ಆಲ್ಕೋಹಾಲ್ ಕುಡಿದರೆ ಕರೋನಾ ಸೋಂಕು ಬರೋದಿಲ್ಲ ಅನ್ನೋ ಅರ್ಧಂಬರ್ಧ ಮಾಹಿತಿ ತಿಳಿದವರು ಇರಾನ್ನಲ್ಲಿ ನಡೆದ ದಾರುಣ ಕಥೆಯನ್ನ ಕೇಳಲೇಬೇಕು. ಈ ರೀತಿ ಅರ್ಧಂಬರ್ಧ ಮಾಹಿತಿ ತಿಳಿದ ಮಂದಿ ಅತ್ತ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾರ್ಗದರ್ಶಿಯನ್ನು ಗಮನಿಸಿದಂತಿಲ್ಲ. ಪರಿಣಾಮ, ಆಲ್ಕೋಹಾಲ್ ಕುಡಿದು ಕರೋನಾ ಬಾರದಂತೆ ತಡೆಗಟ್ಟುತ್ತೀವಿ ಅಂತಾ ಹೋದ ನೂರಾರು ಮಂದಿ ಇರಾನ್ನಲ್ಲಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಮಾರ್ಚ್ ತಿಂಗಳಾಂತ್ಯಕ್ಕೆ ಕರೋನಾ ಸೋಂಕು ತಾರಕಕ್ಕೇರಿದ ಸಮಯದಲ್ಲಿ ಭಾರತದಲ್ಲೂ ಇಂತಹದ್ದೇ ಒಂದು ಸುದ್ದಿ ಹರಿದಾಡಿತ್ತು. ಆದರೆ ಅದಕ್ಕೂ ಮುನ್ನವೇ ಇತರೆ ದೇಶಗಳಲ್ಲಿ ಮರಣ ಮೃದಂಗ ಶುರು ಮಾಡಿದ್ದ ಇಂತಹದ್ದೇ ಒಂದು ವದಂತಿ ಜನರಲ್ಲಿ ಗೊಂದಲ ಹುಟ್ಟುಹಾಕಿತ್ತು. ತಕ್ಷಣ ಎಚ್ಚೆತ್ತುಕೊಂಡಿದ್ದ ವಿಶ್ವ ಆರೋಗ್ಯ ಸಂಸ್ಥೆ(WHO), ಆಲ್ಕೋಹಾಲ್ ಕುಡಿಯುವುದರಿಂದ ಕರೋನಾ ಸೋಂಕು ದೂರವಾಗುತ್ತೆ ಅನ್ನೋದು ತಪ್ಪು. ಅಲ್ಲದೇ ಆಲ್ಕೋಹಾಲ್ ಕುಡಿಯುವುದರಿಂದ ಕಣ್ಣು ಹಾಗೂ ಬಾಯಿಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿತ್ತು.
ಇದೀಗ ಇರಾನ್ನಲ್ಲಿ ಇಂತಹದ್ದೇ ಪ್ರಯೋಗ ಮಾಡಲು ಹೋದ ಬರೋಬ್ಬರಿ 728 ಮಂದಿ ಕಳೆದ ಒಂದೂವರೆ ತಿಂಗಳಲ್ಲಿ ಅನಾಯಾಸವಾಗಿ ಪ್ರಾಣ ಬಿಟ್ಟಿದ್ದಾರೆ. ಇದನ್ನ ಸ್ವತಃ ಇರಾನಿನ ಕರೋನಾ ವಿಪತ್ತು ನಿರ್ವಹಣಾ ಪ್ರಾಧಿಕಾರವೇ ಸ್ಪಷ್ಟಪಡಿಸಿದೆ. ಮಿಥೇನಲ್ ಅಂಶ ಹೊಂದಿದ್ದ ಆಲ್ಕೋಹಾಲ್ ಕುಡಿದಿರೋದೆ ಈ 728 ಮಂದಿಯ ಸಾವಿಗೆ ಕಾರಣವಾಗಿದೆ ಎನ್ನಲಾಗಿದ್ದು, ಕಳೆದ ಇಡೀ ವರುಷದಲ್ಲಿ ಇಂತಹ ಮದ್ಯಪಾನ ಸೇವನೆಗೆ ಕೇವಲ 66 ಮಂದಿಯಷ್ಟೇ ಸಾವೀಗೀಡಾಗಿದ್ದರು. ಆದರೆ ಆ ಸಂಖ್ಯೆಗೂ ಈ ಬಾರಿಯ ಸಂಖ್ಯೆಗೂ ತಾಳೆ ಹಾಕಿದ್ದಲ್ಲಿ ಸರಿಸುಮಾರು ಹತ್ತು ಪಟ್ಟಿಗೂ ಅಧಿಕ ಮಂದಿ ಈ ಮಿಥೇನಲ್ ಆಲ್ಕೋಹಾಲ್ ಸೇವಿಸಿ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯ ಇರಾನ್ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿಯನ್ನ ಗಮನಿಸೋದಾದರೆ ಈ ರೀತಿ ಕರೋನಾ ಸೋಂಕಿಗೆಂದು ಆಲ್ಕೋಹಾಲ್ ಕುಡಿದು ಸಾವನ್ನಪ್ಪುವವರ ಸಂಖ್ಯೆ ಸದ್ಯ ಇರುವ ಸಂಖ್ಯೆಗಿಂತ ದ್ವಿಗುಣಗೊಳ್ಳುವ ಸಾಧ್ಯತೆಗಳು ಸ್ಪಷ್ಟವಾಗತೊಡಗಿದೆ. ಕಾರಣ, ಪ್ರಸ್ತುತ 5011 ಮಂದಿ ಮಿಥೆನಾಲ್ ಆಲ್ಕೋಹಾಲ್ ಕುಡಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲಿ 90ರಷ್ಟು ಮಂದಿ ಕಣ್ಣುದೃಷ್ಟಿ ಕಳೆದುಕೊಂಡು ಇಲ್ಲವೇ ಕಣ್ಣು ದೋಷದಿಂದ ಬಳಲುತ್ತಿದ್ದಾರೆ. ಈ ರೀತಿ ಕಣ್ಣು ಕಳೆದುಕೊಂಡವರ ಸಂಖ್ಯೆಯೂ ಸಾವಿರ ತಲುಪುವ ಸಾಧ್ಯತೆ ಬಗ್ಗೆ ಇರಾನ್ ಆರೋಗ್ಯ ಸಚಿವ ಹೊಸೈನ್ ಹಸೈನನ್ ತಿಳಿಸಿದ್ದಾರೆ.
ಒಂದು ಹಂತದಲ್ಲಿ ಇರಾನ್ನಲ್ಲಿ ಇಟೆಲಿ, ಅಮೆರಿಕಾ, ಸ್ಪೇಯ್ನ್ ಮಾದರಿಯಲ್ಲಿಯೇ ಸಾವುಗಳ ಸರಣಿ ನಡೆದಿದ್ದವು. ಹಾಗಂತ ಈಗಲೂ ಅಲ್ಲಿ ಕರೋನಾ ಸೋಂಕಿನ ಪರಿಣಾಮ ಕಡಿಮೆಯಾಗಿಲ್ಲ. ಆದರೆ ಇತರೆ ಅಮೆರಿಕಾ, ಇಟೆಲಿ ಮಾದರಿಯಲ್ಲಿದ್ದ ಸಾವಿನ ಸಂಖ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆಯಷ್ಟೇ. ಪ್ರಸ್ತುತ ಇರಾನ್ ದೇಶದಲ್ಲಿ ಕಳೆದ ಮಾರ್ಚ್ ತಿಂಗಳ ಆರಂಭದಿಂದ ಶುರುವಾದ ಕರೋನಾ ಸೋಂಕು ಇದುವರೆಗೂ 91ಸಾವಿರಕ್ಕೂ ಅಧಿಕ ಮಂದಿಯಲ್ಲಿ ಪತ್ತೆಯಾಗಿದೆ. ಅದರಲ್ಲಿ 5806 ರಷ್ಟು ಮಂದಿ ಅಗಲಿದ್ದಾರೆ.
ಇನ್ನು ಇರಾನ್ನಲ್ಲಿ ಬಳಸಲಾದ ಆಲ್ಕೋಹಾಲ್ನಲ್ಲಿ ವಿಷಕಾರಿ ಅಂಶ ತುಂಬಿದ ಮಿಥೇನಲ್ ಇದ್ದು ಇದು ಮೆದುಳು ನಿಷ್ಕ್ರಿಯ, ಎದೆನೋವು, ಕುರುಡುತನ ಕೊನೆಗೆ ಕೋಮಾಕ್ಕೆ ತಳ್ಳಲ್ಪಡುವಷ್ಟರ ಮಟ್ಟಿಗೆ ವಿಷಕಾರಿಯಾಗಿದೆ ಎಂದು ವೈದ್ಯಲೋಕ ತಿಳಿಸುತ್ತದೆ. ಆದರೆ ಇಂತಹ ಆಲ್ಕೋಹಾಲ್ನ್ನು ಸುಲಭವಾಗಿ ತಯಾರಿಸಬಹುದು, ಇದು ಯಾವುದೇ ರುಚಿ, ಬಣ್ಣ ಹೊಂದದೆ ನೀರಿನ ರೀತಿಯಲ್ಲಿರುತ್ತದೆ. ಸಾಮಾನ್ಯವಾಗಿ ಮದ್ಯಪಾನಗಳಲ್ಲಿ ಮಿಥೇನಲ್ ಅಂಶ ಪ್ರಮಾಣ ತೀರಾ ಸಣ್ಣ ಪ್ರಮಾಣದ್ದಾಗಿರುತ್ತದೆ. ಇದು ಎಥೆನಾಲ್ಗಿಂತಲೂ ಹೆಚ್ಚು ಅಪಾಯಕಾರಿ ಅನ್ನೋದು ಸಂಶೋಧನೆಗಳು ಸ್ಪಷ್ಟಪಡಿಸಿದೆ.
ಆದರೆ ಇರಾನ್ನಲ್ಲಿ ಮಿಥೇನಾಲ್ ಬಳಸಿ ಆಲ್ಕೋಹಾಲ್ ತಯಾರಿಸಲು ಅಲ್ಲಿನ ಸರಕಾರವೇ ಮಾರ್ಗದರ್ಶನ ನೀಡುತ್ತದೆ. ಇದರಿಂದಾಗಿ ಹೆಚ್ಚಿನ ಅಪಾಯವನ್ನ ಸರಕಾರವೇ ಆಹ್ವಾನಿಸಿದಂತಿದೆ. ಇನ್ನು ಇರಾನ್ ಜನಸಾಮಾನ್ಯರು ಕೂಡಾ ಮದ್ಯದಿಂದ ಕರೋನಾ ದೂರವಾಗುತ್ತೆ ಅನ್ನೋ ಭ್ರಮೆಗೆ ಸಿಲುಕಿ ವಿಪರೀತವಾಗಿ ಮದ್ಯವೇರಿಸಿಕೊಂಡಿದ್ದಾರೆ. ಆದರೆ ಅಮಲಿನಿಂದ ಹೊರಬರುವ ಮುನ್ನವೇ ಅವರಿಗೆ ಆಘಾತಗಳು ಕಾದಿದ್ದವು.
ಇತ್ತೀಚೆಗೆ ಭಾರತದಲ್ಲೂ ಮದ್ಯದಂಗಡಿಗಳನ್ನ ತೆರೆಯಲು ಅವಕಾಶ ನೀಡಿ ಅಂತಾ ಮದ್ಯಪ್ರಿಯರು ಸರಕಾರಕ್ಕೆ ದುಂಬಾಲು ಬಿದ್ದಿದ್ದರು. ಕರ್ನಾಟಕ, ಕೇರಳದಲ್ಲಂತೂ ಕುಡುಕರು ಮದ್ಯವಿಲ್ಲದೇ ಆರಂಭಿಕ ಹಂತದ ಲಾಕ್ಡೌನ್ ಸಮಯದಲ್ಲಿ ಆತ್ಮಹತ್ಯೆಗೂ ಶರಣಾಗಿದ್ದರು. ಅಲ್ಲದೇ, ಮದ್ಯಪಾನ ಕರೋನಾ ಸೋಂಕು ದೂರವಾಗಲು ಹೆಚ್ಚು ಪ್ರಯೋಜನಕಾರಿ ಅನ್ನೋ ವದಂತಿಗೂ ಸಿಲುಕಿ ಜನಪ್ರತಿನಿಧಿಗಳ ಗಮನಕ್ಕೂ ತರುವ ಪ್ರಯತ್ನಗಳೂ ರಾಜ್ಯದಲ್ಲಿ ನಡೆದವು. ಆದರೆ ಮದ್ಯಪ್ರಿಯರಿಗೆ ಆಲ್ಕೋಹಾಲ್ ನಿಂದ ಕರೋನಾ ದೂರವಾಗುತ್ತೆ ಅನ್ನೋದು ತಪ್ಪು ಮಾಹಿತಿ ಅಂತಾ ತಿಳಿಹೇಳಲು ಆಡಳಿತ ವರ್ಗವೇ ಹರಸಾಹಸ ಪಡುವಂತಾಯಿತು. ಇದೆಲ್ಲದರ ಮಧ್ಯೆ ಇರಾನ್ನಲ್ಲಿ ಮಿಥೇನಾಲ್ಯುಕ್ತ ಆಲ್ಕೋಹಾಲ್ ಕುಡಿದು 700ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಆಘಾತಕಾರಿಯಾಗಿದ್ದು, ಆದ್ದರಿಂದ ಆಲ್ಕೋಹಾಲ್ನಿಂದ ಕರೋನಾ ಸೋಂಕು ದೂರವಾಗುತ್ತೆ ಅನ್ನೋ ತಪ್ಪು ಕಲ್ಪನೆಯಿಂದ ಮದ್ಯಪ್ರಿಯರು ಮಾತ್ರವಲ್ಲದೆ ಪ್ರತಿಯೊಬ್ಬರು ಹೊರಬರಬೇಕಿದೆ.