
- ಚಾವಿಸನಿನಿಯ 408.95 ಕೋಟಿ ರೂ.ಗಳ ನಾಲ್ಕು ಕಾಮಗಾರಿಗಳು
- ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಎರಡು ಕಾಮಗಾರಿಗಳು
ಮೈಸೂರು, ಜುಲೈ 19, 2025
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯಾಪ್ತಿಯಲ್ಲಿ ಸೆಸ್ಕ್ ಮತ್ತು ಕೆಪಿಟಿಸಿಎಲ್ ವತಿಯಿಂದ 408.95 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗಿರುವ ಪ್ರಮುಖ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ. ಜಾರ್ಜ್ ಅವರುಗಳ ಸಮ್ಮುಖದಲ್ಲಿ ಸೆಸ್ಕ್ ನ ನಾಲ್ಕು ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಪ್ರಮುಖವಾಗಿ ಸೆಸ್ಕ್ ವತಿಯಿಂದ ಮೈಸೂರು ನಗರ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 11 ಕೆವಿ ಓವರ್ ಹೆಡ್ ವಿದ್ಯುತ್ ಮಾರ್ಗವನ್ನು ಭೂಗತ ಕೇಬಲ್ ನಿಂದ ಬದಲಾಯಿಸುವುದು ಹಾಗೂ ಎಲ್.ಟಿ ಓವರ್ ಹೆಡ್ ವಿದ್ಯುತ್ ಮಾರ್ಗವನ್ನು ಏರಿಯಲ್ ಬಂಚ್ ಕೇಬಲ್ ನಿಂದ ಬದಲಿಸಲಾಗುತ್ತದೆ.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ(118.97 ಕೋಟಿ ರೂ.ಗಳು), ಚಾಮರಾಜ ವಿಧಾನಸಭಾ ಕ್ಷೇತ್ರ(125.51 ಕೋಟಿ ರೂ.ಗಳು), ನರಸಿಂಹರಾಜ ವಿಧಾನಸಭಾ ಕ್ಷೇತ್ರ(103.74 ಕೋಟಿ ರೂ.ಗಳು) ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 60.73 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸದರಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.

ಕೆಪಿಟಿಸಿಎಲ್ ನ 38.78 ಕೋಟಿ ರೂ.ಗಳ ಕಾಮಗಾರಿ
ಇದೇ ಸಂದರ್ಭದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್) ವತಿಯಿಂದ ಹುಣಸೂರು ತಾಲೂಕಿನಲ್ಲಿ ಕೈಗೊಳ್ಳಲಾಗುತ್ತಿರುವ 38.73 ಕೋಟಿ ರೂ.ಗಳ ಎರಡು ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದರು. ಹುಣಸೂರು ತಾಲೂಕಿನ ಮನುಗನಹಳ್ಳಿಯಲ್ಲಿ 66/11ಕೆವಿ, 2X20 ಎಂವಿ ಉಪ ಕೇಂದ್ರ(20.41 ಕೋಟಿ ರೂ.ಗಳು) ಹಾಗೂ ಕಟ್ಟೆಮಳಲವಾಡಿಯಲ್ಲಿ 66/11ಕೆವಿ, 2X20 ಎಂವಿ ಉಪ ಕೇಂದ್ರ(18.32 ಕೋಟಿ ರೂ.ಗಳು) ನಿರ್ಮಾಣ ಕಾಮಗಾರಿಗಳು ಒಳಗೊಂಡಿದೆ.