ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಎನ್‌ಆರ್‌ಸಿ ಗಾಗಿ ಯಾವುದೇ ಜೈಲುಗಳನ್ನು ನಿರ್ಮಿಸಿಲ್ಲ ಎಂದು ಹೇಳಿದ ಬೆನ್ನಲ್ಲೇ, ಅಸ್ಸಾಂನ ಗೋಲ್‌ಪಾರ ಸೆರೆವಾಸದಲ್ಲಿದ್ದ ನರೇಶ್ ಕೋಚ್ ಎನ್ನುವ ಬಂಧಿತ ವ್ಯಕ್ತಿ ಗುವಾಹಟಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಮೃತಪಟ್ಟ ಕುರಿತು ವರದಿಯಾಗಿದೆ.
ಜನವರಿ 5 ರಂದು ನರೇಶ್ ಕೋಚ್ ಮೃತಪಟ್ಟರು. 2014ರ ನಂತರ ಅಸ್ಸಾಂನ ಡಿಟೆನ್ಶನ್ ಸೆಂಟರ್‌ನಲ್ಲಿ ಸಾವನ್ನಪ್ಪಿದ 29ನೇ ವ್ಯಕ್ತಿ ಇವರು. ಅಸ್ಸಾಂ ಜಿಲ್ಲಾ ಕಾರಾಗೃಹದಲ್ಲಿ ಈಗಾಗಲೇ ಆರು ಡಿಟೆನ್ಶನ್ ಸೆಂಟರ್‌ಗಳಿದ್ದು, ಗೋಲ್‌ಪಾರಾದ ಮಾಟಿಯಾ ಪ್ರದೇಶದಲ್ಲಿ ಹೊಸ ಜೈಲು ನಿರ್ಮಿಸಲು ಕೇಂದ್ರ ಸರ್ಕಾರವು ಹಣ ಬಿಡುಗಡೆ ಮಾಡಿದೆ.
ಮೃತ ವ್ಯಕ್ತಿಯ ಮನೆಯು ಅಸ್ಸಾಂನ ಸೂರ್ಯ ಪಹಾರ್ ಪುರಾತತ್ವ ಇಲಾಖೆಯ ಪಕ್ಕದಲ್ಲಿದೆ. ನರೇಶ್ ಅವರು ಭಾರತೀಯ ಮೂಲದ ಕೋಚ್ ಬುಡಕಟ್ಟು ಜನಾಂಗಕ್ಕೆ ಸೇರಿದ ಮನೆಯಲ್ಲಿ ಹುಟ್ಟಿದವರು. ಇವರು ಬಾಂಗ್ಲಾದೇಶದ ಮುಸ್ಲಿಂರಲ್ಲ ಅಥವಾ ಬಂಗಾಳಿ ಹಿಂದು ಅಲ್ಲ. ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದ ಯಾವುದೇ ಪ್ರಮುಖ ಸಮುದಾಯಗಳಿಗೆ ಸೇರಿದವರಲ್ಲ. ಗೋಲ್‌ಪಾರ ಜೈಲಿನಲ್ಲಿ ಕಳೆದ ಎರಡು ವರ್ಷಗಳಿಂದ ಕಾರಣವಿಲ್ಲದೆ ಕೊಳೆಯುತ್ತದ್ದ ನರೇಶ್ ಅವರಲ್ಲಿ ಉದ್ವಿಗ್ನತೆ ಹೆಚ್ಚಾಗಿತ್ತು. ಖಿನ್ನತೆಗೆ ಒಳಗಾಗಿದ್ದ ಅವರು ಪಾರ್ಶ್ವವಾಯುಗೆ ತುತ್ತಾಗಿ ಕೊನೆಗೆ ಗುವಾಹಟಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ನರೇಶ್ ಹಾಗೂ ಆತನ ಎರಡನೇ ಪತ್ನಿ ಜಿನು, ತಮ್ಮ ಮನೆಯಿಂದ ಕೆಲವು ಕಿಲೋಮೀಟರ್ ದೂರವಿದ್ದ ಮೀನಿನ ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಕೆಲಸದ ನಂತರ ಸಂಜೆಯ ವೇಳೆಗೆ ಮದ್ಯದ ಅಂಗಡಿಗೆ ತೆರಳಿದ್ದ ನರೇಶ್ ಅನ್ನು ಅಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದರು. ನಂತರ ತಿಳಿದದ್ದು ಏನೆಂದರೆ, ಒಂದು ನ್ಯಾಯ ಮಂಡಳಿಯು ಆತನನ್ನು ʼವಿದೇಶಿʼ ಪ್ರಜೆ ಎಂದು ಘೋಷಿಸಿತ್ತು, ಎಂದು ನರೇಶ್ ಪತ್ನಿ ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಇಂತಿಷ್ಟು ಜನರನ್ನು ವಿದೇಶಿ ಎಂದು ಘೋಷಿಸಲು ʼವಿದೇಶಿ ನ್ಯಾಯಮಂಡಳಿʼಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ತಮ್ಮ ಒಪ್ಪಂದವನ್ನು ಉಳಿಸಿಕೊಳ್ಳಲು ಈ ರೀತಿಯ ಒತ್ತಡಕ್ಕೆ ನ್ಯಾಯ ಮಂಡಳಿಗಳು ಮಣಿಯುತ್ತಿವೆ ಎಂಬ ಆತಂಕ ಅಲ್ಲಿನ ಜನರನ್ನು ಕಾಡುತ್ತಿದೆ. ನರೇಶ್ ಕೋಚ್ ಸ್ಥಿತಿಗೆ ಈ ಒತ್ತಡವೇ ಕಾರಣ ಎಂದು ಹೇಳಲಾಗುತ್ತಿದೆ. ಯಾವುದೇ ವಿದೇಶಿ ವ್ಯಕ್ತಿಯೊಂದಿಗೆ ತಲತಲಾಂತರಗಳಿಂದ ಯಾವುದೇ ಸಂಬಂಧವಿಲ್ಲದಿದ್ದರೂ, ಈ ರೀತಿಯ ಶೀಕ್ಷೆಯನ್ನು ನರೇಶ್ ಕೋಚ್ ಅನುಭವಿಸಬೇಕಾಯಿತು.
ನರೇಶ್ ಪತ್ನಿ ಹೇಳುವ ಪ್ರಕಾರ, ಆಕೆಗೆ ಹಾಗೂ ನರೇಶ್‌ನ ಮೊದಲ ಪತ್ನಿಯ ಪುತ್ರನಿಗೆ ನರೇಶ್ ಬಂಧನದ ವಿಚಾರ ಕೆಲ ದಿನಗಳವರೆಗೆ ತಿಳಿಯಲೇ ಇಲ್ಲ. ಆತಂಕದಿಂದ ದಿನ ಕಳೆಯುತ್ತಿದ್ದ ಅವರಿಗೆ, ಎರಡು ಮೂರು ದಿನಗಳ ತರುವಾಯ ಈ ವಿಷಯ ತಿಳಿಯಿತು. ಅದೂ ಕೂಡ ಸ್ಥಳೀಯ ಗ್ರಾಮಸ್ಥರು ಹೇಳಿದ್ದರಿಂದ ಬಂಧನದ ವಿಷಯ ಕುಟುಂಬಸ್ಥರಿಗೆ ತಿಳಿಯಿತು.
ನರೇಶ್ ಕುಟುಂಬದ ಆರ್ಥಿಕ ಪರಿಸ್ಥಿತಿ ಎಷ್ಟು ದುಸ್ಥರವಾಗಿದೆಯೆಂದರೆ, ತಮ್ಮ ಪತಿಯ ಮುಖ ನೋಡಲು ಅಣತಿ ದೂರದಲ್ಲಿರುವ ಜೈಲಿಗೆ ಭೇಟಿ ನೀಡಲು ಬಸ್ಸಿನ ಖರ್ಚಿಗಾಗಿ ನೂರು ರೂಪಾಯಿ ಹೊಂದಿಸಲು ಜಿನು ಇಂದ ಸಾಧ್ಯವಾಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ ನರೇಶ್ ಅವರ ಬಂಧನದ ಕೆಲವೇ ದಿನಗಳ ನಂತರ ಜಿನು ಕೆಲಸ ಕಳೆದುಕೊಂಡರು. ನಂತರ ನರೇಶ್ ಮಗ ಬಾಬುಲಾಲ್ ಒಬ್ಬರೇ ದಿನಗೂಲಿ ಮಾಡಿ ಕುಟುಂಬವನ್ನು ಸಾಕುವ ಹೊಣೆ ಹೊರಬೇಕಾಯಿತು.
ಎರಡು ವರ್ಷಗಳ ನಂತರ 2019 ಡಿಸೆಂಬರ್‌ನಲ್ಲಿ, ಅಚಾನಕ್ ಆಗಿ ನರೇಶ್ ಮನೆಗೆ ಭೇಟಿ ನೀಡಿ ಪೊಲೀಸರು, ಜಿನು ಅವರನ್ನು ತಕ್ಷಣವೇ ಗೋಲ್‌ಪಾರ ಆಸ್ಪತ್ರೆಗೆ ಭೇಟಿನೀಡುವಂತೆ ತಿಳಿಸಿದರು. ಮನೆಯಲ್ಲಿ ಖರ್ಚಿಗೆ ಬಿಡಿಗಾಸೂ ಇಲ್ಲದ ಸಮಯದಲ್ಲಿ ಪೊಲೀಸರೇ ಅವಳಿಗೆ 100ರೂ ಕೊಟ್ಟು ಜೈಲಿಗೆ ಭೇಟಿ ನೀಡುವಂತೆ ಕಳಿಸಿದರು. ಆದರೆ, ಅವಳು ಜೈಲಿಗೆ ತಲುಪಿ ತನ್ನ ಗಂಡನನ್ನು ನೋಡುವ ಮೊದಲೇ, ನರೇಶ್ ಅನ್ನು ಮನೆಯಿಂದ 150 ಕಿಲೋಮೀಟರ್ ದೂರ ಇರುವ ಗುವಾಹಟಿ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು.
ಈ ಬಾರಿ ಪೊಲೀಸರೇ ಜಿನುಗೆ 1000ರೂ ನೀಡಿ ಗುವಾಹಟಿಗೆ ಕಳಿಸಿದರು. ಆದರೆ, ವಿದ್ಯಾಭ್ಯಾಸವಿಲ್ಲದ, ಸಾಮಾನ್ಯ ಅಕ್ಷರ ಜ್ಞಾನವಿಲ್ಲದ ಅಸ್ಸಾಂ-ಮೆಘಾಲಯ ಗಡಿಯ ಖರದಂಗ ಗ್ರಾಮದ ರ್ವ ಸಾಮಾನ್ಯ ಮಹಿಳೆ ತನ್ನ ಜೀವನದಲ್ಲಿ ಎಂದೂ ಗುವಾಹಟಿಯನ್ನು ನೋಡಿರಲೇ ಇಲ್ಲ. ಅಸ್ಸಾಮಿ ಭಾಷೆಯನ್ನು ಸರಿಯಾಗಿ ಮಾತನಾಡಲೂ ಬರುತ್ತಿರಲಿಲ್ಲ. “ನನಗೆ ನನ್ನ ಪತಿಯೊಂದಿಗೆ ಮಾತನಾಡಬೇಕೆಂಬ ಹಂಬಲವಿತ್ತು. ಕಷ್ಟಪಟ್ಟು ಅವರನ್ನು ಹುಡುಕಿದೆ. ಆದರೆ ಅವರಿಂದ ಮಾತನಾಡಲು ಸಾಧ್ಯವೇ ಆಗಲಿಲ್ಲ,” ಎಂದು ಜಿನು ಕಣ್ಣೀರಿಟ್ಟರು. ಪಾರ್ಶ್ವವಾಯು ಎಷ್ಟು ತೀವ್ರವಾಗಿತ್ತೆಂದರೆ ನರೇಶ್ ಅವರಿಗೆ ಮಾತನಾಡಲೂ ಸಾಧ್ಯವಾಗುತ್ತಿರಲಿಲ್ಲ.
ಹದಿಮೂರು ದಿನಗಳ ಕಾಲ ನರೇಶ್ ಆಸ್ಪತ್ರೆಯಲ್ಲಿದ್ದರು. ಈ ಸಮಯದಲ್ಲಿ ಅವರ ಪಕ್ಕದಲ್ಲಿ ಜಿನು ಅವರಿಗೂ ಇರಲು ಅವಕಾಶ ನೀಡಲಾಗಿತ್ತು. ಇವರಿಬ್ಬರನ್ನೂ, ಪೊಲೀಸರು 24 ಗಂಟೆಗಳ ಕಾಲ ಪಹರೆಯಲ್ಲಿಟ್ಟಿದ್ದರು. ಕೊನೆಗೆ ಜನವರಿ 5ರಂದು ನರೇಶ್ ಚಿಕೆತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದರು. ಅವರ ದೇಹವನ್ನು ಪೊಲೀಸರು, ನರೇಶ್ ಅವರ ಹಳ್ಳಿಗೆ ತಂದರು. ಬದುಕಿರುವಾಗ ವಿದೇಶಿಗನೆಂದು ಬಂಧಿಸಿದ ಪೊಲೀಸರು, ನರೇಶ್ ಸತ್ತ ನಂತರ ಆತ ಹುಟ್ಟಿ ಬೆಳೆದಿದ್ದ ಊರಿಗೇ ಬಂದು ಶವವನ್ನು ಕುಟುಂಬಕ್ಕೆ ಒಪ್ಪಿಸಿದರು. ಎರಡು ವರ್ಷಗಳಿಂದ ದೂರವಿದ್ದ ಕುಟುಂಬ ಮತ್ತೆ ಜೊತೆ ಸೇರಿದ್ದು ನರೇಶ್‌ನ ಸಾವಿನೊಂದಿಗೆ.
ನರೇಶ್ ಸಾವಿನ ನಂತರ ಜಿನು ಬದುಕು ಮತ್ತಷ್ಟು ದುಸ್ತರವಾಯಿತು. ಅಕ್ಕಿ, ಆಲೂಗಡ್ಡೆ ಮತ್ತು ಮೆಣಸಿಗಾಗಿ ಕಾಡಿ ಬೇಡಿ 200ರೂ ಪಡೆದು ಊಟ ಮಾಡುತ್ತಿದ್ದಳು. ಈಗ ಅವಳ ಮುಂದಿರುವ ಅತ್ಯಂತ ದೊಡ್ಡ ಸವಾಲು ಏನೆಂದರೆ, ತನ್ನ ಗಂಡನ ಅಂತಿಮ ಸಂಸ್ಕಾರಕ್ಕೆ ಸಾಲವಾಗಿ ಪಡೆದ 700 ರೂಪಾಯಿಗಳನ್ನು ಹೇಗೆ ಹಿಂತಿರುಗಿಸುವುದೆಂದು.
ದೇಶದಾದ್ಯಂತ ಎನ್‌ಆರ್‌ಸಿಯನ್ನು ಜಾರಿಗೆ ತಂದಲ್ಲಿ ಇನ್ನೆಷ್ಟು ನರೇಶ್‌ನಂತಹ ಬಡವರು ಬಲಿಯಾಗಬಲ್ಲರು?
ಕೃಪೆ: ದಿ ವೈರ್