ಹನಿಟ್ರ್ಯಾಪ್ ಮೋಹಕ್ಕೆ ಸಿಲುಕಿ ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನದ ಐಎಸ್ಐಗೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 13 ಮಂದಿ ನೌಕಾಪಡೆ ಅಧಿಕಾರಿಗಳ ಪ್ರಕರಣ ಆಪರೇಷನ್ ‘ಡಾಲ್ಫಿನ್ ನೋಸ್’ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಕಳೆದ ಡಿಸೆಂಬರಿನಲ್ಲಿ ಪ್ರಕರಣ ಮೊದಲ ಬಾರಿಗೆ ಸಾರ್ವಜನಿಕರ ಗಮನಸೆಳೆದಿತ್ತು.ಆಗ ಏಳು ಮಂದಿ ನೌಕಾಪಡೆ ಅಧಿಕಾರಿಗಳನ್ನು ಬಂಧಿಸಿದ್ದ ಎನ್ ಐಎ, ಕೇಂದ್ರ ಗುಪ್ತದಳ, ಆಂಧ್ರಪ್ರದೇಶ ಪೊಲೀಸ್ ವಿಶೇಷ ತಂಡ ಹಾಗೂ ನೌಕಾಪಡೆಯ ಗುಪ್ತದಳಗಳ ಜಂಟಿ ತನಿಖಾ ತಂಡ, ಪ್ರಕರಣದ ಬೆನ್ನುಬಿದ್ದು ಇದೀಗ ಸುಮಾರು 13 ಜನರನ್ನು ಬಂಧಿಸಿದೆ. ಪ್ರಕರಣದಲ್ಲಿ ಇನ್ನೂ ಹಲವು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದ್ದು, ಅಂಥವರ ಸಾಮಾಜಿಕ ಜಾಲತಾಣ ಖಾತೆಗಳು ಹಾಗೂ ಮೊಬೈಲ್ ಚಾಟ್ ಮತ್ತು ಮಾತುಕತೆಗಳ ಮೇಲೆ ಕಣ್ಣಿಡಲಾಗಿದೆ ಎಂದು ತನಿಖಾ ತಂಡ ಹೇಳಿದೆ.
ಈ ನಡುವೆ, ಪಾಕಿಸ್ತಾನದ ಐಎಸ್ ಐ ನಡೆಸಿದ ಹನಿಟ್ರ್ಯಾಪ್ ಗೆ ಒಳಗಾಗಿರುವ ಈ ಎಲ್ಲಾ ಅಧಿಕಾರಿಗಳು ಯುವತಿಯರ ಮೋಹ ಮತ್ತು ಭಾರೀ ಹಣದ ಆಮಿಷಕ್ಕೆ ಒಳಗಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಮಹತ್ವದ ಅತಿ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ತನಿಖಾ ತಂಡ ಹೇಳಿರುವುದಾಗಿ ‘ದ ಹಿಂದೂ’ ವರದಿ ಮಾಡಿದೆ. ಇದು ನಿಜಕ್ಕೂ ಆಘಾತಕಾರಿ ಸಂಗತಿ. ‘ಡಾಲ್ಪೀನ್ ನೋಸ್ ‘ ಕಳೆದ ಒಂದು ವರ್ಷದಿಂದ ಅನುಮಾನಾಸ್ಪದ ನೌಕಾಪಡೆ ಸಿಬ್ಬಂದಿಯ ಮೇಲೆ ಕಣ್ಣಿಟ್ಟಿದ್ದ ತನಿಖಾ ಸಂಸ್ಥೆಗಳು, ಇದೀಗ ಜಾಲ ವ್ಯಾಪಕವಾಗಿದ್ದು, ಕರ್ನಾಟಕದ ಕಾರವಾರ ಸೇರಿದಂತೆ ವಿಶಾಖಪಟ್ಟಣ, ಮುಂಬೈ ಸೇರಿದಂತೆ ದೇಶದ ಪ್ರಮುಖ ನೌಕಾನೆಲೆಗಳ ಸಿಬ್ಬಂದಿ ಕೂಡ ಈ ಜಾಲದಲ್ಲಿದ್ಧಾರೆ ಎಂದು ಹೇಳಿದೆ.
ಜೊತೆಗೆ ಬಂಧಿತ 13 ಮಂದಿಯ ಪೈಕಿ 11 ಮಂದಿ ನೌಕಾಪಡೆ ಸಿಬ್ಬಂದಿಯಾಗಿದ್ದು, ಇನ್ನಿಬ್ಬರು ಆ ಸಿಬ್ಬಂದಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಸೂಚನೆ ಮತ್ತು ಹಣಕಾಸನ್ನು ಸರಬರಾಜು ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದವರು ಎನ್ನಲಾಗಿದೆ. ಬಂಧಿತ ಅಧಿಕಾರಿಗಳ ಬ್ಯಾಂಕ್ ಖಾತೆಗಳಿಗೆ ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರೀ ಪ್ರಮಾಣದ ಹಣ ಬಂದಿದೆ. ಆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆಕರ್ಷಕ ಹುಡುಗಿಯರನ್ನು ಬಳಸಿಕೊಂಡು ಈ ಅಧಿಕಾರಿಗಳಿಗೆ ಜಾಲ ಬೀಸಲಾಗುತ್ತಿತ್ತು. ಬಳಿಕ ಆ ಹನಿಟ್ರ್ಯಾಪ್ ತಂತ್ರವನ್ನೇ ಬಳಸಿಕೊಂಡು ಅಧಿಕಾರಿಗಳೊಂದಿಗೆ ವ್ಯವಹಾರ ಕುದುರಿಸಲಾಗುತ್ತಿತ್ತು. ಪ್ರತಿ ಮಾಹಿತಿಗೆ ತಕ್ಕಂತೆ ಭಾರೀ ಪ್ರಮಾಣದ ಹಣವನ್ನೂ ನೀಡಲಾಗುತ್ತಿತ್ತು ಎಂಬುದು ಖಾತ್ರಿಯಾಗಿದೆ. ಆದರೆ, ಈ ಅಧಿಕಾರಿಗಳ ಬ್ಯಾಂಕ್ ಖಾತೆಗಳಲ್ಲಿ ದಿಢೀರನೇ ಭಾರೀ ಪ್ರಮಾಣದ ಹಣದ ವಹಿವಾಟು ನಡೆದಿದ್ದರೂ ಸಂಬಂಧಿಸಿದ ಬ್ಯಾಂಕುಗಳನ್ನು ಆ ಮಾಹಿತಿಯನ್ನು ಬಚ್ಚಿಟ್ಟುರುವುದು ಕೂಡ ಬ್ಯಾಂಕ್ ಸಿಬ್ಬಂದಿಯೂ ಈ ದೇಶದ್ರೋಹಿ ಜಾಲದಲ್ಲಿ ಭಾಗಿಯಾಗಿರುವ ಸಾಧ್ಯತೆಯತ್ತ ಬೊಟ್ಟು ಮಾಡುತ್ತಿದೆ ಎಂದೂ ತನಿಖಾ ಸಂಸ್ಥೆಗಳು ಹೇಳಿವೆ.
ಈ ನಡುವೆ, ಬೆಂಗಳೂರಿನ ಸಿಎಎ ವಿರೋಧಿ ರ್ಯಾಲಿಯಲ್ಲಿ ಅಮೂಲ್ಯ ಪಾಕಿಸ್ತಾನ ಪರ ಘೋಷಣೆ ಕೂಗಿದ ಸಂದರ್ಭದಲ್ಲಿ, ಪಾಕಿಸ್ತಾನದ ಪರ ಘೋಷಣೆ ಕೂಗುವುದು ಮಾತ್ರವೇ ದೇಶದ್ರೋಹವೇ? ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುವುದು ದೇಶದ್ರೋಹವಲ್ಲವೆ? ಸ್ವಯಂ ಘೋಷಿತ ದೇಶಭಕ್ತರು ಈ 13 ಮಂದಿ ಅಸಲೀ ದೇಶದ್ರೋಹಿಗಳ ಬಗ್ಗೆ ಯಾಕೆ ಮೌನವಾಗಿದ್ದಾರೆ? ಅದರಲ್ಲೂ ಅಮೂಲ್ಯ ಪ್ರಕರಣದಲ್ಲಿ ಆಕೆಗೆ ಏಕಾಏಕಿ ದೇಶದ್ರೋಹಿ ಪಟ್ಟಕಟ್ಟಿದ ಸುದ್ದಿಮಾಧ್ಯಮಗಳು ಮತ್ತು ಪತ್ರಿಕಾ ಮಾಧ್ಯಮ, ದೇಶದ ಭದ್ರತೆಗೆ ಸಂಚಕಾರ ತರುವಂತಹ ಗಂಭೀರ ದೇಶದ್ರೋಹ ಕೃತ್ಯದಲ್ಲಿ ತೊಡಗಿ ಸಿಕ್ಕಿಬಿದ್ದಿರುವ ಈ 13 ಮಂದಿಯ ಬಗ್ಗೆ ಯಾಕೆ ವರದಿ ಮಾಡುತ್ತಿಲ್ಲ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು.
ಜೊತೆಗೆ, ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸಿಕ್ಕಿಬಿದ್ದಿದ್ದ ಆದಿತ್ಯ ರಾವ್ ಹಾಗೂ ದೆಹಲಿಯಲ್ಲಿ ಸಿಎಎ ಹೋರಾಟಗಾರರ ಮೇಲೆ ಗುಂಡಿನ ದಾಳಿ ನಡೆಸಿದ ಮೂರು ಪ್ರಕರಣಗಳನ್ನು ಕೂಡ ಕೂಡ ಉಲ್ಲೇಖಿಸಿ ಅವರುಗಳು ದೇಶಪ್ರೇಮಿಗಳೇ? ಎಂಬ ಪ್ರಶ್ನೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮೊಳಗಿತ್ತು. ಜೊತೆಗೆ 13 ಮಂದಿ ನೌಕಾಪಡೆ ಅಧಿಕಾರಿಗಳೆಂದು ಕೆಲವು ಹೆಸರುಗಳನ್ನೂ ಹಂಚಿಕೊಂಡಿದ್ದ ಹಲವರು, ಅವರೆಲ್ಲರೂ ಹಿಂದೂಗಳು, ಹಾಗಾಗಿಯೇ ಹಿಂದೂರಾಷ್ಟ್ರವಾದಿ ದೇಶಭಕ್ತರು ಈ ಬಗ್ಗೆ ಜಾಣಕಿವುಡರಾಗಿದ್ದಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.
ಆದರೆ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸೇರಿದಂತೆ ಹಲವು ಟ್ವಿಟರ್, ಫೇಸ್ಬುಕ್ ಮತ್ತಿತರ ಜಾಲತಾಣಗಳಲ್ಲಿ ಹಂಚಿಕೊಂಡಿರುವ 13 ಜನರ ಪಟ್ಟಿ ನೈಜ ಪಟ್ಟಿಯಲ್ಲ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ. ಆಲ್ಟ್ ನ್ಯೂಸ್ ಪ್ರಕಾರ, ಫೆ.18ರಂದು ಪ್ರಶಾಂತ್ ಭೂಷಣ್ ಅವರು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ 13 ಜನರ ಪಟ್ಟಿಯಲ್ಲಿ ಸತೀಶ್ ಮಿಶ್ರಾ, ದೀಪಕ್ ತ್ರಿವೇದಿ, ಪಂಕಜ್ ಐಯರ್, ಸಂಜಿತ್ ಕುಮಾರ್, ಸಂಜಯ್ ತ್ರಿಪಾಠಿ, ಬಬ್ಲೂ ಸಿಂಗ್, ವಿಕಾಸ್ ಕುಮಾರ್, ರಾಹುಲ್ ಸಿಂಗ್, ಸಂಜಯ್ ರಾವತ್, ದೇವಸರಣ್ ಗುಪ್ತಾ, ರಿಂಕು ತ್ಯಾಗಿ, ರಿಶಿ ಮಿಶ್ರಾ ಮತ್ತು ವೇದ್ ರಾಮ್ ಹೆಸರುಗಳಿದ್ದವು. ಆ ಪಟ್ಟಿಯನ್ನು ಒಳಗೊಂಡ ಪ್ರಶಾಂತ್ ಭೂಷಣ್ ಅವರ ಟ್ವೀಟ್ ಸುಮಾರು 8400ಕ್ಕೂ ಹೆಚ್ಚು ರೀಟ್ವೀಟ್ ಕಂಡಿತ್ತು. ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರ ಸಮಿತಿ ಉಸ್ತುವಾರಿ ಶ್ರೀವತ್ಸ ಕೂಡ, ಅದೇ ಪಟ್ಟಿಯನ್ನು ಹಂಚಿಕೊಂಡು, ‘ದೇಶದ ಯಾವುದೇ ಟಿವಿಯಲ್ಲಾಗಲೀ, ಪತ್ರಿಕೆಗಳ ಮುಖಪುಟದಲ್ಲಾಗಲೀ ಈ ಸುದ್ದಿಗೆ ಜಾಗವಿಲ್ಲ ನೋಡಿ’ ಎಂದು ಕಾಮೆಂಟ್ ಮಾಡಿದ್ದರು.
ಆದರೆ, ವಾಸ್ತವವಾಗಿ ಈ ಪಟ್ಟಿಯಲ್ಲಿರುವ ಯಾರೂ ಬಂಧಿತರಲ್ಲ ಮತ್ತು ಅದೊಂದು ಕಪೋಲಕಲ್ಪಿತ ಪಟ್ಟಿ ಎಂದು ‘ಆಲ್ಟ್ ನ್ಯೂಸ್’ ಹೇಳಿದ್ದು, ಅದಕ್ಕೆ ಬದಲಾಗಿ, ಜನವರಿಯಲ್ಲಿ ಇಂಡಿಯಾ ಟುಡೆ ಪ್ರಕಟಿಸಿದ್ದ ವರದಿಯಲ್ಲಿರುವ ಪಟ್ಟಿ ನೈಜ ಎಂದು ಅಭಿಪ್ರಾಯಪಟ್ಟಿದೆ. ಆ ಪಟ್ಟಿಯ ಪ್ರಕಾರ, ಸನ್ನಿ ಕುಮಾರ್, ಎಸ್ ಕೆ ದಾಸ್, ಎಸ್ ಕುಮಾರ್ ಶರ್ಮಾ, ಅಶೋಕ ಕುಮಾರ್, ಅಶೋಕ್ ಕುಮಾರ್(ಜೋಧಪುರ), ವಿ ಕುಮಾರ್, ಸೋಮನಾಥ, ಅಶೋಕ್ ಕುಮಾರ್ ಸಿಂಗ್, ರಾಜೇಶ್, ಲೋಕಂಡಾ, ನಿರಂಜನ್ ಎಂಬ ಹನ್ನೊಂದು ಮಂದಿ ನೌಕಾಪಡೆ ಸಿಬ್ಬಂದಿ ಹಾಗೂ ಸಯ್ಯದ್ ಅಲಿಯಾಸ್ ಮಾಸೂಮ್ ಅಲಿ ಮತ್ತು ಶೇಕ್ ಶಾಹಿಸ್ತಾ ಎಂಬ ಇಬ್ಬರು ಮುಂಬೈ ಮೂಲದ ಹವಾಲಾ ಏಜೆಂಟರು ಬಂಧಿತರು ಎನ್ನಲಾಗಿದೆ.
ಈ ನಡುವೆ, ದೇಶದ್ರೋಹಿ ಕೃತ್ಯ ಎಸಗಿರುವರೆಲ್ಲಾ ಮೇಲ್ಜಾತಿ ಹಿಂದೂಗಳು ಎಂಬ ಕಲ್ಪಿತ ಪಟ್ಟಿಯೊಂದಿಗೆ ಜಾಲತಾಣದಲ್ಲಿ ಚರ್ಚೆ ಶುರುವಾಗುತ್ತಿದ್ದಂತೆ ಅದಕ್ಕೆ ಪ್ರತಿಯಾಗಿ ಶಶಾಂಕ್ ಸಿಂಗ್ ಎಂಬ ‘ಫ್ಯಾಕ್ಟ್ ಹಂಟ್’ ಎಂಬ ಸುದ್ದಿಯ ವಾಸ್ತವಾಂಶ ಪತ್ತೆ ಸಂಸ್ಥೆಯ ನಿರ್ದೇಶಕ, ಮತ್ತೊಂದು ನಕಲಿ ಪಟ್ಟಿಯನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಆ ಪಟ್ಟಿಯಲ್ಲಿ ಇದ್ದ ಎಲ್ಲಾ 13 ಮಂದಿಯೂ ಮುಸ್ಲಿಮರೇ ಆಗಿದ್ದರು. ಜೊತೆಗೆ ಈ ಪಟ್ಟಿಯನ್ನು ತಾನು ಸ್ವತಃ ಆಲ್ಟ್ ನ್ಯೂಸ್, ಬೂಮ್ ಲೈವ್ನಂತಹ ತಾಣಗಳಿಂದಲೇ ಪಡೆದುಕೊಂಡಿರುವೆ ಎಂಬ ಸೂಚನೆಯನ್ನೂ ಲಗತ್ತಿಸಿದ್ದ ಶಶಾಂಕ್!
ಅಂದರೆ, ದೇಶದ ಭದ್ರತಾ ವ್ಯವಸ್ಥೆಗೆ ಅಪಾಯ ಒಡ್ಡುವಂತಹ ಗಂಭೀರ ವಿಷಯದಲ್ಲೂ ಮಾಧ್ಯಮಗಳು ಮತ್ತು ಸಾರ್ವಜನಿಕ ಬದುಕಿನಲ್ಲಿರುವ ಮಂದಿ ಧರ್ಮ ಮತ್ತು ಕೋಮಿನ ಆಧಾರದ ಮೇಲೆ ಪರಸ್ಪರರ ಮೇಲೆ ಗೂಬೆ ಕೂರಿಸುವ ಮಟ್ಟಿಗೆ ದೇಶದ ಸಾಮಾಜಿಕ ವಾತಾರಣ ಕಲುಷಿತಗೊಂಡಿದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿ ಕಣ್ಣಮುಂದಿದೆ. ಒಂದು ಕಡೆ ಧರ್ಮಾಧಂತೆಯ ಅಮಲಿನಲ್ಲಿ ಹಿಂದೂ ರಾಷ್ಟ್ರವಾದವನ್ನು ಪ್ರತಿಪಾದಿಸುತ್ತಾ ಎಲ್ಲರ ದೇಶಭಕ್ತಿ ಸಾಬೀತಿಗೆ ಸವಾಲು ಹಾಕುತ್ತಿರುವ ವಿಕೃತಿ, ಮತ್ತೊಂದೆಡೆ ಎಲ್ಲವನ್ನೂ ಹಿಂದೂ ಕೋಮುವಾದಕ್ಕೆ ತಳಕುಹಾಕುತ್ತಾ ಗಂಭೀರ ವಿಷಯಗಳನ್ನು ಪರವಿರೋಧದ ವಾದದ ಮಟ್ಟಿಗೆ ಸೀಮಿತಗೊಳಿಸುತ್ತಿರುವ ಪ್ರಗತಿಪರರು. ಇಂತಹ ವಿಪರ್ಯಾಸಕರ ಪರಿಸ್ಥಿತಿಗೆ ಈ ಆಪರೇಷನ್ ಡಾಲ್ಪೀನ್ ನೋಸ್ ತಾಜಾ ಉದಾಹರಣೆ!