ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡಲು ತಿಂಗಳ ಹಿಂದಷ್ಟೇ 1.40 ಲಕ್ಷ ಕೋಟಿ ರುಪಾಯಿಗಳಷ್ಟು ಕಾರ್ಪೊರೆಟ್ ತೆರಿಗೆ ಕಡಿತ ಮಾಡಿದ್ದ ಕೇಂದ್ರ ಸರ್ಕಾರವು ಈಗ ಜನರ ಖರೀದಿ ಶಕ್ತಿಯನ್ನು ಉದ್ದೀಪಿಸಲು ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡಲು ಮುಂದಾಗಿದೆ. ಬರುವ ಬಜೆಟ್ ನಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ವರದಿಯಲ್ಲಿ ಜನರ ಖರೀದಿ ಶಕ್ತಿ ಕುಂದಿದ್ದು ಆರು ವರ್ಷಗಳ ಕನಿಷ್ಠಮಟ್ಟಕ್ಕೆ ಇಳಿದಿದೆ ಎಂದು ತಿಳಿಸಿತ್ತು. ಜತೆಗೆ ಕಳೆದವಾರ ಬಿಡುಗಡೆಯಾದ ಅಂಕಿಅಂಶಗಳ ಪ್ರಕಾರ ದ್ವಿತೀಯ ತ್ರೈಮಾಸಿಕದಲ್ಲಿ ಜಿಡಿಪಿ ಶೇ.4.5ಕ್ಕೆ ಕುಸಿದಿದ್ದು, ಇದೂ ಸಹ ಕಳೆದ ಆರು ವರ್ಷಗಳ ಕನಿಷ್ಠಮಟ್ಟವಾಗಿದೆ.
ಈ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ನರೇಂದ್ರ ಮೋದಿ ಸರ್ಕಾರವು ಬರುವ ವಿತ್ತೀಯ ವರ್ಷದಲ್ಲಿ ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡಲು ನಿರ್ಧರಿಸಿದೆ. ದೆಹಲಿಯಲ್ಲಿ ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಆರ್ಥಿಕ ಚೇತರಿಕೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ್ದಾರೆ. ಬರುವ ದಿನಗಳಲ್ಲಿ ಆರ್ಥಿಕತೆ ಚೇತರಿಸಿಕೊಂಡು, ಸರಿಹಾದಿಗೆ ಹೊರಳಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡಿದರೆ ಯಾರಿಗೆ ಎಷ್ಟು ಅನುಕೂಲ ಆಗುತ್ತದೆ? ತೆರಿಗೆ ಕಡಿತ ಎಷ್ಟು ಎಂಬುದು ಬಜೆಟ್ ನಲ್ಲಿ ಪ್ರಕಟಿಸಿದ ನಂತರವೇ ತಿಳಿಯುತ್ತದೆ. ಆದರೆ, ಪ್ರಸ್ತುತ ಇರುವ ಆದಾಯ ತೆರಿಗೆ ಪ್ರಮಾಣಕ್ಕಿಂತ ಕಡಮೆ ಆಗಲಿದೆ ಎಂಬುದಂತೂ ನಿಚ್ಛಳ.
ಪ್ರಸ್ತುತ ಆದಾಯ ತೆರಿಗೆ ಎಷ್ಟಿದೆ ಎಂಬುದರತ್ತ ಗಮನ ಹರಿಸೋಣ. 2019-20ನೇ ಸಾಲಿನಲ್ಲಿ 2.50 ಲಕ್ಷದವರೆಗೆ ಆದಾಯ ತೆರಿಗೆ ಇಲ್ಲ. 2.50-5 ಲಕ್ಷದವರೆಗೆ ಶೇ.5ರಷ್ಟಿದೆ. 5 -10 ಲಕ್ಷದವರೆಗೆ 12,500 ಜತೆಗೆ 5 ಲಕ್ಷ ಮೇಲ್ಪಟ್ಟ ಮೊತ್ತದ ಮೇಲೆ ಶೇ.20ರಷ್ಟು (ಅಂದರೆ ನಿಮ್ಮ ಆದಾಯ 9 ಲಕ್ಷ ಎಂದಿಟ್ಟುಕೊಂಡರೆ ನೀವು ಈಗ ಪಾವತಿಸುತ್ತಿರುವ ಆದಾಯ ತೆರಿಗೆಯು 92,500 ರುಪಾಯಿಗಳು.) 10 ಲಕ್ಷ ಮೇಲ್ಪಟ್ಟು ಆದಾಯ ಇರುವವರಿಗೆ 12,500 ಜತೆಗೆ 10 ಲಕ್ಷ ಮೇಲ್ಪಟ್ಟ ಮೊತ್ತದ ಮೇಲೆ ಶೇ.30ರಷ್ಟು.
ಮೇಲಿನ ತೆರಿಗೆ ದರಗಳು ಹೆಚ್ಚುವರಿ ಶುಲ್ಕ ಮತ್ತು ಸೆಸ್ ಅನ್ನು ಒಳಗೊಂಡಿಲ್ಲ. ಆದಾಯವು 50 ಲಕ್ಷ ಮೀರಿದರೆ ಆದರೆ 1 ಕೋಟಿ ವರೆಗೆ ಇದ್ದರೆ ಆದಾಯ ತೆರಿಗೆಯಲ್ಲಿ 10% ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ. ಆದಾಯವು 1 ಕೋಟಿ ಮೀರಿದರೆ ಆದಾಯ ತೆರಿಗೆಯಲ್ಲಿ 15% ಹೆಚ್ಚುವರಿ ಶುಲ್ಕ ಅನ್ವಯಿಸುತ್ತದೆ. 4% ಆರೋಗ್ಯ ಮತ್ತು ಶಿಕ್ಷಣ ಸೆಸ್ ಆದಾಯ ತೆರಿಗೆ ಮತ್ತು ಅನ್ವಯವಾಗುವ ಹೆಚ್ಚುವರಿ ಶುಲ್ಕದ ಮೇಲೆ ಅನ್ವಯಿಸುತ್ತದೆ. ಆದಾಯ 5 ಲಕ್ಷಕ್ಕಿಂತ ಕಡಿಮೆ ಇರುವ ವ್ಯಕ್ತಿಗಳು, ಸೆಕ್ಷನ್ 87 ಎ ಅಡಿಯಲ್ಲಿ ಪೂರ್ಣ ತೆರಿಗೆ ರಿಯಾಯಿತಿಗೆ ಅರ್ಹರಾಗಿದ್ದಾರೆ. ಈಗ ಹಾಲಿ ತೆರಿಗೆ ದರ ಎಷ್ಟೆಂಬುದು ಗೊತ್ತಿರುವುದರಿಂದ ಮುಂದಿನ ವಿತ್ತೀಯ ವರ್ಷದಲ್ಲಿ ಆದಾಯ ತೆರಿಗೆ ಎಷ್ಟಾಗಬಹುದು ಎಂಬುದನ್ನು ಖಚಿತವಾಗಿ ಅಲ್ಲದಿದ್ದರೂ ಅಂಜಾಜಿಸಬಹುದು. ಪ್ರಸ್ತುತ 2.50 ಲಕ್ಷದಿಂದ 5 ಲಕ್ಷದವರೆಗೆ ಶೇ.5ರಷ್ಟು ತೆರಿಗೆ ಇದ್ದರೂ ಸೆಕ್ಷೆನ್ 87ಎ ಅಡಿಯಲ್ಲಿ ಪೂರ್ಣ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಹೀಗಾಗಿ 5 ಲಕ್ಷದವರೆಗೆ ಯಾರು ಆದಾಯಗಳಿಸುತ್ತಿದ್ದಾರೋ ಅವರು ಆದಾಯ ತೆರಿಗೆ ಬಗ್ಗೆ ತೆಲೆಕೆಡಿಸಿಕೊಳ್ಳಬೇಕಿಲ್ಲ.
ಈಗ ಮುಖ್ಯವಾಗಿ ಇರುವುದು 5-10 ಲಕ್ಷ ರುಪಾಯಿ ಆದಾಯ ಇರುವ ವರ್ಗ. ಈ ವರ್ಗದಲ್ಲಿ 12,500 ಜತೆಗೆ 5 ಲಕ್ಷ ಮೇಲ್ಪಟ್ಟ ಆದಾಯಕ್ಕೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಅಂದರೆ, 10 ಲಕ್ಷ ಆದಾಯ ಪಡೆಯುವವರು ಹೆಚ್ಚು ಕಮ್ಮಿ 1.10 ಲಕ್ಷ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಈ ವರ್ಗಕ್ಕೆ ವಿಧಿಸುತ್ತಿರುವ ತೆರಿಗೆ ದರವನ್ನುಶೇ.20ರಿಂದ ಶೇ.10ಕ್ಕೆ ತಗ್ಗಿಸಿದರೆ 5 ಲಕ್ಷ ಮೀರಿದ ಪ್ರತಿ ಲಕ್ಷಕ್ಕೂ 10,000 ರುಪಾಯಿ ತೆರಿಗೆ ಉಳಿತಾಯವಾಗುತ್ತದೆ. 10 ಲಕ್ಷ ಆದಾಯ ಪಡೆಯುವವರು 1.12 ಲಕ್ಷದ ಬದಲಿಗೆ 62,000 ರುಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ, 50000 ರುಪಾಯಿ ತೆರಿಗೆ ರೂಪದಲ್ಲಿ ಉಳಿತಾಯವಾಗುತ್ತದೆ. ಹಾಗೆಯೇ 10 ಲಕ್ಷ ಮೇಲ್ಪಟ್ಟವರಿಗೆ ವಿಧಿಸುತ್ತಿರುವ ಶೇ.30ರಷ್ಟು ಆದಾಯ ತೆರಿಗೆಯನ್ನು ಶೇ.25ಕ್ಕೆ ತಗ್ಗಿಸಿದರೂ 20 ಲಕ್ಷ ಆದಾಯ ಇರುವವರು 3,12,500 ರುಪಾಯಿ ಬದಲಿಗೆ 2,62,000 ರುಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ 50,000 ರುಪಾಯಿ ತೆರಿಗೆ ಉಳಿತಾಯವಾಗುತ್ತದೆ.
ಇದು ಸಾಂಕೇತಿಕ ಅಂದಾಜು ಅಷ್ಟೇ. ಖಚಿತವಾದ ತೆರಿಗೆ ಉಳಿತಾಯದಲ್ಲಿ ಏರಿಳಿತವಾಗುತ್ತದೆ. ಸ್ಟ್ಯಾಂಡರ್ಡ್ ಡಿಡಕ್ಷನ್ (ವೈದ್ಯಕೀಯ ಮತ್ತು ಪ್ರವಾಸ ಭತ್ಯೆ) 50,000 ಸೆಕ್ಷನ್ 80ಸಿ ಮತ್ತು ಮನೆಬಾಡಿಗೆ ಭತ್ಯೆ(ಎಚ್ಆರ್ಎ) ಮೂಲಕ ಕನಿಷ್ಠ ಎರಡು ಲಕ್ಷ ರುಪಾಯಿಗಳಷ್ಟು ಮೊತ್ತಕ್ಕೆ ತೆರಿಗೆ ವಿನಾಯ್ತಿ ಪಡೆಯಬಹುದು.
ತೆರಿಗೆ ಕಡಿತ ಮಾಡುವುದರಿಂದ ಜನರ ಬಳಿ ಖರ್ಚು ಮಾಡಬಹುದಾದ ನಗದು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಬಹುತೇಕ ಈ ಮೊತ್ತವನ್ನು ಜನರು ಉಪಭೋಗಕ್ಕಾಗಿ ವಿನಿಯೋಗಿಸುತ್ತಾರೆ ಎಂಬುದು ಸಾಮಾನ್ಯವಾಗಿ ಆರ್ಥಿಕ ತಜ್ಞರು ಮಾಡುವ ಅಂದಾಜು. ಅದು ನಿಜವೂ ಇರಬಹುದು.
ಆದರೆ, ಮುಖ್ಯ ಪ್ರಶ್ನೆ ಎಂದರೆ ಈಗಾಗಲೇ ಪ್ರಕಟಿಸಿರುವ ಕಾರ್ಪೊರೆಟ್ ತೆರಿಗೆ 1.45 ಲಕ್ಷ ಕೋಟಿ ರುಪಾಯಿಗಳ ಹೊರೆ ಬೊಕ್ಕಸದ ಮೇಲಿದೆ. ಇದು ಒಂದು ಸಲದ ಇಡುಗಂಟಿನ ಪರಿಹಾರವಲ್ಲ. ಪ್ರತಿವರ್ಷವೂ ಬೊಕ್ಕಸಕ್ಕೆ ಬರುತ್ತಿದ್ದ ಕಾರ್ಪೊರೆಟ್ ತೆರಿಗೆ ಪೈಕಿ 1.45 ಲಕ್ಷ ಕೋಟಿ ಕಡಿತವಾಗಲಿದೆ. ಇದನ್ನು ಸರ್ಕಾರ ಹೇಗೆ ಸರಿದೂಗಿಸುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವೈಯಕ್ತಿಕ ಆದಾಯ ತೆರಿಗೆ ಕಡಿತ ಮಾಡುವುದರಿಂದ ಬೊಕ್ಕಸದ ಮೇಲೆ ಬೀಳುವ ಹೊರೆ ಎಷ್ಟು ಎಂಬುದು ಕಡಿತ ಮಾಡಿದ ನಂತರವಷ್ಟೇ ಸ್ಪಷ್ಟವಾಗುತ್ತದೆ. ಆದರೆ, ಹೊರೆಯನ್ನು ಸರಿದೂಗಿಸುವ ದಾರಿಗಳಾವುವು? ಈಗಾಗಲೇ ಪ್ರಸಕ್ತ ಸಾಲಿನ ವಿತ್ತೀಯ ಕೊರತೆ ಶೇ.3.3ರ ಮಿತಿಯನ್ನು ದಾಟಿದೆ. ಬಾಕಿ ಇರುವ ನಾಲ್ಕು ತಿಂಗಳಲ್ಲಿ ಸರ್ಕಾರ ಮಾಡಲಿರುವ ವೆಚ್ಚವನ್ನು ಅಂದಾಜಿಸಿದರೂ ವಿತ್ತೀಯ ಕೊರತೆ ಶೇ.3.7-3.8ರ ಮಿತಿ ದಾಟುವ ಸಾಧ್ಯತೆ ಇದೆ.