ಚೀನಾ ಸೇನೆ ಕಳೆದ ಜೂನ್ 15 ರಂದು ಭಾರತ ಗಡಿಯಲ್ಲಿ ತಕರಾರು ಎತ್ತಿ ಗಡಿಯೊಳಗಡೆ ನುಸುಳಿ 20 ಭಾರತೀಯ ಯೋಧರನ್ನು ಬಲಿ ಪಡೆದ ಬಳಿಕ ಉಭಯ ದೇಶಗಳ ನಡುವೆ ಸೇನಾ, ರಾಜತಾಂತ್ರಿಕ ಮಟ್ಟದಲ್ಲಿ ಸಮರಸ ಹದ ತಪ್ಪಿದೆ. ಈ ಹಿಂದೆಯೂ ಚೀನಾ ಗಡಿ ತಂಟೆ ಎತ್ತಿದ್ದರೂ ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟೊಂದು ವಿಕೋಪಕ್ಕೆ ತಿರುಗಿರಲಿಲ್ಲ.
ಇಂದು ಪ್ರಧಾನಿ ಮೋದಿ ಲಡಾಖ್ ಸೇನಾ ನೆಲೆಗಳಿಗೆ ಭೇಟಿ ನೀಡಿದ್ದಾರೆ. ಲಢಾಕ್ ಕಠಿಣ ವಾತಾವರಣದ ಪ್ರದೇಶವಾಗಿದ್ದು, 69 ವರ್ಷದ ಪ್ರಧಾನಿ ತಮ್ಮ ಇಳಿವಯಸ್ಸಿನಲ್ಲೂ ಅಲ್ಲಿಗೆ ತೆರಳಿ ಸೇನಾ ನೆಲೆಯಲ್ಲಿ ಸೇನೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಸೈನಿಕರ ತ್ಯಾಗ ಬಲಿದಾನಗಳಿಗೆ ಗೌರವ ಅರ್ಪಿಸಿದ್ದಾರೆ.
ಲಡಾಖ್ ನ ನಿಮ್ಮು ಹೌಸ್ ನಲ್ಲಿ ಭಾರತದ ನಾಗರಿಕರನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಚೀನಾದ ಹೆಸರೇ ಉಚ್ಛರಿಸದೆ ಶತ್ರು ದೇಶದ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ. ಸಾಮ್ರಾಜ್ಯವಾದದ, ವಿಸ್ತರಣವಾದದ ಯುಗವು ಕಳೆದಿದೆ, ಸದ್ಯ ಇರುವುದು ವಿಕಾಸವಾದದ ಯುಗವೆಂದು ತನ್ನ ಭಾಷಣದಲ್ಲಿ ಹೇಳಿದ್ದಾರೆ.
ವಿಕಾಸಕ್ಕಾಗಿ ಹೆಜ್ಜೆ ಇಡಬೇಕಾದ ಸಮಯವಿದು, ವಿಸ್ತಾರವಾದದ ಗೆಲುವಿನಿಂದಾಗಿ ಮಾನವೀಯತೆ, ಶಾಂತಿ ನಶಿಸಿಸುತ್ತದೆ, ಇತಿಹಾಸವೇ ಇದಕ್ಕೆ ಪುರಾವೆ. ವಿಸ್ತಾರವಾದದ ಎದುರು ವಿಕಾಸವಾದ ಗೆಲುವು ಪಡೆಯಲಿದೆ ಎಂದಿದ್ದಾರೆ.
ಭಾಷಣದಲ್ಲಿ ಸೇನೆಯನ್ನು ಅಭಿವೃದ್ಧಿಗೊಳಿಸುವ ಕುರಿತು ಮಾತನಾಡಿದ ಪ್ರಧಾನಿ ಸೇನೆಗೆ ಬೇಕಾಗಿರುವ ಅತ್ಯಾಧುನಿಕ ಶಸ್ತ್ರಗಳ ಬಗ್ಗೆ ಗಮನ ಹರಿಸಲಾಗುವುದು, ಗಡಿಯಲ್ಲಿನ ಮೂಲ ಸೌಕರ್ಯಗಳನ್ನು ಮೂರು ಪಟ್ಟು ಹೆಚ್ಚಿಸಲಾಗುವುದು, ಗಡಿ ರಸ್ತೆ ನಿರ್ಮಾಣದ ಕಾರ್ಯವನ್ನು ವೇಗಗೊಳಿಸಿ ಗಡಿ ಪ್ರದೇಶದ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
ಜೂನ್ 15 ರಂದು ಚೈನಾ ಸೈನಿಕರಿಗೆ ಪ್ರತಿರೋಧ ಒಡ್ಡಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸೈನಿಕರನ್ನು ಭೇಟಿ ಮಾಡಿದ ಮೋದಿ ನಿಮ್ಮ ಪರಾಕ್ರಮಗಳನ್ನು ಇಡೀ ಭಾರತವೇ ಗೌರವಪೂರ್ವಕವಾಗಿ ಕಾಣುತ್ತಿದೆ. ಜಗತ್ತಿಗೆ ಭಾರತದ ಸೈನ್ಯದ ಶಕ್ತಿಯೇನೆಂದು ನೀವು ತೋರಿಸಿಕೊಟ್ಟಿದ್ದೀರಿ, ಜಗತ್ತಿನ ಯಾವುದೇ ಶಕ್ತಿಯನ್ನು ಎದುರಿಸಲು ಭಾರತದ ಸೇನೆ ಶಕ್ತವಾಗಿದೆಯೆಂದು ನೀವು ಸಾಬೀತು ಮಾಡಿದ್ದೀರಿ ಎಂದು ಗಾಯಾಳು ಸೈನಿಕರನ್ನುದ್ದೇಶಿಸಿ ಮೋದಿ ಹೇಳಿದ್ದಾರೆ.