ಹಠವಾದಿ ರಾಜಕಾರಣಿಗಳು ರಾಜಕೀಯ ದ್ವೇಷ ಮಾಡುವ ಬದಲು ಜನಸಾಮಾನ್ಯರ ಕಣ್ಣೊರೆಸುವ ಕಾರ್ಯಕ್ರಮಗಳನ್ನು ನೀಡುವ ಬಗ್ಗೆ ಹಠ ತೊಟ್ಟರೆ ದೇಶ ಸುಭೀಕ್ಷವಾಗಿರುತ್ತದೆ. ಆದರೆ, ದ್ವೇಷವನ್ನೇ ರಾಜಕೀಯ ಎಂದು ತಿಳಿದುಕೊಂಡರೆ ನಾಗರಿಕರು ಸಂಕಷ್ಟಕ್ಕೆ ಸಿಲುಕುವುದಂತೂ ಸತ್ಯ.
ನೆರೆಯ ಆಂಧ್ರಪ್ರದೇಶದ ಜನತೆಯೂ ಸಹ ಇಂತಹ ರಾಜಕೀಯ ಮೇಲಾಟಗಳು ಮತ್ತು ದ್ವೇಷಗಳ ನಡುವೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ. ಮುಖ್ಯಮಂತ್ರಿ ವೈ.ಎಸ್.ರಾಜಶೇಖರರೆಡ್ಡಿ ನಿಧನರಾದ ನಂತರ ಅವರ ಪುತ್ರ ಜಗನ್ ಮೋಹನ ರೆಡ್ಡಿ ಬಹುತೇಕ ಒಂದು ದಶಕದ ಕಾಲ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿ ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷದ ಸರ್ಕಾರವನ್ನು ಕೆಳಗಿಳಿಸಿ ಮುಖ್ಯಮಂತ್ರಿ ಸ್ಥಾನವನ್ನಲಂಕರಿಸಿದ್ದಾರೆ.
ರಾಜಶೇಖರರೆಡ್ಡಿ ಮತ್ತು ಚಂದ್ರಬಾಬು ನಾಯ್ಡು ಇಬ್ಬರೂ ರಾಜಕೀಯವಾಗಿ ಬದ್ಧದ್ವೇಷಿಗಳು. ಈ ದ್ವೇಷ ರಾಜಶೇಖರರೆಡ್ಡಿ ನಿಧನರಾದ ನಂತರ ಜಗನ್ ಮೋಹನ ರೆಡ್ಡಿ ಅವರ ಕಡೆಗೆ ವಾಲಿತು. ಹೀಗಾಗಿ ಜಗನ್ ಮತ್ತು ನಾಯ್ಡು ನಡುವೆ ರಾಜಕೀಯ ದ್ವೇಷ ಮತ್ತಷ್ಟು ಹೆಚ್ಚತೊಡಗಿತು.
ನಾಯ್ಡು ಅಧಿಕಾರದಲ್ಲಿದ್ದಾಗ ಜಗನ್ ಮೋಹನ್ ರೆಡ್ಡಿ ವಿರುದ್ಧ ಹಲವಾರು ಕೇಸುಗಳನ್ನು ಜಡಿದು ಇನ್ನಿಲ್ಲದಂತೆ ಕಾಡಿದರು. ರೆಡ್ಡಿ ಪ್ರತಿಪಕ್ಷದಲ್ಲಿದ್ದುಕೊಂಡು ನಾಯ್ಡು ಸರ್ಕಾರದ ವಿರುದ್ಧ ಹಲವಾರು ಪ್ರತಿಭಟನಾ ರ್ಯಾಲಿಗಳನ್ನು ನಡೆಸಿದರು. ಈಗ ಚಕ್ರ ತಿರುಗಿದೆ.
ಜಗನ್ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ. ಚಂದ್ರಬಾಬು ನಾಯ್ಡು ಪ್ರತಿಪಕ್ಷದಲ್ಲಿದ್ದಾರೆ. ದ್ವೇಷ ಸಾಧನೆಯಲ್ಲಿ ಜಗನ್ ರೆಡ್ಡಿ ಕೈ ಮೇಲಾಗಿದೆ.
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಚಂದ್ರಬಾಬು ನಾಯ್ಡು ಸರ್ಕಾರ ಪ್ರಸ್ತಾಪಿಸಿದ್ದ ರಾಜ್ಯದ ರಾಜಧಾನಿ ಅಮರಾವತಿ ಯೋಜನೆ ಮೇಲೆ ರೆಡ್ಡಿ ಕಣ್ಣು ಹಾಕಿದರು. ಪ್ರತಿಪಕ್ಷದಲ್ಲಿದ್ದಾಗಲೇ ಈ ಅಮರಾವತಿ ಯೋಜನೆಯಲ್ಲಿ ಸಾಕಷ್ಟು ಅಕ್ರಮವಾಗಿದೆ. ಬೇಕಾಬಿಟ್ಟಿಯಾಗಿ ಜನರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೋಟ್ಯಂತರ ರೂಪಾಯಿಯ ಅವ್ಯವಹಾರ ನಡೆದಿದೆ ಎಂದು ರೆಡ್ಡಿ ಆರೋಪಿಸಿದ್ದರು.
ಈ ಅಮರಾವತಿ ನಗರ ನಿರ್ಮಾಣಕ್ಕೆಂದು ನಾಯ್ಡು ಸರ್ಕಾರ 34000 ಎಕರೆ ಭೂಮಿಯನ್ನು ಜನರಿಂದ ವಶಪಡಿಸಿಕೊಂಡಿತ್ತು. ಅಲ್ಲದೇ, ಸುಮಾರು 28 ಕ್ಕೂ ಅಧಿಕ ಗ್ರಾಮಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಿ ರಾಜಧಾನಿ ನಗರದ ನೀಲನಕ್ಷೆಯನ್ನೂ ಸಿದ್ಧಪಡಿಸಿ ಕಾಮಗಾರಿಗೆ ಚಾಲನೆಯನ್ನೂ ನೀಡಿತ್ತು.
ಆದರೆ, ಜಗನ್ ಮೋಹನ್ ರೆಡ್ಡಿಯವರು ಅಧಿಕಾರಕ್ಕೆ ಬಂದ ತಕ್ಷಣ ಅಮರಾವತಿ ಕಾಮಗಾರಿ ಸ್ಥಗಿತಗೊಂಡಿದೆ. ಇಲ್ಲಿ ಅಕ್ರಮವಾಗಿದೆ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದ ಜಗನ್, ಚುನಾವಣೆಗೂ ಮುನ್ನವೇ ಪ್ರಸ್ತಾಪ ಮಾಡಿದ್ದಂತೆ ರಾಜ್ಯಕ್ಕೆ ಮೂರು ರಾಜಧಾನಿ ನಿರ್ಮಾಣದ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ.
ಸಂಪುಟದಲ್ಲಿ ನಿರ್ಣಯ ತೆಗೆದುಕೊಂಡು ವಿಧಾನಸಭೆಯಲ್ಲೂ ಈ ಪ್ರಸ್ತಾವನೆಗೆ ಮಂಜೂರಾತಿಯನ್ನೂ ಪಡೆದುಕೊಂಡಿದ್ದಾರೆ ಜಗನ್ ಮೋಹನ್ ರೆಡ್ಡಿ. ಪ್ರಸ್ತಾವನೆಯಂತೆ ಅಮರಾವತಿ ಆಂಧ್ರಪ್ರದೇಶದ ಶಾಸಕಾಂಗ ರಾಜಧಾನಿ, ವಿಶಾಖಪಟ್ಟಣ ಕಾರ್ಯಾಂಗ ರಾಜಧಾನಿ ಹಾಗೂ ಕರ್ನೂಲ್ ಅನ್ನು ನ್ಯಾಯಾಂಗ ರಾಜಧಾನಿಯಾಗಲಿದೆ.
ಆಂಧ್ರಪ್ರದೇಶ ವಿಭಜನೆಯಾದ ಸಂದರ್ಭದಲ್ಲಿ ರಾಜ್ಯದ ಪುನರಚನೆ ಕುರಿತು ಅಧ್ಯಯನ ನಡೆಸಿ ವರದಿ ನೀಡುವಂತೆ ನಾಯ್ಡು ಮುಖ್ಯಮಂತ್ರಿಯಾಗಿದ್ದ ವೇಳೆ ಕೆ.ಎಸ್.ಶಿವರಾಮಕೃಷ್ಣನ್ ಅವರ ಅಧ್ಯಕ್ಷತೆಯ ಸಮಿತಿಯನ್ನು ರಚಿಸಲಾಗಿತ್ತು. ಹಲವು ಕೋನಗಳಲ್ಲಿ ಅಧ್ಯಯನ ನಡೆಸಿದ್ದ ಸಮಿತಿಯು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ, ನಾಯ್ಡು ಸರ್ಕಾರ ವರದಿಯನ್ನು ಪರಿಗಣಿಸದೇ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಂಡು ಅದಕ್ಕೆ ಬೇಕಾದ ಚಾಲನೆಯನ್ನೂ ನೀಡಿತ್ತು.
ಶಿವರಾಮಕೃಷ್ಣನ್ ವರದಿ ಸೇರಿದಂತೆ ವಿವಿಧ ಸಮಿತಿಗಳು ಅಧಿಕಾರ ವಿಕೇಂದ್ರೀಕರಣಕ್ಕೆ ಸಂಬಂಧಿಸಿದಂತೆ ನೀಡಿರುವ ವರದಿಗಳನ್ನು ಪರಿಶೀಲಿಸಿ ಮೂರು ರಾಜಧಾನಿಗಳನ್ನು ಮಾಡಲು ಜಗನ್ ಮೋಹನ್ ರೆಡ್ಡಿ ಸರ್ಕಾರ ನಿರ್ಧರಿಸಿದೆ.
ಆದರೆ, ಅಮರಾವತಿ ಭಾಗದ ಜನರನ್ನು ಸರ್ಕಾರದ ಈ ನಿರ್ಧಾರ ಕೆರಳಿಸಿದೆ. ಪೂರ್ಣಪ್ರಮಾಣದಲ್ಲಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಿದರೆ ಇಲ್ಲಿ ಸರ್ವಾಂಗೀಣ ಅಭಿವೃದ್ಧಿಯಾಗುತ್ತದೆ. ಇದರ ಜತೆಗೆ ತಮ್ಮ ಆರ್ಥಿಕ ಮಟ್ಟ ಸುಧಾರಣೆಯಾಗಿ ಜೀವನ ಮಟ್ಟ ಉತ್ತಮವಾಗುತ್ತದೆ. ಆದರೆ, ಜಗನ್ ಸರ್ಕಾರ ಟಿಡಿಪಿ ಮೇಲಿನ ದ್ವೇಷದಿಂದಾಗಿ ರಾಜಧಾನಿ ಯೋಜನೆಗೆ ಅಡ್ಡಗಾಲು ಹಾಕುತ್ತಿದೆ ಎಂಬ ಆರೋಪಗಳು ಈ ಭಾಗದ ಜನರಿಂದ ಬರುತ್ತಿವೆ.
ಇನ್ನು ಚಂದ್ರಬಾಬು ನಾಯ್ಡು ಅವರು ಉದ್ದೇಶಪೂರ್ವಕವಾಗಿಯೇ ಜಗನ್ ಸರ್ಕಾರ ಅಮರಾವತಿ ರಾಜಧಾನಿ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಇದಕ್ಕೆ ಪರ್ಯಾಯವಾಗಿ ಮತ್ತೆರಡು ರಾಜಧಾನಿಗಳನ್ನಾಗಿ ಮಾಡಲು ಹೊರಟಿದ್ದಾರೆ.
ಈಗಾಗಲೇ ಸರ್ಕಾರದ ವತಿಯಿಂದ ಅಮರಾವತಿ ಯೋಜನೆಗೆ 50,000 ಕೋಟಿ ರೂಪಾಯಿ ಹಣವನ್ನು ನೀಡಲಾಗಿದೆ. ಸಾವಿರಾರು ಕುಟುಂಬಗಳು 34000 ಎಕರೆ ಭೂಮಿಯನ್ನು ಬಿಟ್ಟುಕೊಟ್ಟಿದ್ದಾರೆ. ಅವರು ಅಭಿವೃದ್ಧಿಯ ಕನಸನ್ನು ಕಂಡಿದ್ದಾರೆ. ಆದರೆ, ಸರ್ಕಾರ ದುರುದ್ದೇಶದಿಂದ ಯೋಜನೆಯನ್ನು ಮೊಟಕುಗೊಳಿಸಲು ಮುಂದಾಗಿರುವುದು ಅಕ್ಷಮ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಜಗನ್ ಮೋಹನ್ ರೆಡ್ಡಿ ಸರ್ಕಾರ ರಾಜಧಾನಿಯನ್ನು ಅಮರಾವತಿಯಿಂದ ವಿಶಾಖಪಟ್ಟಣಂಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದೆ. ಇದರಿಂದ ಅಮರಾವತಿ ಭಾಗದ ಜನರಲ್ಲಿ ಆತಂಕ ಮೂಡಿದೆ. ಏಕೆಂದರೆ, ಯೋಜನೆಯನ್ನೂ ಕೈಬಿಟ್ಟು ತಮ್ಮಿಂದ ಪಡೆದಿರುವ ಭೂಮಿಯನ್ನು ತಮಗೆ ವಾಪಸ್ ನೀಡದಿದ್ದರೆ ಭವಿಷ್ಯದ ಜೀವನ ದುಸ್ಥಿತಿಗೆ ತಲುಪುತ್ತದೆ ಎಂಬ ಆತಂಕ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ 35 ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಪಕ್ಷ ಟಿಡಿಪಿ ಅವರಿಗೆ ಬೆಂಬಲವಾಗಿ ನಿಂತಿದೆ. ಆದರೆ, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ ಮಾತ್ರ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಮುಂದಿನ ದಿನಗಳಲ್ಲಿ ಈ ಮೂರು ರಾಜಧಾನಿಗಳ ವಿಚಾರ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.