ದೇಶದ ಬ್ಯಾಂಕಿಂಗ್ ವಲಯದ ಅಧಃಪತನದ ಮತ್ತೊಂದು ಮೈಲಿಗಲ್ಲಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕಿನ(ಎಲ್ ವಿಬಿ) ಪ್ರಕರಣ ಹೊರಬಿದ್ದಿದೆ.
ಕಳೆದ ಐದಾರು ವರ್ಷಗಳಲ್ಲಿ ದೇಶ ‘ಅಚ್ಛೇದಿನ’ಗಳತ್ತ ದಾಪುಗಾಲಿಕ್ಕುತ್ತಿರುವ ವೇಗದಲ್ಲೇ ಹೊರಬೀಳುತ್ತಿರುವ ಸರಣಿ ಬ್ಯಾಂಕಿಂಗ್ ಹಗರಣಗಳು ಮತ್ತು ದಿವಾಳಿಯ ಪ್ರಕರಣಗಳಂತೆಯೇ ಎಲ್ ವಿಬಿ ಬ್ಯಾಂಕ್ ಆಡಳಿತ ಮಂಡಳಿಯ ಅಕ್ರಮಗಳು ಮತ್ತು ಸ್ವಜನ ಪಕ್ಷಪಾತ ಅದರ ಪತನಕ್ಕೆ ಎಷ್ಟು ಕಾರಣವೋ, ಅಷ್ಟೇ ದೇಶದ ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಕಣ್ಗಾವಲು ಬ್ಯಾಂಕ್ ಆರ್ ಬಿಐನ ನಿಷ್ಕ್ರಿಯತೆ ಮತ್ತು ಉದ್ದೇಶಿತ ವಿಳಂಬ ನೀತಿ ಕೂಡ ಕಾರಣ ಎಂಬ ವಿವರಗಳು ಕೂಡ ನಿಧಾನಕ್ಕೆ ಹೊರಬೀಳುತ್ತಿವೆ.
ಕಳೆದ ಕೆಲವು ವರ್ಷಗಳಿಂದಲೇ ಎಲ್ ವಿಬಿ ಬಿಕ್ಕಟ್ಟು ಉಲ್ಬಣಗೊಂಡಿದ್ದರೂ, ಸ್ವತಃ ಶೇರುದಾರರೇ ಬ್ಯಾಂಕಿನ ಆಡಳಿತ ಮಂಡಳಿಯ ಅಕ್ರಮಗಳ ಪಟ್ಟಿ ಮಾಡಿ, ಗ್ರಾಹಕರ ಹಣ ರಕ್ಷಣೆಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದರೂ, ಆರ್ ಬಿಐ ಸಕಾಲಿಕ ಕ್ರಮ ಕೈಗೊಳ್ಳಲಿಲ್ಲ. ಹಾಗಾಗಿ ಬ್ಯಾಂಕಿನ ದುರ್ಗತಿ ಮತ್ತು ಠೇವಣಿದಾರರ ಸಂಕಷ್ಟಗಳಿಗೆ ಬ್ಯಾಂಕ್ ಆಡಳಿತ ಮಂಡಳಿ ಎಷ್ಟು ಕಾರಣವೋ, ಅಷ್ಟೇ ಪ್ರಮಾಣದಲ್ಲಿ ಆರ್ ಬಿಐ ಕೂಡ ಕಾರಣ ಎಂಬುದು ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್(ಎಐಬಿಇಎ) ನ ಗಂಭೀರ ಆರೋಪ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೊತೆಗೆ ಬ್ಯಾಂಕಿನ ದಿವಾಳಿ ತಡೆಯುವ ಕೊನೆಯ ಯತ್ನವಾಗಿ ಆರ್ ಬಿಐ , ತೀರಾ ತಡವಾಗಿ ಇದೀಗ ಅದನ್ನು ಸಿಂಗಪೂರ ಮೂಲದ ಡಿಬಿಎಸ್ ಬ್ಯಾಂಕಿಂಗ್ ಇಂಡಿಯಾ ಲಿಮಿಟೆಡ್ ಜೊತೆ ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸಿರುವ ಬಗ್ಗೆಯೂ ಎಐಬಿಇಎ ಆಕ್ಷೇಪವೆತ್ತಿದೆ. “ಬ್ಯಾಂಕಿನ ಸದ್ಯದ ಬಿಕ್ಕಟ್ಟಿಗೆ ಅದನ್ನು ಮತ್ತೊಂದು ಖಾಸಗೀ ವಿದೇಶಿ ಬ್ಯಾಂಕಿನೊಂದಿಗೆ ವಿಲೀನಗೊಳಿಸುವುದು ಯಾವ ರೀತಿಯಲ್ಲಿ ಪರಿಹಾರವಲ್ಲ. ಬದಲಾಗಿ, ಆರ್ ಬಿಐಗೆ ಈ ಬ್ಯಾಂಕಿನ ಗ್ರಾಹಕರ ಹಿತಾಸಕ್ತಿ ಕಾಯುವುದು ಮತ್ತು ಅದನ್ನು ಪುನರುಜ್ಜೀವನಗೊಳಿಸುವುದೇ ಆದ್ಯತೆಯಾಗಿದ್ದರೆ, ದೇಶದ ಯಾವುದಾದರೂ ಸಾರ್ವಜನಿಕ ವಲಯದ ಬ್ಯಾಂಕ್ ಜೊತೆ ವಿಲೀನಗೊಳಿಸುವುದು ವಿವೇಚನೆಯ ನಿರ್ಧಾರವಾಗುತ್ತಿತ್ತು” ಎಂದು ಸಂಘಟನೆ ಪ್ರತಿಕ್ರಿಯಿಸಿದೆ.
Also Read: ಕುಸಿದ ಲಕ್ಷ್ಮಿ ವಿಲಾಸ ಬ್ಯಾಂಕಿನ ಅಕ್ರಮಗಳ ವಿಲಾಸಕ್ಕೆ ಕೊನೆಯೇ ಇಲ್ಲ!
“ಎಲ್ ವಿ ಬ್ಯಾಂಕ್ ಪತನವಾಗಲಿದೆ ಎಂಬುದು ಆರ್ ಬಿಐಗೆ ಬಹಳ ಹಿಂದೆಯೇ ಗೊತ್ತಿತ್ತು. ಆದರೆ, ಅದು ಸಕಾಲಿಕ ಕ್ರಮದ ಬದಲು, ಉದ್ದೇಶಪೂರ್ವಕ ವಿಳಂಬ ಧೋರಣೆ ತಳೆಯಿತು. ಯಾವುದೇ ರೋಗಿಯ ರೋಗ ಯಾವುದು ಎಂಬುದನ್ನು ಪತ್ತೆ ಮಾಡಿದ ಬಳಿಕ, ಆ ರೋಗವನ್ನು ಆದಷ್ಟು ಬೇಗ ಗುಣಪಡಿಸಲು ಸೂಕ್ತ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವುದು ವೈದ್ಯರ ಕರ್ತವ್ಯ. ಆದರೆ, ಈ ಎಲ್ ವಿಬಿ ರೋಗಿಯ ವಿಷಯದಲ್ಲಿ ಮಾತ್ರ ವೈದ್ಯನಾದ ಆರ್ ಬಿಐ ಅಂತಹ ಯಾವ ಕಾಳಜಿಯನ್ನೂ ತೋರಲೇ ಇಲ್ಲ. ರೋಗ ಉಲ್ಬಣಗೊಂಡಿದೆ ಎಂದು ಗೊತ್ತಿದ್ದರೂ ಕಣ್ಣುಮುಚ್ಚಿ ಕುಳಿತಂತೆ ನಟಿಸಿ, ಈಗ ರೋಗಿ ಸತ್ತಿರುವುದಾಗಿ ಘೋಷಿಸಿ ಕೈತೊಳೆದುಕೊಳ್ಳಲಾಗಿದೆ” ಎಂದು ಎಐಬಿಇಎ ಪ್ರಧಾನ ಕಾರ್ಯದರ್ಶಿ ಸಿ ಎಚ್ ವೆಂಕಟಾಚಲಂ ಆರ್ ಬಿಐ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಅದೇ ಹೊತ್ತಿಗೆ, “ಎಲ್ ವಿಬಿ ದಿವಾಳಿಯಾಗಿದೆ. ಅದರ ವ್ಯವಹಾರ ಮತ್ತು ಆಡಳಿತಗಳ ಲೋಪದಿಂದಾಗಿಯೇ ಅದು ಇಂದು ಈ ಸ್ಥಿತಿಗೆ ತಲುಪಿದೆ. ವಾಸ್ತವಾಂಶ ಹಾಗಿರುವಾಗ, ಅಂತಹ ರೋಗಗ್ರಸ್ಥ ಬ್ಯಾಂಕಿನಲ್ಲಿ ಹೂಡಿಕೆ ಮಾಡಲು ಡಿಬಿಎಸ್ ಆಸಕ್ತಿ ವಹಿಸಿರುವುದು ಅಚ್ಚರಿಯ ಸಂಗತಿ. ಖಾಸಗೀ ವಲಯದ ಒಂದು ರೋಗಗ್ರಸ್ಥ, ಮುಳುಗುತ್ತಿರುವ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಹೂಡಿಕೆ ಮಾಡಿ ಅದನ್ನು ಉಳಿಸಲು ಮತ್ತೊಂದು ವಿದೇಶಿ ಮೂಲದ ಖಾಸಗೀ ಬ್ಯಾಂಕ್ ತೋರುತ್ತಿರುವ ಈ ಕಾಳಜಿಯ ಹಿಂದೆ ಬೇರೇನೋ ಹಿತಾಸಕ್ತಿ ಇದೆ. ಆ ಬಗ್ಗೆ ಸೂಕ್ತ ತನಿಖೆಯಾಗಬೇಕು. ಆರ್ ಬಿಐ ಕೂಡ ಈ ವ್ಯವಹಾರದ ಹಿಂದಿನ ಅಸಲೀ ಹಿತಾಸಕ್ತಿ ಏನು ಎಂಬುದನ್ನು ಆದಷ್ಟು ಶೀಘ್ರವೇ ಬಯಲುಮಾಡಿದರೆ ಒಳಿತು” ಎಂದು ವೆಂಕಟಾಚಲಂ ಆಗ್ರಹಿಸಿದ್ದಾರೆ.
“ಕಳೆದ ಮೂರು ವರ್ಷಗಳಿಂದ ತಮಿಳುನಾಡು ಮೂಲದ ಈ ಎಲ್ ವಿಬಿ ರೋಗಗ್ರಸ್ಥವಾಗಿತ್ತು. ನಿರಂತರ ನಷ್ಟ ಮತ್ತು ಅಕ್ರಮಗಳಿಂದಾಗಿ ಅದು ಪತನವಾಗುತ್ತಲೇ ಇತ್ತು. ಈ ಪತನದ ಹಿಂದಿನ ಅಸಲೀ ಕಾರಣಗಳು ಆರ್ ಬಿಐ ಸೇರಿದಂತೆ ವಲಯದ ಎಲ್ಲರಿಗೂ ತಿಳಿದ ಸಂಗತಿಯೇ ಆಗಿತ್ತು. ರಿಲೆಯನ್ಸ್ ಹೌಸಿಂಗ್ ಫೈನಾನ್ಸ್, ಕಾಫಿ ಡೇ, ನೀರವ್ ಮೋದಿ, ಕಾಕ್ಸ್ ಅಂಡ್ ಕಿಂಗ್ಸ್, ಜೆಟ್ ಏರ್ ವೇಯ್ಸ್, ರೆಲಿಗೇರ್ ಮುಂತಾದ ದೇಶದ ಬ್ಯಾಂಕಿಂಗ್ ವಲಯವನ್ನು ದಿವಾಳಿ ಎಬ್ಬಿಸಿದ ತಿಮಿಂಗಿಲಗಳ ಸುಮಾರು ಎರಡು ಸಾವಿರ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದ ವಸೂಲಾಗದ ಸಾಲದ ಹೊರೆ ಬೆಳೆದಿತ್ತು. ಇಂತಹ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ತನ್ನ ನಾಮನಿರ್ದೇಶಿತ ನಿರ್ದೇಶಕರನ್ನೂ ಹೊಂದಿದ್ದ ಆರ್ ಬಿಐಗೆ, ಈ ಎಲ್ಲಾ ಬಾಕಿದಾರರು ಜನರ ಠೇವಣಿ ಹಣವನ್ನು ಲೂಟಿ ಹೊಡೆದಿರುವುದರ ಪ್ರತಿ ವಿವರವೂ ಗೊತ್ತಿತ್ತು” ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
“ಆರಂಭದಿಂದಲೂ ಸಮಸ್ಯೆಯ ಅರಿವಿದ್ದರೂ, ಆರ್ ಬಿಐ ಕೊನೇ ಕ್ಷಣದಲ್ಲಿ ಕ್ರಮಕ್ಕೆ ಮುಂದಾಗಿದೆ. ಆದರೆ, ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಸ್ಥಿರತೆಯನ್ನು ಖಾತರಿಪಡಿಸಬೇಕಾದ ಗುರುತರ ಹೊಣೆಗಾರಿಕೆಯ ಆರ್ ಬಿಐ, ಹೀಗೆ ನಾಮಕಾವಸ್ಥೆಗೆ ಏನನ್ನೋ ಮಾಡಿ ಕೈತೊಳೆದುಕೊಳ್ಳುವಂತಿಲ್ಲ. ತನ್ನ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಸಕಾಲಿಕ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ತನ್ನ ಹೊಣೆಗೇಡಿತನಕ್ಕೆ ಅದು ಉತ್ತರ ಕೊಡಬೇಕಿದೆ. ಆ ಹಿನ್ನೆಲೆಯಲ್ಲಿ ಇಡೀ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು” ಎಂದು ಆಗ್ರಹಿಸಿರುವ ವೆಂಕಟಾಚಲಂ ಅವರು, ಬ್ಯಾಂಕಿನ ಭಾರೀ ಎನ್ ಪಿಎ ಹೊರೆಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧವೂ ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಈ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಎಲ್ ವಿಬಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಬ್ಯಾಂಕಿಂಗ್ ವಲಯದ ನಿಯಂತ್ರಣಾ ವ್ಯವಸ್ಥೆಯಾದ ಆರ್ ಬಿಐ ವಿರುದ್ಧವೇ ಬ್ಯಾಂಕ್ ನೌಕರರ ಒಕ್ಕೂಟ ನೇರ ಆರೋಪ ಮಾಡಿರುವುದರಿಂದ ಮತ್ತು ರಿಲೆಯನ್ಸ್, ನೀರವ್ ಮೋದಿಯಂತಹ ಆಡಳಿತ ಪಕ್ಷದೊಂದಿಗೆ ಆಪ್ತ ನಂಟು ಹೊಂದಿರುವವರೇ ಬಹುತೇಕ ಬಾಕಿದಾರರ ಪಟ್ಟಿಯಲ್ಲಿರುವುದರಿಂದ ಈ ಪ್ರಕರಣ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಲಿರುವ ಸ್ವರೂಪ ಕುತೂಹಲ ಮೂಡಿಸಿದೆ.