ಅರುಣಾಚಲ ಪ್ರದೇಶದ ಲೇಖಿ ನಗರದಲ್ಲಿ ಕಾರ್ಖಾನೆಯೊಂದರ ಕುರಿತು ವರದಿ ಮಾಡಿರುವ ಕಾರಣಕ್ಕೆ ಹೊಫ್ ದಾದ ಎಂಬ ಪತ್ರಕರ್ತನ ಮೇಲೆ ಜೂನ್ 29ರಂದು ನಾಲ್ವರ ತಂಡ ಹಲ್ಲೆ ಮಾಡಿ, ಬೆದರಿಕೆ ಒಡ್ಡಿದ ಘಟನೆ ವರದಿಯಾಗಿದೆ. ಪ್ರಕರಣ ಸಂಬಂಧ ಇಟಾನಗರ್ ಪೋಲಿಸರು ಓರ್ವನನ್ನು ಬಂಧಿಸಿದ್ದಾರೆ.
ಲೇಖಿ ಗ್ರಾಮದ ಎಸ್ಎಮ್ಎಸ್ ಸ್ಮೆಲ್ಟರ್ಸ್ ಲಿಮಿಟೆಡ್ ಕಾರ್ಖಾನೆಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಅಧಿಕವಾಗಿದೆ ಎಂದು ಹಲ್ಲೆಗೊಳಗಾದ ಪತ್ರಕರ್ತ Gyoloo ಪತ್ರಿಕೆಗೆ ವರದಿ ಬರೆದಿದ್ದರು. ವರದಿ ಪ್ರಕಟವಾದ ಬೆನ್ನಲ್ಲಿ ಪತ್ರಕರ್ತನ ಮೇಲೆ ನಾಲ್ವರ ತಂಡ ಹಲ್ಲೆ ಮಾಡಿದೆ.
ಅರುಣಾಚಲ ಟೈಮ್ಸ್ ವರದಿ ಪ್ರಕಾರ ಹಲ್ಲೆ ನಡೆಸಿದವರಲ್ಲಿ ಓರ್ವ 2012 ರಲ್ಲಿ ಗುಂಡೇಟು ಪಡೆದ ತೊಂಗಾಮ್ ಪರಿಸ್ಥಿತಿಯೇ ನಿನಗೂ ಎದರಾಗಲಿದೆ ಎಂದು ಬೆದರಿಕೆ ಒಡ್ಡಿ ಕಾರ್ಖಾನೆಯ ವಿರುದ್ಧ ವರದಿ ಮಾಡದಂತೆ ತಾಕೀತು ಮಾಡಿ ಥಳಿಸಲಾಗಿದೆ.
ಈ ಕುರಿತು ನಿರ್ಜುಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೂನ್ 30 ರಂದು ಓರ್ವನನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತನನ್ನು ಕಾರ್ಖಾನೆಯಲ್ಲಿ ಭದ್ರತಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ʼನಂಗರಮ್ ತಾಪುʼ ಎಂದು ಗುರುತಿಸಲಾಗಿದೆ.
ಎಸ್ಪಿ ತುಮ್ಮೆ ಅಮೊ ನೀಡಿರುವ ಮಾಹಿತಿಯಂತೆ, ಕಾರ್ಖಾನೆಗೆ ಅತಿಕ್ರಮ ಪ್ರವೇಶ ನಡೆಸಿರುವುದಾಗಿ ಪತ್ರಕರ್ತನ ಮೇಲೂ ದೂರು ದಾಖಲಾಗಿದೆ. ಆದರೆ ಪತ್ರಕರ್ತನ ವಾದದ ಪ್ರಕಾರ ಕಾರ್ಖಾನೆಯ ಸಮೀಪದ ಕಟ್ಟಡದ ಮೇಲಿನಿಂದ ಕಾರ್ಖಾನೆಯ ವೀಡಿಯೋ ಚಿತ್ರೀಕರಿಸಲಾಗಿದೆ.
ಅರುಣಾಚಲ ಪ್ರೆಸ್ ಕ್ಲಬ್, ಅರುಣಾಚಲ ಪ್ರದೇಶ ಕಾರ್ಯನಿರತ ಪತ್ರಕರ್ತರ ಒಕ್ಕೂಟ, ಮತ್ತು ಅರುಣಾಚಲ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸೇರಿದಂತೆ ಹೋಫ್ ಮೇಲೆ ನಡೆದಿರುವ ದಾಳಿಯನ್ನು ಮಾಧ್ಯಮ ಸಂಘಗಳು ಖಂಡಿಸಿವೆ.
ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ಮತ್ತು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಕೂಡ ದಾದಾ ಹೊಫ್ ಮೇಲಿನ ದಾಳಿಯನ್ನು ಖಂಡಿಸಿದೆ. “ಭಾರತದಲ್ಲಿ ಪತ್ರಕರ್ತರಿಗೆ ಉತ್ತಮ ರಕ್ಷಣೆ ಮತ್ತು ನ್ಯಾಯ ವ್ಯವಸ್ಥೆಯೊಳಗೆ ಹೆಚ್ಚಿನ ಹೊಣೆಗಾರಿಕೆ ಅಗತ್ಯ” ಎಂದು ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಜರ್ನಲಿಸ್ಟ್ಸ್ ಹೇಳಿದೆ. ಪೊಲೀಸರು “ತನಿಖೆಯನ್ನು ಚುರುಕುಗೊಳಿಸಬೇಕು” ಮತ್ತು ಅಪರಾಧಿಗಳ ವಿರುದ್ಧ “ಕಠಿಣ ಕ್ರಮ” ತೆಗೆದುಕೊಳ್ಳಬೇಕು ಎಂದು ಇಂಡಿಯನ್ ಜರ್ನಲಿಸ್ಟ್ಸ್ ಯೂನಿಯನ್ ಆಗ್ರಹಿಸಿದೆ.