ನೆರೆ ಹಾವಳಿ ಉತ್ತರ ಕರ್ನಾಟಕದ ಜನರನ್ನು ತೀವ್ರವಾಗಿ ಬಾಧಿಸಿದ್ದು, ಸುಮಾರು 97 ಹಳ್ಳಿಗಳು ಈಗಾಗಲೇ ಭಾರೀ ನೆರೆಗೆ ಮುಳುಗಡೆಯಾಗಿದ್ದು, 35,000ಕ್ಕೂ ಹೆಚ್ಚು ಜನರನ್ನು ನದಿ ಭಾಗದ ಪ್ರದೇಶದಿಂದ ಸ್ಥಳಾಂತರಿಸಲಾಗಿದೆ.
ಕಲಬುರ್ಗಿ, ವಿಜಯಪುರ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಜನರು ಕಳೆದ ಬಾರಿಯ ಪ್ರವಾಹದ ಸಂಕಷ್ಟದಿಂದ ಸುಧಾರಿಸಿಕೊಳ್ಳುವಷ್ಟರಲ್ಲೇ ಮತ್ತೆ ಪ್ರವಾಹ ಬಂದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮಹಾರಾಷ್ಟ್ರದಲ್ಲಿ ಸುರಿದ ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ಪಾತ್ರದಲ್ಲಿರುವ ಜಿಲ್ಲೆಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Also Read: ಮಹಾ ಮಳೆಗೆ ಉತ್ತರ ಕರ್ನಾಟಕ ತತ್ತರ: 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ನಾಲ್ಕು ಜಿಲ್ಲೆಗಳ 97 ಗ್ರಾಮಗಳು ಈ ಬಾರಿಯ ನೆರೆಯಿಂದಾಗಿ ಅತೀ ಹೆಚ್ಚು ಬಾಧಿಸಲ್ಪಟ್ಟಿವೆ. ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 36,290 ಜನರನ್ನು ಸ್ಥಳಾಂತರಿಸಲಾಗಿದ್ದು ಅವರಿಗಾಗಿ 174 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲಿ 28,007 ಜನ ಸಂತ್ರಸ್ಥರು ವಾಸ ಮಾಡುತ್ತಿದ್ದಾರೆ, ಎಂದು ಹೇಳಿದ್ದಾರೆ.
ಗ್ರಾಮಗಳ ಸ್ಥಳಾಂತರ:
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಲಕ್ಷಣ ಸವದಿ ಅವರು, ಪ್ರವಾಹದಿಂದಾಗಿ ಪದೇ ಪದೇ ಸಂಕಷ್ಟಕ್ಕೆ ಒಳಗಾಗುತ್ತಿರುವ ನಾಲಕು ಹಳ್ಳಿಗಳನ್ನು ಸ್ಥಳಾಂತರ ಮಾಡುವ ಭರವಸೆ ನೀಡಿದ್ದಾರೆ. ಗುರ್ಜಾಪುರ, ಅರಷಿಣಗಿ, ಬುರ್ದಿಪಾಡ ಹಾಗೂ ಡಿ. ರಾಂಪುರ ಗ್ರಾಮಗಳನ್ನು ಸ್ಥಳಾಂತರ ಮಾಡುವ ಕುರಿತು ಸವದಿ ಅವರು ಭರವಸೆ ನೀಡಿದ್ದಾರೆ.
ಗ್ರಾಮಸ್ಥರಿಗೆ ಅವರ ಬೇಡಿಕೆಯ ಪ್ರಕಾರ 60X40 ನಿವೇಶನವನ್ನು ಒದಗಿಸುವ ಕುರಿತಾಗಿ ಚರ್ಚೆ ನಡೆಸಲಾಗುತ್ತಿದೆ. ಗ್ರಾಮಗಳನ್ನು ಸ್ಥಳಾಂತರಿಸಲು ಗುರುತಿಸಿರುವ ಜಾಗದ ಕುರಿತು ಗ್ರಾಮಸ್ಥರು ಒಮ್ಮತದ ಅಭಿಪ್ರಾಯಕ್ಕೆ ಬರಬೇಕು. ಹೊಸದಾಗಿ ಗ್ರಾಮವನ್ನು ಕಟ್ಟಿದ ನಂತರವೇ ಈಗಿರುವ ಗ್ರಾಮವನ್ನು ತೊರೆಯಬೇಕು, ಎಂದು ಲಕ್ಷಣ ಸವದಿ ಹೇಳಿದ್ದಾರೆ.
ಆಕ್ರೋಶಕ್ಕೆ ಕಾರಣವಾದ ಆರ್ ಅಶೋಕ್ ಭೇಟಿ:
ಕಂದಾಯ ಸಚಿವ ಆರ್ ಅಶೋಕ್ ಈ ಹಿಂದೆ ನೆರೆ ಸಂತ್ರಸ್ಥರನ್ನು ಭೇಟಿಯಾಗಿ ಅವರ ಅಹವಾಲುಗಳನ್ನು ಸ್ವೀಕರಿಸಿದ್ದರು. ಸೋಮವಾರ ಮತ್ತೆ ಪ್ರವಾಹ ಪೀಡಿತ ಸ್ಥಳಗಳಿಗೆ ಜಲ ಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರೊಂದಿಗೆ ಪ್ರವಾಸ ಮಾಡಿದ ಅಶೋಕ್ ಅವರು, ಸಾರ್ವಜನಿಕರನ್ನು ಭೇಟಿಯಾಗಲೇ ಇಲ್ಲ.
ರೈತರ ಸಮಸ್ಯೆಯನ್ನು ಆಲಿಸದೇ ನೇರವಾಗಿ ಕೃಷ್ಣಾ ನದಿಯಲ್ಲಿ ಬೋಟ್ ಸಂಚಾರ ನಡೆಸಿದ ಆರ್ ಅಶೋಕ್ ವಿರುದ್ದ ರೈತರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹುಕ್ಕೇರಿ ಪಟ್ಟಣದ ಪುರಸಭೆ ಸದಸ್ಯರು ಹಾಗೂ ಸ್ಥಳೀಯ ಸಂತ್ರಸ್ಥರು ಅಶೋಕ್ ಅವರ ಭೇಟಿಗೆ ಕಾದುಕುಳಿತಿದ್ದರು.