ಕೇಂದ್ರ ಸರ್ಕಾರದಿಂದ ಸರ್ವರಿಗೂ ಸೂರನ್ನೊದಗಿಸುವುದನ್ನು ಖಾತ್ರಿ ಮಾಡುಲು ಕೋರಿದ ಮದ್ರಾಸ್ ಹೈಕೋರ್ಟ್, ದೇಶದಲ್ಲಿ ಅನಿವಾಸಿ ಭಾರತೀಯರು ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಖರೀದಿ ಮಾಡದಂತೆ ನಿಷೇಧ ತರಲು ಸೂಚಿಸಿದೆ.
ಅನಿವಾಸಿಗಳಿಗೆ ಮನೆ ಮಾರಾಟವನ್ನು ನಿಷೇಧಿಸಿ, ಎರಡನೇ ಮನೆ ಖರೀದಿ ಮೇಲೆ 100% ತೆರಿಗೆ ವಿಧಿಸಲು ಹೈಕೋರ್ಟ್ ಸೂಚಿಸಿದೆ.
ಕೇಂದ್ರ ಗೃಹ ನಿರ್ಮಾಣ ಹಾಗೂ ವಿತ್ತ ಸಚಿವಾಲಯಗಳನ್ನು ಪಾರ್ಟಿಗಳನ್ನಾಗಿ ಮಾಡಿಕೊಂಡಿರುವ ಮದ್ರಾಸ್ ಹೈಕೋರ್ಟ್, ಭಾರತ ಹಾಗೂ ತಮಿಳು ನಾಡಿನಲ್ಲಿ ಅದೆಷ್ಟು ಕುಟುಂಬಗಳಿಗೆ ಮೂಲ ಸೌಕರ್ಯವಾಗಿ ಮನೆಯ ಲಭ್ಯತೆ ಇದೆ ಎಂದು ಉತ್ತರಿಸುವಂತೆ ಕೋರಿ ಅನೇಕ ಪ್ರಶ್ನೆಗಳನ್ನು ಮುಂದಿಟ್ಟಿದೆ. ಕೇಂದ್ರ ಸರ್ಕಾರದ “ಸರ್ವರಿಗೂ ಸೂರು” ಅಭಿಯಾನ ಯಾವಾಗ ಪೂರ್ಣಗೊಳ್ಳಲಿದೆ ಎಂದು ಹೈಕೋರ್ಟ್ ಇದೇ ಸಂದರ್ಭದಲ್ಲಿ ಪ್ರಶ್ನಿಸಿದೆ.
“ದೇಶದಲ್ಲಿರುವ ಸರ್ವರಿಗೂ ಸೂರು ಒದಗಿಸುವ ಉದ್ದೇಶದಿಂದ ಸರ್ಕಾರವೇಕೆ ಒಬ್ಬರಿಗೆ ಒಂದೊಂದೇ ಮನೆ ಎಂಬ ರೀತಿಯ ನಿಯಂತ್ರಣಗಳನ್ನು ಅನುಷ್ಠಾನಕ್ಕೆ ತಂದು ಹಿಂದುಳಿದ ಹಾಗೂ ಆರ್ಥಿವಾಗಿ ದುರ್ಬಲ ವರ್ಗಗಳಾಗಿರುವ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಸಮುದಾಯಗಳಿಗೆ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಬಾರದು? ಇಂಥ ಕ್ರಮಗಳ ಮೂಲಕ ದೇಶದಲ್ಲಿ ಗೃಹ ಖರೀದಿಯ ಬೆಲೆಗಳನ್ನೇಕೆ ನಿಯಂತ್ರಣಕ್ಕೆ ತರಬಾರದು,” ಎಂದು ಹೈಕೋರ್ಟ್ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ ಹಾಗೂ ಅಬ್ದುಲ್ ಖುದ್ದೋಸ್ ಇದ್ದ ಪೀಠವು, “ಎರಡನೇ ಮನೆ ಖರೀದಿ ಮಾಡಲು ಬಯಸುವ ಕುಟುಂಬಗಳಿಗೆ ಸರ್ಕಾರವೇಕೆ 100% ತೆರಿಗೆ ವಿಧಿಸಬಾರದು? ಈ ಮೂಲಕ ಒಬ್ಬಬ್ಬರೇ ಹಲವು ಮನೆಗಳನ್ನು ಖರೀದಿ ಮಾಡದಂತೆ ನೋಡಿಕೊಳ್ಳಬಾರದು,” ಎಂದು ಹೇಳಿದೆ.
“ಪ್ಲಾಟ್‌ಫಾರಂಗಳು, ರಸ್ತೆಗಳ ಮೇಲೆಲ್ಲಾ ಲಕ್ಷಾಂತರ ಜೀವಿಸುತ್ತಿದ್ದು, ಸಿಮೆಂಟ್ ಪೈಪ್‌ಲೈನ್‌ಗಳು, ಸ್ಲಂಗಳು ಹಾಗೂ ಮರಗಳ ಬುಡಗಳಲ್ಲೆಲ್ಲಾ ಯಾವುದೇ ಸೂರಿಲ್ಲದೇ, ಸುರಕ್ಷತಾ ಕ್ರಮಗಳಿಲ್ಲದೇ ವಾಸ ಮಾಡುತ್ತಿದ್ದಾರೆ,” ಎಂದು ಪೀಠ ಸರ್ಕಾರದ ಗಮನಕ್ಕೆ ತಂದಿದೆ.
“ಕೇಂದ್ರ ಸರ್ಕಾರ ಎಲ್ಲರಿಗೂ ಸೂರು ಒದಗಿಸುವ ಮಹತ್ವದ ನೀತಿಯನ್ನು ಕೈಗೆತ್ತಿಕೊಂಡಿದೆ ಎಂಬುದು ಸತ್ಯ, ಆದರೆ ಇದನ್ನು ಸಾಧ್ಯವಾದಷ್ಟು ಬೇಗ ಸಾಧಿಸಬೇಕು,” ಎಂದು ಕೋರ್ಟ್ ಆಗ್ರಹಿಸಿದೆ.
ಗೃಹ ನಿರ್ಮಾಣ ಯೋಜನೆಗೆಂದು ಕೊಯಮತ್ತೂರಿನ ತುಡಿಯಲೂರ್ ಹಾಗೂ ವೆಲ್ಲಕಿನಾರ್ ಪ್ರದೇಶಗಳಲ್ಲಿ 369 ಎಕರೆಗಳಷ್ಟು ಖಾಸಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ನಡೆಯೊಂದನ್ನು ವಿರೋಧಿ ಮೇಲ್ಮನವಿ ಸಲ್ಲಿಸಿರುವ ತಮಿಳುನಾಡು ಗೃಹ ಮಂಡಳಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ಕೈಗೆತ್ತಿಕೊಂಡಿದೆ.
ತಮ್ಮದೇ ಸ್ವಂತ ಪರಿಶ್ರಮದಿಂದ ಯಾವುದೋ ಪರದೇಶಕ್ಕೆ ಹೋಗಿ ಬೆವರು ಹರಿವಂತೆ ಸಂಪಾದನೆ ಮಾಡಿ, ಅಲ್ಲಿನ ದುಬಾರಿ ಜೀವನ ಶೈಲಿಯಲ್ಲೂ ಸಹ ತ್ರಾಸದಾಯಕವಾಗಿ ಹಣ ಕೂಡಿಟ್ಟುಕೊಂಡು ಬಂದು ಸ್ವದೇಶದಲ್ಲಿ ಹಾಯಾಗಿ ಜೀವನ ನಡೆಸುವ ಮಂದಿಯ ಮೇಲೆ ನಿಯಂತ್ರಣ ತರುವ ಮುನ್ನ ಸಾವಿರಾರು ಎಕರೆಗಳ ಮಟ್ಟಿಗೆ ಭೂಮಿ ಕಬಳಿಸಿಕೊಂಡು, ಬೆಂಗಳೂರಿನಂಥ ಮಹಾನಗರಗಳಲ್ಲಿ ಏರಿಯಾಗಳನ್ನೇ ಆವರಿಸಿಕೊಂಡು, ರಿಯಲ್ ಎಸ್ಟೇಟ್ ಕುಳಗಳೊಂದಿಗೆ ಶಾಮೀಲಾಗಿ ಭೂತಾಯಿಯ ಒಡಲನ್ನೇ ಕೊರೆಯುತ್ತಿರುವ ರಾಜಕಾರಣಿಗಳು ಹಾಗೂ ಅಧಿಕಾರಶಾಹಿಗಳ ಮೇಲೂ ಇಂಥದ್ದೇ ನಿಯಂತ್ರಣಗಳನ್ನು ತಂದಿದ್ದರೆ? ಎಂಬ ಪ್ರಶ್ನೆ ಹಾಗೇ ಮನದಲ್ಲಿ ಬಂದು ಹೋಗುತ್ತೆ ಅಲ್ಲವೇ?