ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದೆ. ಅಕ್ಟೋಬರ್ 1ರವರೆಗೆ ಮಧ್ಯೆ ಒಂದು ದಿನವೂ ಬಿಡುವಿಲ್ಲದೆ ಒಟ್ಟು 18 ದಿನ ಅಧಿವೇಶನ ನಡೆಯಲಿದೆ. ಆದರೆ ಬಹಳ ಮುಖ್ಯವಾಗಿ 6 ವಿಷಯಗಳು ಚರ್ಚೆ ಆಗಬೇಕಿದ್ದು, ಅವುಗಳು ಈ ಅಧಿವೇಶನದಲ್ಲಿ ಚರ್ಚೆ ಆಗಲಿವೆಯೇ? ಚರ್ಚೆಗೆ ಕೇಂದ್ರ ಸರ್ಕಾರ ಸಿದ್ದವಿದೆಯೇ? ಅಥವಾ ಕೇಂದ್ರ ಸರ್ಕಾರ ಕಳೆದ 6 ತಿಂಗಳಿಂದೀಚೆಗೆ ಹೊರಡಿಸಿರುವ 11 ಸುಗ್ರೀವಾಜ್ಞೆಗಳು ಸಂಸತ್ತಿನ ಅನುಮೋದನೆಗಾಗಿ ಕಾಯುತ್ತಿದ್ದು, ಅವುಗಳಿಗೆ ಅನುಮೋದನೆ ಪಡೆದು, ಸಂಸತ್ ಅಧಿವೇಶನ ನಡೆಸಿದೆವು ಎಂಬ ‘ಶಾಸ್ತ್ರ’ ಪೂರೈಸಿ ಕೇಂದ್ರ ಸರ್ಕಾರ ಪಲಾಯನ ಮಾಡುವುದೇ ಎಂಬ ಪ್ರಶ್ನೆಗಳು ಕಾಡುತ್ತಿವೆ.
ಕರೋನಾ ಕರಿನೆರಳು ಬೀಳುವ ಮುನ್ನವೇ ದೇಶದ ಆರ್ಥಿಕತೆ ಪಾತಾಳಮುಖಿಯಾಗಿತ್ತು. ನಿರುದ್ಯೋಗ ಸಮಸ್ಯೆ ತಾರಕ್ಕೇರುತ್ತಿತ್ತು. ಹಣದುಬ್ಬರ ಹೆಚ್ಚಾಗುತ್ತಿತ್ತು. ಅತ್ಯಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಗಳು ಗಗನಮುಖಿಯಾಗಿದ್ದವು. ಹೀಗೆ ಹತ್ತು-ಹನ್ನೆರಡು ಸಮಸ್ಯೆಗಳಿಂದ ಜರ್ಜರಿತಗೊಂಡಿದ್ದ ದೇಶಕ್ಕೆ ಕರೋನಾ ಗಾಯದ ಮೇಲೆ ಬರೆ ಎಳೆದಂತೆ ಬಂದಿತ್ತು. ಹಾಗಾಗಿ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಚರ್ಚಿಸಲು ಹಲವು ಸಮಸ್ಯೆಗಳಿವೆ, ವಿಷಯಗಳಿವೆ. ಆದರೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಗಟ್ಟಿ ದನಿಯಲ್ಲಿ ಮಾತನಾಡುತ್ತಿರುವ 6 ವಿಷಯಗಳ ಬಗ್ಗೆಯಾದರೂ ಚರ್ಚೆ ಆಗುತ್ತಾ ಎನ್ನುವುದೇ ಕುತೂಹಲ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಭಾರತ-ಚೀನಾ ಗಡಿ ಸಂಘರ್ಷ
ಸದ್ಯ ಪಾಕಿಸ್ತಾನದ ಕಿರಿಕಿರಿ ತುಸು ಕಡಿಮೆ ಆಯಿತು ಎನ್ನುವಷ್ಟರಲ್ಲಿ ಚೀನಾ ಸೇನೆ ಗಡಿಯಲ್ಲಿ ತಗಾದೆ ಶುರುಹಚ್ಚಿಕೊಂಡಿದೆ. ಇದೇ ಮೇ ತಿಂಗಳ ಐದರಿಂದ ನಿರಂತರವಾಗಿ ಭಾರತ ಮತ್ತು ಚೀನಾದ ಗಡಿಯಲ್ಲಿ ಉದ್ವಿಘ್ನತೆಯ ವಾತಾವರಣ ಉಂಟಾಗಿದೆ. ಗಾಲ್ವಾನ್ ಕಣಿವೆ ಬಳಿ ಎರಡೂ ದೇಶಗಳ ಸೈನಿಕರ ನಡುವೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಇಂಥದೇ ಪರಿಸ್ಥಿತಿ ಚೀನಾದಲ್ಲೂ ನಿರ್ಮಾಣವಾಗಿದೆ. ಇದರ ಬಳಿಕ ನಿರಂತರವಾಗಿ ಸೇನೆ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆಗಳು ನಡೆಯುತ್ತಿವೆ. ಎರಡೂ ದೇಶಗಳ ರಕ್ಷಣಾ ಸಚಿವರ ಸಭೆಯಾಗಿದೆ. ವಿದೇಶಾಂಗ ಸಚಿವರ ಸಭೆಯಾಗಿದೆ. ಆದರೂ ಗಡಿಯಲ್ಲಿ ಶಾಂತಿ ನೆಲೆಸಿಲ್ಲ. ಮುಂದೆಯೂ ಶಾಂತಿ ನೆಲಸುವ ಲಕ್ಷಣಗಳು ಗೋಚರಿಸುತ್ತಿಲ್ಲ.
Also Read: ಗಡಿ ಉದ್ವಿಗ್ನತೆ ನಡುವೆ ಚೀನಾದೊಂದಿಗೆ ಮಾತನಾಡುವ ಅವಶ್ಯಕತೆ ಇಲ್ಲ- ಸ್ವಾಮಿ
ಹಲವು ಪ್ರಯತ್ನಗಳ ನಡುವೆಯೂ ಗಡಿಯಲ್ಲಿ ಪರಿಸ್ಥಿತಿ ತಹಬದಿಗೆ ಬಂದಿಲ್ಲ ಎಂಬ ಕಾರಣಕ್ಕಾಗಿಯೇ ‘ಮೊದಲು ಗಡಿಯಲ್ಲಿ ಶಾಂತಿ ನೆಲಸಲಿ, ಬಳಿಕ ಮಾತುಕತೆ ನಡೆಯಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ರಾಹುಲ್ ಗಾಂಧಿ ಅವರು ಮಾತ್ರವಲ್ಲ, ಬಿಜೆಪಿಯ ರಾಜ್ಯಸಭಾ ಸದಸ್ಯರಾದ ಸುಬ್ರಮಣಿಯನ್ ಸ್ವಾಮಿ ಕೂಡ ‘ಈ ಹಂತದಲ್ಲಿ ಮಾತುಕತೆ ಬೇಡ, ಕೂಡಲೇ ವಿದೇಶಾಂಗ ಸಚಿವರ ಸಭೆಯನ್ನು ಬಹಿಷ್ಕರಿಸಿ (ಎಸ್. ಜೈಶಂಕರ್ ಚೀನಾ ವಿದೇಶಾಂಗ ಸಚಿವರ ಜತೆ ಸಭೆ ನಡೆಸಲು ಮಾಸ್ಕೋಗೆ ತೆರಳಿದ್ದಾಗ ಹೇಳಿದ್ದ ಮಾತು)’ ಎಂದು ಒತ್ತಾಯಿಸಿದ್ದರು. ಇದಲ್ಲದೆ ಚೀನಾದ ಸೇನೆ ಭಾರತದ ಭೂಭಾಗವನ್ನು ಆಕ್ರಮಿಸಿಕೊಂಡಿದೆ ಎಂಬ ಬಗ್ಗೆ ಕೂಡ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ರಾಹುಲ್ ಗಾಂಧಿ ಅವರು ‘ಚೀನಾ ಸೇನೆ ವಶಪಡಿಸಿಕೊಂಡಿರುವ ಭಾರತದ ಭೂಭಾಗವನ್ನು ಕೂಡಲೇ ವಾಪಸ್ ಪಡೆಯಿರಿ ಎಂದು ಖಡಕ್ಕಾಗಿ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ‘ಇದನ್ನು ಕೂಡ ಆ್ಯಕ್ಟ್ ಆಫ್ ಗಾಡ್ ಎಂದು ಭಾವಿಸಬೇಕೆ?’ ಎಂದು ಕೇಂದ್ರ ಸರ್ಕಾರವನ್ನು ಮೂದಲಿಸಿದ್ದಾರೆ. ಆದುದರಿಂದ ಗಡಿ ಸಮಸ್ಯೆ ಬಗ್ಗೆ ಕೇಂದ್ರ ಸರ್ಕಾರದ ನಿಲುವೇನು ಎಂಬ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕಿದೆ.

ಪಾತಾಳಮುಖಿಯಾಗಿರುವ ಆರ್ಥಿಕತೆ
ಕರೋನಾಗೂ ಮೊದಲೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಈಗಂತೂ ದಿನದಿಂದ ದಿನಕ್ಕೆ ಪರಿಸ್ಥಿತಿ ಕೈ ಮೀರುತ್ತಿದೆ. ಈ ದುಸ್ಥಿತಿಯಿಂದ ದೇಶವನ್ನು ಬಚಾವ್ ಮಾಡಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಮುನ್ನೋಟ ಏನು ಎಂಬ ಬಗ್ಗೆ ಚರ್ಚೆ ಆಗಬೇಕಿದೆ. ಮುಂದಾಲೋಚನೆ, ಮುನ್ನೆಚ್ಚರಿಕೆ ಇಲ್ಲದೆ ಲಾಕ್‌ಡೌನ್ ಘೋಷಣೆ ಮಾಡಿದ್ದರಿಂದ ರಾಜ್ಯ ಸರ್ಕಾರಗಳ ಆದಾಯಕ್ಕೆ ತೀವ್ರ ರೀತಿಯ ಹೊಡೆತ ಬಿದ್ದಿದೆ. ಅದೇ ಕಾರಣಕ್ಕೆ ರಾಜ್ಯಗಳು ತಮ್ಮ ಪಾಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರದ ಪ್ರಮಾಣವನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಪರಿಹಾರ ನೀಡುವ ಬದಲು ‘ಸಾಲ ಮಾಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂಬ ಪುಕ್ಕಟ್ಟೆ ಸಲಹೆ ನೀಡಿದೆ. ಈ ಬಗ್ಗೆ ಪ್ರತಿಪಕ್ಷಗಳು ದನಿ ಎತ್ತಲು ಪ್ರಯತ್ನಿಸುತ್ತವೆ. ಆದರೆ ಚರ್ಚೆಗೆ ಕೇಂದ್ರ ಸರ್ಕಾರ ಅವಕಾಶ ಮಾಡಿಕೊಡುವ ಬಗ್ಗೆ ಅನುಮಾನಗಳಿವೆ.
Also Read: ಇತಿಹಾಸ ಕಾಣದ ಆರ್ಥಿಕ ಕುಸಿತದತ್ತ ಭಾರತ; ಆರ್ಥಿಕತೆ ಎಂದರೇನು? ದೇಶದ ಪ್ರಸ್ತುತ ಸ್ಥಿತಿ ಹೇಗಿದೆ?
ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ
ಕರೋನಾ ಮತ್ತು ಲಾಕ್‌ಡೌನ್ ಕಾರಣಗಳಿಂದ ಜನ ತೀವ್ರ ಸಂಕಷ್ಟದಲ್ಲಿದ್ದಾಗಲೂ ಕೇಂದ್ರ ಸರ್ಕಾರ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದೆ. ಇದು ಸಾಲದೆಂಬಂತೆ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ರದ್ದು ಮಾಡಿದೆ. ರೈಲ್ವೆ ಫ್ಲಾಟ್‌ಫಾರಂ ಟಿಕೆಟ್‌ಗಳನ್ನು 10 ರಿಂದ 50 ರೂಪಾಯಿಗೆ ಏರಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಿದರೆ ಸಹಜವಾಗಿ ಅವು ಇತರೆ ಪದಾರ್ಥಗಳ ಬೆಲೆ ಏರಿಕೆಗೂ ಮುನ್ನುಡಿ ಬರೆಯುತ್ತವೆ. ಈಗ ಆಗಿರುವುದು ಅದೇ. ಜನಕ್ಕೆ ಒಂದು ಕಡೆ ಸರಿಯಾಗಿ ಕೆಲಸ ಇಲ್ಲ. ಇನ್ನೊಂದೆಡೆ ಆರ್ಥಿಕ ವಹಿವಾಟಿಲ್ಲ. ದುಡ್ಡಿನ ಹರಿದಾಡುವಿಕೆ ಇಲ್ಲ. ಇಂಥ ಸಂಕಷ್ಟದ ಸಮಯದಲ್ಲೂ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲೆ ಮತ್ತು ಅಡುಗೆ ಅನಿಲದ ಬೆಲೆ ಏರಿಸಿದೆ. ಇವೆಲ್ಲವುಗಳ ಬಗ್ಗೆ ಕೂಡ ವಿಪಕ್ಷಗಳ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಲಿವೆ. ಎಷ್ಟರ ಮಟ್ಟಿಗೆ ಚರ್ಚೆ ಆಗುತ್ತೆ ಎಂಬುದನ್ನು ಕಾದು ನೋಡಬೇಕು.
ಜಿಡಿಪಿಯ ಐತಿಹಾಸಿಕ ಕುಸಿತ
ಹಿಂದಿನ ಯುಪಿಯ ಸರ್ಕಾರದ ಅವಧಿಯಲ್ಲಿ ಒಟ್ಟು ದೇಶಿಯ ಉತ್ಪನ್ನ (Gross Domestic Product-GDP) ದ ಬೆಳವಣಿಗೆ ದರ ಎರಡಂಕಿ ದಾಟಿತ್ತು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಅದು ನಿರಂತರವಾಗಿ ಕುಸಿತ ಕಂಡಿದೆ. ಸದ್ಯ ಶೇಕಡ -23ರಷ್ಟು ಜಿಡಿಪಿ ಬೆಳವಣಿಗೆಯಾಗಿದೆ. ಇದು ಕಳೆದ ನಲವತ್ತು ವರ್ಷಗಳ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕಡಿಮೆ ಪ್ರಮಾಣದ ಬೆಳವಣಿಗೆ. ಜಿಡಿಪಿ ಕುಸಿತವಾಗುವುದರಿಂದ ಸಹಜವಾಗಿ ದೇಶದ ಆರ್ಥಿಕ ವಹಿವಾಟಿನ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ಬಂಡವಾಳ ಹೂಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದುದರಿಂದ ಕೇಂದ್ರ ಸರ್ಕಾರ ಕೂಡಲೇ ಜಿಡಿಪಿ ಬೆಳವಣಿಗೆ ದರವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಏನೇನು ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ ಕೂಡ ಚರ್ಚೆ ಆಗಬೇಕಿದೆ.
ಹೆಚ್ಚುತ್ತಿರುವ ನಿರುದ್ಯೋಗ
ಒಂದು ಕಡೆ ಕೇಂದ್ರ ಸರ್ಕಾರಕ್ಕೆ ಅಭಿವೃದ್ಧಿಯ ಅಜೆಂಡಾ ಇಲ್ಲ. ಇನ್ನೊಂದೆಡೆ ಹಳಿತಪ್ಪಿರುವ ದೇಶದ ಆರ್ಥಿಕತೆಯನ್ನು ಸರಿದಾರಿಗೆ ತರುವ ಇಚ್ಛಾಶಕ್ತಿ ಇಲ್ಲ. ವಿದೇಶಿ ಬಂಡವಾಳ ಬರುತ್ತಿಲ್ಲ. ನರೇಂದ್ರ ಮೋದಿ ಸರ್ಕಾರದ ಆರ್ಥಿಕ ನೀತಿಗಳು ದೇಶಿ ಉದ್ಯಮಿಗಳಿಗೂ ಪೂರಕವಾಗಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಲ್ಲಿ ಸಮಸ್ಯೆಗೆ ಮದ್ದು ಹರೆಯುವ ಸಾಮರ್ಥ್ಯ ಇಲ್ಲ.
ಈ ಎಲ್ಲಾ ‘ಇಲ್ಲ’ಗಳು ಹಾಗೂ ಲಾಕ್‌ಡೌನ್ ಕಾರಣಕ್ಕೆ ನಿರುದ್ಯೋಗ ಸಮಸ್ಯೆ ತಾರಕಕ್ಕೇರುತ್ತಿದೆ. ದಿನದಿಂದ ದಿನಕ್ಕೆ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದರೂ ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಮುಂದಡಿ ಇಟ್ಟಿಲ್ಲ. ಈಗಾಗಲೇ ‘ರೋಜ್‌ಗಾರ್ ದೋ’ (ಉದ್ಯೋಗ ಕೊಡಿ) ಅಭಿಯಾನ ಆರಂಭಿಸಿರುವ ಕಾಂಗ್ರೆಸ್ ಪಕ್ಷ ಸಂಸತ್ ಅಧಿವೇಶನದಲ್ಲೂ ಈ ವಿಷಯವನ್ನು ಚರ್ಚಿಸಲು ಅವಕಾಶ ಕೋರುತ್ತದೆ. ಆದರೆ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರ ಚರ್ಚೆಗೆ ಅವಕಾಶ ಕೊಡುವ ಸಾಧ್ಯತೆಗಳು ಬಹಳ ಕಡಿಮೆ.
Also Read: ‘ಕೆಲಸ ನೀಡಿ’ ಅಭಿಯಾನ ಶುರುಮಾಡಿದ ಯೂತ್ ಕಾಂಗ್ರೆಸ್
ತೀವ್ರವಾಗಿ ಹರಡುತ್ತಿರುವ ಕರೋನಾ
ತಟ್ಟೆ ಬಾರಿಸಿ, ಮೇಣದ ಬತ್ತಿ ಹೊತ್ತಿಸಿ ಎಂಬ ಅವೈಜ್ಞಾನಿಕ ಕ್ರಮಗಳು ಹಾಗೂ ಅಕಾಲದಲ್ಲಿ ಲಾಕ್‌ಡೌನ್ ಮಾಡಿದ ಪರಿಣಾಮ ದೇಶದಲ್ಲಿ ಕರೋನಾ ಶರವೇಗದಲ್ಲಿ ಸಾಗುತ್ತಿದೆ. ಈಗಾಗಲೇ ವಿಶ್ವದಲ್ಲೇ ಅತಿಹೆಚ್ಚು ಕರೋನಾ ಸೋಂಕಿತರರಿರುವ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತಲುಪಿದೆ. ಸದ್ಯ ಪ್ರತಿದಿನ ಸುಮಾರು 1 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು ಇದೇ ರೀತಿ ಮುಂದುವರೆದರೆ ಮೊದಲ ಸ್ಥಾನದಲ್ಲಿರುವ ಅಮೇರಿಕಾವನ್ನೂ ಹಿಂದಿಕ್ಕುವ ಸಾಧ್ಯತೆ ಇದೆ. ಇದಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಕರೋನಾದಿಂದ ಸತ್ತವರ ಸಂಖ್ಯೆ 1 ಲಕ್ಷದ ಗಡಿ ದಾಟಲಿದೆ. ಇಂಥ ವಿಷಮ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕೈಚೆಲ್ಲಿ ಕುಳಿತಿದೆ. ಕರೋನಾಕ್ಕೆ ಲಸಿಕೆ ಕಂಡುಹಿಡಿಯುವ ಕೆಲಸವೂ ಭರದಿಂದ ಸಾಗುತ್ತಿಲ್ಲ. ಈ ಬಗ್ಗೆ ಚರ್ಚೆಯಾಗಲಿದೆಯಾ ಎಂಬುದನ್ನು ಕಾದುನೋಡಬೇಕು.