ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಭಾರಿ ಹಿನ್ನಡೆ ಉಂಟಾಗಿದೆ. ಇರಾನ್‌ನ ಚಬಹರ್ ಬಂದರಿನಿಂದ ಜ಼ಹೆದಾನ್ ವರೆಗೆ ನಿರ್ಮಿಸಲ್ಪಡುತ್ತಿರುವ ರೈಲ್ವೇ ಮಾರ್ಗವನ್ನು ಭಾರತದ ಸಹಾಯವಿಲ್ಲದೇ ಮಾಡುವುದಾಗಿ ಇರಾನ್ ಸರ್ಕಾರ ಹೇಳಿದೆ. ಯೋಜನೆ ರೂಪುಗೊಂಡ ನಾಲ್ಕು ವರ್ಷಗಳ ನಂತರ ಭಾರತವನ್ನು ಕೈಬಿಡಲಾಗಿದೆ.
ಆಂಗ್ಲ ದೈನಿಕ ʼದ ಹಿಂದೂʼ ವರದಿ ಮಾಡಿರುವ ಪ್ರಕಾರ ಚೀನಾ ಇರಾನ್‌ನೊಂದಿಗೆ 25 ವರ್ಷಗಳ 400 ಬಿಲಿಯನ್‌ಗಳ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಂಡ ನಂತರ ಈ ಬೆಳವಣಿಗೆಗಳು ನಡೆದಿವೆ ಎಂದು ಹೇಳಿದೆ. ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷ ತಾರಕಕ್ಕೇರಿ, ಉಭಯ ರಾಷ್ಟ್ರಗಳ ನಡುವನ ಸಂಬಂಧ ಹದೆಗಡಟ್ಟಿತ್ತು. ಈ ವಿಚಾರವನ್ನು ಮುಂದಿಟ್ಟುಕೊಂಡು ಚೀನಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವನ್ನು ಕುಂಠಿತಗೊಳಿಸುವ ಸರ್ವ ಪ್ರಯತ್ನ ಮಾಡುತ್ತಿದೆ.
ಕಳೆದ ವಾರ ಇರಾನ್‌ನ ಸಾರಿ ಮತ್ತು ನಗರ ಅಭಿವೃದ್ದಿ ಸಚಿವ ಮೊಹಮ್ಮದ್ ಎಸ್ಲಾಮಿ ಅವರು 628 ಕಿ.ಮೇ.ಗಳ ಚಬಹರ್-ಜ಼ಹೆದಾನ್ ರೈಲು ಮಾರ್ಗದ ಹಳಿ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸಿದರು. ಮಾರ್ಚ್ 2022ರ ವೇಳೆಗೆ ಈ ಯೋಜನೆ ಪೂರ್ಣಗೊಳ್ಳಲಿದೆ. ಆದರೆ, ಈ ಕಾಮಗಾರಿಯ ಪ್ರಮುಖ ಭಾಗವಾಗಬೇಕಿದ್ದ ಭಾರತವನ್ನು ದೂರ ಸರಿಸಿ ಇರಾನ್‌ನ ಅಭಿವೃದ್ದಿ ನಿಧಿಯಿಂದ 400 ಮಿಲಿಯನ್ ಡಾಲರ್ ವ್ಯಯಿಸಿ ಈ ಯೋಜನೆಯನ್ನು ತಾನೇ ಪೂರ್ಣಗೊಳಿಸುವತ್ತ ಇರಾನ್ ಹೆಜ್ಜೆ ಹಾಕುತ್ತಿದೆ.
ಈ ಯೋಜನೆಯು ಭಾರತ, ಇರಾನ್ ಹಾಗೂ ಅಫ್ಘಾನಿಸ್ತಾನದ ನಡುವೆ ನಡೆದಿದ್ದ ತ್ರಿಪಕ್ಷೀಯ ಒಪ್ಪಂದದ ಅಡಿಯಲ್ಲಿ ನಿರ್ಧಾರವಾಗಿತ್ತು. ಅಫ್ಘಾನಿಸ್ತಾನ್ ಹಾಗೂ ಮಧ್ಯ ಏಷ್ಯಾಕ್ಕೆ ಪರ್ಯಾಯ ವ್ಯಾಪಾರ ಮಾರ್ಗವನ್ನು ನಿರ್ಮಿಸುವ ಸಲುವಾಗಿ ಈ ಯೋಜನೆಯನ್ನು ರೂಪಿಸಲಾಗಿತ್ತು.
2016 ಮೇ ತಿಂಗಳಲ್ಲಿ ತೆಹ್ರಾನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇರಾನ್‌ನ ಅಧ್ಯಕ್ಷರಾದ ರುಹಾನಿ, ಅಫ್ಘಾನಿಸ್ತಾನದ ಅಧ್ಯಕ್ಷರಾದ ಘನಿ ಮತ್ತು ಇಂಡಿಯನ್ ರೇಲ್ವೇಸ್ ಕನ್ಸ್ಟ್ರಕ್ಷನ್ ಲಿಮಿಟೆಡ್ (IRCON) ಅವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದರು. IRCON ಈ ಯೋಜನೆಗೆ ಸಂಬಂಧಪಟ್ಟ ಎಲ್ಲಾ ಸೇವೆಗಳನ್ನು ಹಾಗೂ ಹಣಕಾಸಿನ ನೆರವನ್ನು ನೀಡುವುದಾಗಿ ಭರವಸೆಯನ್ನು ನೀಡಿತ್ತು.
ಆದರೆ, IRCONನ ಇಂಜಿನಿಯರ್‌ಗಳು ಸಾಕಷ್ಟು ಬಾರಿ ಇರಾನ್‌ಗೆ ಭೇಟಿ ನೀಡಿದರೂ ಹಾಗೂ ಇರಾನ್‌ನ ರೈಲ್ವೇ ಇಲಾಖೆ ಸಿದ್ದರಿದ್ದರೂ ಯೋಜನೆ ಕಾರ್ಯಗತವಾಗಲಿಲ್ಲ. ಅಮೇರಿಕಾ ಇರಾನ್‌ನ ಮೇಲೆ ನಿರ್ಬಂಧ ಹೇರಿದ್ದು ಕೂಡಾ ಇದಕ್ಕೆ ಕಾರಣವಾಗಿರಬಹುದು. ರೈಲು ಮಾರ್ಗ ನಿರ್ಮಾಣಕ್ಕೆ ಯಾವುದೇ ರೀತಿಯ ನಿರ್ಬಂಧಗಳು ಇಲ್ಲದಿದ್ದರೂ, ಅಗತ್ಯವಿರುವ ಬಿಡಿಭಾಗಗಳನ್ನು ನೀಡುವವರ ಮೇಲೆ ಅಮೇರಿಕಾ ಕೆಂಗಣ್ಣು ಬೀರುವುದು ಎಂಬ ಭಯದಿಂದ ಯೋಜನೆ ಕಾರ್ಯಗತವಾಗಲಿಲ್ಲ.
ಇದೇ ಸಮಯವನ್ನು ಉಪಯೋಗಿಸಿಕೊಂಡ ಚೀನಾ ಇರಾನ್‌ನೊಂದಿಗೆ 25 ವರ್ಷಗಳ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಳ್ಳುವ ಸನಿಹದಲ್ಲಿದೆ. ಈ ಒಪ್ಪಂದದಲ್ಲಿ ಚಬಹರ್‌ನ ಡ್ಯೂಟಿ ಫ್ರೀ ಪ್ರದೇಶದಲ್ಲಿ ಚೀನಾದ ಸಹಭಾಗಿತ್ವ ಹಾಗೂ ಕಚ್ಚಾ ತೈಲ ಸಂಸ್ಕರಣಾ ಘಟಕಗಳಲ್ಲಿ ಚೀನಾ ಪಾಲು ಹೊಂದಲಿದೆ.
ಈ ಒಪ್ಪಂದದಲ್ಲಿ ಇರಾನ್‌ನಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣ, ಇಂಧನ ಉತ್ಪಾದನೆ ಹಾಗೂ ಸಾಗಾಟ, ಬಂದರು ಹಾಗೂ ತೈಲ ಸಂಸ್ಕರಣಾ ಘಟಕಗಳ ನವೀಕರಣ ಹಾಗೂ ಇರಾನ್‌ನಿಂದ ತೈಲ ಮತ್ತು ಅನಿಲವನ್ನು ಚೀನಾಕ್ಕೆ ಸಾಗಿಸುವ ಕುರಿತ ವಿಚಾರಗಳು ಕೂಡಾ ನಮೂದಿಸಲ್ಪಟ್ಟಿವೆ ವಿಚಾರ ಬೆಳಕಿಗೆ ಬಂದಿದೆ.
ಇದರೊಂದಿಗೆ ಭಾರತದೊಂದಿಗೆ ಒಪ್ಪಂದವಾಗಿರುವ ಚಬಹರ್ ಬಂದರನ್ನು ಚೀನಾಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗುವುದು ಎಂಬ ವರಿಯನ್ನು ತಳ್ಳಿ ಹಾಕಿರುವ ಇರಾನ್ ಅಧಿಕಾರಿಗಳು, ಇಂತಹ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ಆದರೂ, ಪಾಕಿಸ್ತಾಣದಲ್ಲಿ ಚೀನಾ ಹಿಡಿತದಲ್ಲಿರುವ ಗ್ವಾದರ್ ಬಂದರು ಮತ್ತು ಚಬಹರ್ ನಡುವೆ ಒಪ್ಪಂದವನ್ನು ಮಾಡಿಕೊಳ್ಳುವ ಕುರಿತು ಇರಾನ್ ಚಿಂತನೆ ನಡೆಸಿತ್ತು. ಚಬಹರ್‌ನಿಂದ 350 ಕಿ.ಮೀ. ದೂರ ಇರುವ ಬಂದರ್-ಎ-ಜಸ್ಕ್ ಬಂದರು ಮತ್ತು ಚೀನಾ ನಡುವೆ ಒಪ್ಪಂದ ಮಾಡಿಕೊಳ್ಳಲು ಇರಾನ್ ಸರ್ಕಾರ ಉತ್ಸಾಹ ತೋರಿಸಿತ್ತು.
ಈ ಒಪ್ಪಂದ ನೆರವೇರಿದಲ್ಲಿ ಪಾಕಿಸ್ತಾನದಿಂದ ಇರಾನ್ ಬಂದರಿನವರೆಗಿನ ಕರಾವಳಿ ತೀರ ಚೀನಾ ಹಿಡಿತಕ್ಕೆ ಸಿಲುಕುವ ಅಪಾಯವಿದೆ ಎಂದು ಇರಾನ್‌ನಲ್ಲಿದ್ದ ಭಾರತದ ಮಾಜಿ ರಾಯಭಾರಿ ಕೆ ಸಿ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಚೀನಾ ಭಾರತದ ಸುತ್ತಮುತ್ತಲಿನ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡು ಅಥವಾ ಅವುಗಳ ದುರ್ಬಲತೆಯ ಮೇಲೆ ದಾಳಿ ಮಾಡಿ ಅವುಗಳನ್ನು ತನ್ನ ಮಿತ್ರರನ್ನಾಗಿ ಭಾರತವನ್ನು ಒಂಟಿ ಮಾಡುವ ಸಂಚು ಹೂಡುತಿದೆ. ಇದರಿಂದಾಗಿ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಂಬಂಧಗಳನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಅದರಲ್ಲೂ ಇತ್ತೀಚಿನ ಭಾರತ-ಚೀನಾ ನಡುವಿನ ಘರ್ಷಣೆಯ ನಂತರ ಚೀನಾ ಭಾರತದ ಮೇಲೆ ಮೇಲುಗೈ ಸಾಧಿಸಲು ಪ್ರಯತ್ನಿಸುತ್ತಿದೆ. ಅದರಲ್ಲೂ ಇರಾನ್‌ನಂತಹ ರಾಷ್ಟ್ರಗಳೊಂದಿಗೆ ಮಿಲಿಟರಿ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ನರೇಂದ್ರ ಮೋದಿಯವರ ವಿಶ್ವ ಪರ್ಯಟನೆಯಿಂದಾಗಿ ರೂಪುಗೊಂಡ ಅಂತರಾಷ್ಟ್ರೀಯ ಸಂಬಂಧಗಳು ದಿನೇ ದಿನೇ ಹಳಸಿ ಹೋಗುತ್ತಿವೆ.