ತದೆ, ಒಂದು ಸರ್ಕಾರದ ಬುಡವನ್ನೇ ಅಲ್ಲಾಡಿಸುತ್ತದೆ ಎಂದರೆ ಅದು ಸುಮ್ಮನೆ ಮಾತಲ್ಲ.
ಹಾಗಾದರೆ, ತಿರುಪತಿ ತಿಮ್ಮಪ್ಪನ ಇತಿಹಾಸವೇನು? ಒಂದು ವರ್ಷದಲ್ಲಿ ಇಲ್ಲಿಗೆ ಹರಿದು ಬರುವ ಆದಾಯ ಎಷ್ಟು? ನಿಜಕ್ಕೂ ಈ ಹಣ ಏನಾಗುತ್ತಿದೆ? ತಿಮ್ಮಪ್ಪನ ಆಸ್ತಿ ಎಲ್ಲೆಲ್ಲಿದೆ? ಇದರ ಮಾರಾಟಕ್ಕೆ ಈ ಪ್ರಮಾಣದ ವಿರೋಧವೇಕೆ? ಇಲ್ಲಿದೆ ನೀವು ತಿಳಿದುಕೊಳ್ಳಲೇಬೇಕಾದ ಕುತೂಹಲಕಾರಿ ಮಾಹಿತಿ.
ತಿರುಪತಿ ತಿಮ್ಮಪ್ಪನ ಇತಿಹಾಸ:
ದ್ವಾಪರ ಯುಗ ಅಂತ್ಯವಾಗಿ ಕಲಿಯುವ ಆರಂಭವಾಗುವ ಕಾಲದಲ್ಲಿ ವಿಷ್ಣು ವೈಕುಂಠದಿಂದ ಇಳಿದು ಬಂದು ಮನುಷ್ಯರ ತಲೆ ಕಾಯುವ ಸಲುವಾಗಿ ತಿರುಪತಿಯ ಏಳು ಬೆಟ್ಟದ ಮೇಲೆ ನೆಲೆ ನಿಂತ ಎನ್ನುತ್ತದೆ ಭಾರತದ ಪುರಾಣ ಶಾಸ್ತ್ರ. ಕಲ್ಕಿ ಅವತಾರದ ನಂತರ ಕಲಿಯುಗ ಅಂತ್ಯವಾದಾಗ ಇಲ್ಲಿನ ವಿಷ್ಣು ವಿಗ್ರಹ ಮಾತ್ರ ಉಳಿಯುತ್ತದೆ ಎಂದೂ ಹೇಳಲಾಗುತ್ತದೆ. ಇವೆಲ್ಲಾ ಪುರಾಣದ ಉಲ್ಲೇಖ. ಭಾರತದ ಪುರಾಣದಲ್ಲಿ ಇಂತಹ ಹತ್ತಾರು ಕತೆ-ಉಪ ಕತೆಗಳಿಗೆ ಕೊರತೆ ಇಲ್ಲ.
ಆದರೆ ವಾಸ್ತವದಲ್ಲಿ ತಿರುಪತಿ ತಿಮ್ಮಪ್ಪನ ಉಲ್ಲೇಖ ಆರಂಭವಾಗುವುದು ಕಂಚಿಯ ಪಲ್ಲವರ ಕಾಲದಲ್ಲೇ. ತಮಿಳುನಾಡಿನ ಪಲ್ಲವರು, ಪಾಂಡ್ಯರು, ಚೋಳರು ಹಾಗೂ ಕರ್ನಾಟಕದ ವಿಜಯನಗರ ಸಾಮ್ರಾಜ್ಯದ ಅರಸರ ತಿರುಪತಿ ದೇವಾಲಯವನ್ನು ಕಟ್ಟಿ ಬೆಳೆಸಿದರು. ವಿಜಯನಗರದ ಆಳ್ವಿಕೆ ನಡೆಯುತ್ತಿದ್ದ ಕಾಲದಲ್ಲಿ ಈ ದೇವಸ್ಥಾನ ಸಂಪತ್ತು ಹಾಗೂ ಗಾತ್ರದಲ್ಲಿ ದೊಡ್ಡದಾಗಿ ಬೆಳೆಯುತ್ತಾ ಸಾಗಿತು. ಇದಕ್ಕೆ ಮುಖ್ಯವಾದ ಕಾರಣವೇನೆಂದರೆ ವಜ್ರಗಳ ಕೊಡುಗೆ.
ಕ್ರಿ.ಶ. 1517 ರಲ್ಲಿ ವಿಜಯನಗರದ ದೊರೆಯಾದ ಶ್ರೀ ಕೃಷ್ಣದೇವರಾಯ ಈ ದೇವಸ್ಥಾನಕ್ಕೆ ಬೇಟಿ ನೀಡಿದಾಗ ಚಿನ್ನ ಆಭರಣಗಳನ್ನು ದಾನವಾಗಿ ನೀಡಿದ್ದರು. ಅಸಲಿಗೆ ತಿರುಪತಿಯಲ್ಲಿ ಈಗಿರುವ ಚಿನ್ನ, ವಜ್ರ ವೈಡೂರ್ಯದ ಬಹುಪಾಲು ನೀಡಿದ್ದೇ ವಿಜಯನಗರ ಸಾಮ್ರಾಜ್ಯ. ಇದೇ ಕಾರಣಕ್ಕೆ ಈ ದೇವಾಲಯದಲ್ಲಿ ಕೃಷ್ಣದೇವರಾಯ ಹಾಗೂ ಅವರ ಹೆಂಡತಿಯ ಮೂರ್ತಿಯನ್ನೂ ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ, ಪ್ರತಿದಿನ ಆ ಮೂರ್ತಿಗಳಿಗೂ ಪೂಜೆ ಸಲ್ಲುತ್ತವೆ.
ದಿನ ಕಳೆದಂತೆ ತಿರುಪತಿ ಜನಪ್ರಿಯ ದೇವಾಲಯವಾಗಿ ಬದಲಾಯಿತು. ದೇವಾಲಯಕ್ಕೆ ಚಿನ್ನವನ್ನು ದಾನವಾಗಿ ನೀಡುವ ಪರಂಪರೆ ಬೆಳೆಯಿತು. ಇದನ್ನು ನಿರ್ವಹಿಸುವುದೇ ಕಷ್ಟಕರವಾಗಿ ಪರಿಣಮಿಸಿದಾಗ ಮದ್ರಾಸ್ ಸರ್ಕಾರ 1843 ರಲ್ಲಿ ತಿರುಪತಿ ದೇವಸ್ಥಾನಂ ( TTD ) ಆಡಳಿತ ಮಂಡಳಿ ಸ್ಥಾಪಿಸಿತು. ಸ್ವಾತಂತ್ಯ್ರಾ ನಂತರ ಭಾಷಾವಾರು ಪ್ರಾಂತ್ಯ ವಿಂಗಡನೆ ಮಾಡಿದಾಗ ತಿರುಪತಿಯನ್ನು ಆಂಧ್ರಪ್ರದೇಶಕ್ಕೆ ನೀಡಲಾಯಿತು. ಹೀಗಾಗಿ 1951ರಿಂದ ಆಂಧ್ರ ಸರ್ಕಾರದ ನೇತೃತ್ವದಲ್ಲಿ TTD ಆಡಳಿತ ಮಂಡಳಿ ತಿರುಪತಿ ದೇವಾಲಯದ ಆಡಳಿತವನ್ನು ನಿರ್ವಹಿಸುತ್ತಿದೆ.
ತಿಮ್ಮಪ್ಪನಿಗೆ ಆದಾಯ ಹೇಗೆ ಬರುತ್ತೆ?
ಒಂದು ಅಂದಾಜಿನ ಪ್ರಕಾರ ತಿರುಪತಿಗೆ ಪ್ರತಿದಿನ 60 ಸಾವಿರದಿಂದ 1 ಲಕ್ಷ ಜನ ಆಗಮಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ತಿರುಪತಿಗೆ ಆಗಮಿಸುವ ಬಹುತೇಕರು ಹರಕೆ ತೀರಿಸುವ ಕಾರಣಕ್ಕಾಗಿಯೇ ದೇಶ ವಿದೇಶದಿಂದ ಇಲ್ಲಿಗೆ ಆಗಮಿಸುತ್ತಾರೆ.
ಇಲ್ಲಿಗೆ ಆಗಮಿಸುವ ಜನರೇ ತಿರುಪತಿ ದೇವಾಲಯದ ಆದಾಯದ ಮೂಲ. ಹೀಗೆ ದೇವಾಲಯಕ್ಕೆ ಆಗಮಿಸುವ ಜನರಿಂದ ದೇವಾಲಯದ ಆಡಳಿತ ಮಂಡಳಿ ನಾಲ್ಕು ಬಗೆಯಲ್ಲಿ ಆದಾಯ ಗಳಿಸುತ್ತಾರೆ.
1) ಪ್ರಸಾದ:
ತಿರುಪತಿಯ ಲಡ್ಡು ಜಗತ್ ಪ್ರಸಿದ್ಧ. ಅಲ್ಲದೆ, ಇಲ್ಲಿ ಮೊಸರನ್ನವನ್ನೂ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ. ಈ ಲಡ್ಡನ್ನು ತಿರುಪತಿ ಬಿಟ್ಟು ಬೇರೆ ಎಲ್ಲೂ ತಯಾರಿಸಲಾಗುವುದಿಲ್ಲ. ಅಸಲಿಗೆ ತಿರುಪತಿಗೆ ಬರುವ ಆದಾಯದಲ್ಲಿ ಶೇ.40 ರಷ್ಟು ಆದಾಯ ಲಡ್ಡು ಮಾರುವುದರಿಂದಲೇ ಬರುತ್ತದೆ ಎಂದು ಹೇಳಲಾಗುತ್ತದೆ.
2) ತಲೆ ಬೋಳಿಸುವುದು:
ತಿರುಪತಿಯ ಅನೇಕ ಹರಕೆಗಳಲ್ಲಿ ತಲೆ ಕೂದಲನ್ನು ದೇವರಿಗೆ ಅರ್ಪಿಸುವುದೂ ಒಂದು. ಅನೇಕ ಭಕ್ತರು ಪ್ರತಿನಿತ್ಯ ಇಲ್ಲಿ ತಮ್ಮ ತಲೆಗೂದಲು ದೇವರಿಗೆ ಅರ್ಪಣೆ ಮಾಡುತ್ತಾರೆ. ಹೀಗೆ ಸಂಗ್ರಹಿಸಲಾದ ಕೂದಲನ್ನೂ ಸಹ ಮಾರಾಟ ಮಾಡುವ ಮೂಲಕ ಆದಾಯ ಗಳಿಸಲಾಗುತ್ತದೆ.
3) ಹುಂಡಿ (ದಾನ ಮಡಕೆ):
ತಿಮ್ಮಪ್ಪನ ಪ್ರಮುಖ ಆದಾಯಗಳಲ್ಲಿ ಹುಂಡಿ ಸೇವೆಯೂ ಒಂದು. ಅನೇಕರು ತಮ್ಮ ಹರಕೆ ತೀರಿದ ನಂತರ ದೇವರ ಹುಂಡಿಯಲ್ಲಿ ಚಿನ್ನ, ಬೆಳ್ಳಿ ಸೇರಿದಂತೆ ಬೆಳಬಾಳುವ ಆಭರಣಗಳನ್ನು ಹಣವನ್ನೂ ಹಾಕುವುದು ಇಲ್ಲಿ ವಾಡಿಕೆ. ಇದು ತಿರುಪತಿಯ ಪ್ರಮುಖ ಆದಾಯದ ಮೂಲ.
4)ತುಲಾಭಾರ:
ಈ ದೇವಾಲಯದ ಪ್ರಮುಖ ಆಚರಣೆ ಮತ್ತು ಆದಾಯದ ಮೂಲವಾಗಿ ತುಲಬಾರ ಸಹ ಸ್ಥಾನಪಡೆದಿದೆ. ತುಲಾಭಾರ ಆಚರಣೆಯಲ್ಲಿ ಭಕ್ತರು ಒಂದು ಕಡೆ ತಾವು ಕುಳಿತು ಇನ್ನೊಂದು ಕಡೆ ತಮ್ಮ ತೂಕದ ತಮತೋಲಿತ ವಸ್ತುಗಳನ್ನು ತುಂಬಿರುತಾರೆ. ಭಕ್ತರು ಸಾಮಾನ್ಯವಾಗಿ ಸಕ್ಕರೆ, ಬೆಲ್ಲ, ತುಳಸಿ ಎಲೆಗಳು, ಬಾಳೆ, ಚಿನ್ನದ ನಾಣ್ಯಗಳು ನೀಡುತ್ತಾರೆ. ಇದು ಸಹ ದೇವರಿಗೆ ಸಮರ್ಪಿಸಲಾಗುತ್ತದೆ.
ಇದಲ್ಲದೆ ತಿಮ್ಮಪ್ಪನಿಗೆ ಚಿನ್ನದ ಕಿರೀಟ, ಸ್ಥಿರಾಸ್ಥಿ ಸೇರಿದಂತೆ ವಿವಿಧ ರೂಪದಲ್ಲಿ ಸಂಪತ್ತನ್ನು ದಾನವಾಗಿ ನೀಡುವುದನ್ನು ಕಾಣಬಹುದಾಗಿದೆ.
ತಿಮ್ಮಪ್ಪನ ಒಟ್ಟು ಸಂಪತ್ತು ಎಷ್ಟು?
ಹುಂಡಿಗೆ ಬೀಳುವ ಕಾಣಿಕೆಯ ರೂಪದಲ್ಲಿ ತಿರುಪತಿಗೆ ಪ್ರತಿವರ್ಷ 600 ಕೋಟಿ ಆದಾಯ ಸಂಗ್ರಹವಾಗುತ್ತದೆ. ಇದೇ ಹುಂಡಿಗಳಲ್ಲಿ ಪ್ರತಿವರ್ಷ ನೂರಾರು ಕೆ.ಜಿ ಚಿನ್ನವನ್ನೂ ಭಕ್ತರು ಕಾಣಿಕೆಯ ರೂಪದಲ್ಲಿ ದೇವರಿಗೆ ಅರ್ಪಿಸುತ್ತಿದ್ದಾರೆ.
ಈವರೆಗೆ ಹೀಗೆ ಸಂಗ್ರಹಿಸಲಾದ ಚಿನ್ನವೇ ಬರೋಬ್ಬರಿ 6 ಸಾವಿರ ಕೆ.ಜಿ. ಎನ್ನಲಾಗುತ್ತಿದೆ. ಇಷ್ಟು ಪ್ರಮಾಣದ ಚಿನ್ನವನ್ನು ರಕ್ಷಣೆ ಮಾಡುವುದು ಕಷ್ಟ ಎಂಬ ಕಾರಣಕ್ಕೆ TTD ಆಡಳಿತ ಮಂಡಳಿ 2010ರಿಂದ ಈ ಚಿನ್ನವನ್ನು ಬ್ಯಾಂಕಿನಲ್ಲಿ ಠೇವಣಿ ಇಡಲು ಮುಂದಾಗಿದೆ. ಈವರೆಗೆ 4.5 ಸಾವಿರ ಚಿನ್ನಾಭರಣವನ್ನು ವಿವಿಧ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದ್ದರೆ, 1 ಸಾವಿರ ಕೆ.ಜಿ ಚಿನ್ನವನ್ನು ಎಸ್‌ಬಿಐನಲ್ಲಿ ಠೇವಣಿ ಇಡಲಾಗಿದೆ.
ಈ ಠೇವಣಿ ಚಿನ್ನಕ್ಕೆ ಬ್ಯಾಂಕುಗಳು ಸಹ ಚಿನ್ನದ ರೂಪದಲ್ಲೇ ಬಡ್ಡಿ ನೀಡುತ್ತಿದ್ದು, ಹೀಗೆ ಬಡ್ಡಿ ರೂಪದಲ್ಲಿ ಸಂಗ್ರಹವಾಗಿರುವ ಚಿನ್ನವೇ ವರ್ಷಕ್ಕೆ 80 ಕೆ.ಜಿ. ಎನ್ನಲಾಗುತ್ತಿದೆ. ಇದರ ಬೆಲೆಯೇ ಸಾವಿರಾರು ಕೋಟಿ ಆಗಲಿದೆ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ತಿಮ್ಮನ ಹೆಸರಿನಲ್ಲಿ ಅಪಾರ ಪ್ರಮಾಣದ ಸ್ಥಿರಾಸ್ತಿಗಳಿವೆ. ಈ ಪೈಕಿ ಆಂಧ್ರಪ್ರದೇಶದಲ್ಲಿರುವ 26, ತಮಿಳುನಾಡಿನಲ್ಲಿ 23 ಹಾಗೂ ಋಷಿಕೇಶದಲ್ಲಿ 1 ಆಸ್ತಿ ಇದೆ. ಪ್ರಸ್ತುತ ಸುದ್ದಿ ಕೇಂದ್ರದಲ್ಲಿ ಸದ್ದು ಮಾಡುತ್ತಿರುವುದು ಇದೇ ಆಸ್ತಿಗಳ ಮಾರಾಟದ ವಿಚಾರ.
TTD ತರ್ಕವೇನು?
ಈ 50 ಆಸ್ತಿಗಳನ್ನು ಭಕ್ತಾಧಿಗಳು ತಿಮ್ಮಪ್ಪನಿಗೆ ದಾನವಾಗಿ ನೀಡಿದ್ದ ಆಸ್ತಿಗಳು. ಆದರೆ, ಈ ಜಾಗದಲ್ಲಿ ಏನನ್ನೂ ಬೆಳೆಯಲಾಗುತ್ತಿಲ್ಲ. ಹೀಗಾಗಿ ಇದರ ನಿರ್ವಹಣೆ ಕಷ್ಟವಾಗುತ್ತಿದೆ. ದುಂದುವೆಚ್ಚ ಅಧಿಕವಾಗುತ್ತಿದೆ. ಹೀಗಾಗಿ ಇದರ ಮಾರಾಟ ಮಾಡಿ ಅದರಿಂದ ಹಣ ಸಂಗ್ರಹಿಸಿ ತಿಮ್ಮಪ್ಪನ ಖಾತೆಗೆ ಹಾಕುವುದು ಉತ್ತಮ ಎಂಬುದು ತಿರುಪತಿ ಆಡಳಿತ ಮಂಡಳಿಯ ವಾದ.
ಅಸಲಿಗೆ ಈ 50 ಸ್ಥಿರಾಸ್ತಿಗಳನ್ನು 2016ರಲ್ಲೇ ಅಂದಿನ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಸರ್ಕಾರ ಮಾರಾಟ ಮಾಡಲು ಮುಂದಾಗಿತ್ತು. ಅಲ್ಲದೆ, ತಿರುಪತಿ ತಿರುಮಲ ದೇವಸ್ಥಾನಕ್ಕೆ ಸೇರಿದ ಆಸ್ತಿಯನ್ನು ಮಾರುತ್ತಿರುವುದು ಇದೇ ಮೊದಲೇನಲ್ಲ. 1974ರಿಂದ 2014ರ 40 ವರ್ಷಗಳ ಅವಧಿಯಲ್ಲಿ ಒಟ್ಟು 129 ಆಸ್ತಿಗಳನ್ನ ಮಾರಾಟ ಮಾಡಲಾಗಿದೆ. ಅದರಲ್ಲೂ ಟಿಡಿಪಿ ಸರ್ಕಾರವಿದ್ದಾಗಲೇ ಅತಿಹೆಚ್ಚು ಆಸ್ತಿ ಮಾರಾಟ ಮಾಡಿರುವುದು ಉಲ್ಲೇಖಾರ್ಹ. ಆದರೆ, ಆಗೆಲ್ಲಾ ಆಗದ ಗಲಾಟೆ ಈಗೇಕೆ ಎಂಬುದು ಜಗಮೋಹನ್ ರೆಡ್ಡಿ ಸರ್ಕಾರದ ಪ್ರಶ್ನೆ.
ಒಟ್ಟಾರೆ ಆಂಧ್ರ ಸರ್ಕಾರ ತಿಮ್ಮನ್ನ ಆಸ್ತಿ ಮಾರಾಟಕ್ಕೆ ಮುಂದಾಗುತ್ತಿದ್ದಂತೆ ದೇಶಾದ್ಯಂತ ಇರುವ ಬಿಜೆಪಿ ನಾಯಕರು ಇದು ಹಿಂದುಗಳ ಭಾವನೆಗೆ ಧಕ್ಕೆ ಎಂದು ತಗಾದೆ ತೆಗೆದರು. ತೆಲುಗು ಚಿತ್ರರಂಗದ ಖ್ಯಾತ ನಟ ಪವನ್ ಕಲ್ಯಾಣ್ ತಾವು ಸರ್ಕಾರದ ವಿರುದ್ಧ ಉಪವಾಸ ಸತ್ಯಾಗ್ರಹ ಕೂರುವ ಬೆದರಿಕೆ ಒಡ್ಡಿದ್ದರು. ಇನ್ನೂ ಕರ್ನಾಟಕ ಸಂಸದ ತೇಜಸ್ವಿ ಸೂರ್ಯ ಸಹ ಆಂಧ್ರ ಸರ್ಕಾರದ ನಡೆಯನ್ನು ಖಂಡಿಸಿದ್ದರು. ಪರಿಣಾಮ ತಿರುಪತಿ ಆಸ್ತಿ ಮಾರಾಟದಿಂದ ಜಗನ್ ಸರ್ಕಾರ ಹಿಂದೆ ಸರಿದಿದೆ. ಹೀಗಾಗಿ ಈ ಎಲ್ಲಾ ವಿರೋಧಗಳ ಹಿಂದೆಯೂ ರಾಜಕೀಯ ಹಿತಾಸಕ್ತಿ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು,
ಆದರೆ, ತಿರುಪತಿ ಆಸ್ತಿ ಮಾರಾಟ ವಿಚಾರಕ್ಕೆ ಈ ಮಟ್ಟಕ್ಕೆ ತಲೆ ಕೆಡಿಸಿಕೊಂಡ ಈ ಯಾವ ಬಿಜೆಪಿ ನಾಯಕರೂ, ಸಂಸದರೂ, ಚಿತ್ರ ನಟರು ಲಾಕ್‌ಡೌನ್ ಪರಿಣಾಮದಿಂದಾಗಿ ಸರ್ಕಾರದಿಂದ ನಿರ್ಲಕ್ಷ್ಯಕ್ಕೆ ಒಳಗಾಗದ ವಲಸೆ ಕಾರ್ಮಿಕರ ಬಗ್ಗೆ ದನಿ ಎತ್ತಲಿಲ್ಲ. ಈ ಬಡ ಸಮೂಹ ದೇಶದಾದ್ಯಂತ ಮಹಾ ನಡಿಗೆ ನಡೆದಿತ್ತಲ್ಲ, ಈ ವೇಳೆ ಸಾಕಷ್ಟು ಮಾರಣಹೋಮಗಳೇ ಸಂಭವಿಸಿದ್ದವಲ್ಲ ಆಗೆಲ್ಲಾ ಈ ಜನ ಸಣ್ಣ ವಿಷಾಧವನ್ನೂ ವ್ಯಕ್ತಪಡಿಸಿರಲಿಲ್ಲ ಎಂಬುವುದು ಅರಗಿಸಿಕೊಳ್ಳಲಾಗದ ಕಹಿ ಸತ್ಯ.