ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ರೈತರಿಗೆ ನೆರವಾಗಲೆಂದು ಪ್ರಧಾನಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತಂದರು. ಇದರ ಬಗ್ಗೆ ದೇಶದ ಕೋಟ್ಯಂತರ ರೈತ ಬಾಂಧವರು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಸಮಾನ ಮೂರು ಕಂತುಗಳಲ್ಲಿ ರೈತರಿಗೆ 6000 ರೂಪಾಯಿ ಹಣವನ್ನು ನೀಡುವ ಯೋಜನೆ ಇದಾಗಿತ್ತು.
ಆದರೆ, ವಾಸ್ತವವಾಗಿ ಈ ಯೋಜನೆಯಡಿ 6000 ರೂಪಾಯಿ ಹಣವನ್ನು ಪಡೆದಿರುವ ರೈತರ ಸಂಖ್ಯೆಯನ್ನು ಗಮನಿಸಿದರೆ ಯೋಜನೆ ಎತ್ತ ಸಾಗಿದೆ ಎಂಬುದು ಗೊತ್ತಾಗುತ್ತದೆ. ಅಂದರೆ, ಪ್ರತಿ 10 ರೈತರ ಪೈಕಿ ಕೇವಲ ಮೂರಕ್ಕಿಂತ ಕಡಿಮೆ ರೈತರಿಗೆ ಈ ಹಣ ತಲುಪಿದೆ!
ಆಂಗ್ಲ ಆನ್ ಲೈನ್ ಸುದ್ದಿವಾಹಿನಿ `ದಿ ವೈರ್’ ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಲಭ್ಯವಾಗಿರುವ ಅಂಕಿ ಅಂಶಗಳಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಡಿಸೆಂಬರ್್ 1, 2018 ರಿಂದ ನವೆಂಬರ್ 30, 2019 ರವರೆಗಿನ ಮೊದಲ ವರ್ಷದಲ್ಲಿ ಪಿಎಂ ಕಿಸಾನ್ ಯೋಜನೆಯಡಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಸಿಗಲು ಸಾಧ್ಯವಾಗಿದೆ. ಅದರಲ್ಲಿಯೂ ಕೇವಲ ಶೇ.25 ರಷ್ಟು ರೈತರಿಗೆ ಮಾತ್ರ ಮೂರು ಕಂತುಗಳಲ್ಲಿ ಹಣ ಸಿಕ್ಕಿದೆ.
2019ರ ಲೋಕಸಭೆ ಚುನಾವಣೆ ನಂತರ ಈ ಪಿಎಂ ಕಿಸಾನ್ ಯೋಜನೆ ಕುಂಠಿತಗೊಂಡಿದೆ. ಈ ಯೋಜನೆಯಡಿ 9 ಕೋಟಿ ರೈತರು ನೋಂದಣಿ ಮಾಡಿಕೊಂಡಿದ್ದರು. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಲೋಕಸಭೆ ಚುನಾವಣೆಗೆ ಮುನ್ನ ಮೊದಲ ಕಂತಿನಲ್ಲಿ ಸುಮಾರು ನಾಲ್ಕೂವರೆ ಕೋಟಿ ರೈತರು ನೋಂದಣಿ ಮಾಡಿಸಿಕೊಂಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆಯೇ ನೋಂದಣಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗಿದೆ.
ಶೇ.75 ರಷ್ಟು ರೈತರು ಮೂರೂ ಕಂತುಗಳಲ್ಲಿ ಹಣವನ್ನೇ ಪಡೆದಿಲ್ಲ!
ಡಿಸೆಂಬರ್ 2018 ರಲ್ಲಿ ಆರಂಭವಾದ ಈ ಯೋಜನೆಯ ಮೊದಲ ವರ್ಷದಲ್ಲಿ ಅಂದರೆ ಡಿಸೆಂಬರ್ 2019 ರ ಅವಧಿಯಲ್ಲಿ ಕೇವಲ 3.85 ಕೋಟಿ ರೈತರು 2000 ರೂಪಾಯಿಗಳ ಸಮಾನ ಹಣದ ಮೂರು ಕಂತುಗಳ ಹಣ ಪಡೆದಿದ್ದಾರೆ.
ಯೋಜನೆಯನ್ನು ಆರಂಭ ಮಾಡಿದ ಸಂದರ್ಭದಲ್ಲಿ ದೇಶದಲ್ಲಿರುವ ಸುಮಾರು 14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯಲಿದ್ದಾರೆಂದು ಅಂದಾಜಿಸಲಾಗಿತ್ತು. ಈ ಮೂಲಕ ಪ್ರತಿ ವರ್ಷ 2 ಸಾವಿರ ರೂಪಾಯಿಗಳಂತೆ ಮೂರು ಕಂತುಗಳಲ್ಲಿ ಒಟ್ಟು 6000 ರೂಪಾಯಿ ರೈತರ ಖಾತೆಗೆ ಹಣ ಜಮಾ ಆಗಬೇಕಿತ್ತು.
ಆದರೆ, ಯೋಜನೆಯ ಮೊದಲ ವರ್ಷ ಮುಗಿದ ನಂತರ ಅಂಕಿಅಂಶಗಳನ್ನು ಪರಿಶೀಲಿಸಿದರೆ ಶೇ.26.6 ರಷ್ಟು ರೈತರು ಮಾತ್ರ ಮೂರು ಕಂತುಗಳ ಸಂಪೂರ್ಣ ಹಣವನ್ನು ಪಡೆದಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಇದಕ್ಕೆ ಸಂಬಂಧಿಸಿದಂತೆ ರೈತರ ಬಳಿ ಸೂಕ್ತ ದಾಖಲೆಗಳಿಲ್ಲದಿರುವುದು. ಇಲಾಖೆ ನೀಡಿರುವ ಅಂಕಿಅಂಶಗಳ ಪ್ರಕಾರ ದೇಶದ ಶೇ.44 ರಷ್ಟು ರೈತರು ಎರಡು ಕಂತುಗಳ ಹಣ ಅಂದರೆ 4000 ರೂಪಾಯಿ ಹಣವನ್ನು ಪಡೆದಿದ್ದಾರೆ. ಇನ್ನು ಶೇ.52 ರಷ್ಟು ರೈತರು ಕೇವಲ ಒಂದು ಕಂತಿನ ಹಣವನ್ನು ಪಡೆದಿದ್ದಾರೆ.
ಇನ್ನು ಶೇ.48 ರಷ್ಟು ರೈತರು ಯೋಜನೆಯ ಮೊದಲ ವರ್ಷದಲ್ಲಿ ಒಂದೇ ಒಂದು ಕಂತಿನ ಹಣವನ್ನೂ ಪಡೆಯದಿರುವುದು ಆಶ್ಚರ್ಯದ ಸಂಗತಿಯಾಗಿದೆ.
14.5 ಕೋಟಿ ರೈತರು ಯೋಜನೆಯ ಪ್ರಯೋಜನ ಪಡೆಯುತ್ತಾರೆ ಎಂದು ಸರ್ಕಾರ ಅಂದಾಜು ಮಾಡಿತ್ತು. ಆದರೆ, ಯೋಜನೆಯ ಮೊದಲ ವರ್ಷದಲ್ಲಿ ತಲಾ 2000 ರೂಪಾಯಿಯಂತೆ 7.6 ಕೋಟಿ ರೈತರು ಒಂದು ಕಂತಿನ ಹಣವನ್ನು ಒಂದು ವರ್ಷದಲ್ಲಿ ಪಡೆದಿದ್ದಾರೆ. ಅಂದರೆ, ಸರ್ಕಾರದ ಲೆಕ್ಕಾಚಾರದಂತೆ ಇನ್ನೂ 6.8 ಕೋಟಿ ರೈತರು ಈ ಯೋಜನೆಯ ಮೊದಲ ವರ್ಷದಲ್ಲಿ ಒಂದೂ ಕಂತು ಹಣ ಪಡೆಯಲು ಸಾಧ್ಯವಾಗಿಲ್ಲ.
ಮೊದಲ ವರ್ಷ ಸರ್ಕಾರದ ಅಂದಾಜಿನಂತೆ 14.5 ಕೋಟಿ ರೈತರು ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆದಿದ್ದರೆ ಒಟ್ಟು 87,000 ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಬೇಕಿತ್ತು. ಆದರೆ, ಈ ಪೈಕಿ ಶೇ.41 ರಷ್ಟು ರೈತರಿಗೆ ಮಾತ್ರ ಹಣ ಹೋಗಿರುವುದರಿಂದ ಸರ್ಕಾರ ನವೆಂಬರ್ 2019 ರವರೆಗೆ 36,000 ಕೋಟಿ ರೂಪಾಯಿಗಳ ಹಣವನ್ನು ನೀಡಿದಂತಾಗಿದೆ.
ಲೋಕಸಭೆ ಚುನಾವಣೆ ನಂತರ ಕುಂಠಿತ
ಲೋಕಸಭಾ ಚುನಾವಣೆಗೂ ಕೆಲವೇ ವಾರಗಳ ಮೊದಲು ಅಂದರೆ 2019 ರ ಫೆಬ್ರವರಿ 24 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪಿಎಂ ಕಿಸಾನ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದರು. ಇದರ ಉದ್ದೇಶ ಚುನಾವಣೆ ವೇಳೆ ಮತದಾರರನ್ನು ಸೆಳೆಯುವುದಾಗಿತ್ತು. ಚುನಾವಣೆಗೂ ಮುನ್ನ ಜಾರಿಗೆ ತಂದ ಕೇವಲ ಐದು ವಾರಗಳಲ್ಲಿ ಗರಿಷ್ಠ ಸಂಖ್ಯೆಯಲ್ಲಿ ರೈತರನ್ನು ಈ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲಾಗಿತ್ತು. ಇದಾದ ಬಳಿಕ ಅಂದರೆ ಚುನಾವಣೆ ನಡೆದು ಎರಡನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸರ್ಕಾರ ಮತ್ತು ಅಧಿಕಾರಿಗಳು ಈ ಯೋಜನೆಯನ್ನು ಮರೆತಂತೆ ಕಂಡುಬಂದಿದೆ. ಏಕೆಂದರೆ, ಚುನಾವಣೆ ಬಳಿಕ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ರೈತರೂ ಆಸಕ್ತಿ ತೋರಲಿಲ್ಲ ಮತ್ತು ಅಧಿಕಾರಿಗಳೂ ಆಸ್ಥೆ ವಹಿಸಲೇ ಇಲ್ಲದ ಪರಿಣಾಮ ಯೋಜನೆಗೆ ಹಿನ್ನಡೆ ಉಂಟಾಗಿದೆ.
ಈ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳ ನಡುವೆ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಫಲಾನುಭವಿಗಳ ಪಟ್ಟಿಯನ್ನು ನೀಡದಿದ್ದರೆ ಯೋಜನೆಯ ಪ್ರಯೋಜನ ಲಭ್ಯವಾಗುವುದಿಲ್ಲ. ಉದಾಹರಣೆಗೆ ಕೇಂದ್ರ ಸರ್ಕಾರದ ಯೋಜನೆ ಬೇಡ ಎಂಬ ವಾದ ಮಂಡಿಸುತ್ತಾ ಬಂದಿರುವ ಪಶ್ಚಿಮ ಬಂಗಾಳದ ಇದುವರೆಗೆ ಒಬ್ಬನೇ ಒಬ್ಬ ರೈತನ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿಲ್ಲ. ಇದರಿಂದಾಗಿ ಪಿಎಂ ಕಿಸಾನ್ ಯೋಜನೆಯಿಂದ ಪಶ್ಚಿಮ ಬಂಗಾಳದ 68 ಲಕ್ಷ ರೈತರು ವಂಚಿತರಾಗುವಂತಾಗಿದೆ.
ಬಿಜೆಪಿ ಆಡಳಿತವಿರುವ ರಾಜ್ಯಗಳೂ ಸಹ ರೈತರ ಪಟ್ಟಿಯನ್ನು ನೀಡಲು ಹಿಂದೆ ಬಿದ್ದಿವೆ. ಕರ್ನಾಟಕ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ (ಯೋಜನೆ ಜಾರಿಗೆ ಬಂದಾಗ ಬಿಜೆಪಿ ಅಧಿಕಾರದಲ್ಲಿತ್ತು) ಕೇವಲ 2.5 ಕೋಟಿ ರೈತರ ಹೆಸರನ್ನು ಕಳುಹಿಸಿವೆ. ಬಿಹಾರ ರಾಜ್ಯದಲ್ಲಿ ಸುಮಾರು 1.5 ಕೋಟಿ ರೈತರು ಇದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಆ ರಾಜ್ಯದಲ್ಲಿ ಕೇವಲ 44 ಲಕ್ಷ ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ.
ಕೃಪೆ: ದಿ ವೈರ್