ಭಾರತೀಯ ರೈತ ಸಂಘ (ಏಕ್ತಾ ಉಗ್ರಹನ್) ವು ಡಿಸೆಂಬರ್10ನ್ನು ಅಂತರಾಷ್ಟ್ರೀಯ ಮಾನವ ಹಕ್ಕು ದಿನವೆಂದು ಆಚರಿಸಲು ನಿರ್ಧರಿಸಿದಂತೆ ಬಿಜೆಪಿ ರೈತರ ಪ್ರತಿಭಟನೆಗೂ ಲೇಬಲ್ ಹಚ್ಚುವ ಮೂಲಕ ತನ್ನ ಎಂದಿನ ಚಾಳಿ ಮುಂದುವರಿಸಿದೆ. UAPA ಕಾಯ್ದೆಯಡಿಯಲ್ಲಿ ಬಂಧಿತರಾಗಿರುವ ಅದರಲ್ಲೂ ಭೀಮಾ ಕೋರೆಗಾಂವ್ ಮತ್ತು ಪೌರತ್ವ ವಿರೋಧಿ ಹೋರಾಟದಲ್ಲಿ ಬಂಧಿತರಾಗಿರುವವರನ್ನು ಸರಕಾರ ಕೂಡಲೇ ಬಿಡುಗಡೆ ಮಾಡಬೇಕು ಎನ್ನುವ ಕೂಗು ನಿನ್ನೆ ಮೊನ್ನೆಯದಲ್ಲ. ಕೇಂದ್ರ ಸರಕಾರ ತರಲಿಚ್ಛಿಸಿರುವ ಹಿಸ ರೈತ ಕಾಯ್ದೆಯ ವಿರುದ್ಧದ ಹೋರಾಟದ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಈ ಬೇಡಿಕೆ ಇಲ್ಲದಿದ್ದರೂ ‘ಏಕ್ತಾ ಉಗ್ರಹನ್’ ಸಂಘಟನೆ ರೈತ ಚಳುವಳಿಯಲ್ಲಿ ಈ ಸಂಬಂಧಿಸಿದಂತೆ ಬಂಧಿತ ಹೋರಾಟಗಾರರನ್ನು ಫ್ಲೆಕ್ಸ್ ಹಿಡಿಯುವ ಮೂಲಕ ನೆನಪಿಸಿಕೊಂಡಿತು.
ಎಂದಿನಂತೆ ಬಿಜೆಪಿ ‘ಎಡಚರು’ ‘ದೇಶದ್ರೋಹಿಗಳು’, ‘ಮಾವೋವಾದಿಗಳು’, ತುಕ್ಡೆ ತುಕ್ಡೆ ಗ್ಯಾಂಗ್’ ಎಂದೆಲ್ಲಾ ಕರೆಯಲಾರಂಭಿಸಿದೆ. ದುರಂತ ಎಂದರೆ ಈಗೀಗ ಮಾಧ್ಯಮಗಳೂ ಸರಕಾರದ ವಿರುದ್ಧ ನಿಲ್ಲುವವರನ್ನೆಲ್ಲಾ ಇದೇ ರೀತಿಯ ಭಾಷೆಯಲ್ಲಿ ಮಾತನಾಡಿಸುತ್ತಿದೆ. ರೈತರಿಗೆ ಬೆಂಬಲವಾಗಿ ತಮಗೆ ದೊರಕಿದ ಪ್ರಶಸ್ತಿಗಳನ್ನು ಮರಳಿಸುತ್ತಿರುವ ಸೈನಿಕರನ್ನು ಮಾತ್ರ ಸದ್ಯಕ್ಕೆ ಸರ್ಕಾರ ದೇಶ ದ್ರೋಹಿ ಎಂದು ಕರೆದಿಲ್ಲ. ಈ ಸರ್ಕಾರವನ್ನು ‘ಸೇನೆಯ ಪರ’ ಎಂದು ಬಿಂಬಿಸುತ್ತಲೇ ಬಂದಿರುವ ಮಾಧ್ಯಮಗಳೂ ಸೈನಿಕರ ‘ಪ್ರಶಸ್ತಿ ವಾಪಾಸ್’ ಅಭಿಯಾನವನ್ನು ಗೇಲಿ ಮಾಡುತ್ತಾ ಅದನ್ನೊಂದು ಸುದ್ದಿಯಾಗಿಸದೆ ಸರ್ಕಾರಕ್ಕೆ ಉಪಕಾರ ಮಾಡುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸಚಿವರುಗಳಾದ ನಿತಿನ್ ಗಡ್ಕರಿ, ಪೀಯುಷ್ ಗೋಯಲ್, ರವಿ ಶಂಕರ್ ಪ್ರಸಾದ್ ಮುಂತಾದವರಿಗೆ ತಮ್ಮ ಪ್ರೈಂ ಟೈಮನ್ನು ನೀಡುತ್ತಿರುವ ಸುದ್ದಿ ಮಾಧ್ಯಮಗಳು BKU (ಭಾರತೀಯ ರೈತ ಸಂಘ) ಬಿಡುಗಡೆ ಮಾಡಲು ಆಗ್ರಹಿಸುತ್ತಿರುವ ಹೋರಾಟಗಾರರಿಗೂ ರೈತರಿಗೂ ರೈತರ ಸಮಸ್ಯೆಗಳಿಗೂ ಸಂಬಂಧವೇ ಇಲ್ಲ ಎಂದು ಸಾರುತ್ತಿವೆ. ಸಮಾಜದ ಹುಳುಕುಗಳನ್ನು ಮುಂದಿಡಬೇಕಾದ ಮಾಧ್ಯಮವೇ ರೈತರ ಮಧ್ಯೆ ಒಡಕು ತರಲು ಪ್ರಯತ್ನಿಸುತ್ತಿವೆ. ಇದರ ಪರಿಣಾಮವಾಗಿ ಸಿಂಘು ಬಾರ್ಡರಿನಲ್ಲಿ ಪ್ರತಿಭಟಿಸುತ್ತಿರುವ ರೈತರು ಜಾಮಿಯ್ಯಾದ ವಿದ್ಯಾರ್ಥಿಗಳ ಬೆಂಬಲ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರು ಸೋಮವಾರ NDTVಗೆ ನೀಡಿರುವ ಸಂದರ್ಶನಲ್ಲಿ ಪ್ರತಿಭಟನಾಕಾರರು ‘ಗಡ್ಚಿರೋಲಿಯ ವ್ಯಕ್ತಿ’ಯ ಫೊಟೋ ಹಿಡಿದುಕೊಂಡಿರುವುದನ್ನು ಆಕ್ಷೇಪಿಸುತ್ತಾ “ಬಂಧಿಸಲ್ಪಟ್ಟಿರುವ ಮತ್ತು ಜಾಮೀನು ನಿರಾಕರಿಸಲ್ಪಟ್ಟಿರುವ ವ್ಯಕ್ತಿಗೆ ರೈತರೊಂದಿಗೆ ಯಾವ ಸಂಬಂಧವೂ ಇರಲು ಸಾಧ್ಯವಿಲ್ಲ” ಎಂದಿದ್ದಾರೆ.
TISS ನಲ್ಲಿ ಪದವೀಧರರಾಗಿರುವ ಗಡ್ಚಿರೋಲಿಯ ಮಹೇಶ್ ರಾವುತ್ ಎಂಬ ಯುವಕ ಭೀಮಾ ಕೋರೆಗಾಂವ್ ಕೇಸ್ನಲ್ಲಿ UAPA ಅಡಿಯಲ್ಲಿ ಬಂಧಿತರಾಗಿದ್ದಾರೆ. ಸುರ್ಜಾಗಧ್ನ ರೈತರ ಹೋರಾಟದಲ್ಲೂ ಅವರು ಕಾರ್ಪೋರೆಟ್ ಮೈನಿಂಗ್ ವಿರುದ್ಧ ರೈತರಿಗೆ ಸಹಾಯ ಮಾಡಿದ್ದರು. ಗಡ್ಕರಿಯವರು ತಮ್ಮ ಸಂದರ್ಶನದಲ್ಲಿ ‘ಗಡ್ಚಿರೋಲಿಯ ವ್ಯಕ್ತಿ’ ಅಂದಿರುವುದು ಇದೇ ಮಹೇಶ್ ರಾವುತ್ ಅವರನ್ನು. 300 ಗ್ರಾಮ ಸಭೆಗಳು ಒಬ್ಬ ವ್ಯಕ್ತಿಯ ಪರವಾಗಿ ರೈತನೆಂಬ ನಿರ್ಣಯ ಕೈಗೊಂಡಿರುವಾಗ ಅವರನ್ನು ರೈತನೇ ಅಲ್ಲ ಎಂದು ಹೇಳುವುದು ಎಷ್ಟು ಸರಿ?
ಸರ್ಕಾರದ ಪ್ರಕಾರ ಆದಿವಾಸಿಗಳೂ ರೈತರಾಗೋಕೆ ಸಾಧ್ಯವಿಲ್ಲ. FRA (Forest Rights Act) ಯು ಸಂರಕ್ಷಿತ ಅರಣ್ಯಗಳಲ್ಲಿ ಕೃಷಿ ಮಾಡುವ ಆದಿವಾಸಿಗಳು ಅತಿಕ್ರಮಣಕಾರರಲ್ಲ, ಅವರ ಭೂಮಿಯನ್ನೇ ಅರಣ್ಯದ ಗಡಿಯೊಳಗೆ ಸೇರಿಸಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದರೂ ಬಿಜೆಪಿ ಸರ್ಕಾರವು ಪೂರ್ವಾಗ್ರಹ ಪೀಡಿತರಂತೆ ಆದಿವಾಸಿಗಳೆಂದರೆ ಬರಿಯ ಬೇಟೆಗಾರರು ಮಾತ್ರ ಎಂಬಂತೆ ಬಿಂಬಿಸುತ್ತಿದೆ.
ಅಷ್ಟೇಕೆ ಭೀಮಾ ಕೋರೆಗಾಂವ್ ಕೇಸ್ನಲ್ಲಿ ಬಂಧಿತರಾಗಿರುವ ಪ್ರತಿಯೊಬ್ಬರಿಗೂ ರೈತರೊಂದಿಗೆ ಮತ್ತು ಭೂಮಿಯೊಂದಿಗೆ ಸಂಬಂಧವಿರುವುದನ್ನು ಸಾಬೀತು ಪಡಿಸಬಹುದು. ಛತ್ತೀಸ್ಗಢದ ರೈತರು ಮತ್ತು ಬಡವರ ಭೂಮಿಯ ಪರವಾಗಿ ಹೋರಾಟ ಮಾಡುತ್ತಿದ್ದ ಸುಧಾ ಭಾರದ್ವಾಜ್, ಪಂಜಾಬಿನ ಮಾನವ ಹಕ್ಕು ಕಾರ್ಯಕರ್ತ ಗೌತಮ್ ನವ್ಲಖ ಮುಂತಾದವರೂ ರೈತರೇ ಅಥವಾ ರೈತರೊಂದಿಗೆ ನೇರ ಸಂಬಂಧ ಇರುವವರೇ. ಪೌರತ್ವ ಕಾಯ್ದೆ ವಿರೋಧಿ ಹೋರಾಟದಲ್ಲಿ ಬಂಧಿತರಾದ ವಿದ್ಯಾರ್ಥಿಗಳು, ಕಾಶ್ಮೀರ ಹೋರಾಟದಲ್ಲಿ ಬಂಧಿತರಾದವರು ಒಂದಲ್ಲ ಒಂದು ರೀತಿಯಲ್ಲಿ ರೈತರೇ.
ಒಂದು ದೇಶ,ಒಂದೇ ಮಾರುಕಟ್ಟೆಯ, ಒಂದೇ ಧರ್ಮ, ಒಂದೇ ಭಾಷೆಯ ಪ್ರತಿಪಾದಕರಾದ ಬಿಜೆಪಿ ಜನತೆಯ ಒಂದೇ ಚಳವಳಿಯನ್ನು ಮಾತ್ರ ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತದೆ. ಮಾತಿನಲ್ಲೂ ಕೃತಿಯಲ್ಲೂ ದೃಢತೆ ಇಲ್ಲದ ಸರ್ಕಾರ ಒಮ್ಮೆ ಪಂಜಾಬಿನ ರೈತರು ಮಾತ್ರ ಹೊಸ ಕಾಯ್ದೆಯಿಂದ ಸಂತುಷ್ಟರಾಗಿಲ್ಲ, ಇನ್ನುಳಿದ ಭಾರತೀಯ ರೈತರು ಕಾಯ್ದೆಯನ್ನು ಬೆಂಬಲಿಸುತ್ತಾರೆ ಎನ್ನುತ್ತದೆ. ಮತ್ತೊಂದೆಡೆ ಇಡೀ ದೇಶದ ರೈತರು, ಜನರು ರೈತ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಂತೆ ಅವರೆಲ್ಲಾ ರೈತರೇ ಅಲ್ಲ ಎನ್ನುತ್ತಿದೆ.
ಹಲವು ಅಧ್ಯಯನಗಳು, ರೈತರ ಅಂತರಾಷ್ಟ್ರೀಯ ಸಂಘಟನೆಗಳು ಕಾಂಟ್ರಾಕ್ಟ್ ಕೃಷಿಯ ಭಾದಕಗಳು, ಅದು ಒಂದು ಪ್ರದೇಶದಲ್ಲಿ ಉಂಟು ಮಾಡುವ ಸಾಂಸ್ಕೃತಿಕ ತಲ್ಲಣಗಳ ಬಗ್ಗೆ ಆಘಾತಕಾರಿ ಮಾಹಿತಿಗಳನ್ನು ಹೊರಗೆಡವಿದೆ. ಹೀಗಿದ್ದೂ ಸರ್ಕಾರ ಮತ್ತು ಸರ್ಕಾರದ ತುತ್ತೂರಿ ಊದುವ ಮಾಧ್ಯಮಗಳು ಕೃಷಿ ವಿಧೇಯಕವನ್ನು ಇನ್ನಿಲ್ಲದಂತೆ ಬೆಂಬಲಿಸುವುದು ಅಸಹ್ಯ ಅನಿಸುತ್ತದೆ. ಹವಾಮಾನ ಬದಲಾವಣೆ, ರೈತರ ಸಂಕಷ್ಟಗಳು, ಕೋವಿಡ್ ಆಹಾರ ವಿತರಣೆಯ ಸರಪಳಿಯ ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮ, ಸುರಕ್ಷಿತ ಕೃಷಿಯೆಡೆಗೆ ಗಮನ ಹರಿಸಬೇಕಿರುವ ರೈತರು ಹೀಗೆ ಸುದ್ದಿ ಮಾಡಲು, ವರದಿ ತಯಾರಿಸಲು ನೂರಾರು ವಿಷಯಗಳಿರುವಾಗ ಮಾಧ್ಯಮಗಳು ಬಿಜೆಪಿಯ ವಕ್ತಾರರಂತೆ ವರ್ತಿಸುವುದು ನಾಚಿಕೆಗೇಡು. ಕೃಷಿ, ಅದರಲ್ಲಿನ ಕಷ್ಟ ನಷ್ಟಗಳು, ಕೃಷಿಯ ಮೇಲೆ ಪರಿಸರದ ಏರುಪೇರು ಬೀರುವ ಪ್ರಭಾವ ಯಾವುದರ ಬಗ್ಗೆಯೂ ಕಿಂಚಿತ್ತೂ ಮಾಹಿತಿಯಿಲ್ಲದ ಪತ್ರಕರ್ತರು ಹೋರಾಟಗಾರರನ್ನು ಯಾವುದೋ ಬಾಡಿಗೆ ಗೂಂಡಾಗಳಂತೆ, ರೈತರಿಗೆ ಸಂಬಂಧ ಪಟ್ಟವರೇ ಅಲ್ಲದಂತೆ ಚಿತ್ರಿಸುತ್ತಿರುವುದು ಹಿಂದೊಮ್ಮೆ ಜನಪರವಾಗಿದ್ದ, ಸರ್ಕಾರವನ್ನು ಎದುರುಹಾಕಿಕೊಂಡಿದ್ದ ಮಾಧ್ಯಮಕ್ಕೇ ಅವಮಾನ ಮಾಡಿದಂತೆ.