ಕರೋನಾ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಕಾರಣದಿಂದ ಕುಸಿದಿರುವ ಆರ್ಥಿಕತೆಯಿಂದಾಗಿ ಉದ್ಯೋಗ ನಷ್ಟ ಮತ್ತು ಆದಾಯ ಕಡಿತದ ನಂತರ ಹೆಚ್ಚಿನ ಜನರು ತೀವ್ರ ಆರ್ಥಿಕ ಒತ್ತಡವನ್ನು ಎದುರಿಸುತ್ತಿದ್ದಾರೆ.ಈ ಸಮಯದಲ್ಲಿ, ಕರ್ನಾಟಕ ಸರ್ಕಾರವು ವಸತಿ, ವಾಣಿಜ್ಯ ಮತ್ತು ಕೈಗಾರಿಕಾ ಘಟಕಗಳ ಮೇಲೆ ಆಸ್ತಿ ತೆರಿಗೆಯನ್ನು ಹೆಚ್ಚಿಸುವ ಮೂಲಕ ಮತ್ತೊಂದು ಆಘಾತವನ್ನು ನೀಡಲು ಸಜ್ಜಾಗಿದೆ.
ಆಸ್ತಿ ತೆರಿಗೆಯ ಲೆಕ್ಕಾಚಾರವನ್ನು ಈಗ ವಿಸ್ತೀರ್ಣದ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿದೆ, ಇನ್ನು ಮುಂದೆ ಇದಕ್ಕೆ ಬದಲಾಗಿ ಕಟ್ಟಡಕ್ಕೆ ಹೂಡಿದ ಬಂಡವಾಳದ ಮೇಲೆ ಲೆಕ್ಕ ಹಾಕಲಾಗುತ್ತದೆ. ಅಸ್ತಿತ್ವದಲ್ಲಿರುವ ವಿಧಾನಕ್ಕಿಂತ ಇದು ಹೆಚ್ಚು ವೈಜ್ಞಾನಿಕ ಎಂದು ಹೇಳಲಾಗುತ್ತಿದ್ದರೂ, ಇದರ ಅನುಷ್ಠಾನಕ್ಕೆ ಇದು ಸೂಕ್ತ ಸಮಯವಲ್ಲ. ಆಸ್ತಿ ತೆರಿಗೆಯ ಹೆಚ್ಚಳವು ಈಗಾಗಲೇ ತೊಂದರೆಗೀಡಾದ ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಇನ್ನಷ್ಟು ದುಷ್ಪರಿಣಾಮ ಬೀರಬಹುದು. ಇದು ವಸತಿ ಮತ್ತು ವಾಣಿಜ್ಯ ಬಾಡಿಗೆ ಹೆಚ್ಚಳಕ್ಕೂ ಕಾರಣವಾಗಬಹುದು.
ಬೆಂಗಳೂರಿನಲ್ಲಿ ಜನರು ಈಗಾಗಲೇ ಬಾಡಿಗೆ ಭರಿಸಲಾಗದ ಕುರಿತು ದೂರು ನೀಡುತ್ತಿದ್ದಾರೆ. ವಾಣಿಜ್ಯ ಕಟ್ಟಡಗಳ ದೊಡ್ಡ ಭಾಗಗಳು ಖಾಲಿ ಉಳಿದಿರುವುದರಿಂದ, ತೆರಿಗೆ ಹೆಚ್ಚಳ ಮಾಡುವುದು ಕಟ್ಟಡ ಮಾಲೀಕರಿಗೆ ಹೆಚ್ಚುವರಿ ಹೊರೆಯಾಗಲಿದೆ.
ಕರ್ನಾಟಕ ಹಣಕಾಸಿನ ಜವಾಬ್ದಾರಿ ಕಾಯ್ದೆ(2002) ಯಂತೆ, ರಾಜ್ಯದ ಹಣಕಾಸಿನ ಕೊರತೆಯು ಒಟ್ಟು ರಾಜ್ಯ ಉತ್ಪನ್ನದ (ಜಿಎಸ್ಡಿಪಿ) 3% ಕ್ಕಿಂತ ಕಡಿಮೆ ಇರಬೇಕು. ಪ್ರಸಕ್ತ ವರ್ಷದಲ್ಲಿ ಇದನ್ನು 5% ಕ್ಕೆ ಹೆಚ್ಚಿಸಲು ಕೇಂದ್ರವು ರಾಜ್ಯಗಳಿಗೆ ಅನುಮತಿ ನೀಡಿದೆ.
![](https://pratidhvani.in/wp-content/uploads/2021/02/Support_us_Banner_New_3__1_-61.png)
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆರ್ಥಿಕತೆಯು ತತ್ತರಿಸಿ ಹೋಗಿರುವುದರಿಂದ ಮತ್ತು ಎಲ್ಲಾ ಆದಾಯದ ಮೂಲಗಳು ಬರಿದಾಗುತ್ತಿರುವುದರಿಂದ, ರಾಜ್ಯಗಳು ಹೆಚ್ಚಿನ ಸಾಲ ಪಡೆಯಬೇಕಾದ ಅನಿವಾರ್ಯತೆಯಲ್ಲಿದೆ. ಈ ಸಂಕಷ್ಟದ ಸಮಯದಲ್ಲಿ, ಹೆಚ್ಚುವರಿ ಸಾಲವನ್ನು ಆಶ್ರಯಿಸದೆ ಅಥವಾ ನಾಗರಿಕರ ಮೇಲೆ ತೆರಿಗೆ ಹೊರೆಯನ್ನು ಹೆಚ್ಚಿಸದೆ ಸರ್ಕಾರವು ಅಗತ್ಯವಾದ ಖರ್ಚನ್ನು ನಿಭಾಯಿಸುವುದು ಕಷ್ಟ.
ಆದಾಗ್ಯೂ, ಇದು ಅನಿಯಂತ್ರಿತ ಖರ್ಚುಗಳನ್ನು ಕಡಿತಗೊಳಿಸುವುದು, ಭ್ರಷ್ಟಾಚಾರವನ್ನು ನಿಗ್ರಹಿಸುವುದು ಮತ್ತು ಆದಾಯ ಸಂಗ್ರಹಣೆಯಲ್ಲಿ ಸೋರಿಕೆಯನ್ನು ತಡೆಯುವುದು ಮುಂತಾದ ಕ್ರಮಗಳಿಂದ ತಕ್ಕ ಮಟ್ಟಿಗೆ ಹಣಕಾಸಿನ ಕೊರತೆ ನೀಗಿಸಬಹುದು.
ಅಂಕಿಅಂಶಗಳ ಪ್ರಕಾರ 2019-20 ನೇ ವಾರ್ಷಿಕ ಸಾಲಿನಲ್ಲಿ ಜಿಎಸ್ಟಿ ತೆರಿಗೆ ರೂಪದಲ್ಲಿ ಕರ್ನಾಟಕಕ್ಕೆ ಸಂದಾಯವಾಗಬೇಕಿದ್ದ ನಮ್ಮ ಪಾಲಿನ ರೂ. 9,000 ಕೋಟಿ ತೆರಿಗೆ ಹಣ ಈಗಾಗಲೇ ಖೋತಾ ಆಗಿದೆ. ಇನ್ನೂ 2020-21 ನೇ ಸಾಲಿನಲ್ಲಿ 11,000 ಕೋಟಿಗೂ ಅಧಿಕ ಹಣ ಕಡಿಮೆಯಾಗಿದೆ. ಕರ್ನಾಟಕಕ್ಕೆ ನ್ಯಾಯಯುತವಾಗಿ ಬರಬೇಕಿದ್ದ ಜಿಎಸ್ಟಿ ಪಾಲು ಬಂದರೆ, ತಕ್ಕ ಮಟ್ಟಿಗೆ ಬಿಕ್ಕಟ್ಟನ್ನು ಎದುರಿಸಬಹುದು ಎಂದು ಆರ್ಥಿಕ ವಿಶ್ಲೇಷಣೆಗಾರರು ಅಭಿಪ್ರಾಯಪಟ್ಟಿದ್ದಾರೆ.
Also Read: ಜಿಎಸ್ಟಿ ಅನ್ಯಾಯ; ಪ್ರಶ್ನೆ ಮಾಡುವ ತಾಕತ್ತು 25 ಬಿಜೆಪಿ ಸಂಸದರ ಪೈಕಿ ಒಬ್ಬರಿಗೂ ಇಲ್ಲವೇ?