ಆನ್ ಲೈನ್ ತರಗತಿಗಳ ವಿಷಯದಲ್ಲಿ ಕಳೆದ ಎರಡು ಮೂರು ದಿನಗಳ ಬೆಳವಣಿಗೆಗಳು ಈಗಾಗಲೇ ಈ ಬಗ್ಗೆ ಇದ್ದ ಗೊಂದಲವನ್ನು ಇನ್ನಷ್ಟು ಕಂಗಟ್ಟು ಮಾಡಿವೆ.
ರಾಜ್ಯ ಸರ್ಕಾರ ಮಕ್ಕಳ ಮತ್ತು ಪೋಷಕರ ಹಿತವನ್ನು ಪರಿಗಣಿಸಿ ಆನ್ ಲೈನ್ ಶಿಕ್ಷಣವನ್ನು ನಿರ್ಬಂಧಿಸಿರುವುದಾಗಿ ಮೂರು ವಾರಗಳ ಹಿಂದೆ ಆದೇಶಿಸಿತ್ತು. ಆದರೆ, ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಖಾಸಗೀ ಶಿಕ್ಷಣ ಸಂಸ್ಥೆಗಳು ಮತ್ತು ಕೆಲವು ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಸರ್ಕಾರ ಮತ್ತು ಅರ್ಜಿದಾರರ ವಾದ ಆಲಿಸಿದ ಹೈಕೋರ್ಟ್ ಬುಧವಾರ ಈ ಸಂಬಂಧ ಮಧ್ಯಂತರ ಆದೇಶ ನೀಡಿದ್ದು, ಆನ್ ಲೈನ್ ಶಿಕ್ಷಣವನ್ನು ನಿರ್ಬಂಧಿಸುವಂತಿಲ್ಲ. ಸರ್ಕಾರಕ್ಕೆ ಆನ್ ಲೈನ್ ಶಿಕ್ಷಣ ನಡೆಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಖಾಸಗೀ ಶಿಕ್ಷಣ ಸಂಸ್ಥೆಗಳೂ ನಡೆಸಬಾರದು ಎಂಬುದು ಸರಿಯಲ್ಲ ಮತ್ತು 1983ರ ಶಿಕ್ಷಣ ಕಾಯ್ದೆಯಲ್ಲಿ ಕೂಡ ಇಂತಹ ನಿರ್ಬಂಧಕ್ಕೆ ಅವಕಾಶವಿಲ್ಲ ಎಂದು ಪ್ರಕರಣದ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಹೇಳಿದೆ.
ಈ ನಡುವೆ, ಹೈಕೋರ್ಟ್ ಸೂಚನೆಯಂತೆ ಎರಡು ವಾರದ ಹಿಂದೆ ಸರ್ಕಾರ ರಚಿಸಿದ್ದ ಆನ್ ಲೈನ್ ಶಿಕ್ಷಣ ಕುರಿತ ತಜ್ಞರ ಅಧ್ಯಯನ ಸಮಿತಿ ಕೂಡ ತನ್ನ ವರದಿಯನ್ನು ಕೋರ್ಟ್ ತೀರ್ಪಿನ ಮುನ್ನಾ ದಿನ ಸರ್ಕಾರಕ್ಕೆ ಸಲ್ಲಿಸಿದ್ದು, ಆನ್ ಲೈನ್ ಶಿಕ್ಷಣವೂ ಒಂದು ಭಾಗವಾಗಿ ಕರೋನಾ ಸಂಕಷ್ಟದ ಹೊತ್ತಲ್ಲಿ ಪರ್ಯಾಯ ಕಲಿಕಾ ಕ್ರಮ ಮುಂದುವರಿಸಬಹುದು. ಟಿವಿ, ರೇಡಿಯೋ ಮುಂತಾದ ಸಾಧನಗಳನ್ನು ಬಳಸಿಕೊಂಡು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಾಧ್ಯವಿರುವ ಹಲವು ಮಾಧ್ಯಮಗಳ ಮೂಲಕ ಮಕ್ಕಳಿಗೆ ಪೂರ್ವಪ್ರಾಥಮಿಕ ಹಂತದಿಂದಲೇ ಪರ್ಯಾಯ ಕಲಿಕೆಯನ್ನು ಮುಂದುವರಿಸುವುದು ಒಳಿತು ಎಂದು ಸಮಿತಿ ತನ್ನ ವರದಿಯಲ್ಲಿ ಹೇಳಿದೆ.
ಅದೇ ವೇಳೆ ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಮಕ್ಕಳ ಶಿಕ್ಷಣದ ಹಕ್ಕನ್ನು ಕಿತ್ತುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿಲ್ಲ. ಆ ಹಿನ್ನೆಲೆಯಲ್ಲಿ ಆನ್ ಲೈನ್ ಶಿಕ್ಷಣ ನಿರ್ಬಂಧಿಸಲಾಗದು ಎಂದಿರುವ ಹೈಕೋರ್ಟ್ ಪೀಠ, ಕರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದಿದೆ. ಜೊತೆಗೆ, ತನ್ನ ಈ ಆದೇಶವನ್ನು ತಪ್ಪಾಗಿ ಅರ್ಥೈಸದಂತೆ ಎಚ್ಚರಿಕೆಯನ್ನೂ ನೀಡಿರುವ ಕೋರ್ಟ್, ಆನ್ ಲೈನ್ ಶಿಕ್ಷಣವನ್ನು ಕಡ್ಡಾಯಗೊಳಿಸಿಲ್ಲ ಮತ್ತು ಆನ್ ಲೈನ್ ಶಿಕ್ಷಣದ ಹೆಸರಲ್ಲಿ ಹೆಚ್ಚುವರಿ ಶುಲ್ಕ ವಸೂಲಿಗೂ ಅವಕಾಶವಿಲ್ಲ ಎಂದೂ ಖಾಸಗೀ ಶಿಕ್ಷಣ ಸಂಸ್ಥೆಗಳಿಗೆ ತಾಕೀತು ಮಾಡಿದೆ. ಹಾಗೆಯೇ, ಈ ಕುರಿತ ತನ್ನ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನೂ ನೀಡಿದೆ.
ಇದೀಗ ನ್ಯಾಯಾಲಯದ ಮಧ್ಯಂತರ ಆದೇಶಕ್ಕೆ ತನ್ನ ಆಕ್ಷೇಪಣೆ ಸಲ್ಲಿಸಲು ಸಿಕ್ಕಿರುವ ನಾಲ್ಕು ವಾರಗಳ ಅವಕಾಶವನ್ನು ರಾಜ್ಯ ಸರ್ಕಾರ ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಮುಖ್ಯವಾಗಿ ಸರ್ಕಾರವೇ ರಚಿಸಿದ್ದ ತಜ್ಞರ ಸಮಿತಿ ನೀಡಿರುವ ವರದಿ ಈ ದಿಸೆಯಲ್ಲಿ ಸರ್ಕಾರಕ್ಕೆ ಹೇಗೆ ಒದಗಿಬರಲಿದೆ ಎಂಬುದು ಕೂಡ ಮುಖ್ಯ. ಏಕೆಂದರೆ ತಜ್ಞರ ಸಮಿತಿಯ ಈಗಾಗಲೇ ತನ್ನ ವರದಿಯಲ್ಲಿ ಕರೋನಾ ಸಂಕಷ್ಟದ ಹೊತ್ತಿನಲ್ಲಿ ಸಾಂಪ್ರದಾಯಿಕ ಶಿಕ್ಷಣ ಮುಂದುವರಿಕೆ ತಾತ್ಕಾಲಿಕವಾಗಿ ತಡೆ ಬಿದ್ದಿರುವುದರಿಂದ ಪರ್ಯಾಯ ಕಲಿಕೆಯ ಕ್ರಮಗಳ ಅಳವಡಿಕೆ ಅನಿವಾರ್ಯ. ಮಕ್ಕಳ ಕಲಿಕೆಯ ಮುಂದುವರಿಕೆ ಮತ್ತು ಶಿಕ್ಷಣದಿಂದ ಅವರು ವಿಮುಖರಾಗದಂತೆ ಎಚ್ಚರಿಕೆ ವಹಿಸಲು ಅಳವಡಿಸಿಕೊಳ್ಳಬೇಕಾದ ಪರ್ಯಾಯ ಕ್ರಮಗಳಲ್ಲಿ ಆನ್ ಲೈನ್ ಶಿಕ್ಷಣವನ್ನೂ ಒಂದು ಅಂಶವಾಗಿ ಪರಿಗಣಿಸಬಹುದು. ಆದರೆ, ಕೇವಲ ಆನ್ ಲೈನ್ ಒಂದೇ ಆಯ್ಕೆಯಾಗಬಾರದು ಎಂದೂ ಹೇಳಿದೆ.

ಜೊತೆಗೆ ಆ ವರದಿಯಲ್ಲಿಯೇ ಉಲ್ಲೇಖಿಸಿರುವಂತೆ ಆನ್ ಲೈನ್ ಶಿಕ್ಷಣವೊಂದನ್ನೇ ಪರ್ಯಾಯ ಶಿಕ್ಷಣ ಮಾರ್ಗವಾಗಿ ಅಳವಡಿಸಿಕೊಳ್ಳಲು ಹಲವು ತೊಡಕುಗಳಿವೆ. ಶೈಕ್ಷಣಿಕ ಮತ್ತು ವೈಜ್ಞಾನಿಕ ಮಿತಿಗಳ ಜೊತೆಗೆ ಆನ್ ಲೈನ್ ಶಿಕ್ಷಣಕ್ಕೆ ಇರುವ ಪ್ರಮುಖ ಸವಾಲುಗಳು ತಾಂತ್ರಿಕತೆ ಮತ್ತು ತಾಂತ್ರಿಕ ಪರಿಕರಗಳ ಲಭ್ಯತೆ ಮತ್ತು ತಂತ್ರಜ್ಞಾನದ ತೊಡಕುಗಳೂ ಇವೆ. ಶಿಕ್ಷಣ ಇಲಾಖೆ ಕಳೆದ ಜೂನ್ ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ರಾಜ್ಯದ ಶಾಲಾ ಮಕ್ಕಳ ಮನೆಗಳಲ್ಲಿ ಇರುವ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಲಭ್ಯತೆ ಕುರಿತ ಅಂಕಿಅಂಶಗಳು ಆನ್ ಲೈನ್ ಶಿಕ್ಷಣಕ್ಕೆ ಇರುವ ದೊಡ್ಡ ತೊಡಕನ್ನು ನಿಖರ ಮಾಹಿತಿ ಸಹಿತ ವಿವರಿಸುತ್ತವೆ.
ಸಮೀಕ್ಷೆಯ ಪ್ರಕಾರ 1-5ನೇ ತರಗತಿ ಮಕ್ಕಳಿರುವ ರಾಜ್ಯದ ಒಟ್ಟು ಕುಟುಂಬಗಳ ಪೈಕಿ ಕೇವಲ ಶೇ.58.4ರಷ್ಟು ಮಾತ್ರ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಸಂಪರ್ಕ ಹೊಂದಿವೆ. 6-8ನೇ ತರಗತಿ ಮಕ್ಕಳಿರುವ ಕುಟುಂಬಗಳ ಪೈಕಿ ಶೇ.57.5 ರಷ್ಟು ಮಾತ್ರ ಈ ಸೌಕರ್ಯ ಹೊಂದಿವೆ. 9ರಿಂದ 10ನೇ ತರಗತಿ ಮಕ್ಕಳ ಕುಟುಂಬದ ಪೈಕಿ ಶೇ.63.8ರಷ್ಟು ಮನೆಗಳಲ್ಲಿ ಮಾತ್ರ ಆನ್ ಲೈನ್ ತರಗತಿಗೆ ಅಗತ್ಯವಾಗಿ ಬೇಕಾದ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ಸಂಪರ್ಕ ಹೊಂದಿವೆ. ಹೀಗೆ ಮಕ್ಕಳ ಕುಟುಂಬಗಳು ಹೊಂದಿರುವ ಸ್ಮಾರ್ಟ್ ಫೋನ್ ಎಷ್ಟರಮಟ್ಟಿಗೆ ತಾಸುಗಟ್ಟಲೆ ಮಕ್ಕಳು ಕಣ್ಣಿಟ್ಟು ಪಾಠ ಕೇಳುವ ಮಟ್ಟಿಗೆ ದೊಡ್ಡ ಪರದೆ ಮತ್ತು ಉತ್ತರ ಗುಣಮಟ್ಟ ಹೊಂದಿವೆ ಎಂಬುದು ಪ್ರಶ್ನಾರ್ಹವೇ. ಜೊತೆಗೆ ಈ ಫೋನ್ ಗಳು ಹೊಂದಿರುವ ಇಂಟರ್ ನೆಟ್ ಸಂಪರ್ಕ ಕೂಡ ಎಷ್ಟರಮಟ್ಟಿಗೆ ಆನ್ ಲೈನ್ ಶಿಕ್ಷಣಕ್ಕೆ ಬೇಕಾದ ಅಧಿಕ ವೇಗ ಹೊಂದಿದೆ ಎಂಬುದು ಕೂಡ ಗಮನಿಸಬೇಕಾದ ಸಂಗತಿ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲೇ 2ಜಿ ವೇಗ ಕೂಡ ಲಭ್ಯವಾಗದ ಹಲವು ಪ್ರದೇಶಗಳಿರುವಾಗ ರಾಜ್ಯದ ಕುಗ್ರಾಮಗಳು, ಅರಣ್ಯದಂಚಿನ ಜನವಸತಿ ಪ್ರದೇಶಗಳ ಮಕ್ಕಳ ಪಾಲಿಗೆ ಈ ಆನ್ ಲೈನ್ ಶಿಕ್ಷಣ ಕೈಗೆಟುಕುವಂತೆ ಮಾಡುವಲ್ಲಿ ಈ ತಾಂತ್ರಿಕ ಮಿತಿಗಳು ಎಷ್ಟರಮಟ್ಟಿಗೆ ದೊಡ್ಡ ತೊಡಕುಗಳಾಗಬಹುದು ಎಂಬುದನ್ನು ಯಾರು ಬೇಕಾದರೂ ಅಂದಾಜಿಸಬಹುದು.
ಇನ್ನು ಕಂಪ್ಯೂಟರ್ ಮತ್ತು ಇಂಟರ್ ನೆಟ್ ಹೊಂದಿರುವ ಕುಟುಂಬಗಳ ಕುರಿತ ರಾಷ್ಟ್ರೀಯ ಸ್ಯಾಂಪಲ್ ಸಮೀಕ್ಷೆ(ಎನ್ ಎಸ್ ಎಸ್ ಒ) ಮಾಹಿತಿಯ ಅಂಕಿಅಂಶಗಳು ಕೂಡ ತೀರಾ ಆತಂಕಕಾರಿ ಚಿತ್ರಣವನ್ನೇ ನೀಡುತ್ತವೆ. ಇತ್ತೀಚಿನ 75ನೇ ಎನ್ ಎಸ್ ಎಸ್ ಒ ಸಮೀಕ್ಷೆಯ ಪ್ರಕಾರ ರಾಜ್ಯದ ಗ್ರಾಮೀಣ ಭಾಗದಲ್ಲಿ ಸ್ವಂತ ಕಂಪ್ಯೂಟರ್ ಹೊಂದಿರುವ ಕುಟುಂಬಗಳ ಪ್ರಮಾಣ ಶೇ.2ರಷ್ಟು ಮಾತ್ರ. ನಗರ ಪ್ರದೇಶದಲ್ಲಿ ಈ ಪ್ರಮಾಣ ಶೇ.23ರಷ್ಟು! ಇನ್ನು ಕಂಪ್ಯೂಟರ್ ಜೊತೆಗೆ ಇಂಟರ್ ನೆಟ್ ಹೊಂದಿರುವ ಕುಟುಂಬಗಳ ಪ್ರಮಾಣ ಶೇ. ಗ್ರಾಮೀಣ ಭಾಗದಲ್ಲಿ ಶೇ.8ರಷ್ಟಿದ್ದರೆ, ನಗರಪ್ರದೇಶದಲ್ಲಿ ಶೇ.33ರಷ್ಟು ಕುಟುಂಬಗಳು ಮಾತ್ರ ಇಂಟರ್ ನೆಟ್ ಜೊತೆಗೆ ಕಂಪ್ಯೂಟರ್ ಹೊಂದಿವೆ.
ಸರ್ಕಾರಿ ಅಂಕಿಅಂಶಗಳ ಪ್ರಕಾರವೇ ವಾಸ್ತವಾಂಶಗಳು ನೀಡುವ ಚಿತ್ರಣ ಇದು. ಈ ಹಿನ್ನೆಲೆಯಲ್ಲಿಯೇ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಕರೋನಾ ಸಂಕಷ್ಟದ ಹೊತ್ತಿನ ಕಲಿಕಾ ಪರ್ಯಾಯ ಕ್ರಮಗಳಲ್ಲಿ ಆನ್ ಲೈನ್ ಶಿಕ್ಷಣವೇ ಪ್ರಧಾನವಾಗಿರಲು ಸಾಧ್ಯವಿಲ್ಲ. ಬದಲಾಗಿ ನೇರ ಸಂಪರ್ಕ(ಆರೋಗ್ಯ ಮುಂಜಾಗ್ರತಾ ಕ್ರಮಗಳೊಂದಿಗೆ), ಧ್ವನಿ ಮುದ್ರಿತ ಅಥವಾ ವೀಡಿಯೊ ಮುದ್ರಿತ ಕ್ರಮ, ರೇಡಿಯೋ ಮತ್ತು ಟಿವಿ ಬಳಕೆಯಂತಹ ಪರಿಣಾಮಕಾರಿ ಮತ್ತು ಹೆಚ್ಚು ತಂತ್ರಜ್ಞಾನ ಅವಲಂಬನೆ ಇಲ್ಲದ ಕ್ರಮಗಳ ಜೊತೆಗೆ ಒಂದು ಸಣ್ಣ ಭಾಗವಾಗಿ ಆನ್ ಲೈನ್ ಕ್ರಮ ಅನುಸರಿಸಬಹುದು ಎಂದು ಹೇಳಿದೆ.
ತಾಂತ್ರಿಕ ಮಿತಿ ಮತ್ತು ಅಂತಹ ತಾಂತ್ರಿಕ ಸೌಲಭ್ಯ ಮತ್ತು ಸಲಕರಣೆಗಳನ್ನು ಹೊಂದಲಾಗದ ಮಕ್ಕಳ ಪೋಷಕರ ಆರ್ಥಿಕ ಮಿತಿಗಳ ಹಿನ್ನೆಲೆಯಲ್ಲೇ ಪ್ರಮುಖವಾಗಿ ಆನ್ ಲೈನ್ ಶಿಕ್ಷಣದ ಕುರಿತು ಆತಂಕ ಮತ್ತು ಆಕ್ಷೇಪಣೆ ವ್ಯಕ್ತವಾಗಿದ್ದವು. ಅದರಲ್ಲು ಕರೋನಾ ಲಾಕ್ ಡೌನ್ ಸಂಕಷ್ಟದಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಬಹುತೇಕ ಬಡವರು, ಕಡುಬಡವರು, ಮಧ್ಯಮ ವರ್ಗಗಳು ಅನುಭವಿಸಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸ್ಮಾರ್ಟ್ ಫೋನ್ ಮತ್ತು ಇಂಟರ್ ನೆಟ್ ನಂತಹ ದುಬಾರಿ ವೆಚ್ಚಗಳನ್ನು ಭರಿಸುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂಕಷ್ಟದ ಹೊತ್ತಿನಲ್ಲಿ ಆನ್ ಲೈನ್ ಶಿಕ್ಷಣ ಎಂಬುದು ಈಗಾಗಲೇ ಗ್ರಾಮೀಣ ಮಕ್ಕಳು ಮತ್ತು ನಗರ ಮಕ್ಕಳ ನಡುವೆ ಇರುವ ಅಸಮಾನತೆಯ ಕಂದಕವನ್ನು ಇನ್ನಷ್ಟು ಹಿಗ್ಗಿಸುವುದಿಲ್ಲವೆ? ಆರ್ಥಿಕವಾಗಿ ಕೂಡ ಪ್ರಬಲರು ಮತ್ತು ದುರ್ಬಲರ ನಡುವಿನ ಕಂದಕವನ್ನು ಕೂಡ ಇದು ಹೆಚ್ಚಿಸುವುದಿಲ್ಲವೆ? ಜೊತೆಗೆ ಹೊಸ ಬಗೆಯ ಡಿಜಿಟಲ್ ಡಿವೈಡ್ ಗೆ ಇದು ಕಾರಣವಾಗುವುದಿಲ್ಲವೆ ಎಂಬ ಆತಂಕಗಳು ಸಹಜವಾಗೇ ವ್ಯಕ್ತವಾಗುತ್ತಿವೆ. ಪೋಷಕರು ಮತ್ತು ಶಿಕ್ಷಕರ ಸಂಘಟನೆಗಳ ಜೊತೆಗೆ ಶಿಕ್ಷಣ ತಜ್ಞರು ಕೂಡ ಇಂತಹ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಆತಂಕಗಳನ್ನು ಮತ್ತು ಆನ್ ಲೈನ್ ಶಿಕ್ಷಣ ಕ್ರಮ ದೀರ್ಘಾವಧಿಯಲ್ಲಿ ಮಕ್ಕಳ ಭವಿಷ್ಯದ ಮೇಲೆ ಬೀರಬಹುದಾದ ವ್ಯತಿರಿಕ್ತ ಪರಿಣಾಮಗಳನ್ನು ನಿವಾರಿಸುವ ಮತ್ತು ಅದೇ ಹೊತ್ತಿಗೆ ನ್ಯಾಯಾಲಯದ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಎಚ್ಚರಿಕೆಯ ಹೆಜ್ಜೆಯನ್ನೂ ಇಡುವ ಅಡಕತ್ತರಿಯ ನಡಿಗೆಯ ಸವಾಲು ಈಗ ರಾಜ್ಯ ಸರ್ಕಾರದ ಮುಂದಿದೆ.