1974 ರಿಂದ 1977 ರವರೆಗೆ ದೇಶದ ಪ್ರಥಮ ಪ್ರಜೆ ಅಂದರೆ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಮತ್ತು ಅವರ ಕುಟುಂಬ ಭಾರತೀಯರು ಹೌದೋ ಅಲ್ಲವೋ?
ಅವರು ದೇಶದ ಪ್ರಜೆಯಾಗಿದ್ದರಿಂದಲೇ ರಾಷ್ಟ್ರಪತಿಗಳಾಗಿದ್ದರು ಎಂಬುದು ನಿರ್ವಿವಾದ. ಆದರೆ, ಅಸ್ಸಾಂನಲ್ಲಿ ಜಾರಿಗೆ ತಂದಿರುವ ರಾಷ್ಟ್ರೀಯ ನಾಗರಿಕರ ನೋಂದಣಿ ಅವರ ಕುಟುಂಬ ಸದಸ್ಯರ ಭಾರತೀಯರು ಅಲ್ಲವೇ ಅಲ್ಲ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.
ಅಂದರೆ, ದೇಶದ ಪ್ರಥಮ ಪ್ರಜೆಯಾಗಿದ್ದ ಫಕ್ರುದ್ದೀನ್ ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಹೆಸರುಗಳನ್ನು ಎನ್ಆರ್ ಸಿಯಿಂದ ಕೈಬಿಡಲಾಗಿದೆ. ಈ ಹಿಂದೆಯೂ ಅವರ ಹೆಸರುಗಳನ್ನು ಕೈಬಿಡಲಾಗಿತ್ತು. ಇದು ದೇಶಾದ್ಯಂತ ವಿವಾದಕ್ಕೆ ಕಾರಣವಾಗಿತ್ತಲ್ಲದೇ, ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಪೂರ್ವಕವಾಗಿಯೇ ಹೆಸರುಗಳನ್ನು ಎನ್ಆರ್ ಸಿ ಪಟ್ಟಿಯಿಂದ ಕೈಬಿಟ್ಟಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಈ ತಪ್ಪನ್ನು ಸರಿಪಡಿಸಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಅಂತಿಮ ಪಟ್ಟಿ ಹೊರಬಿದ್ದಿದ್ದು, ಅದರಲ್ಲಿಯೂ ಫಕ್ರುದ್ದೀನ್ ಕುಟುಂಬ ಸದಸ್ಯರ ಹೆಸರುಗಳೇ ಕಣ್ಮರೆಯಾಗಿವೆ.
ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸೋದರ ಸಂಬಂಧಿ ಸಜಿದ್ ಅಲಿ ಅಹ್ಮದ್ ಮತ್ತು ಅವರ ತಂದೆ ಇಕ್ರಾಮುದ್ದೀನ್ ಅಲಿ ಅಹ್ಮದ್ ಅವರ ಹೆಸರುಗಳು ಅಸ್ಸಾಂ ಎನ್ಆರ್ ಸಿ ಪಟ್ಟಿಯಲ್ಲಿಲ್ಲ.
ನಾನು ದೇಶದ ರಾಷ್ಟ್ರಪತಿಗಳಾಗಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಸೋದರ ಸಂಬಂಧಿ. ನನ್ನ ತಾತ ಮತ್ತು ಫಕ್ರುದ್ದೀನ್ ಅವರ ಅಣ್ಣತಮ್ಮಂದಿರು. ನಾವು ರೋಗಿಯಾ ಉಪವಿಭಾಗದ ಬಾರ್ಭಜಿಯಾ ಗ್ರಾಮದ ನಿವಾಸಿಗಳಾಗಿದ್ದೇವೆ. ನಾವು ಸ್ಥಳೀಯ ನಾಗರಿಕರಾಗಿದ್ದು, ನನ್ನ ತಂದೆ ಮತ್ತು ನನ್ನ ಹೆಸರನ್ನು ಎನ್ಆರ್ ಸಿಯ ಅಂತಿಮ ಪಟ್ಟಿಯಿಂದಲೇ ಕೈಬಿಡಲಾಗಿದೆ. ಇದರಿಂದ ನಾವು ಆತಂಕಗೊಂಡಿದ್ದೇವೆ ಎಂದು ಸಜಿದ್ ಅಲಿ ಅಹ್ಮದ್ ಅಳಲು ತೋಡಿಕೊಂಡಿದ್ದಾರೆ.
ಅಸ್ಸಾಂನಲ್ಲಿ ಪ್ರಾಯೋಗಿಕವಾಗಿ ಈ ಎನ್ಆರ್ ಸಿಯನ್ನು ಜಾರಿಗೆ ತರಲಾಗಿದ್ದು, ಆರಂಭದಲ್ಲಿಯೇ ಹಲವಾರು ಲೋಪದೋಷಗಳು ಎದುರಾಗಿವೆ.
ಈ ಎನ್ಆರ್ಸಿ ಅಂತಿಮ ಪಟ್ಟಿಯಿಂದ ಮಾಜಿ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಕುಟುಂಬ ಸದಸ್ಯರಷ್ಟೇ ಅಲ್ಲ. ಅಸ್ಸಾಂನಲ್ಲಿಯೇ ಹುಟ್ಟಿ ಬೆಳೆದು ಭಾರತೀಯರೆನಿಸಿಕೊಂಡ ಲಕ್ಷಾಂತರ ಜನರ ಹೆಸರುಗಳೇ ಮಾಯವಾಗಿವೆ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಬಹುತೇಕ ಮುಸ್ಲಿಂ ಕುಟುಂಬಗಳ ಹೆಸರುಗಳು ನಾಪತ್ತೆಯಾಗಿದ್ದು, ದುರುದ್ದೇಶಪೂರ್ವಕವಾಗಿಯೇ ಹೆಸರುಗಳನ್ನು ಕೈಬಿಡಲಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಇದಿಷ್ಟೇ ಅಲ್ಲ. ಅಸ್ಸಾಂನ ನಿವಾಸಿಗಳಾಗಿದ್ದರೂ ಭಾರತೀಯರಾಗಿದ್ದರೂ ಬರೋಬ್ಬರಿ 19 ಲಕ್ಷಕ್ಕೂ ಅಧಿಕ ಜನರು ಈ ಎನ್ಆರ್ ಸಿ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಇವರಲ್ಲಿ ಕೆಲವು ಜನರು ಸೂಕ್ತ ದಾಖಲಾತಿಗಳನ್ನು ನೀಡುವಲ್ಲಿ ವಿಫಲರಾಗಿದ್ದರೆ, ಬಹುತೇಕ ಜನರ ಹೆಸರನ್ನು ಸಿಬ್ಬಂದಿ ವರ್ಗವೇ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ. ಅಂದರೆ ಬೇಕಾಬಿಟ್ಟಿಯಾಗಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ನಿಜವಾದ ಭಾರತೀಯರೂ ಭಾರತೀಯರಲ್ಲ ಎಂಬ ಭಾವನೆ ಬರುವಂತೆ ಮಾಡಲಾಗಿದೆ.
ಇಲ್ಲಿ ಫಕ್ರುದ್ದೀನ್ ಅಲಿ ಕುಟುಂಬವಷ್ಟೇ ಅಲ್ಲ. ಸಾವಿರಾರು ಸರ್ಕಾರಿ ನೌಕರರ ಹೆಸರೂ ಈ ಪಟ್ಟಿಯಲ್ಲಿ ಇಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ಭಾರತೀಯರಾದ ಕಾರಣದಿಂದಲೇ ಇವರು ಸರ್ಕಾರಿ ನೌಕರಿಯನ್ನು ಗಿಟ್ಟಿಸಿರುತ್ತಾರೆ. ಆದರೆ, ಎನ್ ಆರ್ ಸಿ ಪಟ್ಟಿಯನ್ನು ಸಿದ್ಧಪಡಿಸುವಾಗ ಇವರ ಹೆಸರು ಅದ್ಹೇಗೆ ಬಿಟ್ಟು ಹೋಗಿದೆ ಎಂಬುದೇ ಈಗ ಮುಂದಿರುವ ಪ್ರಶ್ನೆಯಾಗಿದೆ.
ಇನ್ನು ಎಸ್ ಬಿಐನ ನಿವೃತ್ತ ಅಧಿಕಾರಿ, ಪತ್ನಿ ಮತ್ತು ಮಗಳ ಹೆಸರುಗಳೂ ಈ ಪಟ್ಟಿಯಲ್ಲಿ ನಾಪತ್ತೆಯಾಗಿವೆ. ಸಬಿಮಲ್ ಬಿಸ್ವಾಸ್ ಎಂಬ 73 ವರ್ಷದ ಈ ನಿವೃತ್ತ ಅಧಿಕಾರಿ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿದ್ದುದನ್ನು ನೋಡಿ ದಂಗಾಗಿ ಹೋಗಿದ್ದಾರೆ.
ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ 1947 ರಲ್ಲಿ ಜನಿಸಿದ್ದ ಬಿಸ್ವಾಸ್, ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದು ಆಶ್ಚರ್ಯವನ್ನುಂಟು ಮಾಡಿದೆ. ನಾನು, ನನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಹೆಸರಿನೊಂದಿಗೆ ಒಂದೇ ದಾಖಲೆಯನ್ನು ನೀಡಿದ್ದೇವೆ. ಒಬ್ಬ ಮಗಳ ಹೆಸರನ್ನು ಮಾತ್ರ ಸೇರಿಸಲಾಗಿದೆ. ಆದರೆ, ಉಳಿದ ನಾವು ಮೂವರ ಹೆಸರನ್ನು ಕೈಬಿಡಲಾಗಿದೆ. ಇದು ಹೇಗೆ ಸಾಧ್ಯ? ಸಿಬ್ಬಂದಿಯ ಬೇಜವಾಬ್ದಾರಿಯಿಂದ ಈ ರೀತಿ ಆಗಿರಬೇಕು ಎಂಬ ಆರೋಪ ಅವರದು.