ಕಳೆದ ತಿಂಗಳು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಕಣದಲ್ಲಿ ಇದ್ದೂ ಇಲ್ಲದಂತಿದ್ದ ಅಥವಾ ಮೋದಿ-ಶಾ ಜೋಡಿಯ ಅವಕೃಪೆಗೆ ಒಳಗಾಗಿ ಬದಿಗೆ ಸರಿಸಲ್ಪಟ್ಟಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಮಹಾರಾಷ್ಟ್ರದಲ್ಲಿ ಧುತ್ ಎಂದು ಎದ್ದು ನಿಂತಿದೆ. ಮೋದಿ-ಶಾ ಗಿಂತಲೂ ಮೊದಲೇ ಕೇಂದ್ರ ಸರ್ಕಾರ ಹಾಗೂ ಪಕ್ಷದಲ್ಲಿ ಮಹತ್ವದ ಸ್ಥಾನಗಳನ್ನು ನಿಭಾಯಿಸಿದ್ದ ಗಡ್ಕರಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ನಿಷ್ಠಾವಂತ. ಇದರ ಜೊತೆಗೆ ಪಕ್ಷಾತೀತವಾಗಿ ಎಲ್ಲಾ ನಾಯಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿರುವ ಗಡ್ಕರಿ ಅವರನ್ನು ಕಾಂಗ್ರೆಸ್ ನಾಯಕ ಹಾಗೂ ಮೋದಿ-ಶಾ ಜೋಡಿಯ ನಿದ್ದೆಗೆಡಿಸುವ ಅಹ್ಮದ್ ಪಟೇಲ್ ಅವರು ನಾಗ್ಪುರದಲ್ಲಿ ಭೇಟಿ ಮಾಡಿರುವುದು ರಾಷ್ಟ್ರ ರಾಜಕಾರಣದಲ್ಲಿ ವಿಶಿಷ್ಟ ಹಾಗೂ ಗಮನಾರ್ಹ ವಿದ್ಯಮಾನ.
ಮುಖ್ಯಮಂತ್ರಿ ಪದವಿಯೂ ಸೇರಿದಂತೆ ಪ್ರಮುಖ ಖಾತೆಗಳನ್ನು ಸಮಾನವಾಗಿ ಹಂಚಿಕೊಳ್ಳಬೇಕು ಎಂಬ ಒಪ್ಪಂದಕ್ಕೆ ತಕ್ಕಂತೆ ನಡೆಯುವಂತೆ ಆಗ್ರಹಿಸುತ್ತಿರುವ ಎನ್ ಡಿಎ ಮೈತ್ರಿಕೂಟದ ಶಿವಸೇನೆಗೆ ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಎಂದು ಒಪ್ಪಲು ಆಗುತ್ತಿಲ್ಲ. ಶಿವಸೇನೆಗೆ ಒಪ್ಪಿತವಾಗಬಹುದಾದ ನಿತಿನ್ ಗಡ್ಕರಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಬೇಕು ಎಂಬುದು ಆರ್ ಎಸ್ ಎಸ್ ನ ಎರಡನೇ ಕಾರ್ಯಸೂಚಿ ಎನ್ನಲಾಗುತ್ತಿದೆ. ಇದರಾಚೆಗೂ ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯು ಇಂಥ ಕ್ಲಿಷ್ಟ ಸಂದರ್ಭದಲ್ಲಿ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗಡ್ಕರಿಯನ್ನು ಅಣಿಯುವ ಉದ್ದೇಶದಿಂದಲೇ ಫಡ್ನವಿಸ್ ಅವರನ್ನು ಬೆಳೆಸುವ ಕೆಲಸಕ್ಕೆ ಮೋದಿ-ಶಾ ಜೋಡಿ ಕೈಹಾಕಿತ್ತು.
ಗಡ್ಕರಿ ಸಮಾನರ ಪೈಕಿ ಬಹುತೇಕರು ನಿಧನರಾಗಿದ್ದಾರೆ. ರಾಜನಾಥ್ ಸಿಂಗ್ ತಮಗೆ ಅಪಾಯಕಾರಿಯಲ್ಲ ಎಂಬುದು ಮೋದಿ-ಶಾ ಜೋಡಿಗೆ ಚೆನ್ನಾಗಿ ಗೊತ್ತಿದೆ. ಇರುವ ಪೈಕಿ ಗಡ್ಕರಿ ಮಾತ್ರ ಪ್ರಬಲ ಪೈಪೋಟಿ ನೀಡಬಹುದು ಎಂಬುದು ಮೋದಿ-ಶಾ ಜೋಡಿಯ ಗ್ರಹಿಕೆ. ಸರ್ಕಾರದಲ್ಲಿ ಎರಡನೇ ಸ್ಥಾನದಲ್ಲಿರುವ ಅಮಿತ್ ಶಾ ಅವರು ಪ್ರಧಾನ ಮಂತ್ರಿಯಾಗುವ ಮಹತ್ವಾಕಾಂಕ್ಷೆ ಉಳ್ಳ ವ್ಯಕ್ತಿ. ಇದಕ್ಕೆ ನಿಜವಾದ ತೊಡರುಗಾಲು ಗಡ್ಕರಿ ಎಂಬುದು ಗೊತ್ತಿದ್ದೇ ಅವರನ್ನು ಬದಿಗೆ ಸರಿಸಲಾಗಿದೆ ಎನ್ನಲಾಗುತ್ತಿದೆ.
ಮತ್ತೊಂದು ವಿಶ್ಲೇಷಣೆಯ ಪ್ರಕಾರ ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದ್ದು, ಅತಂತ್ರ ಫಲಿತಾಂಶ ಹೊರಬೀಳಲಿದೆ, ಅಂತಹ ಸನ್ನಿವೇಶದಲ್ಲಿ ಗಡ್ಕರಿ ಸಂಭಾವ್ಯ ಪ್ರಧಾನಿಯಾಗಬಹುದು ಎನ್ನುವ ಚರ್ಚೆಗಳು ವ್ಯಾಪಕವಾಗಿದ್ದವು. ಇದೂ ಸಹ ಮೋದಿ-ಶಾ ಜೋಡಿಗೆ ಅಪಥ್ಯವಾಗಿತ್ತು. ಪಕ್ಷ ಹಾಗೂ ಸರ್ಕಾರದಲ್ಲಿ ತಮ್ಮಿಬ್ಬರ ಹೊರತಾಗಿ ಯಾರೂ ಯಜಮಾನಿಕೆಗೆ ಬರಬಾರದು ಎಂಬುದನ್ನು ಕಾಪಿಟ್ಟುಕೊಳ್ಳಲು ಮೋದಿ-ಶಾ ಜೋಡಿ ನಡೆಸುತ್ತಿರುವ ತಂತ್ರ-ಕುತಂತ್ರಗಳು ಒಂದೆರಡಲ್ಲ. ಈ ಇಬ್ಬರೂ ಮಾತೃಸಂಸ್ಥೆ ಆರ್ ಎಸ್ ಎಸ್ ಮೀರಿ ಬೆಳೆದಿದ್ದಾರೆ ಎಂಬ ಚರ್ಚೆಯೂ ಸಂಘದ ವಲಯದಲ್ಲಿದೆ. ಈ ಇಬ್ಬರನ್ನೂ ಹತೋಟಿಗೆ ತರುವ ನಿಟ್ಟಿನಲ್ಲಿ ಗಡ್ಕರಿ-ಅಹ್ಮದ್ ಪಟೇಲ್ ಭೇಟಿ ಮಹತ್ವ ಪಡೆದಿದೆ.
ಅಹ್ಮದ್ ಪಟೇಲ್ ಮೇಲೆ ಮೋದಿ-ಶಾ ಜೋಡಿಗೆ ಅಪಾರ ದ್ವೇಷವಿದೆ. ಇದಕ್ಕಾಗಿಯೇ ಅವರನ್ನು 2017ರ ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಸೋಲಿಸಲು ಈ ಜೋಡಿ ಶತಪ್ರಯತ್ನ ನಡೆಸಿತ್ತು. ಆದರೆ, ಅದ್ಭುತ ತಂತ್ರಗಾರಿಕೆ ರೂಪಿಸಿದ ಕಾಂಗ್ರೆಸ್, ಮೋದಿ-ಶಾ ಜೋಡಿಯನ್ನು ಅವರದೇ ನೆಲದಲ್ಲಿ ಮಣ್ಣು ಮುಕ್ಕಿಸಿತ್ತು. ಮೋದಿ-ಶಾ ಜೋಡಿ ಅಹ್ಮದ್ ಪಟೇಲ್ ಮೇಲೆ ದ್ವೇಷ ಕಾರಲು ಮಹತ್ವವಾದ ಕಾರಣವಿದೆ. ಮೋದಿ ಆಡಳಿತದಲ್ಲಿ 2002ರಲ್ಲಿ ನಡೆದಿದ್ದ ಗುಜರಾತ್ ಹತ್ಯಾಕಾಂಡದ ಕರಾಳಮುಖ ಅನಾವರಣ ಹಾಗೂ ಅಮಿತ್ ಶಾ ಜೈಲಿಗೆ ಹೋಗುವುದರಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಸದೆಬಡಿಯುವುದು ಅಮಿತ್ ಶಾ ಪ್ರತಿಕಾರದ ತಂತ್ರ. ಆದರೆ, ಕಾಂಗ್ರೆಸ್ ಶಾಸಕರನ್ನು ಖರೀದಿಸಿ ಚುನಾವಣೆ ಫಲಿತಾಂಶ ಉಲ್ಟಾ ಮಾಡಲು ಯತ್ನಿಸಿದ್ದ ಅಮಿತ್ ಶಾಗೆ ಎದುರಾಗಿದ್ದು ಮಾಜಿ ಸಚಿವ ಕಾಂಗ್ರೆಸ್ ನ ಡಿ ಕೆ ಶಿವಕುಮಾರ್.
ವಾಸ್ತವದಲ್ಲಿ ಅಹ್ಮದ್ ಪಟೇಲ್ ಅವರನ್ನು ಸೆರೆ ಹಿಡಿಯುವ ಉದ್ದೇಶದಿಂದಲೇ ಡಿ ಕೆ ಶಿವಕುಮಾರ್ ಅವರನ್ನು ಬಂಧಿಸಿ ಸೆರೆಯಲ್ಲಿ ಇಡಲಾಗಿತ್ತು ಎನ್ನಲಾಗುತ್ತಿದೆ. ಆದರೆ, ಅಂಥ ಯಾವುದೇ ಆರೋಪವನ್ನು ಶಿವಕುಮಾರ್ ಅವರು ಅಹ್ಮದ್ ಪಟೇಲ್ ವಿರುದ್ಧ ಮಾಡಿಲ್ಲ. ಈ ರಾಜಕಾರಣದ ಒಳಸುಳಿಗಳನ್ನು ಅರಿತಿರುವ ಅಹ್ಮದ್ ಪಟೇಲ್ ಅವರು ನಿತಿನ್ ಗಡ್ಕರಿಯವರನ್ನು ಭೇಟಿ ಮಾಡಿರುವುದನ್ನು ಸುಲಭಕ್ಕೆ ತಳ್ಳಿಹಾಕಲಾಗದು. ವ್ಯಕ್ತಿ ಪೂಜೆಯನ್ನು ವಿರೋಧಿಸುವ ಆರ್ ಎಸ್ ಎಸ್ ಗುಪ್ತ ಕಾರ್ಯಸೂಚಿ ಅಹ್ಮದ್ ಪಟೇಲ್-ಗಡ್ಕರಿ ಭೇಟಿಯ ಹಿಂದೆ ಕೆಲಸ ಮಾಡಿರಬಹುದೇ? ಗಡ್ಕರಿ-ಅಹ್ಮದ್ ಪಟೇಲ್ ಭೇಟಿಯ ರಾಜಕೀಯ ಸಂದೇಶವನ್ನು ದೇಶದ ಕುಖ್ಯಾತ ಜೋಡಿಯಾದ ಮೋದಿ-ಅಮಿತ್ ಶಾ ಹೇಗೆ ಸ್ವೀಕರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.