ಮಾಹಿತಿ ಹಕ್ಕು ಕಾಯ್ದೆಯನ್ನು ಸುಪ್ರೀಂಕೋರ್ಟ್ ವಿರೋಧಿಸುವುದಿಲ್ಲ. ಆದರೆ, ಸಂಬಂಧಪಟ್ಟ ಮಾಹಿತಿಗಳನ್ನು ಪಡೆಯುವಾಗ ಕೆಲವೊಂದು ಮಾರ್ಗಸೂಚಿಗಳನ್ನು ಜಾರಿಗೆ ತರುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಮಾಹಿತಿ ಹಕ್ಕು ಆಯುಕ್ತರನ್ನು ನೇಮಕ ಮಾಡದಿರುವ ರಾಜ್ಯ ಸರ್ಕಾರಗಳ ವಿರುದ್ಧದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು, ಇತ್ತೀಚಿನ ದಿನಗಳಲ್ಲಿ ಆರ್‌ಟಿಐ ಎಂದಾಕ್ಷಣ ಭಯದ ವಾತಾವರಣ ನಿರ್ಮಾಣವಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ಹೇಳಿದೆ.
ಮುಖ್ಯನ್ಯಾಯಮೂರ್ತಿ ಬೊಬ್ಡೆ ಅವರು ಅಭಿಪ್ರಾಯ ವ್ಯಕ್ತಪಡಿಸುತ್ತಾ, ಹಾಗೆಂದ ಮಾತ್ರಕ್ಕೆ ಮಾಹಿತಿ ಹಕ್ಕು ಕಾಯ್ದೆಯನ್ನು ನಾವು ವಿರೋಧಿಸುತ್ತಿಲ್ಲ. ಆದರೆ, ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ತರುವ ಅಗತ್ಯವಿದೆ.
ಈ ಆರ್ ಟಿಐ ಭೀತಿಯಿಂದಾಗಿ ಹಲವಾರು ಅಧಿಕಾರಿಗಳು ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದ ನ್ಯಾಯಪೀಠವು, ಈ ಹಿನ್ನೆಲೆಯಲ್ಲಿ ಆರ್ ಟಿಐ ನಡಿ ಮಾಹಿತಿ ಪಡೆಯುವಾಗ ಮತ್ತು ನೀಡುವಾಗ ಕೆಲವು ನಿರ್ದಿಷ್ಟ ಮಾರ್ಗಸೂಚಿಗಳನ್ನು ತರಬೇಕಾದ ಅಗತ್ಯವಿದೆ ಎಂದು ಹೇಳಿದೆ.
ಆರ್ ಟಿಐ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್ ಪರ ವಕೀಲರಾದ ಪ್ರಶಾಂತ್ ಭೂಷಣ್ ಅವರು, ಅಧಿಕಾರಿಗಳು ಭ್ರಷ್ಟಾಚಾರಿಗಳಲ್ಲದಿದ್ದರೆ ಆರ್ ಟಿಐಗೆ ಏಕೆ ಹೆದರಬೇಕು? ಧೈರ್ಯವಾಗಿ ಮಾಹಿತಿಗಳನ್ನು ನೀಡಬಹುದಾಗಿದೆ ಎಂದು ವಾದ ಮಂಡಿಸಿದರು.
ಈ ವೇಳೆ ನ್ಯಾಯಪೀಠವು, ಇತ್ತೀಚಿನ ದಿನಗಳಲ್ಲಿ ತಾನೊಬ್ಬ ಆರ್ ಟಿಐ ಕಾರ್ಯಕರ್ತ ಎಂದು ಗುರುತಿಸಿಕೊಳ್ಳುವುದು ಒಂದು ಟ್ರೆಂಡ್ ಆಗಿದೆಯಲ್ಲವೇ? ಎಂದು ಪ್ರಶ್ನಿಸಿದರು.
ಹಾಗಾದರೆ ಆರ್ ಟಿಐ ಅರ್ಜಿ ಹಾಕುವುದು ಒಂದು ವೃತ್ತಿಯೇ ಎಂದು ವಕೀಲರಾದ ಪ್ರಶಾಂತ್ ಭೂಷಣ್ ಅವರನ್ನು ಪ್ರಶ್ನಿಸಿದರು ಮುಖ್ಯನ್ಯಾಯಾಧೀಶರಾದ ಬೊಬ್ಡೆ ಅವರು.
ಇನ್ನೂ ಮುಂದುವರಿದು ತಮಗೆ ಸಂಬಂಧವಿಲ್ಲದಿದ್ದರೂ ಕೆಲವರು ಆರ್ ಟಿಐ ನಡಿ ಮಾಹಿತಿಗಳನ್ನು ಕೇಳುತ್ತಾರೆ. ಇನ್ನೂ ಕೆಲವೊಮ್ಮೆ ಬ್ಲ್ಯಾಕ್ ಮೇಲ್ ಮಾಡಲೆಂದೇ ಪಡೆಯುತ್ತಾರೆ ಎಂದು ಗಂಭೀರವಾದ ಅಭಿಪ್ರಾಯಪಟ್ಟರು.
ಇದೇ ವೇಳೆ, ನ್ಯಾಯಾಲಯದ ಆದೇಶವಿದ್ದರೂ ಮಾಹಿತಿ ಆಯುಕ್ತರನ್ನು ನೇಮಕ ಮಾಡದಿರುವ ರಾಜ್ಯ ಸರ್ಕಾರಗಳ ವಿರುದ್ಧ ನ್ಯಾಯಾಂಗ ಉಲ್ಲಂಘನೆ ಅರ್ಜಿ ಸಲ್ಲಿಸುವಂತೆ ಪ್ರಶಾಂತ್ ಭೂಷಣ್ ಅವರಿಗೆ ನ್ಯಾಯಪೀಠ ಸೂಚನೆ ನೀಡಿತು.