ಬೆಂಗಳೂರಿನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಪರ್ಕದಲ್ಲಿದ್ದ ಎನ್ನಲಾಗಿರುವ ವೈದ್ಯನನ್ನು ರಾಷ್ಟ್ರೀಯ ತನಿಖಾ ತಂಡವು ಮಂಗಳವಾರ ಬಂಧನ ಮಾಡಿದೆ. ಅಬ್ದುಲ್ ರೆಹಮಾನ್ ಬಂಧಿತ ಶಂಕಿತ ಉಗ್ರನಾಗಿದ್ದು, ಬೆಂಗಳೂರಿನ ಬಸವನಗುಡಿಯ ನಿವಾಸದಲ್ಲಿ ಬಂಧಿಸಲಾಗಿದೆ. ದೆಹಲಿಯಿಂದ ಆಗಮಿಸಿದ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರೋವಿನ್ಸ್ (ISKP) ಸಂಘಟನೆಗೆ ಸೇರಿದ ವೈದ್ಯನನ್ನು ಬಂಧಿಸಿದ್ದಾರೆ. ಭಾರತ ಹಾಗೂ ಇತರ ದೇಶಗಳಲ್ಲಿ ಸಿಎಎ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಗಲಭೆ ಸೃಷ್ಟಿಸಲು ಸಂಚು ಮಾಡಿದ್ದ ಆರೋಪದ ಮೇಲೆ ಬಂಧನ ಮಾಡಲಾಗಿದೆ.
ಐಸಿಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಆರೋಪ ಹೊತ್ತಿರುವ ಈತ ಬಾಂಗ್ಲಾ ಮೂಲದ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಕೊರೋಸನ್ ಪ್ರೋವಿನ್ಸ್ ಸಂಘಟನೆಯ ಸದಸ್ಯನಾಗಿದ್ದ. ತಿಹಾರ್ ಜೈಲಿನಲ್ಲಿ ಅಬ್ದುಲ್ ಬಸೀತ್ ಎಂಬ ಉಗ್ರನ ಜೊತೆ ಸಂಪರ್ಕ ಬೆಳೆದಿತ್ತು. ಪೂನಾ ಮೂಲದ ಸಾದಿಯಾ ಅನ್ವರ್, ನಬೀಲ್ ಸಿದ್ದಿಕಿ ಖತ್ರಿ ಜೊತೆ ಸೇರಿ ಐಸಿಸ್ ಜೊತೆ ಸಂಪರ್ಕ ಸಾಧಿಸಿದ್ದ ಎನ್ನಲಾಗಿದೆ. ವಿಚಾರಣೆ ವೇಳೆ ಬಂಧಿತ ಅಬ್ದುಲ್ ರೆಹಮಾನ್, ಸತ್ಯ ಒಪ್ಪಿಕೊಂಡಿದ್ದು, ಐಸಿಸ್ ಜೊತೆ ಸಂಪರ್ಕ ಹೊಂದಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. 2014ರಲ್ಲಿ ಸಿರಿಯಾದ ಐಸಿಸ್ ಕ್ಯಾಂಪ್‌ಗೆ ಭೇಟಿ ಕೊಟ್ಟಿದ್ದ ಈತ ಐಸಿಸ್ ಕ್ಯಾಂಪ್‌ನಲ್ಲಿ ಗಾಯಗೊಂಡ ಉಗ್ರರಿಗೆ ಚಿಕಿತ್ಸೆ ನೀಡುವ ಕೆಲಸಕೂಡ ಮಾಡುತ್ತಿದ್ದ ಎನ್ನಲಾಗಿದೆ. 10 ದಿನಗಳ ಕಾಲ ಸಿರಿಯಾದ ಐಸಿಸ್ ಕ್ಯಾಂಪ್‌ನಲ್ಲಿದ್ದು ಆ ಬಳಿಕ ವಾಪಸ್ ಆಗಿದ್ದ ಎನ್ನಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರಿನ ಎಂ.ಎಸ್ ರಾಮಯ್ಯ ಅಸ್ಪತ್ರೆಯಲ್ಲಿ ಎರಡು ದಿನಗಳ ಹಿಂದಷ್ಟೇ ಪಿಜಿ ಪದವಿ ಮುಗಿಸಿದ್ದ ಶಂಕಿತ ಉಗ್ರ, Opthalmology ವಿಭಾಗದಲ್ಲಿ ( ಪಿಜಿ ) Postgraduate ಮಾಡುತ್ತಿದ್ದ ಅಬ್ದುಲ್ ರೆಹಮಾನ್, 2 ದಿನಗಳ ಹಿಂದಷ್ಟೇ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದ. ಬಂಧಿತ ಅಬ್ದುಲ್ ರೆಹಮಾನ್, ಉಗ್ರರ ಹಲವು ಸೆಮಿನಾರ್‌ಗಳಲ್ಲಿ ಭಾಗವಹಿಸಿದ್ದ ಎನ್ನುವ ಮಾಹಿತಿಯೂ ಸಿಕ್ಕಿದೆ. ವಿದ್ಯಾವಂತ ಕುಟುಂಬದಿಂದ ಬಂದಿದ್ದ ಅಬ್ದುಲ್ ರೆಹಮಾನ್. ವಿದ್ಯಾಭ್ಯಾಸದಲ್ಲಿ ಚುರುಕಾಗಿದ್ದ, ಪ್ರತಿಭಾವಂತ ವಿದ್ಯಾರ್ಥಿ. ಅಬ್ದುಲ್ ರೆಹಮಾನ್, ಬಂಧನಧ ವಿಚಾರ ತಿಳಿದು ಎಂ.ಎಸ್ ರಾಮಯ್ಯ ಕಾಲೇಜು ಆಡಳಿತ ಮಂಡಳಿ ದಿಗ್ಬ್ರಾಂತರಾಗಿದ್ದಾರೆ. ಅದರಲ್ಲೂ ಅಬ್ದುಲ್ ರೆಹಮಾನ್‌ಗೆ ಐಸಿಸ್ ಲಿಂಕ್ ಇರುವ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಆತಂಕದಲ್ಲಿದ್ದಾರೆ.
ಡಾ. ಅಬ್ದುಲ್ ರೆಹಮಾನ್ ಬಗ್ಗೆ ಎಂ.ಎಸ್ ರಾಮಯ್ಯ ಮೆಡಿಕಲ್ ಕಾಲೇಜ್ ಸ್ಪಷ್ಟನೆ ಕೊಟ್ಟಿದ್ದು, ನಮ್ಮ ಕಾಲೇಜಿನಲ್ಲಿ ಇವರು ಆಪ್ತಮಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2014ರಲ್ಲಿ ಸರ್ಕಾರಿ ಕೋಟಾದಲ್ಲಿ BMCRI ನಲ್ಲಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿದ್ದರು. ಆ ಬಳಿಕ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ಎಂಎಸ್ ಮುಗಿಸಿದ್ದಾರೆ. ಕಾಲೇಜಿನ ಹೊರಗಿನ ಚಟಿವಟಿಕೆಗಳ ಬಗ್ಗೆ ತಮಗೆ ಅರಿವಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟನೆ ಕೊಟ್ಟಿದೆ. ಜೊತೆಗೆ ಸರ್ಕಾರಿ ಕೋಟಾದಲ್ಲಿ ಎಂಎಸ್ ಸೀಟು ಪಡೆದ ಡಾ ಅಬ್ದುಲ್ ರೆಹಮಾನ್ ಪ್ರತಿಭಾವಂತ ಎಂದು ಕೂಡ ಹೇಳಿದೆ.
ಬಸವನಗುಡಿಯ ಎಂಡಿ ಬ್ಲಾಕ್‌ನ ಯುನೈಟೆಡ್ ಡಿಸೈರ್ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದ ಅಬ್ದುಲ್ ರೆಹಮಾನ್, ಅಪಾರ್ಟ್ಮೆಂಟ್ ಎಫ್1 ಫ್ಲಾಟ್‌ನಲ್ಲಿ ವಾಸವಾಗಿದ್ದ. ಸೋಮವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದಾಳಿ ಮಾಡಿದ National Investigation Agency ಅಧಿಕಾರಿಗಳ ತಂಡ. ಸತತ 4 ಗಂಟೆಗಳ ಕಾಲ ಮನೆಯಲ್ಲಿ ಕಾರ್ಯಾಚರಣೆ ನಡೆಸಿ, ಆತನ ಲ್ಯಾಪ್ ಟಾಪ್, ಮೊಬೈಲ್, ಪೆನ್ ಡ್ರೈವ್ ಸೇರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಸಂಜೆ 5.30 ಕ್ಕೆ ದಾಳಿ ಮುಗಿಸಿ ಶಂಕಿತ ಅಬ್ದುಲ್ ರೆಹಮಾನ್ ವಶಕ್ಕೆ ಪಡೆದಿದ್ದಾರೆ.
ಯುದ್ಧ ಭೂಮಿಯಲ್ಲಿ ಗಾಯಗೊಳ್ಳುವ ಐಸಿಸ್ ಉಗ್ರ ಸಂಘಟನೆಯ ಕಾರ್ಯಕರ್ತರಿಗೆ ಸಹಾಯ ಮಾಡಲು ವೈದ್ಯಕೀಯ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದ್ದ ಮತ್ತು ಐಸಿಸ್ ಉಗ್ರರ ಅನುಕೂಲಕ್ಕಾಗಿ ಶಸ್ತ್ರಾಸ್ತ್ರ ಸಂಬಂಧಿತ ತಂತ್ರಾಂಶವನ್ನೂ ಅಭಿವೃದ್ಧಿಪಡಿಸುತ್ತಿದ್ದ ಎಂದು ರಾಷ್ಟ್ರೀಯ ತನಿಖಾ ದಳದ ಮೂಲಗಳು ತಿಳಿಸಿವೆ.












