ಉಡುಪಿಯ ರಥಬೀದಿಯಲ್ಲೊಂದು ಮೌನ ಕ್ರಾಂತಿಯೊಂದು ಶುಕ್ರವಾರ ಸಂಜೆ-ರಾತ್ರಿ ನಡೆದುಹೋಗಿದೆ. ಈ ಕ್ರಾಂತಿ ನಡೆದದ್ದು ಉಡುಪಿಯ ಶ್ರೀ ಕೃಷ್ಣ ಮಠದ ಪರ್ಯಾಯದ ಸಂಭ್ರಮಾಚರಣೆಯೊಂದಿಗೆ ಇಲ್ಲಿ ಗಮನಾರ್ಹ.
ಕಳೆದ ಕೆಲ ದಿನಗಳಿಂದ ಕರಾವಳಿಯಾದ್ಯಂತ, ರಾಜ್ಯಾದ್ಯಂತ ಕಲಾಸಕ್ತರ ಗುಂಪುಗಳಲ್ಲಿ ಉಡುಪಿಯಲ್ಲಿ ಶುಕ್ರವಾರ ಸಂಜೆ ಆಯೋಜಿತವಾಗಿದ್ದ ಖ್ಯಾತ ಸಂಗೀತಗಾರ ಟಿಎಂ ಕೃಷ್ಣ ಸಂಗೀತ ಕಛೇರಿಯ ಬಗೆಗಿನೆ ಚರ್ಚೆ. ಹಿಂದುತ್ವವಾದಿಗಳು, ಈ ಸಂಗೀತ ಕಛೇರಿಯನ್ನು ಬಹಿಷ್ಕರಿಸುವುದರ ಜತೆಗೆ ಅದರ ಪ್ರಾಯೋಜಕರಾದ “ಹರ್ಷ” ಸಂಸ್ಥೆಯನ್ನೂ ಬಹಿಷ್ಕರಿಸಲೂ ಕರೆ ನೀಡಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆದಿತ್ತು. ಕೊನೆಗೆ ಇತ್ತೀಚೆಗೆ ಕೃಷ್ಣೈಕ್ಯರಾದ ಶ್ರೀ ಪೇಜಾವರ ಮಠದ ವಿಶ್ವೇಶ ತೀರ್ಥರ ಹೆಸರನ್ನೂ ಎಳೆದು ತರಲಾಯಿತು. ಶ್ರೀಗಳು ಜೀವಂತವಾಗಿದ್ದರೆ, ಟಿಎಂ ಕೃಷ್ಣ ಸಂಗೀತ ಕಛೇರಿ ಉಡುಪಿಯಲ್ಲಿ ನಡೆಯಲು ಬಿಡುತ್ತಿರಲಿಲ್ಲ ಎಂಬ ಭಾವನಾತ್ಮಕ ಅಂಶವನ್ನೂ ಎತ್ತಿ ಕಟ್ಟಲಾಯಿತು.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಸಂದೇಶವನ್ನು ಪರಿಣಾಮಕಾರಿಯಾಗಿ ಹರಡುವ ವ್ಯವಸ್ಥೆ ಮಾಡಲಾಗಿತ್ತು. ನಾನಾ ಜಾತಿಗಳ, ಉದ್ಯೋಗಿಗಳ ಗುಂಪಿನಲ್ಲಿ ಈ ಸಂದೇಶ ಹರಿಬಿಡಲಾಯಿತು. ಟಿಎಂ ಕೃಷ್ಣ ಅವರು ಬ್ರಾಹ್ಮಣ ವಿರೋಧಿ, ಮೋದಿ ವಿರೋಧಿ, ಅಮಿತ್ ಶಾ ವಿರೋಧಿ, ಹಿಂದುತ್ವ ವಿರೋಧಿ, ಕೊನೆಗೆ ಗುರು-ಶಿಷ್ಯ ಪರಂಪರೆ ವಿರೋಧಿ, ಗುರುಕುಲ ವ್ಯವಸ್ಥೆ ವಿರೋಧಿ ಹೀಗೆ ನಾನಾ ಭಾವನಾತ್ಮಕ ಅಂಶಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿತ್ತು.
ಆದರೆ ಶುಕ್ರವಾರ ಸಂಜೆ ಆದದ್ದೇ ಬೇರೆ. ರಥಬೀದಿಯಲ್ಲೇ ನಡೆದ ಟಿಎಂ ಕೃಷ್ಣ ಕಚೇರಿ ಹೌಸ್ಫುಲ್. ಕೃಷ್ಣ ಕಚೇರಿ ಆರಂಭಕ್ಕೆ ಮುನ್ನವೇ ಅಲ್ಲಿ ಕಾಲಿಡಲು ಜಾಗವಿರಲಿಲ್ಲ. ಬಹುತೇಕ ಶೋತೃವರ್ಗ ಸ್ಥಳೀಯ ಬ್ರಾಹ್ಮಣರೇ ಆಗಿದ್ದರು. ಅಲ್ಲಿನ ಸಂಗೀತ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲೇ ನೆರೆದಿದ್ದರು. ಯಾವುದೇ ದುರ್ಘಟನೆಗಳಿಲ್ಲದೆ ಕೃಷ್ಣ ಸಂಗೀತ ಗೋಷ್ಠಿ ಸಂಪನ್ನಗೊಂಡಿತು.
ಟಿಎಂ ಕೃಷ್ಣ ಸಂಗೀತ ಕಚೇರಿಯ ಯಶಸ್ಸು ಕಳುಹಿಸಿದ ಸಂದೇಶವೇನು? ಒಂದೆಡೆ ಕಲಾವಿದರನ್ನು ಅವರ ಎಡ ಪಂಥೀಯ ವಿಚಾರಧಾರೆ ಹಿನ್ನೆಲೆಯಲ್ಲಿ ಹಂಗಿಸುವ, ಬಹಿಷ್ಕರಿಸುವ ಕೆಲಸ ನಡೆಯುತ್ತಿರುವಾಗ, ಹಿಂದೂ ಧಾರ್ಮಿಕತೆಯ ಹೃದಯ ದಂತಿರುವ ಉಡುಪಿಯ ಜನ ಕೃಷ್ಣ ಸಂಗೀತ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ನೀಡುವ ಮೂಲಕ ಹೊಸ ಚರಿತ್ರೆ ಬರೆದಿದ್ದಾರೆ ಎಂದರೆ ತಪ್ಪಾಗಲಾರದು. ಏಕೆಂದರೆ, ಈ ಸಂಗೀತ ಕಚೇರಿ ಬಹಿಷ್ಕಾರದ ಕರೆ ನೀಡಿದ್ದು, ಸ್ಥಳೀಯ ವಟುಗಳೇ ಆಗಿದ್ದರು. ಒಂದೊಮ್ಮೆ ಅವರ ಕರೆಗೆ ಬೆಂಬಲಿಸಿ, ಸಂಗೀತ ಪ್ರಿಯರು, ಕೃಷ್ಣ ಕಚೇರಿ ಬಹಿಷ್ಕರಿಸಿದ್ದರೆ, ಅವರ ಅಬ್ಬರ ಇನ್ನಷ್ಟು ಜಾಸ್ತಿಯಾಗುತ್ತಿತ್ತು. ಜೊತೆಗೆ, ಇಂತಹ ಮಡಿವಂತಿಕೆಯ ಆಲೋಚನಾ ಕ್ರಮದ ಜತೆಗೆ ತಾವಿಲ್ಲ ಎಂದು ಸ್ಥಳೀಯರು ಸಾರಿ ಹೇಳಿದ್ದಾರೆ. ಈಗ ಬೇಕಿರುವುದು ಈ ಪ್ರಜ್ಞೆಯನ್ನು ಬಳಸಿಕೊಂಡು, ಕೋಮುವಾದಿಗಳ ವಿರುದ್ಧದ ಯದ್ದವನ್ನು ಜಾರಿಯಲ್ಲಿಡುವುದು.
ದಕ್ಷಿಣ ಕನ್ನಡ-ಉಡುಪಿಯಲ್ಲಿ ಹಿಂದುತ್ವವಾದಿಗಳು ಪ್ರಬಲವಾಗಿದ್ದೇ ಅಲ್ಪಸಂಖ್ಯಾತರ ತುಷ್ಟೀಕರಣದಲ್ಲಿ ಕಾಂಗ್ರೆಸ್ ತೊಡಗಿದೆ ಎಂಬ ಆರೋಪದೊಂದಿಗೆ. ಕಾಂಗ್ರೆಸ್ ಹೊರತಾರ ಜಾತ್ಯಾತೀತ ಧ್ವನಿಗಳಿಗೆ ಇಲ್ಲಿ ದೊಡ್ಡ ಮಟ್ಟದಲ್ಲಿ ಮನ್ನಣೆ ಇದೆ ಎಂಬುದು ಆಗ್ಗಾಗ್ಗೆ ಪ್ರಕಟವಾಗುತ್ತಲೇ ಇದೆ. ಕೃಷ್ಣ ವಿರುದ್ಧ ದೊಡ್ಡ ಮಟ್ಟದಲ್ಲಿ ಅಪಪ್ರಚಾರ ನಡೆಸಿದರೂ ಅಂತಹ ಅಪಪ್ರಚಾರಕ್ಕೆ ಯಾರೂ ಸೊಪ್ಪು ಹಾಕಲಿಲ್ಲ. ಅಂದರೆ ಕೋಮುವಾದಿಗಳ ವಾದ ಸರಣಿ ದೊಡ್ಡ ಪ್ರಮಾಣದ ಜನರಿಗೆ ಇಷ್ಟವಾಗಿಲ್ಲ ಎಂಬುದು ಖಚಿತವಾಗಿದೆ. ಇದನ್ನು ಬಳಸಿಕೊಂಡು, ಸಾಮರಸ್ಯದ ಸಮಾಜ ಸೃಷ್ಟಿಸುವ ಕೆಲಸ ನಡೆಯಬೇಕಿದೆ.