ರಾಷ್ಟ್ರೀಯ ಆರ್ಥಿಕತೆಯ ಮೇಲೆ ಕೋವಿಡ್-19 ಬೀರುತ್ತಿರುವ ಪರಿಣಾಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಣಕಾಸು ಹಾಗೂ ವಾಣಿಜ್ಯ ಸಚಿವಾಲಯದ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿರುವುದಾಗಿ ಅಧಿಕೃತ ಮೂಲಗಳು ತಿಳಿಸಿದೆ. ಗ್ರಾಹಕರ ಬೇಡಿಕೆ ಕುಸಿಯುತ್ತಿರುವ ಕಾರಣ ಇತ್ತೀಚಿನ ತ್ರೈಮಾಸಿಕಗಳಲ್ಲಿ ಕುಸಿತ ಕಂಡಿರುವ ಆರ್ಥಿಕತೆಯ ತ್ವರಿತ ಚೇತರಿಕೆಗೆ ಪ್ರಧಾನ ಮಂತ್ರಿ ಗಮನ ಹರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ನಡೆಸಿದ ಒಂದುವರೆ ತಾಸು ಅವಧಿಯ ವೀಡಿಯೋ ಕಾನ್ಫರೆನ್ಸಿನಲ್ಲಿ ಸರ್ಕಾರದ 50 ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು. ಅಧಿಕಾರಿಗಳು ಪ್ರಸ್ತುತ ಸ್ಥಿತಿಗತಿಗಳ ವಿವರಣೆಯನ್ನು ಸಭೆಯಲ್ಲಿ ನೀಡಿದ್ದಾರೆ.
ಅಧಿಕಾರಿಗಳೊಂದಿಗಿನ ಸಂವಾದಕ್ಕೂ ಮೊದಲು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ, ಹಣಕಾಸು ಸಚಿವಾಲಯದ ಮುಖ್ಯ ಮತ್ತು ಪ್ರಧಾನ ಆರ್ಥಿಕ ಸಲಹೆಗಾರ ಮತ್ತು ನೀತಿ ಆಯೋಗ್ ಅವರೊಂದಿಗೆ ಮೂರು ಪ್ರತ್ಯೇಕ ಸಭೆಗಳನ್ನು ನಡೆಸಿದ್ದಾರೆ.
![](https://pratidhvani.in/wp-content/uploads/2021/02/Support_us_Banner_New_3__1_-9.png)
ಕರೋನಾ ಸೋಂಕಿನಿಂದಾಗಿ ತಲೆದೋರಿದ್ದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು 20.97 ಲಕ್ಷಕೋಟಿಯ ಬೃಹತ್ ಹಣಕಾಸು ಪ್ಯಾಕೇಜನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಭಾರತದ ಆರ್ಥಿಕತೆಯ ಮೇಲೆ COVID-19 ಬೀರಿದ ಪರಿಣಾಮವನ್ನು ಸರ್ಕಾರ ಅಂದಾಜು ಮಾಡುತ್ತಿದೆ ಮತ್ತು ಅಗತ್ಯವಿದ್ದರೆ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಹರಡಿರುವ ಕರೋನಾ ಸೋಂಕು ಜಾಗತಿಕ ಆರ್ಥಿಕತೆಗೆ ದೊಡ್ಡ ಆಘಾತವನ್ನು ನೀಡಿದೆ. ಕರೋನಾ ಸೋಂಕು, ಅದನ್ನು ತಡೆಗಟ್ಟಲು ಹೇರಿದ ಲಾಕ್ಡೌನ್ ನಿಂದಾಗಿ ವ್ಯಾಪಾರ ವಹಿವಾಟುಗಳು ಭಾಗಶಃ ಸ್ಥಗಿತಗೊಂಡಿದೆ. ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಮಾರಾಟದಲ್ಲಿ ತೀವ್ರ ಹಿನ್ನಡೆಯನ್ನು ಮಾರುಕಟ್ಟೆ ಅನುಭವಿಸುತ್ತಿರುವುದರಿಂದ ಉತ್ಪಾದನೆಯ ಪ್ರಮಾಣವೂ ಗಣನೀಯ ಇಳಿಕೆ ಕಂಡುಬಂದಿದೆ.
ಅಧಿಕಾರಿಗಳೊಂದಿಗೆ ನಡೆದ ಸಂವಾದದಲ್ಲಿ ಚರ್ಚೆಯಾದ ಅಂಶಗಳ ಪೂರ್ಣ ವಿವರಗಳು ಇನ್ನೂ ಹೊರಬಂದಿಲ್ಲ.
![](https://pratidhvani.in/wp-content/uploads/2021/02/TPFI-217.jpg)