ಬಿ.ಎಸ್ ಯಡಿಯೂರಪ್ಪ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಟ್ವೆಂಟಿ – 20 ಸರ್ಕಾರ ಮಾಡಿದ್ದರು. ಯಡಿಯೂರಪ್ಪ ಬೆಂಬಲದಿಂದಲೇ ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಆ ಬಳಿಕ ಬಿಜೆಪಿಗೆ ಜೆಡಿಎಸ್ ಅಧಿಕಾರ ಬಿಟ್ಟುಕೊಡಲಿಲ್ಲ ಎನ್ನುವ ಕಾರಣಕ್ಕಾಗಿ ನಂಬಿಕೆ ದ್ರೋಹ, ವಂಚನೆ ಮಾಡಿದರು, ವಚನ ಭ್ರಷ್ಟರ ವಿರುದ್ಧ ನನಗೆ ಮತ ನೀಡಿ ಎಂದು ರಾಜ್ಯದ ಜನರ ಮುಂದೆ ಯಡಿಯೂರಪ್ಪ ನಿಂತಾಗ, ಜನ ಅಭೂತಪೂರ್ವ ಗೆಲುವು ಕೊಟ್ಟು ಮುಖ್ಯಮಂತ್ರಿ ಪಟ್ಟಕ್ಕೇರುವಂತೆ ಮಾಡಿದರು. ಯಡಿಯೂರಪ್ಪ ಅಧಿಕಾರಕ್ಕೆ ಬರುತ್ತಿದ್ದ ಹಾಗೆ ಯಡಿಯೂರಪ್ಪ ಸುತ್ತಮುತ್ತ ಆಪ್ತ ಬಳಗದ ಹಸ್ತಕ್ಷೇಪ ಹೆಚ್ಚಾಗಿತ್ತು. ಶೋಭಾ ಕರಂದ್ಲಾಜೆ, ರೇಣುಕಾಚಾರ್ಯ, ಸೇರಿದಂತೆ ಕೆಲವೇ ಕೆಲವು ಮಂದಿ ಶಾಸಕರು, ಸಚಿವರು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಸುತ್ತಮುತ್ತ ಕಾಣಿಸಿಕೊಳ್ಳುತ್ತಾ ಇದ್ದರು. ಆ ವೇಳೆ ಯಡಿಯೂರಪ್ಪ ಕೇವಲ ಆಪ್ತರ ಮಾತಿಗಷ್ಟೇ ಮನ್ನಣೆ ನೀಡುತ್ತಾರೆ, ಪಕ್ಷ ನಿಷ್ಟರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪ ಸಹಜವಾಗಿಯೇ ಕೇಳಿ ಬಂದಿತ್ತು.
ಇದೀಗ ಮತ್ತೆ ಯಡಿಯೂರಪ್ಪ ಅದೇ ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿ ಮುಖ್ಯಮಂತ್ರಿ ಪಟ್ಟಕ್ಕೆ ಏರಿದ್ದಾರೆ. ಈ ಬಾರಿ ಯಡಿಯೂರಪ್ಪ ಹಳೆಯ ಆಪ್ತರನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ. ಆದರೆ ಈ ಬಾರಿಯ ಸರ್ಕಾರದಲ್ಲಿ ಕುಟುಂಬಸ್ಥರ ಹಸ್ತಕ್ಷೇಪ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಆಪರೇಷನ್ ಕಮಲದ ಸಮಯದಿಂದ ಹಿಡಿದು ಅಧಿಕಾರಕ್ಕೆ ಏರಿದ ಬಳಿಕ ವಿಜಯೇಂದ್ರ ಸಾಕಷ್ಟು ಕಡೆ ವಿಜೃಂಬಿಸುತ್ತಿದ್ದಾರೆ. ಕಳೆದ ಬಾರಿ ಆಪ್ತರ ವಿರುದ್ಧ ಕೇಳಿಬಂದಿದ್ದ ಆರೋಪದಂತೆ ಈ ಬಾರಿ ಕುಟುಂಬಸ್ಥರ ವಿರುದ್ಧ ಆರೋಪ ಸಾಮಾನ್ಯವಾಗಿದೆ.
ಸರ್ಕಾರದಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗಬೇಕಿದ್ದರೂ ವಿಜಯೇಂದ್ರ ಅಪ್ಪಣೆ ಆಗಬೇಕು. ಕೆಲವೊಂದು ಸಚಿವರ ಖಾತೆಗಳಲ್ಲೂ ವಿಜಯೇಂದ್ರ ಕೈ ಆಡಿಸುತ್ತಿದ್ದಾರೆ ಎನ್ನುವ ದೂರು ಸಾಮಾನ್ಯ ಸಂಗತಿ ಆಗಿದೆ. ಸಿಎಂ ಆಗಿ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ವಿಧಾನಸೌದದಲ್ಲಿ ಕುಳಿತು ವಿಜಯೇಂದ್ರ ವರ್ಗಾವಣೆ ದಂಧೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿಯೂ ಸದ್ದು ಮಾಡಿತ್ತು. ಕುಟುಂಬಸ್ಥರ ನಿಯಂತ್ರಣ ಮಾಡಬೇಕು ಎನ್ನುವ ದೂರು ಹೈಕಮಾಂಡ್‌ಗೂ ಮುಟ್ಟಿತ್ತು. ಇದೀಗ ಸ್ವತಃ ಆರ್‌ಎಸ್‌ಎಸ್ ಅಖಾಡಕ್ಕೆ ಇಳಿದಿದೆ.
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿನ್ನೆ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ತೆರಳಿದ್ದರು. ಆರ್‌ಎಸ್‌ಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ ಮೋಹನ್ ಭಾಗವತ್, ಆ ಬಳಿಕ ಸಿಎಂ ಯಡಿಯೂರಪ್ಪ ಅವರ ಬಳಿ ಮಾತನಾಡಿದ್ದಾರೆ ಎನ್ನಲಾಗಿದೆ. ಜನಸೇವಾ ವಿದ್ಯಾಕೇಂದ್ರ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಸಲಹೆ ರೀತಿಯಲ್ಲಿ ಮೋಹನ್ ಭಾಗವತ್ ಕೆಲವೊಂದು ಸೂಚನೆಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ. ಆಡಳಿತದಲ್ಲಿ ಇರುವಾಗ ಕುಟುಂಬ ಸದಸ್ಯರನ್ನು ದೂರವಿಡಬೇಕು. ಸರ್ಕಾರದ ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಆಸ್ಪದ ಕೊಡಬಾರದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆಡಳಿತದಿಂದ ಕುಟುಂಬ ಸದಸ್ಯರನ್ನು ದೂರವಿಡಿ ಎನ್ನುವ ಸಲಹೆಯನ್ನು ತುಂಬಾ ತಾಳ್ಮೆಯಿಂದಲೇ ಕೇಳಿಸಿಕೊಂಡು ಬಂದ ಯಡಿಯೂರಪ್ಪ ಚಿಂತಿತರಾಗಿದ್ದರು ಎನ್ನಲಾಗಿದೆ. ನಾನು ಮಾಡುವ ಎಲ್ಲಾ ಕೆಲಸಗಳ ಬಗ್ಗೆ ಹೈಕಮಾಂಡ್ ಬಳಿ ದೂರಲಾಗ್ತಿದೆ. ಆರ್‌ಎಸ್‌ಎಸ್ ಮುಖ್ಯಸ್ಥರ ಮೂಲಕ ಕುಟುಂಬಸ್ಥರನ್ನು ಆಡಳಿತದಿಂದ ದೂರ ಇಡುವುದಕ್ಕೆ ಸೂಚಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.