ಭಾನುವಾರ ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ಶರದ್ ಅರವಿಂದ್ ಬೊಬ್ಡೆ ಅವರು ಹೊಸ ಮಾದರಿಯ ಹರ್ಲೆ ಡೇವಿಡ್ಸನ್ ದ್ವಿಚಕ್ರ ವಾಹನವನ್ನು ಏರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನಾಗ್ಪುರ್‌ನಲ್ಲಿ 50 ಲಕ್ಷ ರೂ. ಬೆಲೆ ಬಾಳುವ ಹರ್ಲೆ ಡೇವಿಡ್ಸನ್‌ನ ಹೊಸ ಮಾದರಿಯ ಬೈಕ್ ಆದ CVO2020 ಅನ್ನು ಏರಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪರ ವಿರೋಧ ಚರ್ಚೆಗಳು ಆರಂಭವಾಗಿದೆ.
ಸುಪ್ರಿಂ ಕೋರ್ಟ್ ವಕೀಲರಾದ ಪ್ರಶಾಂತ್ ಭೂಷಣ್ ಅವರು ಈ ಕುರಿತಾಗಿ ಹೊಸತಾದ ವಿವಾದ ಹುಟ್ಟುಹಾಕಲು ಪ್ರಯತ್ನಿಸಿದ್ದು, ಸಿಜೆಐ ಬೊಬ್ಡೆ ಅವರು ಬಿಜೆಪಿ ನಾಯಕರೊಂದಿಗೆ ರಾಜಭವನದಲ್ಲಿ ಯಾವುದೇ ಮಾಸ್ಕ್ ಅಥವಾ ಹೆಲ್ಮೆಟ್ ಹಾಕಿಕೊಳ್ಳದೇ ಬೈಕ್ ಓಡಿಸುತ್ತಿದ್ದಾರೆ. ಅತ್ತ ಸುಪ್ರಿಂ ಕೋರ್ಟ್ ಲಾಕ್‌ಡೌನ್ ಆಗಿ ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗದಂತಾಗಿದೆ ಎಂದು ಹೇಳಿದ್ದಾರೆ.
ಪ್ರಶಾಂತ್ ಭೂಷಣ್ ಅವರ ಟ್ವೀಟ್‌ಗೆ ಪರ ವಿರೋಧದ ಚರ್ಚೆಯಾಗಿದ್ದು, ಕೆಲವರು ಅವರು ಬೈಕ್ ರೈಡ್ ಮಾಡುತ್ತಿಲ್ಲ ಹಾಗಾಗಿ ಹೆಲ್ಮೆಟ್ ಹಾಕುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು ಜಸ್ಟೀಸ್ ಬೊಬ್ಡೆ ಕೂಡಾ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತ ಎಂದು ಹೇಳಿದ್ದಾರೆ.
ಪ್ರಶಾಂತ್ ಭೂಷಣ್ ಅವರ ಆರೋಪಕ್ಕೆ ಪ್ರತ್ಯುತ್ತರವೂ ಬಂದಿದ್ದು, ಬೊಬ್ಡೆ ಅವರು ಬೈಕ್ ಏರಿ ಕುಳಿತದ್ದು ಮಾತ್ರ, ಬೈಕ್ ಓಡಿಸಲಿಲ್ಲ. ಹಾಗಾಗಿ ಹೆಲ್ಮೆಟ್ ಹಾಕುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ.