ಮುಂದಿನ ವಾರ ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜೆ ಕಾರ್ಯಕ್ರಮದ ಮೇಲೆ ಇಡೀ ದೇಶದ ಕಣ್ಣಿದೆ. ಸರಿಸುಮಾರು ಮೂರೂವರೆ ದಶಕದ ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಣಾಳಿಕೆಯ ಅತ್ಯಂತ ಪ್ರಮುಖ ಭರವಸೆ ಆ ಮೂಲಕ ನಿಜವಾಗುವ ಕ್ಷಣ ಅದು. ಜೊತೆಗೆ ರಾಜಕೀಯ ಹಿಂದುತ್ವದ ಕನಸು ನನಸಾಗುವ ಘಳಿಗೆ ಕೂಡ. ಹಾಗಾಗಿ ಸಹಜವಾಗೇ ಎಲ್ಲರ ಕುತೂಹಲ ಮತ್ತು ನಿರೀಕ್ಷೆಗಳು ಗರಿಗೆದರಿವೆ.
ಆದರೆ, ಕರೋನಾ ಜಾಗತಿಕ ಸೋಂಕಿನ ನಿಯಂತ್ರಣದ ಭಾಗವಾಗಿ ಕೇಂದ್ರ ಸರ್ಕಾರ ಹೇರಿರುವ ಅನ್ ಲಾಕ್ 3.0ದ ಎಸ್ ಒಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಜಾರಿಯಲ್ಲಿರುವುದರಿಂದ, ಈ ಭೂಮಿ ಪೂಜೆ ಕಾರ್ಯಕ್ರಮ ಕೂಡ ಆ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಿದೆಯೇ? ಅಥವಾ ಇಲ್ಲವೇ? ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ; ದೇಶವ್ಯಾಪಿ ಅನ್ವಯವಾಗುವ ಈ ಎಸ್ ಒಪಿ ಪ್ರಕಾರವೇ ಕಾರ್ಯಕ್ರಮ ನಡೆದಲ್ಲಿ; ಸ್ವತಃ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಹಿರಿಯ ನಾಯಕ ಕಲ್ಯಾಣ್ ಸಿಂಗ್ ಸೇರಿದಂತೆ ಬಹುತೇಕ ವಿಶೇಷ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಾಗದು!
ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಾನೆ ಹೊರಡಿಸಿರುವ ಅನ್ ಲಾಕ್ 3.0 ಎಸ್ ಒಪಿ ಪ್ರಕಾರ, “65 ವರ್ಷ ಮೇಲ್ಪಟ್ಟವರು, ತೀವ್ರ ಆರೋಗ್ಯ ಸಮಸ್ಯೆ ಉಳ್ಳುವರು, ಗರ್ಭಿಣಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಿಂದ ಹೊರಬರುವಂತಿಲ್ಲ. ಈ ನಿಯಮ ಧಾರ್ಮಿಕ ಸಂಸ್ಥೆಗಳಿಗೂ, ದೇವಾಲಯಗಳಿಗೂ ಯಥಾ ಪ್ರಕಾರ ಅನ್ವಯವಾಗುತ್ತದೆ”.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಆಗಸ್ಟ್ 5ರಂದು ನಿಗದಿಯಾಗಿರುವ ರಾಮಮಂದಿರ ನಿರ್ಮಾಣ ಭೂಮಿ ಪೂಜೆ ಕಾರ್ಯಕ್ರಮಕ್ಕೆ 69 ವರ್ಷದ ಪ್ರಧಾನಿ ನರೇಂದ್ರ ಮೋದಿ, 92 ವರ್ಷದ ಹಿರಿಯ ನಾಯಕ ಹಾಗೂ ರಾಮಜನ್ಮಭೂಮಿ ಅಭಿಯಾನ ಮತ್ತು ರಥಯಾತ್ರೆಯ ರೂವಾರಿ ಎಲ್ ಕೆ ಅಡ್ವಾಣಿ, ಮತ್ತೊಬ್ಬ ಪ್ರಮುಖ ನಾಯಕ 86 ವರ್ಷದ ಮುರುಳಿ ಮನೋಹರ ಜೋಷಿ, ಆರ್ ಎಸ್ ಎಸ್ ನಾಯಕ, 69 ವರ್ಷದ ಮೋಹನ್ ಭಾಗ್ವತ್, ಆರ್ ಎಸ್ ಎಸ್ ಮತ್ತೊಬ್ಬ ಹಿರಿಯ ನಾಯಕ, 73 ವರ್ಷದ ಸುರೇಶ್ ಜೋಷಿ, ಉತ್ತರಪ್ರದೇಶದ ಮಾಜಿ ಸಿಎಂ, 88 ವರ್ಷದ ಕಲ್ಯಾಣ್ ಸಿಂಗ್ ಅವರನ್ನು ಆಹ್ವಾನಿಸಲಾಗಿದೆ. ಚಾಲ್ತಿಯಲ್ಲಿರುವ ಎಸ್ ಒಪಿಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವುದೇ ಆದರೆ, ಈ ಎಲ್ಲರೂ ತಮ್ಮ ಮನೆ ಬಿಟ್ಟು ಹೊರಬರುವಂತಿಲ್ಲ. ಕಾರ್ಯಕ್ರಮಕ್ಕೆ ಆಹ್ವಾನಿತರಲ್ಲಿ ನಿಯಮದ ಪ್ರಕಾರ ಭಾಗವಹಿಸುವ ಅವಕಾಶ ಇರುವುದು ಕೆಲವೇ ಕೆಲವು ಮಂದಿಗೆ ಮಾತ್ರ. ಆ ಪೈಕಿ ವಿಎಚ್ ಪಿ ನಾಯಕ ವಿನಯ್ ಕಟಿಯಾರ್(65), ಉಮಾ ಭಾರತಿ(61) ಪ್ರಮುಖರು.
ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳಿಗೆ, ಸಮಾರಂಭಗಳಿಗೆ ಕೂಡ ನಿಯಮಾವಳಿ ಪ್ರಕಾರ ಅವಕಾಶವಿಲ್ಲ.
ಈ ನಡುವೆ ಸರ್ಕಾರ ಕೂಡ, ಈಗಾಗಲೇ ಜಾರಿಯಲ್ಲಿರುವ ಎಸ್ ಒಪಿ ನಿಯಮಾವಳಿಗಳ ಪ್ರಕಾರವೇ ರಾಮಮಂದಿರ ಭೂಮಿ ಪೂಜೆ ಸಮಾರಂಭ ನಡೆಸುವುದಾಗಿ ಹೇಳಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಅನ್ ಲಾಕ್ 2.0 ಎಸ್ ಒಪಿಯಲ್ಲಿಯೇ ಸ್ಪಷ್ಟಪಡಿಸಲಾಗಿದೆ. ಆ ಪ್ರಕಾರವೇ ಕಾರ್ಯಕ್ರಮ ನಡೆಯಲಿದೆ. ಅದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಅಗತ್ಯವಿಲ್ಲ ಎಂದೂ ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿರುವುದಾಗಿ ‘ದ ಪ್ರಿಂಟ್’ ಹೇಳಿದೆ.

ಸಾಮಾಜಿಕ ಅಂತರ (ಪರಸ್ಪರ ಎರಡು ಮೀಟರ್ ಅಂತರ), ಸುತ್ತಮುತ್ತಲ ಪರಿಸರದ ಸ್ಯಾನಿಟೇಷನ್,(Sanitation) ಮಾಸ್ಕ ಧರಿಸುವಿಕೆ, ಕೈ ಸ್ವಚ್ಛತೆ, ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮುಂತಾದ ಕ್ರಮಗಳನ್ನು ಖಾತರಿಪಡಿಸಲಾಗುವುದು. ಆ ಎಲ್ಲಾ ನಿಯಮಾವಳಿ ಪಾಲಿಸಿಕೊಂಡೇ ಕಾರ್ಯಕ್ರಮ ನಡೆಸಲು ಅವಕಾಶವಿದೆ ಎಂದೂ ಸಚಿವಾಲಯ ಹೇಳಿದೆ.
ಆದರೆ, ಅನ್ ಲಾಕ್ 3.0 (Unlock 3.0) ಎಸ್ ಒಪಿ ಪ್ರಕಾರ ಯಾವುದೇ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭಗಳಿಗೆ, ರ್ಯಾಲಿಗಳಿಗೆ ಅವಕಾಶವಿಲ್ಲ. ಕೋವಿಡ್-19 ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು, ಮಾರ್ಗದರ್ಶಿ ಸೂಚನೆಗಳನ್ನು ಪಾಲಿಸಿಕೊಂಡು, ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಲು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಇನ್ನು ಕೇವಲ ಐದು ದಿನಗಳಲ್ಲಿ ನಡೆಯಲಿರುವ ಭೂಮಿ ಪೂಜಾ ಸಮಾರಂಭವನ್ನು ಹೇಗೆ ನಡೆಸಲಾಗುವುದು ? ಆಹ್ವಾನಿತ ಸುಮಾರು 200 ಮಂದಿ ಗಣ್ಯರಿಗೆ ಎಸ್ಒಪಿ(SOP) ಪಾಲನೆಯ ವಿಷಯದಲ್ಲಿ ಯಾವೆಲ್ಲಾ ರಿಯಾಯ್ತಿಗಳನ್ನು ನೀಡಲಾಗುವುದು? ಸಮಾರಂಭದಲ್ಲಿ ಎಸ್ ಒಪಿ ಪಾಲನೆಯ ವಿಷಯದಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಅವರ ಸರ್ಕಾರ ಏನೆಲ್ಲಾ ಕ್ರಮ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಹುಟ್ಟಿಸಿದೆ.

