ಪ್ರಧಾನ ಮಂತ್ರಿ ನರೇಂದ್ರ ಮೊದಿ ಪತ್ರಿಕಾಗೋಷ್ಠಿ ನಡೆಸಲ್ಲ. ಅವರ ನೇತೃತ್ವದ ಸರ್ಕಾರ ಜನಕ್ಕೆ ತಾನು ಉತ್ತರದಾಯಿ ಎನ್ನುವುದನ್ನೇ ಮರೆತುಬಿಟ್ಟಿದೆ ಎಂಬ ಆರೋಪಗಳಿವೆ. ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ವಿಷಯದಲ್ಲಿ ಗುಜರಾತಿನಲ್ಲೂ ಇಂಥದೇ ಆರೋಪಗಳು ಕೇಳಿಬಂದಿದ್ದವು. ಈಗ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಸುವ ವಿಷಯದಲ್ಲೂ ಕೇಂದ್ರ ಸರ್ಕಾರ ಪಲಾಯನವನ್ನೇ ಮಾಡುತ್ತಿದೆ.
ಸಾಮಾನ್ಯವಾಗಿ ನವೆಂಬರ್ ಕೊನೆ ಮತ್ತು ಡಿಸೆಂಬರ್ ಮೊದಲ ವಾರಗಳಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸಲಾಗುತ್ತದೆ. ಆದರೀಗ ಈ ಚಳಿಗಾಲದ ಅಧಿವೇಶನವನ್ನು ನಡೆಸದಿರಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿಲ್ಲ. ಹೊರಡಿಸಬೇಕಾಗಿಯೂ ಇಲ್ಲ. ಆದರೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಲೋಕಸಭೆಯ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಅವರ ಪತ್ರಕ್ಕೆ ಪ್ರತಿಕ್ರಿಯಿ ನೀಡಿ ಬರೆದಿರುವ ಪತ್ರದಲ್ಲಿ ‘ಈ ಬಾರಿ ಚಳಿಗಾಲದ ಅಧಿವೇಶನ ನಡೆಯುವುದಿಲ್ಲ, ಬದಲಿಗೆ ಜನವರಿಯಲ್ಲಿ ಬಜೆಟ್ ಅಧಿವೇಶನ ಕರೆಯಲಾಗುತ್ತದೆ’ ಎಂಬುದಾಗಿ ಹೇಳಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇತ್ತೀಚೆಗೆ ಕೇಂದ್ರ ಸರ್ಕಾರ ತಂದಿರುವ ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ಕಾನೂನುಗಳನ್ನು ಕೈಬಿಡಬೇಕೆಂದು 21 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಕೊರೆಯುವ ಚಳಿಯಲ್ಲೂ ತಮ್ಮ ಮೊರೆ ಆಲಿಸುವಂತೆ ರೈತರು ಅಲವತ್ತುಕೊಳ್ಳುತ್ತಿದ್ದಾರೆ. ಅನ್ನದಾತರ ಪ್ರತಿಭಟನೆಗೆ ದೇಶದ 500ಕ್ಕೂ ಹೆಚ್ಚು ರೈತ ಸಂಘಟನೆಗಳು, ಸಾರ್ವಜನಿಕರು, ವಿವಿಧ ಕ್ಷೇತ್ರದ ಗಣ್ಯರು, ಮಾಜಿ ಸೈನಿಕರೆಲ್ಲರೂ ಬೆಂಬಲ ಸೂಚಿಸಿದ್ದಾರೆ. ಆದರೂ ಕೇಂದ್ರ ಸರ್ಕಾರ ಮಾತ್ರ ರೈತರ ಬೇಡಿಕೆಗಳನ್ನು ಈಡೇರಿಸಲು ಸಿದ್ದವಾಗಿಲ್ಲ. ಈ ಬಗ್ಗೆ ಚರ್ಚೆ ಮಾಡಲು ‘ಚುಟುಕಾದ ಚಳಿಗಾಲದ ಅಧಿವೇಶನವನ್ನಾದರೂ ಕರೆಯಿರಿ’ ಎಂದು ಅಧೀರ್ ರಂಜನ್ ಚೌಧರಿ ಪತ್ರ ಬರೆದಿದ್ದರು.
ಇದಲ್ಲದೆ ಇನ್ನೂ ಕೆಲವು ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಯಬೇಕಿದೆ. ಅದಕ್ಕಾಗಿ ಕೂಡ ಸಂಸತ್ ಅಧಿವೇಶನ ಕರೆಯಬೇಕಾಗಿತ್ತು. ಅಂಥ ಪ್ರಮುಖ ವಿಷಯಗಳೆಂದರೆ…
1. ಕೊನೆಯಾಗದ ಕರೋನಾ ಕಷ್ಟ
ಕರೊನಾ ಪತ್ತೆಯಾಗಿ ವರ್ಷವಾಗುತ್ತಿದ್ದರೂ (ದೇಶದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು 2020ರ ಜನವರಿ 30ರಂದು) ಇನ್ನೂ ನಿಯಂತ್ರಣಕ್ಕೆ ಬರುತ್ತಿಲ್ಲ. ಜೊತೆಗೆ ಕರೋನಾಗೆ ಲಸಿಕೆ ಕಂಡುಹಿಡಿಯುವುದು ಕೂಡ ತಡವಾಗುತ್ತಿದೆ. ಲಸಿಕೆ ಬಂದರೂ ಅದನ್ನು ಎಷ್ಟರ ಮಟ್ಟಗಿನ ವ್ಯವಸ್ಥಿತವಾಗಿ ಹಾಗೂ ವೈಜ್ಞಾನಿಕವಾಗಿ ಹಂಚಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದರ ಬಗ್ಗೆ ಕೂಡ ಚರ್ಚೆಯಾಗಬೇಕಿತ್ತು.
2. ಗಡಿಯಲ್ಲಿ ನಿಲ್ಲದ ಸಮಸ್ಯೆ
ಭಾರತ ಮತ್ತು ಚೀನಾ ಗಡಿಯಲ್ಲಿ ಚೀನಾ ನಡೆಸುತ್ತಿರುವ ಉಪಟಳ ಇನ್ನೂ ಸಂಪೂರ್ಣವಾಗಿ ನಿಂತಿಲ್ಲ. ಈ ಬಗ್ಗೆ ಭಾರತ ದಿಟ್ಟ ಉತ್ತರ ನೀಡಬೇಕಿದೆ. ಮುಖ್ಯವಾಗಿ ಚೀನಾ ದೇಶ ವಶಪಡಿಸಿಕೊಂಡಿರುವ ಭಾರತದ ಭೂಭಾಗವನ್ನು ವಾಪಸ್ ಪಡೆಯಬೇಕಿದೆ. ಅದಕ್ಕಾಗಿ ಅಂತಾರಾಷ್ಟ್ರೀಯ ಸಮೂಹದ ಮೂಲಕ ಚೀನಾ ಮೇಲೆ ಒತ್ತಡ ಹೇರಬೇಕಿದೆ. ಅಲ್ಲದೆ ಕರೊನಾ ಬಳಿಕ ಮತ್ತೆ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಕ್ರಿಯವಾಗಬೇಕಿದೆ. ಇವುಗಳು ಕೂಡ ಸಂಸತ್ ಅಧಿವೇಶನದಲ್ಲಿ ಚರ್ಚೆಯಾಗಬೇಕಿರುವ ವಿಷಯಗಳಾಗಿದ್ದವು.
3. ಚೇತರಿಕೆ ಕಾಣದ ಆರ್ಥಿಕತೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ದೇಶದ ಆರ್ಥಿಕತೆ ಕುಸಿಯುತ್ತಲೇ ಇದೆ. ಜಿಡಿಪಿ ಹಿಂದೆಂದೂ ಕಾಣದಷ್ಟು ಪ್ರಪಾತಕ್ಕೆ ಕುಸಿದಿದೆ. ಆದರೂ ಕೇಂದ್ರ ಸರ್ಕಾರ ಆರ್ಥಿಕವಾಗಿ ಚೇತರಿಸಿಕೊಳ್ಳಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಜೊತೆಗೆ ನರೇಂದ್ರ ಮೋದಿ ಯಾವೊಂದು ಮುಂದಾಲೋಚನೆ ಮಾಡದೆ ಲಾಕ್ಡೌನ್ ಘೋಷಣೆ ಮಾಡಿದ ಕ್ರಮ ದೇಶದ ಆರ್ಥಿಕತೆಯ ಪರಿಸ್ಥಿತಿ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ. ಈ ಬಗ್ಗೆ ಚರ್ಚಿಸಲು ಅಧಿವೇಶನ ಕರೆಯುವಂತೆ ಪ್ರತಿಪಕ್ಷಗಳು ಆಗ್ರಹಿಸಿದ್ದವು.
4. ಹೆಚ್ಚುತ್ತಿರುವ ನಿರುದ್ಯೋಗದ ಸಮಸ್ಯೆ
ದೇಶದಲ್ಲಿ ಆರ್ಥಿಕತೆ ಕುಸಿದಿರುವುದರಿಂದ, ಜಿಡಿಪಿ ಮೇಲೇಳುತ್ತಿರುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾರಕ್ಕೇರಿದೆ. ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಹೇಳಿದ್ದರು. ಈಗ ಉದ್ಯೋಗ ಸೃಷ್ಠಿಯ ಬದಲಿಗೆ ಉದ್ಯೋಗ ನಷ್ಟವಾಗುತ್ತಿದೆ. ಇದು ಕೂಡ ಚರ್ಚಿಸಬೇಕಾದ ವಿಷಯವಾಗಿತ್ತು.
5. ಬೆಲೆ ಏರಿಕೆ
ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ಬೆಲೆ ಏರಿಕೆ ಬಗ್ಗೆ ಕೂಡ ಭಾರೀ ಮಾತನಾಡಿದ್ದರು. ಆದರೀಗ ಅವರದೇ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಬೆಲೆ ಏರಿಕೆ ತೆಹಬದಿಗೆ ಬಂದಿಲ್ಲ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಜನ ಕರೋನಾ ಮತ್ತು ಲಾಕ್ಡೌನ್ ಕಷ್ಟಗಳಲ್ಲಿದ್ದಾಗಲೂ ನರೇಂದ್ರ ಮೋದಿ ಸರ್ಕಾರ ನಿರ್ಧಯಿಯಾಗಿ ಸುಲಿಗೆ ಮಾಡಿದೆ. ಇದಲ್ಲದೆ ಅಡುಗೆ ಸಿಲಿಂಡರ್ ಬೆಲೆ ಕೂಡ ಹೆಚ್ಚಾಗಿದೆ. ಡಿಸೆಂಬರ್ ತಿಂಗಳಿನಲ್ಲೇ ಎರಡು ಸಲ ಎಲ್ ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಸಲಾಗಿದೆ. ಇದರ ಬಗ್ಗೆ ಚರ್ಚೆ ಮಾಡುವುದು ಕೂಡ ಅತ್ಯಗತ್ಯವಾಗಿತ್ತು.
ಇವು ಪ್ರಮುಖ ವಿಷಯಗಳಷ್ಟೇ. ಇನ್ನೂ ಹಲವು ಸಂಗತಿಗಳಿದ್ದವು. ಆದರೆ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನವನ್ನೇ ನಡೆಸುತ್ತಿಲ್ಲ. ಸಂಸತ್ ಅಧಿವೇಶನ ರದ್ದು ಗೊಳಿಸಲು ಕೇಂದ್ರ ಸರ್ಕಾರ ಕೊಟ್ಟಿರುವ ಕಾರಣ ಕರೋನಾ. ಹಿಂದೆ ಮಳೆಗಾಲದ ಅಧಿವೇಶನವನ್ನೂ ಕರೋನಾ ಕಾರಣ ಕೊಟ್ಟು ಮೊಟಕುಗೊಳಿಸಲಾಗಿತ್ತು.
ಬಿಜೆಪಿ ನಾಯಕರಿಗೆ (ಅವರದೇ ಸರ್ಕಾರ) ಸಂಸತ್ ಅಧಿವೇಶನ ನಡೆಸಲು ಮಾತ್ರ ಕರೋನಾ ಭಯ ಕಾಡುತ್ತದೆ. ಆದರೆ ಚುನಾವಣೆ ನಡೆಸಬೇಕು ಎಂದರೆ ಕರೋನಾ ನೆನಪಾಗುವುದೇ ಇಲ್ಲ. ಇತ್ತೀಚೆಗೆ ಬಿಹಾರ ವಿಧಾನಸಭಾ ಚುನಾವಣೆ ನಡೆಸಿದ್ದರು. ಆಗ ಕರೋನಾ ಇರಲಿಲ್ಲವೇ? ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ನಡೆಸಿದರು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೈದರಾಬಾದಿನಲ್ಲಿ ರೋಡ್ ಶೋ ಕೂಡ ನಡೆಸಿದ್ದರು. ಆಗ ಕರೋನಾ ಇರಲಿಲ್ಲವೇ? ಈಗ ಇದೇ ನಡ್ಡಾ ಮತ್ತು ಅಮಿತ್ ಶಾ ಪದೇ ಪದೇ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಕರೋನಾ ಇಲ್ಲವೇ?
ಹಂತಹಂತವಾಗಿ ಅನ್ಲಾಕ್ ಮಾಡಲಾಗುತ್ತಿದೆ. ಮಕ್ಕಳ ವಿಷಯದಲ್ಲಿ ಅತ್ಯಂತ ಎಚ್ಚರ ವಹಿಸಬೇಕು. ಆದರೂ ಶಾಲಾ-ಕಾಲೇಜುಗಳನ್ನು ಬೇಕಾದರೆ ತೆರೆಯಿರಿ ಎಂದು ಕೇಂದ್ರ ಗೃಹ ಇಲಾಖೆಯ ಅಧಿಕೃತ ಮಾರ್ಗಸೂಚಿಯೇ ತಿಳಿಸುತ್ತದೆ. ಎಲ್ಲಾ ವ್ಯವಹಾರಗಳು ನಡೆಯುತ್ತಿವೆ. ಎಲ್ಲವೂ ನಡೆಯುವುದಾದರೆ ಸಂಸತ್ ಅಧಿವೇಶನ ಅಧಿವೇಶನ ಏಕಿಲ್ಲ? ಜನರು ಸತ್ತರೂ ಪರವಾಗಿಲ್ಲ, ಸಂಸತ್ ಸದಸ್ಯರ ಪ್ರಾಣಮಾತ್ರ ಮುಖ್ಯವೇ?