ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತಾಗಿದೆ ರಾಜ್ಯದಲ್ಲಿ ಜೆಡಿಎಸ್ ಪರಿಸ್ಥಿತಿ. ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ಜೆಡಿಎಸ್ ಶಾಸಕರಿಗೆ ಮುಂದೇನು ಎಂಬ ಪ್ರಶ್ನೆಗೆ ಉತ್ತರ ಸಿಗದಂತಾಗಿದೆ. ಇದರ ಪರಿಣಾಮ ನಾಲಿಗೆಗೊಂದು ಹೇಳಿಕೆ, ತಲೆಗೊಂದು ಅಭಿಪ್ರಾಯ ಶಾಸಕರಿಂದ (ವಿಧಾನ ಪರಿಷತ್ ಸದಸ್ಯರೂ ಸೇರಿ) ಹೊರಬರುತ್ತಿದ್ದು, ಪಕ್ಷದಲ್ಲಿ ಉಂಟಾಗಿರುವ ಗೊಂದಲ ದಿನಕಳೆದಂತೆ ತೀವ್ರಗೊಳ್ಳುತ್ತಿದೆ.
ಹೌದು, ಜೆಡಿಎಸ್ ಶಾಸಕರಲ್ಲಿ ಅಸಮಾಧಾನ ಹೆಚ್ಚಾಗಲು ಕಾರಣ ಅವರಿಗೆ ಕುಮಾರಸ್ವಾಮಿ ಜತೆಗಿನ ಬಿನ್ನಾಭಿಪ್ರಾಯವಲ್ಲ. ಬದಲಾಗಿ ಅಪ್ಪ-ಮಗನ (ದೇವೇಗೌಡ-ಕುಮಾರಸ್ವಾಮಿ) ನಡುವಿನ ಹೊಂದಾಣಿಕೆ ಸಮಸ್ಯೆ. ಬಿಜೆಪಿ ಸರ್ಕಾರದ ಬಗ್ಗೆ ಮೃದು ಧೋರಣೆ ಹೊಂದಿರುವ ಕುಮಾರಸ್ವಾಮಿ ನಡೆ ಬಗ್ಗೆ ದೇವೇಗೌಡರಿಗೆ ಸಹಮತವಿಲ್ಲ. ಈ ವಿಚಾರದಲ್ಲಿ ಎಚ್. ಡಿ. ರೇವಣ್ಣ ಅವರು ಪರೋಕ್ಷವಾಗಿ ಅಪ್ಪನ ಪರ ನಿಂತಿದ್ದಾರೆ. ಇದರ ಪರಿಣಾಮವೇ ಕುಮಾರಸ್ವಾಮಿ ಈ ಗೊಂದಲದ ಉಸಾಬರಿಯೇ ನನಗೆ ಬೇಡ ಎಂದು ಪುತ್ರ ನಿಖಿಲ್ ಕುಮಾರಸ್ವಾಮಿ ಚಲನಚಿತ್ರದ ಬಗ್ಗೆ ಗಮನಹರಿಸಿದ್ದು, ಲಂಡನ್ ಗೆ ತೆರಳಿದ್ದಾರೆ. ಕುಮಾರಸ್ವಾಮಿ ಅವರ ಈ ಕ್ರಮ ಜೆಡಿಎಸ್ ಶಾಸಕರ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ತಮ್ಮ ದಾರಿ ತಮಗೆ ಎಂಬ ಯೋಚನೆ ಮಾಡಲಾರಂಭಿಸಿದ್ದಾರೆ.
ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇಂದು-ನೆನ್ನೆಯದ್ದಲ್ಲ. 2006ರಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದಾಗಲೇ ಅದು ಬಹಿರಂಗವಾಗಿತ್ತು. 2004ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಧರ್ಮಸಿಂಗ್ ಅವರನ್ನು ಪತ್ರಗಳ ಮೂಲಕವೇ ಆಟವಾಡಿಸುತ್ತಾ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದ ದೇವೇಗೌಡರಿಗೆ ಪುತ್ರ ಕುಮಾರಸ್ವಾಮಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸುವುದು ಬೇಕಿರಲಿಲ್ಲ. ಆದರೆ, ಅಧಿಕಾರ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಕುಮಾರಸ್ವಾಮಿ ತಂದೆಯ ಮಾತು ಮೀರಿ ಬಿಜೆಪಿ ಜತೆ ಕೈಜೋಡಿಸಿ ಮುಖ್ಯಮಂತ್ರಿಯಾದರು. 40 ತಿಂಗಳ ಅಧಿಕಾರಾವಧಿಯಲ್ಲಿ ತಲಾ 20 ತಿಂಗಳು ಮುಖ್ಯಮಂತ್ರಿ ಸ್ಥಾನ ಹಂಚಿಕೆ ಸೂತ್ರದೊಂದಿಗೆ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. 20 ತಿಂಗಳು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸಿದರು. ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲು ಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕು ಎಂದಾಗ ಕುಮಾರಸ್ವಾಮಿ ಅವರಿಗೆ ಪಿತೃಪ್ರೇಮ ಆರಂಭವಾಯಿತು. ಅಧಿಕಾರ ತ್ಯಜಿಸಲು ಇಷ್ಟವಿಲ್ಲದೆ ತಂದೆಯ ಮಾತಿಗೆ ವಿರುದ್ಧವಾಗಿ ನಡೆದುಕೊಂಡೆ ಎಂದು ಹೇಳುತ್ತಾ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ನಿರಾಕರಿಸಿದರು. ಈ ವೇಳೆ ಬೃಹನ್ನಾಟಕವೇ ನಡೆದು ಸಮ್ಮಿಶ್ರ ಸರ್ಕಾರ ಉರುಳಿ ಚುನಾವಣೆ ಬಂದು ಬಿಜೆಪಿ ಅಧಿಕಾರಕ್ಕೇರಿದ್ದು ಈಗ ಇತಿಹಾಸ.
ಬಿಜೆಪಿ ಜತೆ ಸೇರಿ ಸರ್ಕಾರ ಕುಮಾರಸ್ವಾಮಿಗೆ ಇಷ್ಟವಿತ್ತು
ಈ ಸೈದ್ಧಾಂತಿಕ ಭಿನ್ನಾಭಿಪ್ರಾಯ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಉದ್ಭವವಾಗಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದಾಗ ಮತ್ತೆ ಮುನ್ನಲೆಗೆ ಬಂತು. ಸರ್ಕಾರ ರಚಿಸಲು ಬಿಜೆಪಿಗೆ ಜೆಡಿಎಸ್ ಬೆಂಬಲ ಸೂಚಿಸಿ ನಂತರದ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗುವುದು ಕುಮಾರಸ್ವಾಮಿ ಅವರ ಅಪೇಕ್ಷೆಯಾಗಿತ್ತು. ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಮಾತುಕತೆಯೂ ಆಗಿತ್ತು. ಆದರೆ, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕಾಂಗ್ರೆಸ್ ನಾಯಕರು ದೇವೇಗೌಡರನ್ನು ಸಂಪರ್ಕಿಸಿ ಅವರ ಒಪ್ಪಿಗೆ ಪಡೆದರು. ಈ ವೇಳೆ ಕುಮಾರಸ್ವಾಮಿಯವರನ್ನೇ ಮುಖ್ಯಮಂತ್ರಿ ಮಾಡುವ ಪ್ರಸ್ತಾಪವನ್ನು ಕಾಂಗ್ರೆಸ್ ಮುಂದಿಟ್ಟಾಗ ಕುಮಾರಸ್ವಾಮಿ ಕೂಡ ಅಧಿಕಾರದ ಬಯಕೆಯಿಂದ ಅದನ್ನು ಒಪ್ಪಿಕೊಂಡರು. ಈ ಬಾರಿ ಕಾಂಗ್ರೆಸ್ ಪ್ರಸ್ತಾಪವನ್ನು ಒಪ್ಪಿಕೊಂಡಾಗ ಕುಮಾರಸ್ವಾಮಿ ಹಾಕಿದ್ದ ಒಂದೇ ಒಂದು ಷರತ್ತು ಎಂದರೆ ಮೈತ್ರಿ ಸರ್ಕಾರ ಇರುವವರೆಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬುದು. ಅದಕ್ಕೂ ಕಾಂಗ್ರೆಸ್ ಸಮ್ಮತಿಸಿದ ಬಳಿಕ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು.
ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಅಸಮಾಧಾನ ಆರಂಭವಾಗಿತ್ತು. ಐದು ವರ್ಷವೂ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಮುಂದುವರಿಯುವುದು ಕಾಂಗ್ರೆಸ್ ನ ಬಹುತೇಕರಿಗೆ ಇಷ್ಟವಿರಲಿಲ್ಲ. ಆದರೆ, ವರಿಷ್ಠರ ಸೂಚನೆಯಿಂದಾಗಿ ಗತ್ಯಂತರವಿಲ್ಲದೆ ಸುಮ್ಮನಿರಬೇಕಾಯಿತು. ಇದು ಕುಮಾರಸ್ವಾಮಿ ಅವರ ಗಮನಕ್ಕೂ ಬಂದಿದ್ದರಿಂದ ಆಗಲೇ ಅವರು ಮೈತ್ರಿ ಮುರಿದು ಬಿಜೆಪಿ ಜತೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದರು. ಇದರಿಂದಾಗಿ ಕಾಂಗ್ರೆಸ್ ನಾಯಕರು ಅನಿವಾರ್ಯವಾಗಿ ಹೊಂದಿಕೊಂಡು ಹೋಗಬೇಕಾಯಿತು. ಆದರೆ, ಒಲ್ಲದ ಮೈತ್ರಿ ಹೆಚ್ಚು ದಿನ ಬಾಳುವುದಿಲ್ಲ ಎಂಬಂತೆ ಕೆಲವೇ ತಿಂಗಳಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು.
ಮೈತ್ರಿ ಸರ್ಕಾರ ಉರುಳುತ್ತಲೇ ಕುಮಾರಸ್ವಾಮಿ ಮತ್ತೆ ತಮ್ಮ ವರಸೆ ಆರಂಭಿಸಿದರು. ತಾವು ನೇರವಾಗಿ ಪ್ರಸ್ತಾಪಿಸದಿದ್ದರೂ ಜೆಡಿಎಸ್ ನ ಅನೇಕ ಶಾಸಕರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಬಗ್ಗೆ ಒಲವು ವ್ಯಕ್ತಪಡಿಸುವಂತೆ ನೋಡಿಕೊಂಡರು. ಆದರೆ, ಆಗಲೂ ದೇವೇಗೌಡರು ಒಪ್ಪದ ಕಾರಣ ಸುಮ್ಮನಾಗಬೇಕಾಯಿತು. ಈ ಮಧ್ಯೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿತ್ತು ಎನ್ನಲಾದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಬಳಿಕ ಮತ್ತೆ ಕುಮಾರಸ್ವಾಮಿ ಅವರಿಗೆ ಬಿಜೆಪಿ ಸರ್ಕಾರ ಆಪ್ತವಾಗತೊಡಗಿತು. ನೆರೆ ಪರಿಹಾರ ವಿಚಾರದಲ್ಲಿ ಬಿಜೆಪಿ ಸರ್ಕಾರದ ಬಗ್ಗೆ ಕುಮಾರಸ್ವಾಮಿ ಅವರ ಮೃದು ಧೋರಣೆ, ಬಿಜೆಪಿ ಸರ್ಕಾರ ಉರುಳಿಸಲು ಅವಕಾಶ ನೀಡುವುದಿಲ್ಲ ಎಂಬ ಅವರ ಹೇಳಿಕೆಗಳು ಇದರ ಪರಿಣಾಮದಿಂದಲೇ ಬಂದಂತವು.
ಕುಮಾರಸ್ವಾಮಿ ನಿಲುವಿಗೆ ದೇವೇಗೌಡರ ವಿರೋಧ
ಆದರೆ, ದೇವೇಗೌಡರಿಗೆ ಮಾತ್ರ ಕುಮಾರಸ್ವಾಮಿ ಅವರ ನಿಲುವು ಕೊಂಚವೂ ಇಷ್ಟವಿರಲಿಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದರೆ ಮತ್ತೊಮ್ಮೆ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸುವ ಆಸಕ್ತಿಯನ್ನು ಅವರು ಹೊಂದಿದ್ದರು. ಇದು ಕುಮಾರಸ್ವಾಮಿಗೆ ಸಮ್ಮತವಿಲ್ಲ. ಈ ಕಾರಣಕ್ಕಾಗಿಯೇ ಇವರಿಬ್ಬರ ಮಧ್ಯೆ ಹಗ್ಗಜಗ್ಗಾಟ ನಡೆಯುತ್ತಿತ್ತು. ಈ ಗೊಂದಲದಿಂದಾಗಿ ಜೆಡಿಎಸ್ ಶಾಸಕರು ಏನು ಮಾಡಬೇಕು ಎಂಬುದು ತೋಚದೆ ತಮ್ಮ ಅಸಮಾಧಾನವನ್ನು ಹೊರಹಾಕಲಾರಂಭಿಸಿದರು. ದೇವೇಗೌಡರ ವಿರುದ್ಧ ಅಸಮಾಧಾನ ತೋರಿಸಲು ಧೈರ್ಯವಿಲ್ಲದ ಕಾರಣ ಕುಮಾರಸ್ವಾಮಿ ಅದಕ್ಕೆ ಬಲಿಪಶುವಾಗುವಂತಾಯಿತು.
ಈ ಮಧ್ಯೆ ಬಿಜೆಪಿ ಜತೆ ಕೈಜೋಡಿಸುವ ಬಗ್ಗೆ ಶಾಸಕರಲ್ಲಿ ಒತ್ತಡ ಹೆಚ್ಚಾದಾಗ ಕುಮಾರಸ್ವಾಮಿ ಶಾಸಕರನ್ನು ಮಲೇಷಿಯಾಗೆ ಕರೆದೊಯ್ದು ಸಮಾಧಾನ ಮಾಡಲು ನಿರ್ಧರಿಸಿದ್ದರು. ಆದರೆ, ಇದು ಇಷ್ಟವಿಲ್ಲದ ಮಾಜಿ ಸಚಿವ ಡಿ. ಸಿ. ತಮ್ಮಣ್ಣ ಮತ್ತಿತರರು ದೇವೇಗೌಡರ ಮೂಲಕ ಒತ್ತಡ ತಂದು ಪ್ರವಾಸ ರದ್ದಾಗುವಂತೆ ನೋಡಿಕೊಂಡರು. ಇದರಿಂದ ಬೇಸತ್ತೇ ಕುಮಾರಸ್ವಾಮಿ ಅವರು, ನೀವೇನಾದರೂ ಮಾಡಿಕೊಂಡು ಅಂತಿಮ ನಿರ್ಧಾರಕ್ಕೆ ಬನ್ನಿ. ನನ್ನನ್ನು ಈ ಗೊಂದಲಗಳಿಗೆ ಎಳೆತರಬೇಡಿ ಎಂದು ಲಂಡನ್ ಗೆ ಹೊರಟುನಿಂತರು.
ಇಷ್ಟೆಲ್ಲಾ ಆದರೂ ಒಟ್ಟಾರೆ ಪ್ರಕರಣದಲ್ಲಿ ಜೆಡಿಎಸ್ ಅಸಮಾಧಾನಕ್ಕೆ ಕುಮಾರಸ್ವಾಮಿಯೇ ಕಾರಣ ಎಂದು ಬಿಂಬಿಸಲಾಗುತ್ತಿದೆ. ಕುಮಾರಸ್ವಾಮಿ ನಡೆ ಇಷ್ಟವಿಲ್ಲದ ಹಿರಿಯರು ಮಾತ್ರ ಅಸಮಾಧಾನ ಬಹಿರಂಗಪಡಿಸುತ್ತಿರುವುದರಿಂದ ಈ ಭಾವನೆ ವ್ಯಕ್ತವಾಗುತ್ತಿದೆ. ನಿಜವಾದ ಸಂಗತಿ ಏನೆಂದರೆ ಜೆಡಿಎಸ್ ನಲ್ಲಿ ಇಷ್ಟೆಲ್ಲಾ ರಾದ್ಧಾಂತಗಳು ನಡೆಯಲು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಕಾರಣ. ಇವರಿಬ್ಬರ ಚೆಸ್ ಆಟದಲ್ಲಿ ಶಾಸಕರು ದಾಳಗಳಾಗಿದ್ದಾರೆ ಅಷ್ಟೆ.