ಕರೋನಾ ಭೀತಿಯಲ್ಲಿ ದೇಶವನ್ನು ಲಾಕ್‌ಡೌನ್ ಒಳಪಡಿಸಿ ಸುಮಾರು 40 ದಿನಗಳಾಗಿವೆ. ಮಾರ್ಚ್ 24ರಿಂದ ಲಾಕ್‌ಡೌನ್ ಜಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ, 2ನೇ ಬಾರಿಗೆ ಮತ್ತೆ 19 ದಿನಗಳ ಕಾಲ ಮೇ 3 ರ ತನಕ ವಿಸ್ತರಣೆ ಮಾಡಿದ್ದರು. ಅದಾದ ಬಳಿಕ ಮತ್ತೆ 2 ವಾರಗಳ ಕಾಲ ಅಂದರೆ ಮೇ 17ರ ತನಕ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಆದರೆ ಕೆಲವೊಂದು ವಿನಾಯಿತಿಗಳನ್ನು ಕೊಡಲಾಗಿದೆ. ಅದರಲ್ಲಿ ಅಂತಾರಾಜ್ಯ ಹಾಗೂ ಅಂತರ್ ಜಿಲ್ಲೆಗಳ ವಲಸೆ ಕಾರ್ಮಿಕರು ತಮ್ಮ ಹುಟ್ಟೂರುಗಳಿಗೆ ತೆರಳಬಹುದು ಎನ್ನುವುದು. ಅದರ ಜೊತೆಗೆ ಇನ್ನೊಂದು ಪ್ರಮುಖ ವಿನಾಯಿತಿ ಎಂದರೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿರುವುದು. ಮದ್ಯ ಮಾರಾಟಕ್ಕೆ ಅವಕಾಶ ನೀಡುವ ವಿನಾಯಿತಿ ಹಿಂದಿನ ಪ್ರಮುಖ ಉದ್ದೇಶವೆಂದರೆ, ಕರೋನಾ ಸೋಂಕಿನಿಂದ ಆದಾಯದ ಮೂಲಗಳು ಬತ್ತಿ ಹೋಗಿದೆ. ಖಾಲಿಯಾಗಿರುವ ರಾಜ್ಯ ಸರ್ಕಾರದ ಖಜಾನೆ ಭರ್ತಿ ಮಾಡಿಕೊಳ್ಳುವುದು ಮದ್ಯದಂಗಡಿ ತೆರೆಯುವ ಹಿಂದಿರುವ ಅಸಲಿ ಉದ್ದೇಶ.
ಆದರೆ, ಸರ್ಕಾರದ ಉದ್ದೇಶ ಈಡೇರುತ್ತಾ ಎನ್ನುವ ಅನುಮಾನಗಳು ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ಬಹುತೇಕ ಜನರ ಮನಪರಿವರ್ತನೆ ಆಗಿರುವುದು. ಮದ್ಯವ್ಯಸನಿಗಳು ಕಳೆದ 40 ದಿನಗಳಿಂದ ಮದ್ಯವನ್ನು ತ್ಯಜಿಸಿದ್ದಾರೆ. ಮದ್ಯ ಸೇವನೆಯನ್ನು ಬಿಟ್ಟು ಹೇಗೆ ಬದುಕಬಹುದು ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಇದೀಗ ಮದ್ಯಕ್ಕೆ ವೆಚ್ಚ ಮಾಡುವ ಹಣವನ್ನು ಉಳಿತಾಯ ಮಾಡಬಹುದು ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ. ಹೀಗಾಗಿ, ಮದ್ಯದ ಅಂಗಡಿಗಳು ತೆರೆದರೆ ಜನರು ಕೊಳ್ಳಲೂಬಹುದು ಅಥವಾ ಮದ್ಯದಂಗಡಿಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲಲೂ ಬಹುದು. ಆದರೆ, ಶೇಕಡ 30 ರಷ್ಟು ಮದ್ಯವ್ಯಸನಿಗಳು ಕುಡಿತ ಬಿಡಬಹುದು ಎಂದು ಅಂದಾಜಿಸಲಾಗಿದೆ. ಮದ್ಯ ಸೇವನೆಯಿಂದಲೇ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಮಾಸಿಕ 1745.83 ಕೋಟಿ ರೂಪಾಯಿ ಆದಾಯ ಹರಿದು ಬರುತ್ತಿದೆ. ಅಂದರೆ ಮಾಸಿಕ 20950 ಕೋಟಿ ಸರ್ಕಾರದ ಖಜಾನೆ ಸೇರುತ್ತದೆ. ಇದೀಗ 40 ದಿನಗಳ ಕಾಲ ಲಾಕ್‌ಡೌನ್‌ನಿಂದ ಸರ್ಕಾರಕ್ಕೆ ಅಂದಾಜು 2500 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ. ಇದೀಗ ಮತ್ತೆ ಶೇಕಡ 30 ರಷ್ಟು ಜನರು ಕುಡಿತ ಚಟದಿಂದ ಹೊರಬಂದರೆ ಸರ್ಕಾರದ ಕಥೆ ಅಯೋಮಯ ಎನ್ನಲಾಗ್ತಿದೆ.
ಮದ್ಯವ್ಯಸನದಿಂದ ಹೊರ ಬರ್ತಾರಾ ಜನ..?
ಮದ್ಯಪಾನ ಮಾಡುವ ಜನರಲ್ಲಿ ಎರಡು ವಿಧ, ನಿರಂತರವಾಗಿ ಮದ್ಯ ಸೇವನೆ ಮಾಡುವ ಜನ. ಮದ್ಯ ಸೇವನೆಯನ್ನು ಹವ್ಯಾಸ ಮಾಡಿಕೊಂಡಿರುವ ಜನ. ನಿರಂತರ ಮದ್ಯ ಸೇವನೆ ಮಾಡುವ ಜನರಿಂದ ಸರ್ಕಾರಕ್ಕೆ ಆದಾಯವೇ ಹೊರತು, ಹವ್ಯಾಸಿ ಮದ್ಯ ಸೇವಕರಿಂದ ಆದಾಯ ನಿರೀಕ್ಷೆ ಅಸಾಧ್ಯ, ಹೀಗಿರುವಾಗ 40 ದಿನಗಳ ವೃತ ಮದ್ಯ ಸೇವನೆಯಿಂದ ದೂರ ಮಾಡಲು ಬಹಳ ಪ್ರಯೋಜನಕಾರಿ ಎನ್ನಲಾಗ್ತಿದೆ. ಈಗಾಗಲೇ ಮಾಗಡಿಯ ಉಯ್ಯಂಬಳ್ಳಿ ಹೋಬಳಿ ಐ. ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮದ್ಯ ಮಾರಾಟ ಮಾಡದಂತೆ ಮದ್ಯ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ. ಇಂದಿನಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದರೂ ಗ್ರಾಮಗಳಲ್ಲಿ ಅಕ್ರಮವಾಗಿ ನಡೆಯುವ ಮದ್ಯ ಮಾರಾಟ ನಡೆಯಬಾರದು. ಹಳ್ಳಿಗಳಲ್ಲಿ ಮದ್ಯ ಮಾರಾಟ ಆರಂಭವಾದರೆ ಮಾತ್ರ ಮದ್ಯವ್ಯಸನಿಗಳು ಮತ್ತೆ ಚಟಕ್ಕೆ ಬೀಳುತ್ತಾರೆ ಎನ್ನುವ ನಿರ್ಣಯ ಕೈಗೊಳ್ಳಲಾಗಿದೆ.
ಸಂಪೂರ್ಣ ಮದ್ಯ ನಿಷೇಧಕ್ಕೆ ಅಭಿಯಾನ..!
ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಅಭಿಯಾನವೊಂದು ನಡೀತಿದೆ. ನಾರಿಯರ ನೋವು ಆಲಿಸಿ ಮಹಾಮಾರಿ ಮದ್ಯ ನಿಷೇಧ ಮಾಡಿ. ಜನರ ಆರೋಗ್ಯ ಮುಖ್ಯವೇ ಹೊರತು ಆರ್ಥಿಕ ಸ್ಥಿತಿಯಲ್ಲ. ಸನ್ಮಾರ್ಗದಲ್ಲಿ ಆದಾಯ ಕ್ರೋಢೀಕರಣ ಮಾಡಿ ಎಂದು ಗ್ರಾಮ ಸೇವಾ ಸಂಘ ಟ್ವಿಟರ್‌ನಲ್ಲಿ ಆಗ್ರಹಿಸಿದೆ. ತರಳಬಾಲು ಜಗದ್ಗುರು ಸಾಣೇನಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮದ್ಯ ಮಾರಾಟ ಮಾಡುವ ಆದೇಶವನ್ನು ಖಂಡಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲೂ ಮದ್ಯ ನಿಷೇಧ ಆಂದೋಲನ ನಡೆಯುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ ಮದ್ಯ ನಿಷೇಧ ಮಾಡಿ ಎನ್ನುವ ಪತ್ರ ಚಳವಳಿ ಕೂಡ ನಡೆಯುತ್ತಿದ್ದು ಜನರು ಸಾಮಾಜಿಕ ಜಾಳತಾಣ ಟ್ವಿಟ್ಟರ್ ಮೂಲಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಪತ್ರ ಕಳುಹಿಸುತ್ತಿದ್ದಾರೆ. ಹಲವಾರು NGO ಗಳು ಮನವಿ ಮಾಡಿಕೊಂಡಿದ್ದು ಸಂಪೂರ್ಣ ಮದ್ಯಪಾನ ನಿಷೇಧ ಮಾಡಲು ಸೂಕ್ತ ಸಮಯ ಎಂದು ಸಲಹೆ ನೀಡಿದ್ದಾರೆ.
ಈ ನಡುವೆ ಮದ್ಯ ಪ್ರಿಯರ ಹುಚ್ಚಾಟಗಳು ಶುರುವಾಗಿದ್ದು, ಮದ್ಯಗಂಗಡಿ ಎದುರು ಪೂಜೆ ಪುನಸ್ಕಾರ ಮಾಡಲು ಶುರು ಮಾಡಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮಾರಾಟ ಶುರುವಾಗಲಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಮದ್ಯ ಖರೀದಿ ಮಾಡಬೇಕು ಎಂದು ಸರ್ಕಾವೇನೋ ಆದೇಶ ಮಾಡಿದೆ. ಆದರೆ ಬಾರ್‌ಗಳಿಂದ ಖರೀದಿ ಮಾಡಿದ ಕುಡುಕರು ಮನೆಗೆ ಹೋಗಿ ಶಾಂತವಾಗಿ ಕುಳಿತು ಕುಡಿಯುತ್ತಾರೆ ಎನ್ನುವುದು ಯಾವ ನಂಬಿಕೆ..? ಒಟ್ಟಾರೆ ಆದಾಯ ಮಾಡಿಕೊಳ್ಳುವ ಮಹಾದಾಸೆಯಿಂದ ಸರ್ಕಾವೇನೋ ಮದ್ಯ ಮಾರಾಟಕ್ಕೆ ಒಪ್ಪಿಗೆ ಕೊಟ್ಟಿದೆ. ಆದರೆ ಮದ್ಯವನ್ನು ವರ್ಜಿಸಿರುವ ಮದ್ಯಪ್ರಿಯರು ಬುದ್ಧಿವಂತರಾಗಿದ್ದರೆ, ಸರ್ಕಾರದ ಖಜಾನೆ ಕಳ್ಳಿಹಾಲು ಬಿಡುವುದರಲ್ಲಿ ಯಾವುದೇ ಅನುಮಾನವಿಲ್ಲ.