ಉತ್ತರ ಪ್ರದೇಶದಲ್ಲಿ ನಡೆದ ಪೊಲೀಸರ ಭೀಕರ ಹತ್ಯಾಕಾಂಡದ ಆರೋಪಿಯಾಗಿದ್ದ ವಿಕಾಸ್ ದುಬೆ ಶುಕ್ರವಾರ ಮುಂಜಾನೆ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದಾನೆ. ಕಾನ್ಪುರ ಬರ್ರಾ ಎಂಬಲ್ಲಿ ಈ ಘಟನೆ ನಡೆದಿದೆ. ಹತ್ಯಾಕಾಂಡ ನಡೆದ ಒಂದು ವಾರದ ನಂತರ ದುಬೆಯನ್ನು ಪೊಲೀಸರು ಉಜ್ಜೈನ್ನಲ್ಲಿ ಬಂಧಿಸಿದ್ದರು.
ಪೊಲೀಸರು ಹೇಳುವ ಪ್ರಕಾರ, ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಕಾನ್ಪುರಕ್ಕೆ ವಾಪಾಸ್ ಕರೆದುಕೊಂಡು ಬರುತ್ತಿದ್ದ ವಿಶೇಷ ತನಿಖಾ ದಳದ ವಾಹನವು ಅಪಘಾತಕ್ಕೆ ಈಡಾಯಿತು. ಈ ಸಂದರ್ಭದಲ್ಲಿ ಗಾಯಾಳು ಪೊಲೀಸ್ ಸಿಬ್ಬಂದಿ ರಮಾಕಾಂತ್ ಪಚೌರಿಯ ಪಿಸ್ತೂಲ್ ಕಸಿದು ಪೊಲೀಸರ ಮೇಲೆ ದಾಳಿ ನಡೆಸಿ ದುಬೆ ಪರಾರಿಯಾಗಲು ಯತ್ನಿಸಿದ. ಆತ್ಮ ರಕ್ಷಣೆಗಾಗಿ ಪೊಲೀಸರು ಕೂಡಾ ಗುಂಡಿನ ದಾಳಿ ನಡೆಸಿದ್ದಾರೆ. ಗಾಯಗೊಂಡಿದ್ದ ವಿಕಾಸ್ ದುಬೆಯನ್ನು ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ದುಬೆ ಮೃತಪಟ್ಟಿದ್ದಾನೆಂದು ಘೋಷಿಸಲಾಯಿತು.
ನಾಲ್ವರು ಪೊಲೀಸ್ ಸಿಬ್ಬಂದಿಗಳೂ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆಂದು ಕಾನ್ಪುರ್ ಐಜಿ ಮೋಹಿತ್ ಅಗರ್ವಾಲ್ ಹೇಳಿದ್ದಾರೆ.
ಆಶ್ಚರ್ಯಕರ ವಿಚಾರವೇನೆಂದರೆ, ನಿನ್ನೆ ರಾತ್ರಿ ಸುಪ್ರಿಂ ಕೋರ್ಟ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರಲ್ಲಿ ವಿಕಾಸ್ ದುಬೆಯನ್ನು ಕೊಲ್ಲದಂತೆ ಸುರಕ್ಷತೆಯಿಂದ ವಾಪಾಸ್ ಕರೆದುಕೊಂಡು ಬರುವಂತೆ ನಿರ್ದೇಶನವನ್ನು ನೀಡಬೇಕು ಎಂದು ಯಾಚಿಸಲಾಗಿತ್ತು. ಆದರೆ, ಆ ನಿರ್ದೇಶನವನ್ನು ನೀಡುವ ಮೊದಲೇ ದುಬೆ ಸಾವನ್ನಪ್ಪಿದ್ದಾನೆ.
ಇನ್ನು ದುಬೆಯನ್ನು ಹೊತ್ತು ಸಾಗುತ್ತಿದ್ದ ವಾಹನವನ್ನು ಹಿಂಬಾಲಿಸುತ್ತಿದ್ದ ಮಾಧ್ಯಮದವರ ವಾಹನಗಳನ್ನು ಸರಿಯಾಗಿ ಎನ್ಕೌಂಟರ್ ನಡೆಯುವ ಸಮಯಕ್ಕೆ ತಡೆಯಲಾಗಿತ್ತು. ಯಾವುದೇ ಸ್ಪಷ್ಟವಾದ ಮಾಹಿತಿ ಮಾಧ್ಯಮದವರಿಗೆ ಸಿಗದಂತೆ ನೋಡಿಕೊಳ್ಳಲಾಗಿತ್ತು. ಇದರಿಂದಾಗಿ ಈ ಎನ್ಕೌಂಟರ್ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ.
ಎನ್ಕೌಂಟರ್ ಕುರಿತು ಟ್ವೀಟ್ ಮಾಡಿರುವ ಪ್ರಿಯಾಂಕ ಗಾಂಧಿ “ಅಪರಾಧಿಯ ಅಂತ್ಯವಾಯಿತು ಆದರೆ, ಅಪರಾಧ ಮತ್ತು ಆತನನ್ನು ರಕ್ಷಿಸುತ್ತಿರುವವರ ಕಥೆ ಏನು?” ಎಂದು ಪ್ರಶ್ನಿಸಿದ್ದಾರೆ. ಇನ್ನು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ “ಕಾರ್ ಪಲ್ಟಿ ಹೊಡೆದಿಲ್ಲ, ಸತ್ಯ ಹೊರಬಂದು ರಾಜ್ಯ ಸರ್ಕಾರ ಪಲ್ಟಿ ಹೊಡೆಯುವುದನ್ನು ತಪ್ಪಿಸಲಾಗಿದೆ” ಎಂದು ಹೇಳಿದ್ದಾರೆ.